More

    ಹೃದಯವಂತಿಕೆ ಅರ್ಥ ಮಾಡಿಕೊಂಡರೆ ಮಾತ್ರ ವಿಜಯದಶಮಿ

    ಉಮದಿ: ಭಾರತೀಯರು ಎಂದು ಬಡವರಲ್ಲ. ಜಗತ್ತಿನಲ್ಲೇ ಹೆಚ್ಚು ಶ್ರೀಮಂತರು. ಭಾರತೀಯರು ಹೊರಗಡೆ ಬಡವರ ಹಾಗೆ ಕಂಡರೂ, ಅಂತರಂಗದಲ್ಲಿ ಭಾರಿ ಶ್ರೀಮಂತರು. ಭಾರತೀಯರ ತ್ವಚೆಯ ಬಣ್ಣ ಸಾಮಾನ್ಯವಾಗಿರಬಹುದು. ಆದರೆ, ಅವರ ಹೃದಯದ ಬಣ್ಣ ಬಂಗಾರದ್ದಾಗಿದೆ ಎಂದು ಹೊರದೇಶದವರು ಹೇಳುತ್ತಾರೆ.
    ಸಮೀಪದ ಬಾಲಗಾವ-ಕಾತ್ರಾಳದ ಗುರದೇವಾಶ್ರಮದಲ್ಲಿ ಸೋಮವಾರ ಆಯೋಜಿಸಿದ ಪ್ರವಚನ ಕಾರ್ಯಕ್ರಮದಲ್ಲಿ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಆಶೀರ್ವಚನ ನೀಡುತ್ತ ಭಾರತೀಯರ ಹೃದಯ ಶ್ರೀಮಂತಿಕೆ ಎಂಥದ್ದು ಎನ್ನುವುದನ್ನು ತಿಳಿಸಿದರು.
    ಒಮ್ಮೆ ಹೊರದೇಶದ ಯಾತ್ರಿಕನೊಬ್ಬ ಭಾರತಕ್ಕೆ ಬಂದು, ಸುತ್ತಾಡಿ, ಸುಸ್ತಾಗಿ ನೀರು ಕೇಳಿದನಂತೆ ಅವನಿಗೆ ಭಾರತೀಯರು ಕುಡಿಯಲು ಹಾಲನ್ನೇ ಕೊಟ್ಟರಂತೆ. ಅದಕ್ಕಾಗಿ ಆತ ಹೇಳಿದ್ದಾನೆ ‘ಭಾರತೀಯರ ಹೃದಯ ಎಂಥ ವಿಶಾಲವಾದುದು ಎಂದರೆ ನೀರು ಬೇಡಿದರೆ, ಹಾಲನ್ನು ಕೊಡುತ್ತಾರೆ’ ಎಂದು ಹೊಗಳಿದ್ದಾನೆ. ಅದು ಭಾರತೀಯರಿಗೆ ಕೊಟ್ಟ ದೊಡ್ಡ ಪ್ರಶಸ್ತಿ. ಇಂತಹ ಹೃದಯ ವಿಶಾಲತೆಯೇ ಧರ್ಮ, ಅದೇ ಅಧ್ಯಾತ್ಮ, ಅದೇ ಸಂತರ ಜೀವನ ವೈಭವ.

    ಭಾರತೀಯರು ಕೇವಲ ಹೇಳಿಲ್ಲ. ಅವರು ಬರೆದು ಇಟ್ಟಿದ್ದಾರೆ. ಯಾವ ಹೃದಯ ಸ್ವಚ್ಛವಾಗಿರುತ್ತದೆಯೇ ಅಂಥವರು ಮಾತ್ರ ಇಂತಹ ಸತ್ಕಾರ್ಯ ಮಾಡುತ್ತಾರೆ. ಇದು ವಿಶೇಷವಾಗಿ ಭಾರತೀಯರಲ್ಲಿ ಕಾಣಸಿಗುತ್ತದೆ. ಜಗತ್ತಿನ ಎಲ್ಲೆಡೆ ಸಂತರಾಗಿ ಹೋಗಿದ್ದಾರೆ. ಈಗಲೂ ಎಲ್ಲೆಡೆ ಸಂತರು ಇದ್ದಾರೆ. ಮುಂದೆಯೂ ಸಂತರು ಇರುತ್ತಾರೆ. ಕೋಗಿಲೆ ಕೇವಲ ಈಗ ಮಾತ್ರ ಹಾಡುತ್ತದೆ. ಮುಂದೆ ಹಾಡುವುದಿಲ್ಲ ಎನ್ನಲಾಗುತ್ತದೆಯೇ? ಕೋಗಿಲೆ ಸಾವಿರಾರು ವರ್ಷಗಳ ಹಿಂದೆಯೂ ಹಾಡುತ್ತಿತ್ತು. ಈಗಲೂ ಹಾಡುತ್ತಿದೆ. ಹಾಗೇ ಹೃದಯವಂತರು ಹಿಂದೆಯೂ ಇದ್ದರು. ಈಗಲೂ ಇದ್ದಾರೆ. ಹೃದಯವಂತರು ಕೂಡಲಸಂಗಮನ ಐಕ್ಯಸ್ಥಳ ಸೇರಿದಂತೆ ಹಳ್ಳಿ ಹಳ್ಳಿಗಳಲ್ಲೂ ಇದ್ದಾರೆ. ಅಂತಹ ಪುಣ್ಯಭೂಮಿಯಲ್ಲಿ ನಾವಿದ್ದೇವೆ. ನಾವೇ ಭಾಗ್ಯವಂತರು. ಹೃದಯವಂತಿಕೆಯನ್ನು ಅರ್ಥ ಮಾಡಿಕೊಂಡಾಗ ಮಾತ್ರ ವಿಜಯದಶಮಿ ಆಗುತ್ತದೆ ಎಂದು ಶ್ರೀಗಳು ಹೇಳಿದರು.

    ಇಂದು ವಿಜಯದಶಮಿ. ಭಾರತೀಯರು ಎಲೆ (ಬನ್ನಿ) ಕೊಟ್ಟು ಬಂಗಾರ ಅನುಭವಿಸುವರು. ಈ ದಿನ ಎಲೆಯಲ್ಲಿ ಬಂಗಾರವನ್ನು ಕಾಣುವವರು. ಯಾವಾಗಲೂ ನಮ್ಮ ಹೃದಯದಲ್ಲಿ ಪ್ರೇಮ, ಮಧುರತೆ, ಸುವಾಸನೆ ಹಾಗೂ ಜ್ಞಾನದ ಬೆಳಕು ಇರಬೇಕು. ಅದು ಜೀವನದ ಸಾರ್ಥಕ ಸಾಧನೆ.

    ಜಗದ್ಗುರು ಬಸವೇಶ್ವರರು ಹೇಳುತ್ತಾರೆ. ‘ಬೆಳಗಿನ ಜಾವ ಎದ್ದು ಲಿಂಗವನ್ನು ಅಂಗೈಯಲ್ಲಿ ನೋಡುವುದು ಹಾಗೂ ಸುಪ್ರಭಾತದಲ್ಲಿ ಶಿವಶರಣರ ಮುಖವನ್ನು ನೋಡಿದರೆ ಸಾಕು ಕೂಡಲಸಂಗಮನನ್ನು ಸುಲಭವಾಗಿ ಸೇರಬಹುದು. ದೊಡ್ಡದೊಡ್ಡ ಪುಸ್ತಕಗಳನ್ನು ಓದುವ ಅವಶ್ಯಕತೆ ಇಲ್ಲ. ಬಸವಣ್ಣನವರು ಸರಳ ನಿಯಮಗಳನ್ನು ನಮಗೆ ಕೊಟ್ಟಿರುವುದರಿಂದ ನಮಗೆಲ್ಲ ಅವರು ತುಂಬ ಹತ್ತಿರ. ಎಷ್ಟು ಹತ್ತಿರ ಎಂದರೆ ಎದುರು ಬಸವ ಕುಳಿತರೂ ಬಸವ ಎನ್ನುವಷ್ಟು ಮಟ್ಟಿಗೆ ಅವರು ನಮಗೆಲ್ಲ ಹತ್ತಿರವಾಗಿದ್ದಾರೆ. ಬಸವಣ್ಣನವರು ಹೇಳಿರುವ ಸಣ್ಣ ಮಾತು ಪಾಲಿಸಿದರೆ ಸಾಕು, ನಾವು ಹುಟ್ಟಿರುವುದಕ್ಕೂ ಸಾರ್ಥಕವಾಗುತ್ತದೆ. ಅದರಿಂದ ನಮ್ಮ ಜೀವನ ವಿಜಯವಾಗುತ್ತದೆ ಎಂದು ಶ್ರೀಗಳು ಹೇಳಿದರು.
    ಪ್ರವಚನ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ವೀರ ಭಿಕ್ಷಾವರ್ತಿ ನೀಲಕಂಠ ಮಠ ಪೀಠಾಧ್ಯಕ್ಷ ಶಿವಶಂಕರ ಸ್ವಾಮೀಜಿ, ಶ್ರದ್ಧಾನಂದ ಸ್ವಾಮೀಜಿ, ಈಶುಪ್ರಸಾದ ಸ್ವಾಮೀಜಿ , ಪ್ರಜ್ಞಾನಂದ ಸ್ವಾಮೀಜಿ, ಇಷ್ಟಲಿಂಗ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಸಂದೀಪ ಗುರು, ಶಿವಾನಂದ ಶರಣರು, ಯೋಗಾನಂದ ಸ್ವಾಮೀಜಿ, ಸಿದ್ಧಲಿಂಗ ದೇವರು, ಗಿರೀಶಾನಂದ, ರಮೇಶ ಕರೂಶಿ, ಸಾಯಬಣ್ಣ ಮುಚ್ಚಂಡಿ, ಚಡಚಣ ಪಟ್ಟಣದ ಭಕ್ತರಾದ ಅನೀಲ ಪಾಟೀಲ, ಸುರೇಶ ಬಡಚಿ, ಸಂಪತ್ ಗುರವ ಸೇರಿ ಉಮದಿ, ಬಾಲಗಾವ, ಬೋರ್ಗಿ ಹಾಗೂ ಸುತ್ತಲಿನ ಗ್ರಾಮಗಳ ನೂರಾರು ಭಕ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts