More

    ಸಾಲಿ ಇಲ್ಲಂದ್ರ ಕೂಲಿ ಮಾಡಂತಾರಿ..!

    ಗೊಳಸಂಗಿ (ವಿಜಯಪುರ): ‘‘ಏನಾರ ಮಾಡಿ ಜಲ್ದಿ ಸಾಲಿ ಚಾಲೂ ಮಾಡ್ರಿ… ಇಲ್ಲಂದ್ರ ನಮ್ಮ ಮನ್ಯಾಗ ಅಪ್ಪ-ಅವ್ವ ಕೂಲಿ ಮಾಡಂತಾರಿ. ಸಾಲಿ ಕಲಿಯುವ ವಯಸ್ಸನ್ಯಾಗ ನಮ್ಮನ್ನ ಕೂಲಿ ಕಳಿಸಲಾರ‌್ದ ಸಾಲಿ ಕಲಿಯುವಂಗ ಮಾಡಿ ಪುಣ್ಯಾ ಕಟ್ಟಿಕೊಳ್ರಿ ಸಾರ್..’’
    ಎಸ್‌ಡಿಎಂಸಿ ಅಧ್ಯಕ್ಷರು- ಸದಸ್ಯರೊಂದಿಗೆ ಪ್ರಾಥಮಿಕ- ಪ್ರೌಢಶಿಕ್ಷಣ ಸಚಿವ ಎಸ್. ಸುರೇಶಕುಮಾರ ಜಿಯೋ ಮೀಟ್ ಮೂಲಕ ನಡೆಸಿದ ವೆಬಿನಾರ್ ಸಭೆಯ ನಡುವೆ ವಿಜಯಪುರ ಜಿಲ್ಲೆಯ ಗೊಳಸಂಗಿ ಗ್ರಾಮದ ಮಾದರಿ ಬಡಾವಣೆಯ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಮತ್ತು ಇತರ ಶಾಲೆಯ ಹೇಮಂತ ರಕ್ಕಸಗಿ, ನಿರಂಜನ ದೇವಾಂಗಮಠ, ವೈಷ್ಟವಿ ದೇವಾಂಗಮಠ, ಗಣೇಶ ಡಬ್ಬಣದ ಎಂಬ ವಿದ್ಯಾರ್ಥಿಗಳು ತೋಡಿಕೊಂಡ ಗೋಳಿನ ಕಥೆಯಿದು.
    ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ಎಸ್. ಸುರೇಶಕುಮಾರ, ‘‘ಈಗ ಕರೊನಾ ಹಾವಳಿ ಹೆಚ್ಚಾಗಿದೆಯಲ್ಲಪ್ಪಾ ಏನು ಮಾಡೋದು’’ ಎಂದಾಗ ಪ್ರತಿಕ್ರಿಯಿಸಿದ ವಿದ್ಯಾರ್ಥಿಗಳು ‘‘ನಮ್ಮ ಕಡೆ ಕರೊನಾ ಅಷ್ಟೊಂದಾಗಿಲ್ರಿ… ಆದಷ್ಟು ಜಲ್ದಿ ಸಾಲಿ ಚಾಲೂ ಮಾಡಿ ನಮಗ ಅಕ್ಷರಾಭ್ಯಾಸ ಮಾಡಸ್ರಿ’’ ಎಂದರು. ಆಗ ಸಚಿವರು ‘‘ಆಯ್ತಪ್ಪಾ ಕೂಲಿ ಕೆಲಸಕ್ಕೆ ಹೋಗಬೇಡಿ. ಆದಷ್ಟು ಬೇಗ ಸರ್ಕಾರ ನಿಮ್ಮ ಆಸೆಯನ್ನು ಈಡೇರಿಸಲಿದೆ ’’ಎಂದು ಭರವಸೆ ನೀಡಿದರು.

    ಎಸ್‌ಡಿಎಂಸಿಯವರ ಬೇಡಿಕೆ ಏನು?

    ಸರ್ಕಾರ ಶಾಲೆಗಳ ನಿರ್ವಹಣೆಗೆ ನೀಡುವ ಅನುದಾನ ಸಾಕಾಗದು. ಎಲ್‌ಪಿಎಸ್‌ಗೆ ಒಂದು ಲಕ್ಷ ರೂ., ಎಚ್‌ಪಿಎಸ್‌ಗೆ ಎರಡು ಲಕ್ಷ ರೂ.,ಗಳಿಗೆ ಹೆಚ್ಚಿಸಬೇಕು. ಎಸ್‌ಡಿಎಂಸಿಗೆ ಹೆಚ್ಚಿನ ಅಧಿಕಾರ ನೀಡಬೇಕು. ರಾಜ್ಯಾದ್ಯಂತ ಶಾಲೆಗಳ ಪುನಾರಂಭ ಸದ್ಯಕ್ಕೆ ಅಸಾಧ್ಯವಾದರೆ ವಠಾರ ಶಾಲೆಗೆ ಅವಕಾಶ ನೀಡಬೇಕು. ಗ್ರಾಮೀಣ ಭಾಗದ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಲಕಾರಿಯಾಗದು. ಅದು ಬಿಟ್ಟು ಶಾಲೆ ಆರಂಭಿಸಿ. ಶಿಕ್ಷಣದಲ್ಲಿ ಕೇರಳ ಮಾದರಿ ಅನುಸರಿಸಬೇಕು. ಶಿಕ್ಷಕರು ಮನೆಯಲ್ಲಿ ಶಾಲೆ ಕೆಲಸ ಮಾಡಲಾರರು. ಕೂಡಲೇ ಅವರನ್ನು ಶಾಲೆಗೆ ಕರೆಸಿ. ಶಾಲೆ ಆರಂಭಗೊಳಿಸುವ ಮುನ್ನ ಶಿಕ್ಷಕರ ಕೊರತೆ ನೀಗಿಸಬೇಕು. ಶಾಸಕರಿಗೆ ದತ್ತು ಶಾಲೆ ನೀಡುವುದು ಬೇಡ. ಪಠ್ಯ ುಸ್ತಕಗಳನ್ನು ಶೀಘ್ರ ಶಾಲೆಗಳಿಗೆ ತಲುಪಿಸಬೇಕು ಸೇರಿ ವಿವಿಧ ಬೇಡಿಕೆಗಳು ಎಸ್‌ಡಿಎಂಸಿಯವರಿಂದ ಸಚಿವ ಸುರೇಶಕುಮಾರರ ಗಮನ ಸೆಳೆದವು.ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ., ಎಸ್‌ಡಿಎಂಸಿ ಸಮನ್ವಯ ವೇದಿಕೆ ರಾಜ್ಯಾಧ್ಯಕ್ಷ ಮೋಯೂದ್ದೀನ್ ಕುಟ್ಟಿ ಸೇರಿದಂತೆ ರಾಜ್ಯಾಧ್ಯಂತ 20 ಹೆಚ್ಚು ಜಿಲ್ಲೆಯ ಎಸ್‌ಡಿಎಂಸಿ ಅಧ್ಯಕ್ಷರು, ವಿಭಾಗೀಯ ಸಂಚಾಲಕರು, ಸದಸ್ಯರು ಭಾಗಿಯಾಗಿದ್ದರು.

    ರಾಜ್ಯದಲ್ಲಿ ಶಾಲೆಗಳ ಪುನಾರಂಭಕ್ಕೆ ಕೇಂದ್ರದಿಂದ ಇನ್ನೂ ಅನುಮತಿ ಸಿಕ್ಕಿಲ್ಲ. ಮಕ್ಕಳ ಕಲಿಕೆಗೆ ಆಧ್ಯತೆ ನೀಡಿ ಶೀಘ್ರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಎಸ್‌ಡಿಎಂಸಿಯವರ ಬೇಡಿಕೆಗಳೆಲ್ಲ ಪೂರಕವಾಗಿದ್ದು, ಆದ್ಯತೆಯ ಮೇರೆಗೆ ಈಡೇರಿಸುವ ಪ್ರಯತ್ನ ಮಾಡಲಾಗುವುದು.
    ಎಸ್.ಸುರೇಶಕುಮಾರ್, ರಾಜ್ಯ ಪ್ರಾಥಮಿಕ-ಪ್ರೌಢಶಿಕ್ಷಣ ಖಾತೆ ಸಚಿವರು

    ಸಾಲಿ ಇಲ್ಲಂದ್ರ ಕೂಲಿ ಮಾಡಂತಾರಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts