More

    ಜೆಡಿಎಸ್ ಕಚೇರಿಯಾದ ಕಸಾಪ ಭವನ!

    ವಿಜಯಪುರ: ಕೆಲವರು ಕನ್ನಡ ಸಾಹಿತ್ಯ ಪರಿಷತ್ ರಾಜಕೀಯ ಕಚೇರಿಯಾಗಿಸಿದ್ದಾರೆಂದು ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಮಲ್ಲಿಕಾರ್ಜುನ ಭೃಂಗಿಮಠ ಆರೋಪಿಸಿದರು.
    ಕನ್ನಡ ಸಾಹಿತ್ಯ ಪರಿಷತ್ ಇರೋದು ಕನ್ನಡ ನಾಡು, ನುಡಿ, ಭಾಷೆ ರಕ್ಷಣೆಗಾಗಿ. ಆದರೆ, ಕೆಲವರು ಅದನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಜೆಡಿಎಸ್ ಕಚೇರಿ ಮಾಡಿಕೊಂಡಿದ್ದಾರೆಂದು ಕಸಾಪ ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ವಿರುದ್ಧ ಆರೋಪಿಸಿದರು.

    ಕನ್ನಡ ಸಾಹಿತ್ಯ ಪರಿಷತ್ ರಾಜಕೀಯ ಪಡಸಾಲೆಯಾಗಿದೆ. ಕನ್ನಡದ ಉಳಿವಿಗಾಗಿ, ಸಾಹಿತ್ಯ ರಚನೆ ಮಾಡಿದ ಕವಿ, ಸಾಹಿತಿಗಳಿಗೆ ಸಿಗಬೇಕಾದ ಕಸಾಪ ಅಧ್ಯಕ್ಷ ಸ್ಥಾನ ರಾಜಕೀಯ ವ್ಯಕ್ತಿಗಳ ಕೈಗೆ ಹೋಗುತ್ತಿರುವುದು ದುರಂತ ಸಂಗತಿ. ಭಾಷೆ, ಸಾಹಿತ್ಯ, ಕೃತಿಗಳ ಹಾಗೂ ಕವಿ, ಬರಹಗಾರರ ರಕ್ಷಣೆಯಾಗಿ ಕನ್ನಡ ಸಾಹಿತ್ಯ ಪರಿಷತ್ ಉಳಿಯಬೇಕಾದರೆ ರಾಜಕೀಯೇತರ ವ್ಯಕ್ತಿಗಳು ಕಸಾಪ ಜಿಲ್ಲಾಧ್ಯಕ್ಷರಾಗಬೇಕು. ಅದರಲ್ಲೂ ಸಾಹಿತಿಗಳಾದರೆ ಇನ್ನೂ ಉತ್ತಮ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

    ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ 3 ಕೋಟಿ ರೂ.ದೇಣಿಗೆ ಇದೆ. ಕಳೆದ ಎರಡು ಚುನಾವಣೆಗಳಲ್ಲೂ ಯಂಡಿಗೇರಿ ಅವರು ಸಾಹಿತ್ಯ ಭವನ ನಿರ್ಮಾಣ ಮಾಡುತ್ತೇನೆ ಎಂದು ಹೇಳಿಕೊಂಡೆ ಅಧ್ಯಕ್ಷರಾಗಿದ್ದಾರೆ. ಆದರೆ ಭವನ ನಿರ್ಮಾಣ ಮಾಡಿಲ್ಲ. ಇದೀಗ ಅದೇ ಭವನದ ಹೆಸರಿನಲ್ಲಿ ಮತ್ತೊಂದು ಚುನಾವಣೆ ಎದುರಿಸುತ್ತಿದ್ದಾರೆ ಎಂದರು.

    ಇನ್ನು ಯಾವುದೇ ಸಾಹಿತ್ಯ ಹಿನ್ನೆಲೆ ಇಲ್ಲದ ಹಾಸಿಂಪೀರ್ ವಾಲೀಕಾರ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರು ಸಹ ರಾಜಕೀಯ ಹಿನ್ನೆಲೆ ಉಳ್ಳವರು. ಅವರನ್ನು ಆಯ್ಕೆ ಮಾಡಿದರೆ ಕಸಾಪವನ್ನು ಕಾಂಗ್ರೆಸ್ ಕಚೇರಿಯನ್ನಾಗಿ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.

    ನಾನು ಯಾವುದೇ ಪಕ್ಷದಲ್ಲಿಲ್ಲ. ಕನ್ನಡ ಸಾಹಿತ್ಯ ಪರಿಷತ್ ಏಳಿಗಾಗಿ ಕೆಲಸ ಮಾಡುತ್ತೇನೆ. ನಿಜವಾದ ಸಾಹಿತಿಗಳಿಗೆ ಗೌರವ ಒದಗಿಸಲು ಶ್ರಮಿಸುತ್ತೇನೆ. ಜಿಲ್ಲೆಯಲ್ಲಿ ಸಾಹಿತ್ಯ ಕೃಷಿ ಮಾಡಿರುವ ಸಾಕಷ್ಟು ಕವಿ, ಸಾಹಿತಿ, ಲೇಖಕರಿದ್ದಾರೆ. ಅವರೆಲ್ಲರ ಉತ್ತಮ ಸಂದೇಶಗಳೊಂದಿಗೆ ಮೂರ್ತಿಯನ್ನು ಕೆತ್ತಿಸಿ ನೂತನ ಸಭಾಭವನದಲ್ಲಿ ಪ್ರತಿಷ್ಠಾಪಿಸಿ ಗೌರವ ಸಲ್ಲಿಸುತ್ತೇನೆ ಎಂದರು.

    ಲ.ರು. ಗೊಳಸಂಗಿ, ಜಿ.ಎಸ್. ಭೂಸಗೊಂಡ, ನಾಗರಾಜ ಬಿರಾದಾರ, ರಘುನಾಥ, ರಾಮಚಂದ್ರ ಹಂಚನಾಳ, ದಾನೇಶ ಅವಟಿ, ರಾಜು ಮಣ್ಣೂರ, ಶಾಂತಗೌಡ ಪಾಟೀಲ, ಲಾಯಪ್ಪ ಇಂಗಳೆ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts