More

    ಕರೊನಾ ಔಷಧ ವಿತರಕರು..!

    ಶಶಿಕಾಂತ ಮೆಂಡೆಗಾರ
    ವಿಜಯಪುರ:
    ಕರೊನಾ ಪಾಸಿಟಿವ್ ಎಂದಾಕ್ಷಣ ಎದೆಯೊಡೆದುಕೊಳ್ಳುವ ಈ ಸಂದರ್ಭದಲ್ಲಿ ಸ್ವಯಂ ಪ್ರೇರಿತರಾಗಿ ಆರೋಗ್ಯ ಇಲಾಖೆ ಪರವಾಗಿ ಕರೊನಾ ಪಾಸಿಟಿವ್ ಬಂದಂತಹ ರೋಗಿಗಳನ್ನು ಭೇಟಿಯಾಗಿ ಅವರಿಗೆ ಔಷಧ ಕೊಡುವ ಕೆಲಸದಲ್ಲಿ ಯುವಕರೀರ್ವರು ಮಾನವೀಯ ಸೇವೆ ಮಾಡುತ್ತಿದ್ದಾರೆ.

    ಅವರೇ, ವಿಜಯಪುರ ನಿವಾಸಿಗಳಾದ ವಿಶ್ವನಾಥ ಹಿರೇಮಠ ಹಾಗೂ ಶುಭಂ ಪಾಂಡ್ರೆ. ಇವರಿಬ್ಬರು ಕಳೆದ ಒಂದು ತಿಂಗಳಿನಿಂದ ಬಿರು ಬಿಸಿಲನ್ನೂ ಲೆಕ್ಕಿಸದೇ ತಮ್ಮ ಬೈಕ್‌ನಲ್ಲಿ ನಗರದ ಹತ್ತು ವಾರ್ಡ್‌ಗಳಲ್ಲಿನ, ಗಣೇಶ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಎಪಿಎಂಸಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಬರುವ ಕರೊನಾ ಪೀಡಿತ ಜನರಿಗೆ ಸರ್ಕಾರದಿಂದ ಉಚಿತವಾಗಿ ವಿತರಿಸುವ ಮಾತ್ರೆ ಮತ್ತು ಔಷಧಿಗಳನ್ನು ತಲುಪಿಸುವ ಕೆಲಸವನ್ನು ಮಾಡುತ್ತಿದ್ದಾರೆ.

    ಜೊತೆಗೆ ಅವರಿಗೆ ಮನೆಯಲ್ಲಿ ಹೇಗೆ ಜಾಗೃತೆಯಿಂದ ಇರಬೇಕು, ಏನೆಲ್ಲಾ ಊಟ ಮಾಡಬೇಕು, ಯಾವುದಕ್ಕೂ ಭಯ ಪಡುವ ಅವಶ್ಯಕತೆಯಿಲ್ಲ ಎಂದು ಧೈರ್ಯ ತುಂಬುತ್ತಿದ್ದಾರೆ. ಇದುವರೆಗೆ 400ಕ್ಕೂ ಅಧಿಕ ಪಾಸಿಟಿವ್ ಪೀಡಿತರ ಮನೆಗಳಿಗೆ ತೆರಳಿ ಔಷಧ ನೀಡಿ ಅವರು ಗುಣಮುಖರಾಗಲು ಕಾರಣರಾಗಿದ್ದಾರೆ. ಬಿಸಿಎ ಓದಿ ಖಾಸಗಿ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು ಲಾಕ್‌ಡೌನ್ ಹೇರಿದ ಬಳಿದ ತಾವೇ ಸ್ವಯಂ ಪ್ರೇರಿತರಾಗಿ ಈ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ.

    ಆರೋಗ್ಯ ಇಲಾಖೆಯಿಂದ ಸೂಕ್ತ ತರಬೇತಿ
    ವಿಜಯಪುರದಲ್ಲಿ ಕರೊನಾ ಪಾಸಿಟಿವ್ ಕೇಸ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಬರಲಾರಂಭಿಸಿದಾಗ ಕರೊನಾ ಪೀಡಿತರ ಸೇವೆ ಸಲ್ಲಿಸಲು ಸ್ವಯಂ ಸೇವಕರ ಅವಶ್ಯಕತೆ ಇತ್ತು. ಆದರೆ ಆ ಸಂದರ್ಭದಲ್ಲಿ ಈ ಇಬ್ಬರು ಯುವಕರನ್ನು ಹೊರತುಪಡಿಸಿ ಯಾರೊಬ್ಬರು ಮುಂದೆ ಬರಲಿಲ್ಲ. ಇವರಿಬ್ಬರಿಗೇ ಎರಡು ದಿನ ತರಬೇತಿ ನೀಡಿ ಆರೋಗ್ಯ ಇಲಾಖೆಯಿಂದ ಗುರುತಿನ ಪತ್ರ ನೀಡಲಾಗಿದೆ.
    ಸೋಂಕಿತರ ಮನೆಗೆ ತೆರಳುವ ಮುನ್ನ ಇವರು ಮಾಸ್ಕ್, ಹ್ಯಾಂಡ್‌ಗ್ಲೌಸ್, ಸ್ಯಾನಿಟೈಜರ್ ಬಳಕೆ ಮಾಡುತ್ತಾರೆ. ಹೀಗಾಗಿ ಪಾಸಿಟಿವ್ ಪೀಡಿತರಿಂದ ಸೋಂಕು ತಗಲುವ ಅವಕಾಶ ಕಡಿಮೆ. ಇವರಿಂದ ಸೇವೆ ಪಡೆದು ಗುಣಮುಖರಾಗಿರುವ ಅದೆಷ್ಟೋ ಜನರು ಇವರ ಅನನ್ಯ ಸೇವೆಗೆ ಕೃತಜ್ಞತೆ ಹೇಳಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳು ಸಹ ಅಭಿನಂದನೆ ಸಲ್ಲಿಸಿದ್ದಾರೆ.

    ಮಹಾಮಾರಿ ಕರೊನಾ ಪೀಡಿತರಾಗಿ ಮನೆಯಲ್ಲಿಯೇ ಇರುವ ರೋಗಿಗಳಿಗೆ ಸರ್ಕಾರ ವಿತರಿಸುವ ಔಷಧವನ್ನು ಕೆಲಸವನ್ನು ಶ್ರದ್ಧೆ, ಪ್ರೀತಿಯಿಂದ ಮಾಡುತ್ತಿದ್ದೇವೆ. ಅವರು ಶೀಘ್ರ ಗುಣಮುಖರಾಗಿ ಹರಸಿದರೆ ಅದೇ ನಮಗೆ ಶ್ರೇಯಸ್ಸು.
    ವಿಶ್ವನಾಥ ಹಿರೇಮಠ ಔಷಧ ವಿತರಿಸುವವರು

    ಸ್ವಯಂ ಸೇವಕರ ಅವಶ್ಯಕತೆ ಇದ್ದಾಗ ಇವರಿಬ್ಬರೇ ಧೈರ್ಯದಿಂದ ಮುಂದೆ ಬಂದಿದ್ದು, ಸೂಕ್ತ ತರಬೇತಿ ನೀಡಿ, ಸ್ವಯಂ ರಕ್ಷಣೆಯ ವಿಧಾನವನ್ನೂ ಕಲಿಸಿ ಕರೊನಾ ಪೀಡಿತರ ಮನೆಗೆ ಔಷಧಿ ತಲುಪಿಸುವ ಕೆಲಸಕ್ಕೆ ಕಳಿಸಲಾಗುತ್ತಿದೆ. ಇಂಥ ಸಂದಿಗ್ಧ ಸಂದರ್ಭದಲ್ಲಿ ಅವರ ಸೇವೆ ಅತ್ಯಮೂಲ್ಯ.
    ಡಾ. ಕವಿತಾ ದೊಡಮನಿ, ಟಿಹೆಚ್‌ಓ ವಿಜಯಪುರ

    ನಾನು ಕೋವಿಡ್ ಪೀಡಿತನಾಗಿದ್ದಾಗ ನಮ್ಮ ಮನೆಗೇ ಬಂದು ಔಷಧ ವಿತರಿಸಿದ್ದಲ್ಲದೇ, ಕರೊನಾದಿಂದ ಮುಕ್ತರಾಗಲು ತೆಗೆದುಕೊಳ್ಳಬೇಕಾದ ಮುಂಜಾಗ್ರತೆ, ಆಹಾರ ವಿಧಾನ ಎಲ್ಲವನ್ನೂ ಸವಿಸ್ತಾರವಾಗಿ ತಿಳಿಸಿಕೊಟ್ಟರು. ಈಗ ಆರಾಮಾಗಿದ್ದೇನೆ. ಸ್ವಯಂಪ್ರೇರಿತರಾಗಿ ಸೇವೆ ಸಲ್ಲಿಸುತ್ತಿರುವ ಯುವಕರಿಗೆ ಒಳ್ಳೆಯದಾಗಲಿ.
    ಸುರೇಶ ಬಿರಾದಾರ ಇವರಿಂದ ಮೆಡಿಸಿನ್ ಪಡೆದು ಗುಣಮುಖರಾದವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts