More

    ಕುಖ್ಯಾತ ಇರಾನಿ ಗ್ಯಾಂಗ್ ಅಂದರ್

    ವಿಜಯಪುರ: ನಗರದಲ್ಲಿ ಈಚೆಗೆ ನಡೆದ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಚುರುಕಿನ ಕಾರ್ಯಾಚರಣೆ ನಡೆಸಿದ ಪೊಲೀಸ್ ಇಲಾಖೆ ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರು ಅಂತಾರಾಜ್ಯ ಕಳ್ಳರು ಹಾಗೂ ಇಬ್ಬರು ಬೈಕ್ ಕಳ್ಳರನ್ನು ಹೆಡೆಮುರಿ ಕಟ್ಟಿ ತಂದಿದ್ದಾರೆ.

    ಸರಣಿ ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಇರಾನಿ ಗ್ಯಾಂಗ್‌ನ ಬೀದರ್ ಜಿಲ್ಲೆಯ ಗುಲಾಮ್ ರೀದ್ದೀನ್ ಜಾರಿ ಉರ್ ಇರಾನಿ (40), ಸೋಲಾಪುರ ಜಿಲ್ಲೆಯ ಸಾಂಗೋಲಾ ಗ್ರಾಮದ ಮೊಹ್ಮದ್ ರ್ಇಾನ್ ಉರ್ ಸಲೀಮ್ ಇರಾನಿ (27), ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಅಕಲೂಜ್‌ನ ನಿಸಾರ್ ಉರ್ ಪಪಟ್ಟು ಚೀನಿಬಾಬಾ ಇರಾನಿ (42), ಸೋಲಾಪುರ ಜಿಲ್ಲೆಯ ಅಕಲೂಜ್‌ನ ಮೊಹ್ಮದ್ ಇನಾಯತ್ ಇರಾನಿ (32) ಬಂಧಿಯಾಗಿದ್ದಾರೆ.

    ಆರೋಪಿಗಳಿಂದ ಸರಗಳ್ಳತನ ಐದು ಪ್ರಕರಣಗಳಿಗೆ ಸಂಬಂಧಿಸಿದಂತೆ 150 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ ಎರಡು ಮೋಟಾರ್ ಸೈಕಲ್‌ಗಳು ಸೇರಿದಂತೆ ಒಟ್ಟು 7 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಫ್ತು ಮಾಡಿಕೊಳ್ಳಲಾಗಿದೆ ಎಂದು ಎಸ್‌ಪಿ ಅನುಪಮ ಅಗರವಾಲ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಪ್ರಮುಖ ಆರೋಪಿ ಗುಲಾಮ್ ಜಾರಿ ಉರ್ ಇರಾನಿ, ಮೊಹ್ಮದ್ ಉರ್ ರ್ಇಾನ್ ಸಲೀಮ್ ಇರಾನಿ ಇವರ ಮೇಲೆ ಅನೇಕ ಪ್ರಕರಣಗಳಿವೆ. ಮುಖ್ಯವಾಗಿ 2018 ನೇ ಸಾಲಿನಲ್ಲಿ ಈತನ ಮೇಲೆ ಏಳು ಪ್ರಕರಣಗಳು ದಾಖಲಾಗಿದ್ದು ಅರೆಸ್ಟ್ ವಾರೆಂಟ್ ಸಹ ಇತ್ತು. 2018 ನೇ ವರ್ಷದಲ್ಲಿ ನಡೆದ ಏಳು ಹಾಗೂ 2019 ನೇ ಸಾಲಿನಲ್ಲಿ ನಾಲ್ಕು, 2020 ರಲ್ಲಿ ಒಂದು ಹೀಗೆ ನಾನಾ ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿರುವ ಬಗ್ಗೆ ದೂರು ದಾಖಲಾಗಿದೆ ಎಂದು ತಿಳಿಸಿದರು.

    ದೋಚಿದ ಬಂಗಾರದ ವಸ್ತುಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಮೋಟಾರ್ ಸೈಕಲ್ ಮೇಲೆ ಸೋಲಾಪುರಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಗಸ್ತು ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಕೈಗೆ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ತಂಡಕ್ಕೆ ವಿಶೇಷ ಬಹುಮಾನ ಘೋಷಿಸಲಾಗಿದೆ ಎಂದು ಎಸ್‌ಪಿ ಅಗರವಾಲ ತಿಳಿಸಿದರು.

    ಎನ್‌ಫಿಲ್ಡ್ ಕಳ್ಳರ ಬಂಧನ
    ಎನ್‌ಫಿಲ್ಡ್ ಬೈಕ್‌ಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದು ಅವರಿಂದ 4 ರಾಯಲ್ ಎನ್‌ಫಿಲ್ಡ್, 1 ಕೆಟಿಎಂ ಬೈಕ್, 2 ಫ್ಯಾಷನ್​​ ಪ್ರೊ ಬೈಕ್ ಸೇರಿದಂತೆ ಒಟ್ಟು 7.60 ಲಕ್ಷ ರೂ. ಮೌಲ್ಯದ ಏಳು ಬೈಕ್‌ಗಳನ್ನು ವಶಕ್ಕೆ ಪಡೆದಿರುವುದಾಗಿ ಎಸ್‌ಪಿ ಅಗರವಾಲ ತಿಳಿಸಿದರು.

    ಸಿಂದಗಿ ತಾಲೂಕಿನ ಬಳಗಾನೂರ ಗ್ರಾಮದ (ಹಾಲಿ ಪೂನಾ) ಸಂದೀಪ ಶ್ರೀಧರ ಕಾಟಕರ (20), ಸುಂದರ ಭಗವಂತ ಕ್ಷತ್ರಿ (20) ಬಂಧಿತ ಆರೋಪಿಗಳು. ಅಥಣಿ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಇಬ್ಬರು ಯುವಕರನ್ನು ಕರೆದು ವಿಚಾರಣೆ ನಡೆಸಲು ಮುಂದಾದಾಗ ತಕ್ಷಣವೇ ಆ ಇಬ್ಬರು ವ್ಯಕ್ತಿಗಳು ಓಡಿ ಹೋಗಲು ಪ್ರಯತ್ನಿಸಿದರು, ಆಗ ಪೊಲೀಸರು ಬೆನ್ನಟ್ಟಿ ಇಬ್ಬರನ್ನು ಬಂಧಿಸಿದಾಗ ಈ ಪ್ರಕರಣ ಬಯಲಾಗಿದೆ ಎಂದು ಎಸ್‌ಪಿ ಅಗರವಾಲ ಮಾಹಿತಿ ನೀಡಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ. ರಾಮ ಅರಸಿದ್ಧಿ, ಸಿಪಿಐ ನಾಯ್ಕೋಡಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts