More

    ಯಾರಿಗೆ ಸಿಗಲಿದೆ ಉತ್ತರಾಧಿಕಾರಿ ಪಟ್ಟ ?

    ಪರಶುರಾಮ ಭಾಸಗಿ
    ವಿಜಯಪುರ: ಹಿರಿಯ ರಾಜಕಾರಣಿ ದಿ. ಎಂ.ಸಿ. ಮನಗೂಳಿ ಅವರ ಉತ್ತರಾಧಿಕಾರಿ ಯಾರು ? ತಂದೆಯ ಸ್ಥಾನ ತುಂಬುವ ಸಮರ್ಥ ಸಾರಥಿ ಯಾರಾಗುವರು ? ಮನೆತನದ ರಾಜಕೀಯ ಬಂಡಿ ಮುನ್ನಡೆಸುವ ಸಾಮರ್ಥ್ಯ ಯಾರಿಗಿದೆ ? ಯಾರ ಕೈಗೆ ಚುಕ್ಕಾಣಿ ಸಿಕ್ಕರೆ ಸೂಕ್ತ ? ಅಪಾರ ಅಭಿಮಾನಿ ಬಳಗ ಹಾಗೂ ಪಕ್ಷದ ಜವಾಬ್ದಾರಿ ನಿಭಾಯಿಸುವ ಚಾಕಚಕ್ಯತೆ ಯಾರಿಗಿದೆ? ತಂದೆಯಂತೆ ಪುತ್ರರೂ ಅದೇ ಪಕ್ಷದಲ್ಲಿರುತ್ತಾರಾ ? ಅಥವಾ ಪಕ್ಷಾಂತರ ನಿರ್ಧಾರ ಕೈಗೊಳ್ಳುವರಾ……?

    ಹೀಗೆ ಹತ್ತು ಹಲವು ಪ್ರಶ್ನೆಗಳು ಮತ್ತು ರಾಜಕೀಯ ಲೆಕ್ಕಾಚಾರಗಳು ಮಾಜಿ ಸಚಿವ ಶಾಸಕ ದಿ. ಎಂ.ಸಿ. ಮನಗೂಳಿ ಅವರ ಕುಟುಂಬ ಸುತ್ತ ಗಿರಕಿ ಹೊಡೆಯುತ್ತಲೇ ಇವೆ. ತಂದೆಯನ್ನು ಕಳೆದುಕೊಂಡು ದುಃಖದಲ್ಲಿರುವ ಕುಟುಂಬ ಸದ್ಯಕ್ಕೆ ಸ್ಪಷ್ಟ ನಿರ್ಧಾರ ಪ್ರಕಟಿಸಿಲ್ಲವಾದರೂ ಮುಂದಿನ ನಡೆ ಕೈಗೊಳ್ಳಲೇಬೇಕಾದ ಅನಿವಾರ್ಯತೆಯೂ ಇದೆ. ತಂದೆಯ ಆದರ್ಶ ಮತ್ತು ಅವರ ಆಶಯಗಳೊಂದಿಗೆ ಮುನ್ನಡೆಯಬೇಕಾದ ಮಹತ್ತರ ಜವಾಬ್ದಾರಿ ಇರುವ ಕಾರಣಕ್ಕೆ ಅಳೆದು ತೂಗಿ ತೀರ್ಮಾನ ಕೈಗೊಳ್ಳಲು ಮನಗೂಳಿ ಕುಟುಂಬ ನಿರ್ಧರಿಸಿದೆ. ಹೀಗಾಗಿ ಅವರ ಅಂತಿಮ ನಿರ್ಧಾರದ ಮೇಲೆ ರಾಜಕೀಯ ಲೆಕ್ಕಾಚಾರಗಳು ಅವಲಂಬನೆಯಾಗಿವೆ.

    ಎಚ್‌ಡಿಡಿ ಹೇಳಿಕೆ ಗೊಂದಲ
    ಏತನ್ಮಧ್ಯೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲ್ಲ ಎಂದಿರುವುದು ಮನಗೂಳಿ ಕುಟುಬಸ್ಥರನ್ನು ಗೊಂದಲಕ್ಕೀಡಾಗಿಸಿದೆ. ಮಸ್ಕಿ, ಬಸವ ಕಲ್ಯಾಣ ಹಾಗೂ ಬೆಳಗಾವಿ ಲೋಕಸಭೆ ಚುನಾವಣೆ ಜೊತೆಜೊತೆಗೆ ಸಿಂದಗಿ ಕ್ಷೇತ್ರಕ್ಕೂ ಉಪ ಚುನಾವಣೆ ನಡೆಯಲಿದೆ. ಸಿಂದಗಿಯಲ್ಲಿ ಜೆಡಿಎಸ್ ಅಭ್ಯರ್ಥಿಯಿಂದಲೇ ಸ್ಥಾನ ತೆರವಾಗಿದ್ದು ಆ ಸ್ಥಾನ ತುಂಬಲೇಬೇಕು. ಆದರೆ, ದೇವೇಗೌಡರು ಯಾವ ಲೆಕ್ಕಾಚಾರದಡಿ ಅಭ್ಯರ್ಥಿಯನ್ನು ಕಣಕ್ಕಿಳಿಸಲ್ಲ ಎಂದಿದ್ದಾರೆಂಬುದು ಗೊತ್ತಿಲ್ಲ ಎನ್ನುತ್ತಾರೆ ಜೆಡಿಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ. ಬಹುಶಃ ಸಿಂದಗಿ ಹೊರತುಪಡಿಸಿ ಹೇಳಿರಬಹುದಾಗಿದ್ದು ಯಾವುದಕ್ಕೂ ಈ ಬಗ್ಗೆ ಸ್ಪಷ್ಟನೆ ಪಡೆಯಲು ಬೆಂಗಳೂರಿಗೆ ಹೊರಟಿದ್ದಾಗಿಯೂ ಮನಗೂಳಿ ಕುಟುಂಬಸ್ಥರು ಸಹ ತಿಳಿಸಿದ್ದಾರೆ.

    ಅಶೋಕ ಹೆಸರು ಅಂತಿಮ?
    ದಿ. ಮನಗೂಳಿ ಅವರ ಉತ್ತರಾಧಿಕಾರಿಯಾಗಿ ಬಹುತೇಕ ಅಶೋಕ ಹೆಸರು ಅಂತಿಮ ಎನ್ನಲಾಗಿದೆ. ಕುಟುಂಬಸ್ಥರೆಲ್ಲರೂ ಒಟ್ಟಾಗಿ ಚುನಾವಣೆ ಎದುರಿಸಲು ಸಜ್ಜಾಗಿದ್ದಾಗಿ ಅಶೋಕ ಸಹ ಹೇಳಿದ್ದಾರೆ. ಕಳೆದ 40 ವರ್ಷಗಳಿಂದ ದಿ.ಮನಗೂಳಿ ಅವರು ಕಾಯ್ದುಕೊಂಡು ಬಂದಿರುವ ರಾಜಕೀಯ ಸಿದ್ಧಾಂತ, ಆದರ್ಶಗಳನ್ನು ಬಲಿಕೊಡಬಾರದೆಂಬ ಮಹತ್ತರ ಉದ್ದೇಶದೊಂದಿಗೆ ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸಲು ಕುಟುಂಬಸ್ಥರು ಸಜ್ಜಾಗಿದ್ದಾಗಿ ಅಶೋಕ ತಿಳಿಸುತ್ತಾರೆ. ಆದರೆ, ಪಕ್ಷಾಂತರದ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸದ ಅಶೋಕ ಅವರು ಮೊದಲು ರಾಜ್ಯ ವರಿಷ್ಟರೊಂದಿಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ.

    ಒಟ್ಟಿನಲ್ಲಿ ಮನಗೂಳಿ ಅವರ ಕುಟುಂಬಸ್ಥರು ತೆಗೆದುಕೊಳ್ಳುವ ತೀರ್ಮಾನದ ಮೇಲೆ ಕೆಲ ರಾಜಕೀಯ ನಿರ್ಧಾರಗಳು ಅವಲಂಬನೆಯಾಗಿದ್ದು, ಪ್ರತಿಪಕ್ಷಗಳು ಈಗಲೇ ಅಭ್ಯರ್ಥಿಗಳನ್ನು ಗುರುತಿಸಿಟ್ಟುಕೊಳ್ಳುವ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.

    ನಾವು ಕುಟುಂಬದವರೆಲ್ಲರೂ ಒಟ್ಟಾಗಿದ್ದೇವೆ. ಉಪ ಚುನಾವಣೆಯನ್ನು ಸಹ ಒಟ್ಟಾಗಿ ಎದುರಿಸುತ್ತೇವೆ. ನಮ್ಮ ತಂದೆಯ ಆದರ್ಶಗಳೇ ನಮಗೆ ಸ್ಪೂರ್ತಿ. ಜೆಡಿಎಸ್ ಜಿಲ್ಲಾಧ್ಯಕ್ಷರೊಂದಿಗೆ ಬೆಂಗಳೂರಿಗೆ ತೆರಳುತ್ತಿದ್ದು ರಾಜ್ಯ ನಾಯಕರೊಂದಿಗೆ ಚರ್ಚಿಸಿ ಆ ಬಳಿಕ ಹಿರಿಯರು, ಮಾರ್ಗದರ್ಶಿಗಳು ಹಾಗೂ ಅಭಿಮಾನಿಗಳ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.
    ಅಶೋಕ ಮನಗೂಳಿ, ದಿ. ಮನಗೂಳಿ ಅವರ ಪುತ್ರ ಹಾಗೂ ಜೆಡಿಎಸ್ ಸಂಭಾವ್ಯ ಅಭ್ಯರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts