More

    ಕರೊನಾ ಮೂರನೇ ಅಲೆ ಎದುರಿಸಲು ಸಜ್ಜು

    ವಿಜಯಪುರ: ನಗರದ ಸರ್ಕಾರಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಕಾಮಗಾರಿಯನ್ನು ಮುಂದಿನ 15 ತಿಂಗಳಲ್ಲಿ ಪೂರ್ಣಗೊಳಿಸಿ ‘ಕೋವಿಡ್ ಆಸ್ಪತ್ರೆ’ಯನ್ನಾಗಿ ರೂಪಿಸಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

    ಬುಧವಾರ ಆಸ್ಪತ್ರೆ ಕಾಮಗಾರಿ ಪರಿಶೀಲಿಸಿದ ಅವರು, ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಮೊದಲನೇ ಹಂತದ ಕಾಮಗಾರಿ ಪೂರ್ಣಗೊಳಿಸಿರುವ ಆರ್‌ಎನ್‌ಆರ್ ಗುತ್ತಿಗೆದಾರರಿಗೆ ಎರಡನೇ ಹಂತದ ಕಾಮಗಾರಿ ಕೈಗೊಳ್ಳಲು ಉಸ್ತುವಾರಿ ವಹಿಸಿ ಮುಂದಿನ 15 ತಿಂಗಳಲ್ಲಿ ಆಸ್ಪತ್ರೆಯ ಎಲ್ಲ ಕಾಮಗಾರಿಗಳು ಪೂರ್ಣಗೊಳಿಸಲು ಸೂಚಿಸಿದ್ದಾಗಿ ತಿಳಿಸಿದರು.

    ಕಾಮಗಾರಿಗೆ ವೇಗ
    ತಾಂತ್ರಿಕ ಕಾರಣಗಳಿಂದಾಗಿ ಆಸ್ಪತ್ರೆ ಕಾಮಗಾರಿಗಳು ನನೆಗುದಿಗೆ ಬಿದ್ದಿದ್ದವು. ಕರೊನಾ-3ನೇ ಅಲೆಯ ಕುರಿತು ತಜ್ಞರು ನೀಡಿರುವ ಗಮನದಲ್ಲಿ ಇಟ್ಟುಕೊಂಡು ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರಿಗೆ ಜನಪ್ರತಿನಿಧಿಗಳನ್ನು ಒಳಗೊಂಡ ನಿಯೋಗ ಸಹ ಭೇಟಿ ಮಾಡಲಾಗಿತ್ತು. ಅದರಂತೆ ಮಾಜಿ ಆರೋಗ್ಯ ಸಚಿವ ಶಿವಾನಂದ ಪಾಟೀಲ ಅವರ ಸಲಹೆ ಮತ್ತು ಜನಪ್ರತಿನಿಧಿಗಳ ಸಲಹೆ ಹಿನ್ನೆಲೆ ಆಸ್ಪತ್ರೆ ಕಾಮಗಾರಿಗಳು ಈಗ ಆರಂಭಗೊಂಡಿವೆ ಎಂದರು.

    ಆಸ್ಪತ್ರೆಯ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಈಗ ವಿದ್ಯುತ್, ನೀರು ಸರಬರಾಜು, ಚರಂಡಿ ಸೇರಿದಂತೆ ಎರಡನೇ ಹಂತದ ಕಾಮಗಾರಿಗಳು ಭರದಿಂದ ಸಾಗಿವೆ ಎಂದರು.

    ಕರೊನಾ ನಿರ್ವಹಣೆ
    ಕರೊನಾ ಮೊದಲ ಮತ್ತು ಎರಡನೇ ಅಲೆಯನ್ನು ಸಮರ್ಪಕವಾಗಿ ನಿಭಾಯಿಸಲಾಗಿದೆ. ಆಕ್ಸಿಜನ್, ಬೆಡ್ ಸಮಸ್ಯೆ ನೀಗಿಸಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ 6 ಕೆಎಲ್, ಎಲ್‌ಎಂಒ ಟ್ಯಾಂಕ್ ಮೂಲಕ 208 ಆಕ್ಸಿಜನ್ ಬೆಡ್‌ಗಳನ್ನು ನಿರ್ವಹಿಸಲಾಗಿದೆ. ಪ್ರತಿ ನಿಮಿಷಕ್ಕೆ 1000 ಲೀಟರ್ ಆಕ್ಸಿಜನ್ ಪೂರೈಸುವ ಪಿಎಸ್‌ಎಫ್ ಆಕ್ಸಿಜನ್ ಪ್ಲಾಂಟ್ ಮಂಜೂರಾತಿಯಾಗಿದ್ದು, ಈ ಘಟಕದ ಸಿವಿಲ್ ಕಾಮಗಾರಿಗಳು ನಡೆಯುತ್ತಿವೆ. ಅದರಂತೆ 13 ಕೆಎಲ್, ಎಲ್‌ಎಂಒ ಟ್ಯಾಂಕ್ ಮಂಜೂರಾತಿಗೂ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದರು.

    ಸಂಸದ ರಮೇಶ ಜಿಗಜಿಣಗಿ, ವಿಪ ಸದಸ್ಯರಾದ ಅರುಣ ಶಹಾಪುರ, ಹನುಮಂತ ನಿರಾಣಿ, ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್, ಜಿಪಂ ಸಿಇಒ ಗೋವಿಂದ ರೆಡ್ಡಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts