More

    ಸುಂದರ ಪರಿಸರಕ್ಕೆ ಸಸಿಗಳನ್ನು ನೆಟ್ಟು ವೃಕ್ಷ ಸಂಪತ್ತು ಬೆಳೆಸಿರಿ

    ಹೊರ್ತಿ: ಸುಂದರ ಪರಿಸರಕ್ಕೆ ಸಸಿಗಳನ್ನು ನೆಟ್ಟು ವೃಕ್ಷ ಸಂಪತ್ತನ್ನು ಉಳಿಸಿ ಬೆಳೆಸಬೇಕು. ನಿಸರ್ಗದಿಂದ ನೆಮ್ಮದಿ ಕಾಣಬಹುದು. ಎಲ್ಲರೂ ಪರಿಸರ ಪ್ರೇಮಿಗಳಾಗಿ ಅವುಗಳನ್ನು ಪೋಷಿಸುವ ಜವಾಬ್ದಾರಿಯುತ ಕೆಲಸವಾಗಬೇಕೆಂದು ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
    ಸಮೀಪದ ಗಡಿನಾಡಿನ ಕನಕನಾಳದಲ್ಲಿ ನೂತನವಾಗಿ ನಿರ್ಮಾಣಗೊಂಡ ಸಮರ್ಥ ಸದ್ಗುರು ಶ್ರೀ ಅವಜಿಗಿರಿ ಆಶ್ರಮದ ಆವರಣದಲ್ಲಿ ಸಸಿಗೆ ನೀರೆರೆದು ವೃಕ್ಷಾರೋಪಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಇದು ಎತ್ತರವಾದ ಪ್ರದೇಶವಾದ್ದರಿಂದ ಸೃಷ್ಟಿ ಸೌಂದರ್ಯಕ್ಕೆ ಹೇರಳವಾಗಿ ನಿಸರ್ಗ ಸಂಪತ್ತನ್ನು ಸಸಿಗಳನ್ನು ನೆಟ್ಟು ಉಳಿಸಿ ಬೆಳೆಸುವ ಮೂಲಕ ಸುಂದರ ಪ್ರಶಸ್ತ ಸ್ಥಳವನ್ನಾಗಿಸಲು ಕನಕನಾಳ ಹಾಗೂ ಸುತ್ತಲಿನ ಗ್ರಾಮಗಳ ಗ್ರಾಮಸ್ಥರು ಶ್ರಮಿಸಬೇಕು. ಇಲ್ಲಿಯ ಅವಜಿಗಿರಿ ಆಶ್ರಮದ ಗಿರೀಶಾನಂದ ಮಹಾರಾಜರು ಪರಿಸರ ಪ್ರೇಮಿಗಳು, ಆಧ್ಯಾತ್ಮವಾದಿಗಳು, ಆಶ್ರಮದ ಮೂರುವರೆ ಎಕರೆ ಜಮೀನಿನಲ್ಲಿ ಸುಮಾರು 500 ಗಿಡಮರಗಳನ್ನು ನೆಡೆಸುವ ಸಂಕಲ್ಪ ಹೊಂದಿರುವರು. ಅವರಿಗೆ ಗ್ರಾಮಸ್ಥರು ಸಹಕರಿಸಬೇಕು. ಇಲ್ಲಿ ಮಕ್ಕಳಿಗಾಗಿ ಶಾಲೆ ತೆರೆದು ಶಿಕ್ಷಣ ನೀಡುವ ವ್ಯವಸ್ಥೆಯಾಗಬೇಕು. ಆಶ್ರಮ ಇನ್ನೂ ಬೆಳೆದು ಗಡಿನಾಡಿನಲ್ಲಿ ಹೆಸರು ಮಾಡಬೇಕು. ಆಶ್ರಮ ಪ್ರಶಾಂತವಾಗಿ ಬಂದವರಿಗೆ ನೆಮ್ಮದಿ ಅಧ್ಯಾತ್ಮ ನೀಡುವ ದಿವ್ಯ ಸ್ಥಾನವಾಗಬೇಕು ಎಂದರು.
    ಕನಕನಾಳದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಅವಜಿಗಿರಿ ಆಶ್ರಮದ ಅಧ್ಯಕ್ಷ-ಗುರುಗಳಾದ ಗಿರೀಶಾನಂದ ಮಹಾರಾಜರು ಮಾತನಾಡಿ, ಆಶ್ರಮದ 3.5 ಎಕರೆ ಪ್ರದೇಶದ 3 ಎಕರೆಯಲ್ಲಿ ವಿವಿಧ ತಳಿ ಸಸಿಗಳಾದ ಬೇವು, ಆಲ, ಬೆಟ್ಟದ ನೆಲ್ಲಿ, ಹೆಬ್ಬೇವು, ನೇರಳೆ, ಮತ್ತು ಮಾವು, ಪೇರಲ, ಸೀತಾಲ, ಚಿಕ್ಕು, ಡ್ರಾಗನ್ ಫ್ರುಟ್, ನೇರಳೆ, ಪರಂಗಿ, ನೆಲ್ಲಿ ಮುಂತಾದ ಹಣ್ಣಿನ ಸಸಿಗಳನ್ನು ನೆಡಲಾಗುವುದು ಎಂದರು.
    ಕನಕನಾಳ ಗ್ರಾಮವು ಮಹಾರಾಷ್ಟ್ರದ ಗಡಿಯಂಚಿನಲ್ಲಿದ್ದು, ಇದು ಮಾಳಿಂಗರಾಯ ಮತ್ತು ಭಾಗ್ಯವಂತಿ ದೇವಿಯ ಪುಣ್ಯ ಕ್ಷೇತ್ರವಾಗಿದೆ. ಜಮಖಂಡಿ ತಾಲೂಕಿನ ಗಿರೀಶಾನಂದ ಮಹಾರಾಜರು ಅವಜಿಗಿರಿ ಆಶ್ರಮದಲ್ಲಿ ನೆಲೆಸಿ ಆಧ್ಯಾತ್ಮದ ಕ್ಷೇತ್ರವನ್ನಾಗಿಸಿರುವರು.
    ಕಾತ್ರಾಳ-ಬಾಲಗಾಂವ ಗುರುದೇವಾಶ್ರಮದ ಡಾ.ಅಮೃತಾನಂದ ಸ್ವಾಮೀಜಿ, ಹರ್ಷಾನಂದ ಶ್ರೀ, ಕಾತ್ರಾಳದ ಯೋಗಾನಂದ ಶ್ರೀ, ಜಿ.ಜಿ. ಮೇತ್ರಿ, ಮಹಾದೇವ ನಾವಿ, ಮಾಳಪ್ಪ ಬಿರಾದಾರ, ಮಾಳಿಂಗರಾಯ ಪೂಜಾರಿ, ಮಹಾದೇವ ನರಳೆ, ಯಲ್ಲಪ್ಪ ಬಿರಾದಾರ, ಮಾಳಪ್ಪ ಘೇರಡಿ, ಪ್ರಕಾಶ ಪಾಟೀಲ, ಸಿದ್ದು ಕುಂಬಾರ, ಭೀಮಶ್ಯಾ ಮಾನೆ, ರುದ್ರಪ್ಪ ಪೂಜಾರಿ, ಜಯಶ್ರೀ ಬೆನಕನಳ್ಳಿ, ಕನಕನಾಳ, ಕಾತ್ರಾಳ, ಲಮಾನಟ್ಟಿ, ಇಂಚಗೇರಿ ಗ್ರಾಮಗಳ ನೂರಾರು ಭಕ್ತರು ಉಪಸ್ಥಿತರಿದ್ದರು. ಕೊನೆಯಲ್ಲಿ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts