More

    ಜನರ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸಲಿ

    ವಿಜಯಪುರ: ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುವಂತಾಗಬೇಕೆಂದು ನಾಗಠಾಣ ಶಾಸಕ ದೇವಾನಂದ ಚವಾಣ್ ಹೇಳಿದರು.

    ನಗರದ ಸಾಯಿ ಪಾರ್ಕ್ ಬಡಾವಣೆಯಲ್ಲಿ ಮನೆಗಳಿಗೆ ನೀರು ನುಗ್ಗಿದ ಹಿನ್ನೆಲೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

    ಮಳೆ ನೀರಿನಿಂದ ಚರಂಡಿಗಳೆಲ್ಲ ತುಂಬಿ ಮನೆಗಳಲ್ಲಿ ಮಲೀನ ನೀರು ಹರಿಯುತ್ತಿದೆ. ಸಾರ್ವಜನಿಕರ ಮನವಿ ಮೇರೆಗೆ ಭೇಟಿ ನೀಡಿದ್ದು, ಮೂರು ದಿನಗಳಿಂದ ರಾತ್ರಿ ಮಳೆಯಾಗುತ್ತಿರುವುದರಿಂದಾಗಿ ಎಲ್ಲೆಂದರಲ್ಲಿ ಒಳಚರಂಡಿ ತೆರೆದುಕೊಂಡಿವೆ. ಸರಾಗವಾಗಿ ನೀರು ಮುಂದೆ ಸಾಗದೇ ಮನೆಗಳಲ್ಲಿ ನುಗ್ಗಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ಮಹಾನಗರ ಪಾಲಿಕೆ ಅಧಿಕಾರಿಗಳು ತಕ್ಷಣವೇ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಬೇಕು ಎಂದರು.

    ಮಳೆಗಾಲ ಆರಂಭವಾಗಿರುವುದರಿಂದ ಮಳೆ ನೀರು ನಿಂತರೆ ಸೊಳ್ಳೆಗಳ ಕಾಟದಿಂದ ವಿವಿಧ ರೋಗಗಳು ಉಲ್ಬಣಿಸುತ್ತವೆ. ಮೊದಲೇ ಕರೊನಾ ಸಂಕಷ್ಟದಲ್ಲಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಅದಕ್ಕಾಗಿ ಎಲ್ಲೆಲ್ಲಿ ಮಲೀನ ನೀರು ನಿಲ್ಲುತ್ತದೆ ಎಂಬುದನ್ನು ಗಮನಿಸಿ ತಕ್ಷಣವೇ ಒಳಚರಂಡಿಗಳ ಮೂಲಕ ನೀರು ಹರಿದುಹೋಗುವಂತೆ ಕ್ರಮ ಕೈಕೊಳ್ಳಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

    ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ ಮಾತನಾಡಿ, ಒಳಚರಂಡಿಯಲ್ಲಿ ಸಾರ್ವಜನಿಕರು ಕಸ ಕಡ್ಡಿ ಹಾಕುವುದರಿಂದ ನೀರು ಸರಾಗವಾಗಿ ಮುಂದೆ ಸಾಗುವುದಿಲ್ಲ. ತಕ್ಷಣವೇ ಒಳಚರಂಡಿ ನೀರು ಸರಾಗವಾಗಿ ಹೋಗುವಂತೆ ಕ್ರಮ ಕೈಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು. ಪಾಲಿಕೆ ಅಧಿಕಾರಿಗಳಾದ ಎಇಇ ರಶ್ಮಿ ಮಾಲಗಾಂವಿ, ಸುನೀಲ ಹಿರೇಣಿ, ಅಧಿಕಾರಿಗಳು, ಬಡಾವಣೆಯ ಸಾರ್ವಜನಿಕರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts