More

    ಚುನಾವಣೆ ಬಂದಾಗಲೇ ಬಾಂಬ್ ಬ್ಲಾಸ್ಟ್, ಪಿಎಂ ಮೋದಿ ಹೇಳಿಕೆಗೆ ತಿರುಗೇಟು, ಅಂಕಿ-ಅಂಶ ಬಿಡುಗಡೆಗೊಳಿಸಿದ ಸಚಿವ ರಾಮಲಿಂಗ ರೆಡ್ಡಿ

    ವಿಜಯಪುರ: ಚುನಾವಣೆ ಸಮೀಪಿಸುತ್ತಿದ್ದಂತೆ ಬಾಂಬ್ ಬ್ಲಾಸ್ಟ್ ಆಗುತ್ತವೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ತಿರುಗೇಟು ನೀಡಿರುವ ಸಚಿವ ರಾಮಲಿಂಗಾ ರಡ್ಡಿ, ಕಾಂಗ್ರೆಸ್ ಮತ್ತು ಬಿಜೆಪಿ ಅವಧಿಯಲ್ಲಾದ ಘಟನೆಗಳ ಅಂಕಿ-ಅಂಶ ಬಿಡುಗಡೆಗೊಳಿಸಿದರು.

    ಈ ಹಿಂದಿನ ಬಿಜೆಪಿ ಅವಧಿಯಲ್ಲಿ ಒಟ್ಟು ಆರು ಬಾರಿ ಬಾಂಬ್ ಬ್ಲಾಸ್ಟ್ ಆಗಿದೆ. ಆ ಬಗ್ಗೆ ಪ್ರಧಾನಿ ಮೋದಿಗೆ ಗೊತ್ತಿಲ್ಲವೇ? ಮೋದಿ ಹೇಳುವುದೊಂದು, ಮಾಡುವುದು ಇನ್ನೊಂದು. ಸುಳ್ಳು ಹೇಳುವುದರಲ್ಲಿ ಅವರು ನಿಸ್ಸೀಮರು. ಜರ್ಮನಿಯ ಹಿಟ್ಲರ್ ಅನುಯಾಯಿಯಂತೆ ಒಂದು ಸುಳ್ಳನ್ನೇ ಪದೇ ಪದೇ ಹೇಳುವ ಮೂಲಕ ಸತ್ಯವನ್ನಾಗಿಸುವ ಜಾಯಮಾನದವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಪ್ರತಿಕ್ರಿಯಿಸಿದರು.

    ಯಡಿಯೂರಪ್ಪ ಸಿಎಂ ಆಗಿದ್ದಾಗ 2008 ಜು.28ರಂದು ಕಂಠೀರವ ಕ್ರೀಡಾಂಗಣ ಹತ್ತಿರ ಬಾಂಬ್ ಬ್ಲಾಸ್ಟ್ ಆಗುತ್ತದೆ. ಬಳಿಕ 2010 ಏ.10ರಂದು ಸರಣಿ ಬಾಂಬ್ ಸ್ಪೋಟ ಆಗುತ್ತದೆ. ಜಗದೀಶ ಶೆಟ್ಟರ್ ಸಿಎಂ ಆಗಿದ್ದಾಗ 2013 ಏ.10ರಂದು ಮಲ್ಲೇಶ್ವರಂನಲ್ಲಿ ಬಾಂಬ್ ಸ್ಪೋಟ್ ಆಗುತ್ತದೆ. ಯಡಿಯೂರಪ್ಪ ಎರಡನೇ ಬಾರಿಗೆ ಸಿಎಂ ಆಗಿದ್ದಾಗ 2020 ಜ.20ರಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಪೋಟ ಆಗುತ್ತದೆ. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ 2022 ಆ.26ರಂದು ಕುಂದಾಪ್ರಯಾಗ್‌ದಲ್ಲಿ ಹಾಘೂ 2022 ಅ.19ರಂದು ಮಂಗಳೂರಲ್ಲಿ ಕುಕ್ಕರ್ ಬಾಂಬ್ ಸ್ಪೋಟ ಆಗುತ್ತದೆ. ಒಟ್ಟು ಆರು ಕಡೆ ಅವರ ಅವಧಿಯಲ್ಲಾಗುತ್ತದೆ. ಕಾಂಗ್ರೆಸ್ ಅವಧಿಯಲ್ಲಿ ರಾಮೇಶ್ವರಂನಲ್ಲಿ ಸ್ಪೋಟ ಆಗಿದೆ. ಈಗ ಮೋದಿ ಅವರು ಯಾರ ಅವಧಿಯಲ್ಲಿ ಎಷ್ಟು ಬಾಂಬ್ ಸ್ಪೋಟ್ ಆಗಿದೆ? ನೈತಿಕ ಪೊಲೀಸ್‌ಗಿರಿ ಯಾರ ಅವಧಿಯಲ್ಲಿ ಆಗಿದೆ ಎಂಬುದನ್ನು ಗಮನಿಸಲಿ ಎಂದರು.

    ಮೋದಿ ವರ್ಚಸ್ಸು ಕುಂದಿದೆ

    ದೇಶದಲ್ಲಿ ಈಗ ಮೋದಿ ವರ್ಚಸ್ಸು ಕುಂದಿದೆ. ಹೀಗಾಗಿ ಸುಳ್ಳಿನ ಸರಮಾಲೆ ಹೆಣೆಯುತ್ತಿದ್ದಾರೆ. ಕರ್ನಾಟಕದ ಸಣ್ಣ ಮಗುವಿಗೂ ಇವರ ಸುಳ್ಳು ಅರ್ಥವಾಗತೊಡಗಿದೆ. ಹೀಗಾಗಿ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಸಾಕಷ್ಟು ಬಾರಿ ಕರ್ನಾಟಕಕ್ಕೆ ಬಂದು ಪ್ರಚಾರ ಕೈಗೊಂಡರೂ ಜನರು ಬಿಜೆಪಿಯ ಕೈಹಿಡಿಯಲಿಲ್ಲ. ಹೀಗಾಗಿ ಪ್ರಸಕ್ತ ಲೋಕಸಭೆ ಚುನಾವಣೆಯಲ್ಲೂ ಜನ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

    ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ ಹೆಚ್ಚು ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದರೂ ಕರ್ನಾಟಕಕ್ಕೆ ನ್ಯಾಯ ಕೊಡಿಸಲಾಗಲಿಲ್ಲ. ಬರ ಪರಿಹಾರದ ಬಗ್ಗೆ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಗ್ಯಾಜೆಟ್ ಹೊರಡಿಸುವ ಬಗ್ಗೆ, ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಯಾವ ಸಂಸದರೂ ಧ್ವನಿ ಎತ್ತಲಿಲ್ಲ. ಬರ ಘೋಷಣೆಯಾಗಿ ಏಳು ತಿಂಗಳಾದರೂ ಕೇಂದ್ರ ಸರ್ಕಾರ ಪರಿಹಾರ ಕೊಡಲಿಲ್ಲ, ಕಾರಣ ಮೋದಿ ಹಾಗೂ ಅಮಿತ್ ಷಾಗೆ ಕರ್ನಾಟಕದ ಮೇಲೆ ಅಸಮಾಧಾನ. ವಿಧಾನ ಸಭೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲಿಲ್ಲ ಎಂಬ ಕಾರಣಕ್ಕೆ ಕೋಪದಿಂದ ಪರಿಹಾರ ನೀಡಿಲ್ಲ. ರಾಜ್ಯದಿಂದ ಕೇಂದ್ರಕ್ಕೆ 4.34 ಲಕ್ಷ ಕೋಟಿ ತೆರಿಗೆ ಕಟ್ಟುತ್ತಿದ್ದೇವೆ. ಆದರೆ, ನಮಗೆ ಬರುತ್ತಿರುವುದು ಕೇವಲ ಒಂದು ರೂಪಾಯಿಗೆ 13 ಪೈಸೆಯಷ್ಟು ಮಾತ್ರ. ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಿದರು. ರಾಜ್ಯಕ್ಕೆ ಬರಬೇಕಾದ 1.79 ಕೋಟಿ ರೂ.ಕೊಡಬೇಕೆಂದು ಒತ್ತಾಯಿಸಿದರೂ ಕೇಂದ್ರ ಸರ್ಕಾರ ಕೊಡಲಿಲ್ಲ. ಕರ್ನಾಟಕ ಮಾತ್ರವಲ್ಲ ಇಡೀ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಆಗಿದೆ. ಈ ಅನ್ಯಾಯ ಕರ್ನಾಟಕದ ಜನತೆಗೆ ಮನವರಿಕೆಯಾಗಿದೆ ಎಂದರು.

    ಬಿಜೆಪಿಯ ದ್ವಂದ್ವ ನಿಲುವು

    ಬಿಜೆಪಿಗರು ಚಾತುರ್ವರ್ಣದಲ್ಲಿ ನಂಬಿಕೆ ಇರಿಸಿದವರು. ಹೀಗಾಗಿ ಸಮಾನತೆ ಸಾಧ್ಯವಿಲ್ಲ. ಈ ಹಿಂದೆ ಮಹಿಳೆಯರಿಗೆ ಯಾವ ಅಧಿಕಾರವೂ ಕೊಟ್ಟಿರಲಿಲ್ಲ. ಇದೀಗ ಮಾತೃಶಕ್ತಿ ಎನ್ನುವ ಅಮಿತ್ ಷಾ ಮಣಿಪುರದಲ್ಲಿ ಗಲಭೆಯಾದಾಗ ಎಲ್ಲಿ ಹೋಗಿದ್ದರು? ಉತ್ತರ ಪ್ರದೇಶದಲ್ಲಿ ಈಗಲೂ ಕಾನೂನುಗಳೇ ಇಲ್ಲ. ಯಾವನೋ ಒಬ್ಬ ಮಾಡುವ ತಪ್ಪಿಗೆ ಇಡೀ ಕುಟುಂಬದ ಮೇಲೆ ಬುಲ್ಡೋಜರ್ ಹತ್ತಿಸುತ್ತಿದ್ದಾರೆ. ದೇಹಲಿಯ ರಸ್ತೆಯಲ್ಲಿ ರೈತರು ಪ್ರತಿಭಟನೆ ನಡೆಸಿದರೂ ಇವರ ಕರಳು ಚುರ್ ಎನ್ನಲಿಲ್ಲ. ಆಗ 700 ಜನ ಸತ್ತು ಹೋದರು. ಆದರೂ ಕನಿಕರ ಬರಲಿಲ್ಲ. ಬಿಜೆಪಿಯದ್ದು ದ್ವಂದ್ವ ನೀತಿ. ಹೀಗಾಗಿ ರಾಜ್ಯ ಮತ್ತು ದೇಶದ ಹಿತದೃಷ್ಠಿಯಿಂದ ಬಿಜೆಪಿ ಮೈತ್ರಿಕೂಟದ ಎಲ್ಲ ಅಭ್ಯರ್ಥಿಗಳು ಸಹ ಸೋಲಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts