More

    ಬರಿದಾದ ಕೆರೆಗೆ ಹರಿದು ಬಂದ ಗಂಗೆ

    ವಿಜಯಪುರ: ಬರಿದಾದ ಸಿಂದಗಿ ಕೆರೆಗೆ ನೀರು ತುಂಬಿಸಲಾಗುತ್ತಿದ್ದು, ಶುಕ್ರವಾರ ಇಂಡಿ ಉಪವಿಭಾಗಾಧಿಕಾರಿ ರಾಹುಲ್ ಸಿಂಧೆ ಹಾಗೂ ಸಿಂದಗಿ ತಹಸೀಲ್ದಾರ್ ಸಂಜೀವಕುಮಾರ ದಾಸರ ನೀರು ಸರಬರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

    ನಾರಾಯಣಪುರ ಜಲಾಶಯದ ಮೂಲಕ 1ಟಿಎಂಸಿ ನೀರನ್ನು ಇಂಡಿ ಮತ್ತು ಸಿಂದಗಿ ತಾಲೂಕಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಈಗಾಗಲೇ ಕಾಲುವೆ ಮೂಲಕ ಹರಿಸಲಾಗಿದೆ. ನೀರು ಇಂಡಿ ತಾಲೂಕು ತಲುಪಿದ್ದು ಸಿಂದಗಿ ಕೆರೆ ಸಹ ಭರ್ತಿಯಾಗುತ್ತಿದೆ. ಆ ಹಿನ್ನೆಲೆ ಕೆಂಭಾವಿ ಹತ್ತಿರ ಇರುವ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಜಾಕ್‌ವೆಲ್‌ನಿಂದ ನೀರು ಸರಬರಾಜು ಆಗುತ್ತಿರುವುದನ್ನು ಅಧಿಕಾರಿಗಳು ಪರಿಶೀಲಿಸಿದರು. ಅಲ್ಲದೆ, ಸುರಪುರ ತಾಲೂಕು ದಂಡಾಧಿಕಾರಿ ಹಾಗೂ ಕೆಬಿಜೆಎನ್‌ಎಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನೀರು ಪೋಲಾಗದಂತೆ ಕ್ರಮ ಕೈಗೊಳ್ಳಲು ತಿಳಿಸಿದರು.

    ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮದ ವಿತರಣಾ ಜಾಲ ನಂ.5, 5ಎ ಹಾಗೂ 5ಬಿ ಕಾಲುವೆಗಳನ್ನು ವೀಕ್ಷಣೆ ಮಾಡಿ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಯಾವುದೇ ರೀತಿಯಲ್ಲಿ ನೀರು ಪೋಲಾಗದಂತೆ ಕ್ರಮ ವಹಿಸುವ ಕುರಿತು ಸೂಚಿಸಿದರು. ರೈತರ ಪಂಪ್‌ಸೆಟ್‌ಗಳ ಮೂಲಕವೂ ಕುಡಿಯುವ ನೀರಿನ ಉದ್ದೇಶಕ್ಕೆ ಬಿಡುಗಡೆಯಾದ ನೀರು ಕೃಷಿ ಉದ್ದೇಶಕ್ಕೆ ಬಳಕೆಯಾಗದಂತೆ ಕ್ರಮವಹಿಸುವ ಕುರಿತು ಹೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

    ಸಿಂದಗಿ ಕೆರೆ ಬರಿದಾದ ಬಗ್ಗೆ ಮೇ 16 ರಂದು ‘ವಿಜಯವಾಣಿ’ ವಿಸ್ತೃತ ವರದಿ ಮೂಲಕ ಜಿಲ್ಲಾಡಳಿತದ ಗಮನ ಸೆಳೆದಿತ್ತು. ಸಿಂದಗಿ ಪಟ್ಟಣದ ಕುಡಿಯುವ ನೀರಿನ ಮೂಲವಾದ ಕೆರೆಗೆ ಮಳೆಗಾಲ ಸಮೀಪಿಸಿದರೂ ನೀರು ಹರಿಸಿರಲಿಲ್ಲ. ಹೀಗಾಗಿ ಕೆರೆ ಬರಿದಾಗಿದ್ದು, ಶೀಘ್ರದಲ್ಲಿ ಕೆರೆ ಭರ್ತಿ ಮಾಡದೆ ಹೋದರೆ ಕುಡಿಯುವ ನೀರಿಗೆ ಸಂಚಕಾರ ಬರಲಿದೆ ಎಂದು ಎಚ್ಚರಿಸಲಾಗಿತ್ತು. ಈ ಬಗ್ಗೆ ಪುರಸಭೆ ಸದಸ್ಯ ಹಣಮಂತ ಸುಣಗಾರ ಸಹ ಪತ್ರಿಕೆ ಮೂಲಕ ಆಡಳಿತಾಧಿಕಾರಿಗಳ ಗಮನ ಸೆಳೆದಿದ್ದರು. ಇದೀಗ ಕೆರೆಗೆ ನೀರು ತುಂಬಿದ್ದು, ಸದಸ್ಯ ಹಣಮಂತ ಸುಣಗಾರ ‘ವಿಜಯವಾಣಿ’ ಕಳಕಳಿಗೆ ಶ್ಲಾಘಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts