More

    ಬಿಸಿಲೂರಿನಲ್ಲಿ ಸರ್ವಂ ಶಿವಮಯಂ

    ವಿಜಯಪುರ: ಮಹಾಮಾರಿ ಕರೊನಾದಿಂದಾಗಿ ಕಳೆದ ವರ್ಷ ಮಂಕಾಗಿದ್ದ ಶಿವರಾತ್ರಿ ಈ ಬಾರಿ ಎರಡೂ ವರ್ಷಕ್ಕೆ ಅನ್ವಯವಾಗುವ ರೀತಿಯಲ್ಲಿ ಅದ್ದೂರಿಯಿಂದ ಆಚರಿಸಲಾಯಿತು.

    ನಗರ ಸೇರಿದಂತೆ ಜಿಲ್ಲೆಯ ವಿವಿಧ ಶಿವ ದೇವಾಲಯಗಳಲ್ಲಿ ಗುರುವಾರ ಮಹಾಶಿವರಾತ್ರಿ ಹಿನ್ನೆಲೆ ವಿಶೇಷ ಪೂಜೆ-ಪುನಸ್ಕಾರ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ನಸುಕಿನ ಜಾವದಿಂದಲೇ ಪ್ರಮುಖ ದೇವಸ್ಥಾನಗಳಲ್ಲಿ ಗಂಟೆ, ಮಂತ್ರ-ಸ್ತೋತ್ರಗಳ ನಿನಾದ ಕೇಳಿ ಬಂತು. ನಗರವಾಸಿಗಳು ಹತ್ತಿರದ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ ಕೃತಾರ್ಥರಾದರು. ಗ್ರಾಮೀಣ ಭಾಗಗಳಲ್ಲಿ ವಿಶೇಷ ಖಾದ್ಯಗಳ ಮೂಲಕ ಶಿವನಿಗೆ ನೈವೇದ್ಯ ಅರ್ಪಿಸಲಾಯಿತು.

    ನಗರದ ಶಿವ ದೇವಾಲಯಗಳಲ್ಲಿ ರುದ್ರ ಮಂತ್ರ, ಧೂಪ, ದೀಪಗಳಿಂದ ಶಿವನಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ದೇವಾಲಯಗಳು ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದವು. ಪ್ರತಿಯೊಂದು ಶಿವಾಲಯ ಅಕ್ಕಪಕ್ಕ ತೆಂಗಿನಕಾಯಿ, ಬಾಳೆಹಣ್ಣು, ದ್ರಾಕ್ಷಿ ಮುಂತಾದ ಹಣ್ಣುಗಳು, ಕರ್ಪೂರ ಮಾರಾಟ ಭರ್ಜರಿಯಾಗಿ ನಡೆದಿತ್ತು. ಸಾವಿರಾರು ಭಕ್ತಾದಿಗಳು ಮಡಿಯಿಂದ ಬಂದು ಶಿವನಿಗೆ ಭಕ್ತಿ ಸಮರ್ಪಿಸಿದರು. ಸುಂದರೇಶ್ವರ, ನೀಲಕಂಠ, ಶಿವ, ಶಂಕರ ಹೀಗೆ ಮುಂತಾದ ಹೆಸರುಗಳಿಂದ ಕರೆಯುವ ದೇವಸ್ಥಾನಗಳಲ್ಲಿ ಕಿಕ್ಕಿರಿದು ತುಂಬಿದ ಭಕ್ತ ಸಮೂಹ ಶಿವನಾಮ ಸ್ಮರಿಸಿ ಪುನೀತರಾದರು.

    ಶಿವಗಿರಿಗೆ ಭಕ್ತರ ದಂಡು
    ನಗರಹೊರವಲಯದ ಶಿವಗಿರಿಯಲ್ಲಿರುವ ಬೃಹತ್ ಶಿವಮೂರ್ತಿ ದರ್ಶನಕ್ಕೆ ಸಾಗರೋಪಾದಿಯಲ್ಲಿ ಜನ ಸೇರಿದ್ದರು. ಟಂಟಂ, ಕ್ರೂಸರ್, ಬೈಕ್ ಸೇರಿದಂತೆ ಹಲವು ವಾಹನಗಳಲ್ಲಿ ಜನ ಶಿವಗಿರಿ ದರ್ಶನಕ್ಕೆ ಆಗಮಿಸಿದ್ದು ಕಂಡು ಬಂತು. ಮಹಿಳೆಯರು ಮಕ್ಕಳಾದಿಯಾಗಿ ಎಲ್ಲ ಸ್ತರದ ಭಕ್ತ ಸಮೂಹ ಕಾಲ್ನಡಿಗೆ ಮೂಲಕ ಶಿವಗಿರಿಯತ್ತ ಧಾವಿಸಿ ಬಂತು.

    ಇಲ್ಲಿನ ಬಸವಂತವನದಲ್ಲಿ ಮಕ್ಕಳು ಸ್ವಚ್ಛಂದವಾಗಿ ಆಟವಾಡುತ್ತ ಕಾಲ ಕಳೆದರು. ಎಲ್ಲೆಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಶಿವಭಕ್ತರ ಅನುಕೂಲಕ್ಕಾಗಿ ಸಾರಿಗೆ ಇಲಾಖೆಯಿಂದ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಆಟಿಕೆ ಅಂಗಡಿ, ಕಬ್ಬಿನ ಹಾಲು, ಐಸ್‌ಕ್ರೀಂ ವ್ಯಾಪಾರ ಜೋರಾಗಿತ್ತು.

    ಭಕ್ತರ ಸರತಿ ಸಾಲು
    ಜೋರಾಪುರ ಪೇಠದಲ್ಲಿರುವ ಶಂಕರಲಿಂಗ ದೇವಾಲಯ, ಮಲ್ಲಿಕಾರ್ಜುನ ದೇವಾಲಯ, ಅಡವಿ ಶಂಕರಲಿಂಗ ದೇವಾಲಯ, 770 ಲಿಂಗದ ಗುಡಿ, ಐತಿಹಾಸಿಕ ಸುಂದರೇಶ್ವರ ದೇವಾಲಯ, ಚಿದಂಬರ ನಗರದಲ್ಲಿ ಚಿದಂಬರೇಶ್ವರ ದೇವಾಲಯ ಸೇರಿದಂತೆ ವಿವಿಧ ಬಡಾವಣೆಗಳಲ್ಲಿರುವ ಶಿವ ದೇವಾಲಯಗಳಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಂಗೀತ ಸೇವೆ, ಭಜನೆ, ಜಾಗರಣೆ, ವಿಶೇಷ ಪೂಜೆ ಸೇರಿದಂತೆ ಹತ್ತು ಹಲವು ಕಾರ್ಯಕ್ರಮ ನೆರವೇರಿದವು.

    ಶುಭಾಷಯ ವಿನಿಮಯ
    ಹಿಂದು ಧರ್ಮಿಯರು ಶಿವರಾತ್ರಿ ಹಿನ್ನೆಲೆ ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡರು. ಸಾಮಾಜಿಕ ಜಾಲತಾಣಗಳಂತೂ ಸಂಪೂರ್ಣ ಶಿವಮಯವಾಗಿದ್ದವು. ವಾಟ್ಸ್ ಆ್ಯಪ್, ಫೇಸ್‌ಬುಕ್ ಹಾಗೂ ಮೆಸೆಂಜರ್‌ಗಳಲ್ಲಿ ಶಿವನ ವಿವಿಧ ಭಾವಚಿತ್ರಗಳು ರಾರಾಜಿಸಿದವು. ಕೆಲ ಭಕ್ತರು ನೋಟ್ ಪುಸ್ತಕಗಳಲ್ಲಿ ‘ಓಂ ನಮಃ ಶಿವಾಯ’ ಎಂಬ ಪದಗಳನ್ನು ಬರೆದು ಜಾಗರಣೆ ಮಾಡಿದರು. ‘ಶಿವ ಶಿವ ಎಂದರೆ ಭಯವಿಲ್ಲ…ಶಿವನಾಮಕೆ ಸಾಟಿ ಬೇರಿಲ್ಲ….’ ‘ಓಂ ನಮಃ ಶಿವಾಯ’, ‘ಹರ ಹರ ಮಹಾದೇವ’ ಎಂಬಿತ್ಯಾದಿ ಭಕ್ತಿಗೀತೆಗಳು ಅನುರುಣಿಸಿದವು.

    ಪ್ರಜಾಪಿತ ಬ್ರಹ್ಮಕುಮಾರಿ ವಿವಿ
    ನಗರದ ದರ್ಗಾ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಮಹಾಶಿವರಾತ್ರಿ ಆಚರಿಸಲಾಯಿತು.

    ಉದ್ಘಾಟನೆ ನೆರವೇರಿಸಿದ ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ನಾವೆಲ್ಲರೂ ಪರಮಾತ್ಮನ ಮಕ್ಕಳು, ಈ ಲೋಕ ಬಿಟ್ಟು ಎಲ್ಲರೂ ಸಾಗಬೇಕಾಗಿದೆ. ಶರೀರ ಬಿಡುವುದಕ್ಕಿಂತ ಮೊದಲು ಪರಮಾತ್ಮನ ಜ್ಞಾನ ಮಾಡಿ ಶಾಂತಿ, ನೆಮ್ಮದಿ ಮತ್ತು ಪರೋಪಕಾರಕ್ಕೆ ಮಹತ್ವ ನೀಡಿದರೆ ಪುಣ್ಯ ಪ್ರಾಪ್ತಿ ಮಾಡಿಕೊಳ್ಳಲು ಸಾಧ್ಯ ಎಂದರು.

    ಬಿಕೆ ಡಾ. ಎಸ್.ಎಸ್. ಯರನಾಳ ಮಾತನಾಡಿ, ಮಾನವ ಕುಲ ಶ್ರೇಷ್ಠವಾದದ್ದು, ಸೃಷ್ಟಿಗೆ ದೇವನೊಬ್ಬನಿದ್ದಾನೆ. ಅವನಲ್ಲಿ ನಂಬಿಕೆ ಇಟ್ಟು ಬದುಕು ಸಾಗಿಸಬೇಕು. ದಾನ, ಧರ್ಮ, ನೈತಿಕತೆ, ಮಾನವೀಯತೆ ಗುಣಗಳನ್ನು ಮಾನವ ಅಳವಡಿಸಿಕೊಳ್ಳಬೇಕು. ಅಂದಾಗ ಶ್ರೇಷ್ಠ ಮಾನವನಾಗಲು ಸಾಧ್ಯ ಎಂದರು.

    ಪಾಲಿಕೆ ಮಾಜಿ ಸದಸ್ಯ ಉಮೇಶ ವಂದಾಲ ಅಧ್ಯಕ್ಷತೆ ವಹಿಸಿದ್ದರು. ಬಿಕೆ ರಾಜೇಶ್ವರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಕೆ ತೆಲಗಿ ಸ್ವಾಗತಿಸಿದರು. ಅರ್ಜುನ ಕವಟೆಕರ ಮತ್ತಿತರರಿದ್ದರು.

    ರುದ್ರಾಕ್ಷಿ ಧಾರಣೆ ಸಂಸ್ಕಾರ
    ಅಡವಿ ಶಂಕರಲಿಂಗ ದೇವಸ್ಥಾನದಲ್ಲಿ ಶಿವರಾತ್ರಿ ಹಿನ್ನೆಲೆ ಮಹಾ ತಪಸ್ವಿ ಸೇವಾ ಪ್ರತಿಷ್ಠಾನ ಟ್ರಸ್ಟ್ (ರಿ) ಹರಿಹರ ಶಾಖೆಯಿಂದ ರುದ್ರಾಕ್ಷಿ ವಿತರಿಸಲಾಯಿತು.

    ರುದ್ರಾಕ್ಷಿಯ ಮಹತ್ವ ತಿಳಿಸಿ ಉಚಿತವಾಗಿ ನೀಡುವ ಮೂಲಕ ಶಿವರಾತ್ರಿ ಆಚರಿಸಲಾಯಿತು. ಉಪಾಧ್ಯಕ್ಷ ರಾಮಯ್ಯ ಗಣಾಚಾರಿ, ಖಜಾಂಚಿ ಶಂಕರ ಜತ್ತಿ, ಸದಸ್ಯರಾದ ಭೀಮಾಶಂಕರ ಕುಮಟಗಿ, ಮಂಜುನಾಥ ಹಂಜಗಿ, ಸಿದ್ದು ಕುಂಬಾರ, ಆನಂದ ಕುಮಟಗಿ, ರೋಹಿತ ಬಿಸನಾಳ, ಬಸವರಾಜ ಮರನೂರ, ಚಿದಾನಂದ ವಾಲಿ ಮತ್ತಿತರರಿದ್ದರು.

    ಚಕ್ರಾಂಕಿತ ರಾಮೇಶ್ವರ ದೇವಸ್ಥಾನ
    ವಿಜಯಪುರ ನಗರದ ಮನಗೂಳಿ ರಸ್ತೆಯಲ್ಲಿನ ವಿವೇಕ ನಗರ(ಪೂರ್ವ) ಬಡಾವಣೆಯ ಶ್ರೀ ಪ್ರಸನ್ನ ಪಂಚಮುಖಿ ಪ್ರಾಣದೇವರ ಹಾಗೂ ಶ್ರೀ ಚಕ್ರಾಂಕಿತ ರಾಮೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಸಾಮೂಹಿಕ ವಿಶೇಷ ಪೂಜೆ ಜರುಗಿತು.

    ಚಕ್ರಾಂಕಿತ ರಾಮೇಶ್ವರನಿಗೆ ಹೂವಿನ ಅಲಂಕಾರ ಮಾಡಲಾಗಿತ್ತು. ಪಂಚಮುಖಿ ಭಜನಾ ಮಂಡಳಿ ಸದಸ್ಯರಿಂದ ಸಂಗೀತ ಸೇವೆ ಬಳಿಕ ದೀಪೋತ್ಸವ ಜರುಗಿತು. ಬೆಳಗ್ಗೆಯಿಂದಲೇ ಅಸಂಖ್ಯಾತ ಭಕ್ತಾದಿಗಳು ದೇವಸ್ಥಾನಕ್ಕೆ ಭೇಟಿ ನೀಡಿ ರಾಮೇಶ್ವರನ ದರ್ಶನ ಪಡೆದು ಪುನೀತರಾದರು.

    ಝೆಂಡಾ ಕಟ್ಟಿ ಹಳಕೇರಿ ಗಲ್ಲಿಯ ಗಾಯಿ ಚಾಳ್ ಬಳಿ ಇರುವ ಶ್ರೀ ಪ್ರಸನ್ನೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿಯಂದು ವಿಶೇಷ ಪೂಜೆ ನಡೆಯಿತು. ನೂತನವಾಗಿ ಪುನರಜ್ಜೀವನಗೊಂಡ ದೇವಸ್ಥಾನದಲ್ಲಿ ಭಕ್ತ ಗಣ ತುಂಬಿ ತುಳುಕುತ್ತಿತ್ತು. ಅರ್ಚಕ ಪ್ರಕಾಶಾಚಾರ್ಯ ಮದಭಾವಿ ನೇತೃತ್ವದಲ್ಲಿ ಅಭಿಷೇಕ ಪೂಜೆ ಸಂಪನ್ನಗೊಂಡವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts