More

    ಅಂತರಂಗ ಶುದ್ಧಿಯಿಂದ ಪರಮಶಾಂತಿ

    ಉಮದಿ: ಸದಾ ಶಾಂತ ಹಾಗೂ ಸಮಾಧಾನದಿಂದ ಇರುವವರು ಸಂತರು-ಶರಣರು. ತನು, ಮನ, ಭಾವ ಶುದ್ಧವಾಗಿದ್ದರೆ ಮಾತ್ರ ಶಾಂತಿ ಲಭಿಸುತ್ತದೆ. ಅಂತರಂಗ, ಬಹಿರಂಗ ಶುದ್ಧಿಯೇ ಪರಮ ಶಾಂತಿಗೆ ಕಾರಣ. ಆಸೆ-ಆಮಿಷ, ರಾಗ- ದ್ವೇಷಗಳು ಮನದ ಮಾಲಿನ್ಯ. ಈ ಸುಂದರ ಜಗದಲ್ಲಿ ಆನಂದವಾಗಿ ಬದುಕಲು ಬರದಿದ್ದರೆ ಮನಶುದ್ಧವಿಲ್ಲ, ಶಾಂತಿಯಿಲ್ಲ ಎಂದರ್ಥ. ಬೆಲೆ ಬಾಳುವ ಭವ್ಯ ಮನೆಯಾದರೇನು? ಅಲ್ಲಿ ಸ್ವಚ್ಛತೆ ಇದ್ದರೆ ಮಾತ್ರ, ಅದು ಸುಖ-ಶಾಂತಿ ಸದನ. ಆಭರಣಗಳು ನಿಜವಾದ ಅಲಂಕಾರವಲ್ಲ. ಸ್ವಚ್ಛತೆಯೇ ಸೌಂದರ್ಯ. ಸ್ವಚ್ಛತೆಯಲ್ಲಿ ಶಿವನಿರುತ್ತಾನೆ. ಕೋಗಿಲೆ ಕಪ್ಪಾಗಿದ್ದರೂ ಸಹ ಅದರ ಹೃದಯ ಪರಿಶುಭ್ರ. ಅಂತೆಯೇ ಅದರ ಧ್ವನಿ ಮತ್ತು ಹಾಡು ಮಧುರ.
    ಬಾಲಗಾಂವ- ಕಾತ್ರಾಳದ ಗುರದೇವಾಶ್ರಮದಲ್ಲಿ ಗುರುವಾರ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಆಶೀರ್ವಚನ ನೀಡಿದರು.

    ದಾಸಿಮಾರ್ಯರು ಹೇಳುತ್ತಾರೆ, ‘ಎತ್ತನೇರಿದ ಕರ್ತನೊಬ್ಬನೆ ಜಗಕ್ಕೆಲ್ಲ ಎತ್ತು ಬೆಳೆದ ಧಾನ್ಯಗಳ ಉಂಬ ದೇವರ್ಕಗಳು ನಾವು ನಿಮ್ಮವರು ಕಾಣಾ ರಾಮನಾಥಾ ಈ ವಿಶಾಲ ಹಾಗೂ ಸುಂದರ ಸೃಷ್ಟಿಯನ್ನು ನಿರ್ಮಾಣ ಮಾಡಿದವ ದೇವ. ಎತ್ತು ಪ್ರಚಂಡ ಶಕ್ತಿಯ ಸಂಕೇತ. ದೇವನು ಸರ್ವಶಕ್ತನಾಗಿರುವನೆಂದು ಅರ್ಥ. ದೇವನ ದಿವ್ಯಶಕ್ತಿಯೇ ಜಗವಾಯಿತು. ಜಗಕೆಲ್ಲ ಒಬ್ಬನೇ ದೇವ. ಒಬ್ಬನೇ ಸೂರ್ಯ. ಹಾಗೆಯೇ ಎಲ್ಲ ಧರ್ಮದವರಿಗೂ ದೇವನು ಒಬ್ಬನೇ.

    ಒಬ್ಬ ಭಿಕ್ಷುಕ ಸುಮಾರು 25 ವರ್ಷ ಭಿಕ್ಷೆ ಬೇಡಿ ಬದುಕಿದ್ದ. ಅವನ ಕೈಯೊಳಗೆ ಒಂದು ಭಿಕ್ಷಾ ಪಾತ್ರೆ ಇತ್ತು. ಅದನ್ನು ನೋಡಿದ ಒಬ್ಬ ಸಂತ ಹೇಳಿದ, ‘ನೀನು ಎಂಥ ಮೂರ್ಖ ದುರ್ದೈವಿ, ನಿನ್ನ ಕೈಯೊಳಗೆ ಇರುವುದು ಕಬ್ಬಿಣದ ಪಾತ್ರೆಯಲ್ಲ. ಅದು ಚಿನ್ನದ ಪಾತ್ರೆ’. ಆ ಪಾತ್ರೆಯನ್ನು ಭಿಕ್ಷುಕ ತೊಳೆದು ನೋಡಿದರೆ, ಅದು ಅಪರಂಜಿಯಾಗಿ ಹೊಳೆಯುತ್ತಿತ್ತು.
    ಆ ಭಿಕ್ಷಕನ 75 ವರ್ಷ ಆಯುಷ್ಯ ವ್ಯರ್ಥವಾಗಿತ್ತು. ನಮ್ಮ ಜೀವನವೂ ಮತ್ತು ಎಷ್ಟೋ ಜನರ ಜೀವನವೂ ವ್ಯರ್ಥವಾಗಿಯೇ ಸಾಗಿರಬಹುದು. ಆ ಭಿಕ್ಷುಕನಿಗೆ ಸಂತರು ಹೇಳಿದ ಹಾಗೆ ನಮಗೆಲ್ಲ ಸದ್ಗುರುಗಳು ಬಂದು ಹೇಳಿದಾಗಲಾದರೂ ನಾವು ಕಣ್ತೆರೆದು ಸಿರಿವಂತರಾಗಿ ಸಂತೋಷದಿಂದ ಬದುಕೋಣ ನೆನಪಿರಲಿ ದೇವರ ರಾಜ್ಯದಲ್ಲಿ ಬದುಕುತ್ತಿರುವ ನಾವೆಲ್ಲರೂ ದೇವರೇ. ಆದುದರಿಂದ ನಾವೆಲ್ಲರೂ ದೇವರ ದಾಸಿಮಾರ್ಯರು ಹೇಳಿರುವಂತೆ ‘ದೇವರು ಮೆಚ್ಚುವಂತೆ ಬಾಳೋಣ’. ಆಗ ನಮ್ಮ ಬದುಕೇ ಮಹಾದೇವನ ಮಹಾಪ್ರಸಾದದಂತಾಗುತ್ತದೆ.
    ಗುರದೇವಾಶ್ರಮದ ಡಾ. ಅಮೃತಾನಂದ ಸ್ವಾಮೀಜಿ, ಶ್ರದ್ಧಾನಂದ ಸ್ವಾಮೀಜಿ, ಈಶುಪ್ರಸಾದ ಸ್ವಾಮೀಜಿ, ಪ್ರಜ್ಞಾನಂದ ಸ್ವಾಮೀಜಿ, ಇಷ್ಠಲಿಂಗ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಸಂದೀಪಗುರು, ಶಿವಾನಂದ ಶರಣರು, ಯೋಗಾನಂದ ಸ್ವಾಮೀಜಿ, ಸಿದ್ಧಲಿಂಗದೇವರು, ಗಿರಿಶಾನಂದ ಸೇರಿದಂತೆ ಉಮದಿ, ಬಾಲಗಾವ, ಬೋರ್ಗಿ, ಚಡಚಣ ಹಾಗೂ ಸುತ್ತಲಿನ ಗ್ರಾಮಗಳ ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts