More

    ಹಳೇ ಪೆನಲ್‌ಗೆ ಮೇಲುಗೈ

    ವಿಜಯಪುರ: ಕಳೆದೊಂದು ತಿಂಗಳಿಂದ ತೀವ್ರ ಕುತೂಹಲ ಕೆರಳಿಸಿದ್ದ ಸಿದ್ಧೇಶ್ವರ ಸಹಕಾರಿ ಬ್ಯಾಂಕ್ ಚುನಾವಣೆ ಭಾನುವಾರ ಸಾಂಗವಾಗಿ ನೆರವೇರಿತು. ಅಂದುಕೊಂಡಂತೆ ಬಹುತೇಕ ಹಳೇ ಪೆನಲ್‌ನ ನಿರ್ದೇಶಕರೇ ಮರು ಆಯ್ಕೆಯಾಗಿದ್ದು ಒಂದು ಸ್ಥಾನ ಮಾತ್ರ ಸ್ವತಂತ್ರ ಅಭ್ಯರ್ಥಿ ಪಾಲಾಗಿದೆ.

    ಎಸ್‌ಟಿ ಮೀಸಲು ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಅಮೋಘಸಿದ್ದ ನಾಯ್ಕೋಡಿ ಆಯ್ಕೆಯಾಗಿದ್ದು, ಇನ್ನುಳಿದ 18 ಸ್ಥಾನಗಳಿಗೆ ಹಳೇ ಪೆನಲ್ ನವರೇ ಆಯ್ಕೆಯಾಗಿದ್ದಾರೆ.

    ಸ್ಥಳೀಯ ಎಸ್‌ಎಸ್ ಪ್ರೌಢಶಾಲೆಯಲ್ಲಿ ಬೆಳಗ್ಗೆ 9.30ರಿಂದ ಸಂಜೆ 4ರವರೆಗೆ ನಡೆದ ಮತದಾನ ಪ್ರಕ್ರಿಯೆಯಲ್ಲಿ ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗದ ಮತದಾರರು ಅತ್ಯಂತ ಹುರುಪಿನಿಂದ ಮತ ಚಲಾಯಿಸಿದರು. ಬೆಳಗ್ಗೆ ಮಂಕಾಗಿದ್ದ ಮತದಾನ ಪ್ರಕ್ರಿಯೆ ಮಧ್ಯಾಹ್ನದಿಂದ ತೀವ್ರ ಚುರುಕು ಪಡೆಯಿತು. ಒಟ್ಟು 6347 ಮತದಾರರ ಪೈಕಿ 5148 ಮತದಾರರು ಹಕ್ಕು ಚಲಾಯಿಸಿದರು. ಶೇ. 81 ರಷ್ಟು ಮತದಾನವಾಗಿರುವುದು ಚುನಾವಣೆ ಗಾಂಭಿರ್ಯತೆ ಹೆಚ್ಚಿಸಿತು.

    ಒಟ್ಟು 30 ಬೂತ್‌ಗಳಲ್ಲಿ ಮತದಾನ ಪ್ರಕ್ರಿಯೆ ನಡೆದು ಅದೇ ಬೂತ್‌ಗಳಲ್ಲಿ ಮತ ಎಣಿಕೆ ಕಾರ್ಯವೂ ನಡೆಯಿತು. ಬೂತ್ ಏಜೆಂಟರನ್ನು ಸಹ ಎಣಿಕೆಗೆ ಬಳಸಿಕೊಳ್ಳಲಾಯಿತು. 300 ಸಿಬ್ಬಂದಿ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಮತಗಟ್ಟೆ ಸುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸಂಜೆ ಫಲಿತಾಂಶ ತಿಳಿಯಲು ಸಾವಿರಾರು ಜನ ಜಮಾಯಿಸಿದ್ದರಿಂದ ಎಸ್‌ಎಸ್ ರಸ್ತೆ ಸಂಚಾರ ದಟ್ಟಣೆಯಿಂದ ಕೂಡಿತ್ತು. ಫಲಿತಾಂಶ ಪ್ರಕಟಣೆಗಾಗಿ ಹೊರಗಡೆ ಬೃಹತ್ ಎಲ್‌ಇಡಿ ಪರದೆ ಅಳವಡಿಸಲಾಗಿತ್ತು.

    ಕುತೂಹಲ ಹೆಚ್ಚಿಸಿದ ಮತ ಎಣಿಕೆ
    ಒಟ್ಟು 19 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 37 ಅಭ್ಯರ್ಥಿಗಳು ಕಣದಲ್ಲಿದ್ದರು. ಸಾಮಾನ್ಯ ಕ್ಷೇತ್ರದಿಂದ 13, ಮಹಿಳಾ-2, ಹಿಂದುಳಿದ ವರ್ಗ ಅ-1, ಹಿಂದುಳಿದ ವರ್ಗ ಬ-1, ಪಪಂ-1, ಪಜಾ-1 ಸ್ಥಾನಕ್ಕೆ ಚುನಾವಣೆ ನಡೆಯಿತು. ಆರಂಭದಲ್ಲಿ ಮೀಸಲು ಕ್ಷೇತ್ರದ ಮತ ಎಣಿಕೆ ಕಾರ್ಯ ಕೈಗೊಳ್ಳಲಾಯಿತು. ಬಳಿಕ ಸಾಮಾನ್ಯ ಕ್ಷೇತ್ರದ ಮತ ಎಣಿಕೆ ನಡೆಸಲಾಯಿತು.

    ರಾತ್ರಿ 9ರ ಒಳಗಾಗಿ ಮೀಸಲು ಕ್ಷೇತ್ರದ ಅಭ್ಯರ್ಥಿಗಳ ಭವಿಷ್ಯ ಸಂಪೂರ್ಣ ಬಯಲಾಗಿತ್ತು. ಸಾಮಾನ್ಯ ಕ್ಷೇತ್ರದಲ್ಲಿ ಹೆಚ್ಚಿನ ಪೈಪೋಟಿ ಇದ್ದ ಕಾರಣ ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚಿಸಿತು. ಒಂದೊಂದೇ ಫಲಿತಾಂಶ ಹೊರಬೀಳುತ್ತಿದ್ದಂತೆ ಮತಗಟ್ಟೆ ಸುತ್ತ ಜಯಘೋಷಗಳು ಕೇಳಿ ಬಂದವು. ಬೂತ್ ಸಂಖ್ಯೆ 26ರ ಮತ ಎಣಿಕೆಯಲ್ಲಿ ಕೊಂಚ ಗೊಂದಲ ಸೃಷ್ಟಿಯಾದ್ದರಿಂದ ಮತ ಎಣಿಕೆ ಕಾರ್ಯ ರಾತ್ರಿ 11ರವರೆಗೂ ಮುಂದುವರಿಯಿತು.

    ಹಳೇ ಪೆನಲ್‌ಗೆ ಹೆಚ್ಚಿನ ಗೆಲುವು
    ಅವಿರೋಧ ಆಯ್ಕೆ ಧಿಕ್ಕರಿಸಿ ಚುನಾವಣೆ ನಡೆದರೂ ಹಳೇ ಪೆನಲ್‌ನ ಅಭ್ಯರ್ಥಿಗಳೇ ಹೆಚ್ಚಿನ ಪ್ರಮಾಣದಲ್ಲಿ ಆಯ್ಕೆಯಾದರು. ಮಹಿಳಾ ಕ್ಷೇತ್ರದ ಇಬ್ಬರು, ಪರಿಶಿಷ್ಟ ಜಾತಿ, ಹಿಂದುಳಿದ ‘ಅ’ ಮತ್ತು ‘ಬ’ ವರ್ಗದ ತಲಾ ಒಬ್ಬ ಅಭ್ಯರ್ಥಿ ಹಳೇ ಪೆನಲ್‌ನವರೇ ಆಯ್ಕೆಯಾದರು. ಪರಿಶಿಷ್ಟ ಪಂಗಡ ವಿಭಾಗದಲ್ಲಿ ಮಾತ್ರ ಸ್ವತಂತ್ರ ಅಭ್ಯರ್ಥಿ ಅಮೋಘಸಿದ್ದ ನಾಯ್ಕೋಡಿ ಗೆಲವು ಸಾಧಿಸಿದರು. ಹಳೇ ಪೆನಲ್‌ನ ಸದಾಶಿವ ಹಾರೋಗೇರಿ ಪರಾಭವಗೊಂಡರು. ಸಾಮಾನ್ಯ ವರ್ಗದ 13 ಸ್ಥಾನಗಳಿಗೆ ಹಳೇ ಪೆನಲ್‌ನವರೇ ಆಯ್ಕೆಯಾಗಿದ್ದು ವಿಶೇಷ. ಒಟ್ಟು 1102 ಮತಗಳು ತಿರಸ್ಕೃತಗೊಂಡಿವೆ.

    ಫಲಿತಾಂಶದ ವಿವರ
    ಸಾಮಾನ್ಯ ವರ್ಗ:

    1. ಶ್ರೀಹರ್ಷಗೌಡ ಪಾಟೀಲ (3078)
    2. ಗುರುಪಾದಯ್ಯ ಗಚ್ಚಿನಮಠ (2997)
    3. ರಮೇಶ ಬಿದನೂರ (2491)
    4. ಸುರೇಶ ಗಚ್ಚಿನಕಟ್ಟಿ (2806)
    5. ಅವರಂಗಬಾದ ವಿಜಯಕುಮಾರ ರೇವಣಸಿದ್ದ (2843)
    6. ಪಾಟೀಲ ವಿಶ್ವನಾಥ ಶಿವನಗೌಡ (2801)
    7. ಪಟ್ಟಣಶೆಟ್ಟಿ ಈರಣ್ಣ ಮಲ್ಲಪ್ಪ (2667)
    8. ಪಾಟೀಲ ರಾಜೇಂದ್ರ ಮಲಕನಗೌಡ (2547)
    9. ಪಾಟೀಲ ಡಾ.ವಿಜಯಕುಮಾರ ನಾನಾಸಾಹೇಬ(2536)
    10. ಬಿಜ್ಜರಗಿ ರವೀಂದ್ರ ಶಂಕರ (2452)
    11. ಶಾಂತಪ್ಪ ಸದಾಶಿವಪ್ಪ ಜತ್ತಿ (2199)
    12. ಇಜೇರಿ ವಿಜಯಕುಮಾರ ದುಂಡಪ್ಪ (2246)
    13. ಕಪೂರ್ರರಮಠ ವೈಜನಾಥ ದುಂಡಯ್ಯ (2241)

    ಮಹಿಳಾ ಕ್ಷೇತ್ರ: ಗೌರಮ್ಮ ಗೊಬ್ಬೂರ (2745), ಸೌಭಾಗ್ಯ ಭೋಗಶೆಟ್ಟಿ (3306), ಪರಿಶಿಷ್ಟ ಪಂಗಡ: 1.ಅಮೋಘಸಿದ್ದ ನಾಯ್ಕೋಡಿ (2240), ಪರಿಶಿಷ್ಟ ಜಾತಿ:ಸಾಯಬಣ್ಣ ಸಿದ್ದಪ್ಪ ಬೋವಿ (1949), ಹಿಂದುಳಿದ ವರ್ಗ ಅ: 1.ಗುರುರಾಜ ಗಂಗನಳ್ಳಿ (3389), ಹಿಂದುಳಿದ ವರ್ಗ ಬ: ಪ್ರಕಾಶ ಬಗಲಿ 2525

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts