More

    ಪತ್ರಕರ್ತರಿಗೆ ಸರ್ಕಾರ ನೆರವಾಗಲಿ

    ವಿಜಯಪುರ: ಪತ್ರಕರ್ತರು ಇಂದು ಅತ್ಯಂತ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಅದೆಷ್ಟೋ ಪತ್ರಕರ್ತರು ಉದ್ಯೋಗ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಸಂಕಷ್ಟದಲ್ಲಿರುವ ಪತ್ರಕರ್ತರಿಗಾಗಿ ಸರ್ಕಾರ ನೆರವಿಗೆ ಧಾವಿಸುವ ಕೆಲಸ ಆಗಬೇಕು ಎಂದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ದೇವೇಂದ್ರ ಹೆಳವರ ಕಳವಳ ವ್ಯಕ್ತಪಡಿಸಿದರು.
    ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಒಂದೆಡೆ ಪತ್ರಿಕಾ ರಂಗದಲ್ಲಿ ವಿಪುಲ ಅವಕಾಶಗಳಿವೆ ಎಂದು ಹೇಳಲಾಗುತ್ತಿದೆ. ಈಗ ವಾಸ್ತವ ಪರಿಸ್ಥಿತಿ ಹಾಗಿಲ್ಲ ಎನಿಸುತ್ತಿದೆ. ಇದೆಲ್ಲವನ್ನು ಗಮನಿಸಿದರೆ ಪತ್ರಕರ್ತರಿಗೆ ಒಳ್ಳೆಯ ಭವಿಷ್ಯವಿಲ್ಲ ಎಂಬ ಆತಂಕ ಕಾಡುತ್ತಿದೆ ಎಂದರು.
    ಸಮಾಜವನ್ನು ಬೆಂಬಿಡದೆ ಕಾಡುತ್ತಿರುವ ಮಹಾಮಾರಿ ಕರೊನಾ ಸಂದರ್ಭದಲ್ಲಿಯೂ ಪತ್ರಕರ್ತರು ಪ್ರಾಣಾಪಾಯವನ್ನು ಲೆಕ್ಕಿಸದೆ ಜವಾಬ್ದಾರಿಯಿಂದ ತಮ್ಮ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಅವರೇ ಇಂದು ಆರ್ಥಿಕ ಸಂಕಷ್ಟವನ್ನು ಎದುರಿಸುವಂತಾಗಿದೆ. ಇಂಥ ಸಂದರ್ಭದಲ್ಲಿ ಸರ್ಕಾರ ಅವರ ನೆರವಿಗೆ ಬರಬೇಕಾದ ಅಗತ್ಯವಿದೆ ಎಂದರು.
    ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಮಂಡಳಿ ಸದಸ್ಯ ರಾಜು ಕೊಂಡಗೂಳಿ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಪತ್ರಕರ್ತರು ಕೋವಿಡ್ ಸಂದರ್ಭದಲ್ಲಿಯೂ ಕರೊನಾ ವಾರಿಯರ್ಸ್‌ಗಳಾಗಿ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯವಾದುದು. ಸರ್ಕಾರದಿಂದ ಪತ್ರಕರ್ತರಿಗೆ ಯಾವುದೇ ರೀತಿಯ ನೆರವು ಸಿಗುತ್ತಿಲ್ಲ. ಪತ್ರಕರ್ತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸದಿರುವುದು ವಿಷಾದನೀಯ ಎಂದರು.

    ಕಾನಿಪ ಸಂಘದ ಜಿಲ್ಲಾಧ್ಯಕ್ಷ ಸಚೇಂದ್ರ ಲಂಬು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಫಿರೋಜ್ ರೋಜಿನ್‌ದಾರ, ಕಾರ್ಯದರ್ಶಿ ಶಮಸುದ್ದೀನ್ ಸೈಯ್ಯದ್, ಜಿಲ್ಲಾ ಗ್ರಾಮೀಣ ಉಪಾಧ್ಯಕ್ಷ ಅಶೋಕ ಕುಲಕರ್ಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನಾಯಕ ಸೊಂಡೂರ ಇನ್ನಿತರರಿದ್ದರು.

    ಪತ್ರಕರ್ತರಿಗೆ ಸರ್ಕಾರ ನೆರವಾಗಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts