More

    ಬಾಕಿ ಹಣ ಬಿಡುಗಡೆಗೊಳಿಸಿ

    ವಿಜಯಪುರ: ಮಾಸಾಶನ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಮುಕ್ತ ದೇವದಾಸಿಯರು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

    ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಬೃಹತ್ ಪ್ರತಿಭಟನೆ ಮೂಲಕ ಜಿಲ್ಲಾಡಳಿತ ಕಚೇರಿವರೆಗೆ ಆಗಮಿಸಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಅವರಿಗೆ ಮನವಿ ಸಲ್ಲಿಸಿದರು.

    ಪ್ರಧಾನ ಕಾರ್ಯದರ್ಶಿ ಬಿ.ಮಾಳಮ್ಮಾ ಮಾತನಾಡಿ, ವಿಮುಕ್ತ ದೇವದಾಸಿಯರಿಗೆ ನೀಡುವ ಮಾಸಿಕ ಸಹಾಯ ಧನವನ್ನು ಕನಿಷ್ಠ 3000 ರೂ.ಗಳಿಗೆ ಹೆಚ್ಚಿಸಬೇಕು. ಬಾಕಿ ಹಣವನ್ನು ತಕ್ಷಣವೇ ಬಿಡುಗಡೆಮಾಡಬೇಕು. ವಿಮುಕ್ತ ದೇವದಾಸಿ ಮಹಿಳೆಯರ ಪರಿತ್ಯಕ್ತ ಮಕ್ಕಳಿಗೂ ಮಾಸಿಕ ಸಹಾಯಧನ ವಿತರಿಸಬೇಕು. ಅವರ ಗಣತಿ ಮಾಡಬೇಕು. ಗಣತಿಯಲ್ಲಿ ಬಿಟ್ಟು ಹೋದವರನ್ನು ಮರು ಸೇರ್ಪಡೆ ಮಾಡಬೇಕು. ಅವರ ಕುಟುಂಬಸ್ಥರಿಗೆ ಎಲ್ಲ ರೀತಿಯ ನೆರವು ಒದಗಿಸಬೇಕು ಎಂದರು.

    ವಿಮುಕ್ತ ದೇವದಾಸಿ ಮಹಿಳೆಯರ ಮಕ್ಕಳ ಮತ್ತು ಕುಟುಂಬದ ಸದಸ್ಯರಿಗೆ ಪುನರ್ವಸತಿ ಕಲ್ಪಿಸಬೇಕು. ಆರೋಗ್ಯ ಸೌಲಭ್ಯ ಒದಗಿಸಬೇಕು. ಅವರ ಮಕ್ಕಳ ಮದುವೆಗೆ 5ಲಕ್ಷ ರೂ.ಪ್ರೋತ್ಸಾಹ ಧನ ನೀಡಬೇಕು. ಮದುವೆ ವಿಚಾರದಲ್ಲಿ ಷರತ್ತುಗಳಿರಬಾರದು. ಬರಗಾಲ ಹಾಗೂ ಅತಿವೃಷ್ಟಿ ಪ್ರವಾಹದ ಹಿನ್ನೆಲೆಯಲ್ಲಿ ವಿಮುಕ್ತ ದೇವದಾಸಿ ಮಹಿಳೆಯರ ಮತ್ತು ಅವರ ಮಕ್ಕಳ ಹಾಗೂ ಸ್ತ್ರೀ ಶಕ್ತಿ ಹಾಗೂ ಸ್ವಸಹಾಯ ಸಂಘಗಳ ಸಾಲ ಮನ್ನಾಮಾಡಬೇಕು ಎಂದರು.

    ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ವಿಮುಕ್ತ ದೇವದಾಸಿ ಮಹಿಳೆಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಉನ್ನತ ಹಂತದವರೆಗೆ ಉಚಿತವಾದ ಮತ್ತು ನೇರವಾದ ಪ್ರವೇಶಾವಕಾಶ ಒದಗಿಸಬೇಕು. ವಿದ್ಯಾವಂತ ನಿರುದ್ಯೋಗಿಗಳಿಗೆ ಅವರು ಉದ್ಯೋಗ ಪಡೆಯುವವರೆಗೂ ತಲಾ 10 ಸಾವಿರ ರೂ. ನಿರುದ್ಯೋಗ ಭತ್ಯೆ ನೀಡಬೇಕು ಎಂದರು.

    ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ಸುರೇಖಾ ರಜಪೂತ, ಅಣ್ಣಾರಾಯ ಈಳಗೇರ, ಯಲ್ಲವ್ವ ಕತ್ನಳ್ಳಿ, ಕೆಂಚವ್ವ ಬಬಲೇಶ್ವರ, ಸತ್ಯವ್ವ ಸಿಂಗೆ, ಚಿಕ್ಕವ್ವ ಮಾದರ, ಶಿವಮ್ಮ ಗುಂಡೆನಮನಿ, ನಾಗಮ್ಮ ಬ್ಯಾಕೋಡ, ನಾಗಮ್ಮ ಸಂದಿಮನಿ, ಲಕ್ಕವ್ವ ಯಕ್ಕುಂಡಿ, ಮಾಲವ್ವ ಹಲಗಣಿ, ರೇಣುಕಾ ಬಗಲಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts