More

    ಪುರದಲ್ಲಿಂದು ‘ಪರ್ವ’ ಕಾಲ

    ವಿಜಯಪುರ: ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ ವಿರಚಿತ ಪರ್ವ ಆಧಾರಿತ ನಾಟಕ ಪ್ರದರ್ಶನಕ್ಕೆ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರ ಸಜ್ಜಾಗಿದೆ.ಏ.20ರಂದು ಮಧ್ಯಾಹ್ನ 3.30ಕ್ಕೆ ಪ್ರದರ್ಶನ ಆರಂಭವಾಗಲಿದ್ದು, ಪ್ರಯೋಗಕ್ಕೆ ಎರಡು ದಿನಗಳಿಂದ ಕಲಾವಿದರು ಭರ್ಜರಿ ತಾಲೀಮು ನಡೆಸಿದರು. ಭಾನುವಾರವೇ ಗುಮ್ಮಟ ನಗರಿಗೆ ಬಂದಿಳಿದ ಮೈಸೂರಿನ ರಂಗಾಯಣದ ಕಲಾವಿದರು ಅತ್ಯಂತ ಹುಮ್ಮಸ್ಸಿನಿಂದಲೇ ಬೈಠಕ್ ನಡೆಸಿದರು.

    ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಕಲಾವಿದರು ಪೂರ್ವ ತಯಾರಿ ನಡೆಸಿದರು. ಖ್ಯಾತ ರಂಗನಿರ್ದೇಶಕ ಪ್ರಕಾಶ ಬೆಳವಾಡಿ ನಿರ್ದೇಶನದಲ್ಲಿ ನಲ್ವತ್ತು ಕಲಾವಿದರು ರಂಗಮಂದಿರದಲ್ಲಿ ತಾಲೀಮು ನಡೆಸಿದರು.

    ರಂಗ ಸಜ್ಜಿಕೆ:
    ಬಣ್ಣದ ಬೆಳಕಿನ ವ್ಯವಸ್ಥೆ, ಆಸನಗಳ ಸ್ವಚ್ಛತೆ, ಪರದೆಗಳ ಜೋಡಣೆ, ಧ್ವನಿ ವರ್ಧಕಗಳ ಅಳವಡಿಕೆ, ಸಂಗೀತ ಪರಿಕರಗಳ ಜೋಡಣೆಯಂಥ ಕಾರ್ಯಗಳು ಭರದಿಂದ ಸಾಗಿದ್ದವು. ನಾಲ್ಕು ವಿರಾಮ ಸೇರಿ ಎಂಟು ತಾಸುಗಳ ನಾಟಕ ಇದಾಗಿದ್ದು, ಮಧ್ಯೆ ಊಟಕ್ಕೆ 30 ನಿಮಿಷಗಳ ವಿರಾಮ. ಇನ್ನುಳಿದಂತೆ ತಲಾ 10 ನಿಮಿಷಗಳ ಚಹಾ ವಿರಾಮ ಇರುವುದರಿಂದ ಅದಕ್ಕೂ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಆಯೋಜಕರು ಸಿದ್ಧತೆ ನಡೆಸಿದ್ದರು.

    ಪಾರ್ಕಿಂಗ್ ವ್ಯವಸ್ಥೆ, ಆಗಮನ ಮತ್ತು ನಿರ್ಗಮನಕ್ಕೆ ದ್ವಾರಗಳ ನಿಗದಿಗೊಳಿಸುವಿಕೆ ಹೀಗೆ ಸಕಲ ಪೂರ್ವತಯಾರಿ ಜೋರಾಗಿತ್ತು. ಕಲಾವಿದರು ಉಳಿದುಕೊಳ್ಳಲು ಹಾಗೂ ಮೇಕಪ್‌ಗೆ ಕೊಠಡಿಗಳ ವ್ಯವಸ್ಥೆ ಮಾಡಲಾಯಿತು.

    ಟಿಕೆಟ್ ದರ 200 ರೂ.
    ಈ ಮಹಾರಂಗ ಪ್ರಯೋಗದ ಖರ್ಚು ವೆಚ್ಚ ದೊಡ್ಡ ಪ್ರಮಾಣದಲ್ಲಿರುವುದು ಮತ್ತು ದೀರ್ಘ ಪ್ರದರ್ಶನದ ಶ್ರಮ ಎಲ್ಲವನ್ನೂ ಪರಿಗಣಿಸಿ 200 ರೂ.ಬೆಲೆಯ ಟಿಕೆಟ್ ಇಡಲಾಗಿದೆ. ವಿಜಯಪುರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯಲ್ಲಿ ಟಿಕೆಟ್ ನೀಡಲಾಗುತ್ತಿದೆ. ರಂಗಾಯಣದ ವೆಬ್‌ಸೈಟ್‌ನಲ್ಲೂ ಆನ್‌ಲೈನ್ ಮೂಲಕ ಟಿಕೆಟ್ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟು 600 ಆಸನಗಳ ವ್ಯವಸ್ಥೆ ಇದ್ದು ಸೋಮವಾರ ಸಂಜೆವರೆಗೆ 300 ಟಿಕೆಟ್ ಖರೀದಿಯಾಗಿದ್ದವು. ಆನ್‌ಲೈನ್‌ಲ್ಲಿ 50 ಟಿಕೆಟ್ ಬುಕ್ ಆಗಿದ್ದವು. ಬುಧವಾರ ಇನ್ನುಳಿದ ಟಿಕೆಟ್‌ಗಳನ್ನು ಕೌಂಟರ್‌ನಲ್ಲಿ ಒದಗಿಸಲಾಗುತ್ತಿದೆ ಎಂದು ಆಯೋಜಕರು ತಿಳಿಸಿದ್ದಾರೆ.

    ಇದೊಂದು ಐತಿಹಾಸಿಕ ರಂಗ ಪ್ರಯೋಗ. ರಾಜ್ಯದಲ್ಲೇ ಮೊದಲ ಹಂತದಲ್ಲಿ ವಿಜಯಪುರದಲ್ಲಿ ಪರ್ವ ಮಹಾರಂಗ ಪ್ರಯೋಗ ನಡೆಯುತ್ತಿರುವುದು ಖುಷಿ ವಿಚಾರ. ಎಲ್ಲ ಸಾಹಿತಿಗಳು, ಓದುಗರು, ರಂಗಾಸಕ್ತರು, ಸಹಕಾರ ನೀಡಿ ಯಶಸ್ವಿಗೊಳಿಸಬೇಕು ಎಂದು ಕೋರುತ್ತೇವೆ.
    ನಿರ್ಮಲಾ ಮಠಪತಿ, ರಂಗಾಯಣ ಮೈಸೂರು ಉಪ ನಿದೇಶಕಿ

    ಇಂತಹ ಮಹಾರಂಗ ಪ್ರಯೋಗ ನಡೆಯುತ್ತಿರುವುದು ನಮ್ಮ ಜಿಲ್ಲೆಯ ಸೌಭಾಗ್ಯ. ಜಿಲ್ಲೆಯ ಜನತೆ ಇದನ್ನು ನೋಡಿ ಆನಂದಿಸಬೇಕು. ವಿಶೇಷವಾಗಿ ಪ್ರಕಾಶ ಬೆಳವಾಡಿ ಅವರ ನಿರ್ದೇಶನ ಬಹಳ ಸಂತೋಷ ಕೊಡುತ್ತದೆ. ಎಲ್ಲ ರಂಗಾಸಕ್ತರು ಪ್ರೋತ್ಸಾಹ ನೀಡಬೇಕು.
    ಶರಣು ಸಬರದ,
    ಯುವ ಪರಿಷತ್ ಜಿಲ್ಲಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts