More

    ಬೇಸಿಗೆಗೆ ಕುಡಿವ ನೀರಿಗೆ ಬರ

    ಹೀರಾನಾಯ್ಕ ಟಿ.
    ವಿಜಯಪುರ :
    ಅಬ್ಬಾ.. ಎಷ್ಟೊಂದು ಬಿಸಿಲು. ನೆರಳು ಸಿಕ್ಕರೆ ಸಾಕು ಎನ್ನುವ ವಾತಾವರಣ. ಬೆಳಗ್ಗೆ ಒಂಭತ್ತಾದರೆ ನೆತ್ತಿಗೆ ಬಡಿಯುವ ಬಿಸಿಲು. ಬೇಸಿಗೆ ಪ್ರಾರಂಭದಲ್ಲಿಯೇ ಜನರಲ್ಲಿ ತಳಮಳ.

    ಬಿಸಿಲೂರು ಎಂದೇ ಖ್ಯಾತಿ ಪಡೆದ ವಿಜಯಪುರ ಜಿಲ್ಲೆಯಲ್ಲಿ ಈಗಾಗಲೇ 38 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ತಾಪಮಾನ ಹೆಚ್ಚಿದಂತೆ ಬಾಯಾರಿಕೆಯೂ ಅಧಿಕಗೊಳ್ಳುತ್ತಿದೆ. ಬಿಸಿಲ ಬೇಗೆಗೆ ಜಿಲ್ಲೆಯ ವಿವಿಧೆಡೆ ಕುಡಿಯುವ ನೀರಿಗೂ ಹಾಹಾಕಾರ ಸೃಷ್ಟಿಯಾಗಿದೆ.

    ಎರಡು ಕಿ.ಮೀ. ದೂರ ಪ್ರಯಾಣ
    ಬರದ ಜಿಲ್ಲೆ ವಿಜಯಪುರ ಜಿಲ್ಲೆಯ ಅಂಕಲಗಿ, ಶಿವಣಗಿ, ಕಗ್ಗೋಡ, ಹಡಗಲಿ ವ್ಯಾಪ್ತಿಯಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಜನರು ನೀರಿಗಾಗಿ ಎರಡು ಕಿ.ಮೀ. ದೂರ ಕ್ರಮಿಸಿ ನೀರು ತರಬೇಕಾದ ಅನಿವಾರ್ಯತೆ ಎದುರಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನೀರಿನ ಹಾಹಾಕಾರ ಎದುರಾಗಿದ್ದು, ಕೂಲಿ ಬಿಟ್ಟು, ಮಕ್ಕಳು, ಮಹಿಳೆಯರು, ವೃದ್ಧರೆನ್ನದೆ ಎಲ್ಲರೂ ತೋಟಗಳಿಗೆ ತೆರಳಿ ನೀರು ತರುವ ಸ್ಥಿತಿ ನಿರ್ಮಾಣಗೊಂಡಿದೆ. ಇನ್ನು ಕೆಲವು ಕಡೆಗಳಲ್ಲಿ ನೀರಿಗಾಗಿ ರಸ್ತೆಗಿಳಿದು ಪ್ರತಿಭಟನೆ ಮಾಡುವ ಪರಿಸ್ಥಿತಿ ಇದೆ ಎಂದು ಅಂಕಲಗಿ ಗ್ರಾಮದ ನಿವಾಸಿ ಸಿದ್ದಯ್ಯ ಹಿರೇಮಠ ಹೇಳುತ್ತಾರೆ.

    ‘ಬಡವರ ಫ್ರಿಜ್’ಗೆ ಭಾರಿ ಬೇಡಿಕೆ
    ಬಿಸಿಲೂರು ವಿಜಯಪುರ ಜಿಲ್ಲೆಯಲ್ಲಿ ಬಡವರ ಫ್ರಿಜ್ ಎಂದೇ ಖ್ಯಾತಿ ಪಡೆದ ಮಣ್ಣಿನ ಮಡಕೆಗೆ ಬೇಡಿಕೆ ಹೆಚ್ಚಾಗಿದೆ. ವಿವಿಧ ಗಾತ್ರಗಳಲ್ಲಿ ಲಭ್ಯವಿರುವ ಮಡಕೆಗಳಿಗೆ 300-600 ರೂ. ದರ ನಿಗದಿ ಮಾಡಲಾಗಿದೆ. ಬಿಸಿಲಿನ ತಾಪ ಹೆಚ್ಚಾಗುತ್ತಿರುವುದರಿಂದ ಮನೆಯಲ್ಲಿ ಮಣ್ಣಿನ ಮಡಕೆ ತಗೆದುಕೊಂಡು ಹೋಗಲು ಗ್ರಾಮೀಣ ಭಾಗದ ಜನರು ಪಟ್ಟಣದತ್ತ ಮುಖಮಾಡಿದ್ದಾರೆ. ಮಣ್ಣಿನ ಮಡಕೆ ಅಲ್ಲದೆ, ಮಣ್ಣಿನಿಂದ ತಯಾರಿಸಿದ ಪ್ಲಾಸ್ಕ್‌ಗಳಿಗೆ ಹೆಚ್ಚು ಬೇಡಿಕೆ ಇದೆ. ಒಂದು ಪ್ಲಾಸ್ಕ್‌ನ್ನು 250 ರಿಂದ 300 ರೂ. ವರೆಗೆ ಮಾರಾಟ ಮಾಡಲಾಗುತ್ತಿದ್ದು, ನಗರ ಪ್ರದೇಶದ ಜನರು ಅವುಗಳಿಗೆ ಮಾರುಹೋಗಿದ್ದಾರೆ.

    ಕಲ್ಲಂಗಡಿ, ಎಳೆನೀರಿಗೆ ಡಿಮಾಂಡ್
    ಬಿಸಲಿನ ಬೇಗೆಗೆ ದಣಿವರಿಸಿಕೊಳ್ಳಲು ಜನರು ಕಲ್ಲಂಗಡಿ, ಎಳೆನೀರಿನ ಮೋರೆ ಹೋಗುತ್ತಿದ್ದಾರೆ. ಮಾರ್ಚ್ ತಿಂಗಳ ಪ್ರಾರಂಭದಲ್ಲೇ ಬಿರು ಬಿಸಿಲು ಪ್ರಾರಂಭವಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ, ಬಸ್ ನಿಲ್ದಾಣ, ಶಾಲೆ, ಕಾಲೇಜುಗಳ ಸುತ್ತಮುತ್ತ, ಪ್ರಮುಖ ವೃತ್ತಗಳಲ್ಲಿ ಹಾಗೂ ಜನಸಂದಣಿ ಇರುವ ಕಡೆ ಕಲ್ಲಂಗಡಿ ಹಣ್ಣು, ಎಳೆನೀರು ಮಾರಾಟ ಜೋರಾಗಿದೆ. ಎಳೆನೀರಿಗೆ 30 ರೂ. ಇದ್ದರೆ, ಕಲ್ಲಂಗಡಿಗೆ 50 ರಿಂದ 80 ರೂ. ವರೆಗೆ ದರ ಇದೆ. ಮಹಾರಾಷ್ಟ್ರ, ಆಂಧ್ರಪ್ರದೇಶದ ವಿವಿಧೆಡೆಯಿಂದ ಕಲ್ಲಂಗಡಿ ಹಣ್ಣುಗಳನ್ನು ರ್ತು ಮಾಡಿಕೊಳ್ಳಲಾಗುತ್ತಿದೆ. ಅಲ್ಲದೆ ನಗರ, ಪಟ್ಟಣಗಳಲ್ಲಿ ತಂಪು ಪಾನೀಯ, ಜ್ಯೂಸ್ ಅಂಗಡಿಗಳು ತಲೆ ಎತ್ತಿವೆ.

    ಕುಡಿಯುವ ನೀರಿಗಾಗಿ ಎರಡು-ಮೂರು ಕಿ.ಮೀ. ದೂರ ಹೋಗುವ ಪರಿಸ್ಥಿತಿ ಇದೆ. ಕರೆಂಟ್ ಇದ್ದರಷ್ಟೇ ತೋಟಗಳಿಗೆ ಹೋಗಿ ನೀರು ತುಂಬಿಕೊಂಡು ಬರಲಾಗುತ್ತದೆ. ಇಲ್ಲದಿದ್ದರೆ ಪರದಾಡುವಂತಾಗಿದೆ.
    ರವಿ ಉಪ್ಪಲದಿನ್ನಿ, ಶಿವಣಗಿ ನಿವಾಸಿ

    ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯಡಿ ಈಗಾಗಲೇ ಪೈಪ್‌ಲೈನ್ ಅಳವಡಿಸಲಾಗಿದ್ದು, ತಾಂತ್ರಿಕ ಸಮಸ್ಯೆಗಳಿಂದಾಗಿ ನೀರಿನ ಸಮಸ್ಯೆ ಉಂಟಾಗಿದೆ. ಅಂಕಲಗಿ, ಶಿವಣಗಿ ವ್ಯಾಪ್ತಿಯ ಗ್ರಾಮಗಳಿಗೆ ಇನ್ನೊಂದೆರಡು ದಿನಗಳಲ್ಲಿ ನೀರು ಹರಿಸಲಾಗುವುದು.
    ಪಿ.ಡಿ.ನಿಲೇಕಣಿ, ಪಿಡಿಒ ಆಹೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts