More

    ಮೀನುಗಾರಿಕೆಯಿಂದ ಆದಾಯ ವೃದ್ಧಿ

    ವಿಜಯಪುರ: ರೈತರು ಕೃಷಿ ಜತೆಗೆ ಹೈನುಗಾರಿಕೆ, ಮೀನುಗಾರಿಕೆಯಂತಹ ಆದಾಯ ವೃದ್ಧಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

    ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದ ಸಮೀಪದ ಆನ್‌ಲೈನ್ ಟ್ರೇಡಿಂಗ್ ಸಂಕಿರ್ಣದ ಆವರಣದಲ್ಲಿ ಜಿಲ್ಲಾ ಪಂಚಾಯಿತಿ, ಮೀನುಗಾರಿಕೆ ಇಲಾಖೆ, ಮೀನುಗಾರಿಕೆ ಸಂಶೋಧನಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಭಾನುವಾರ ಪ್ರಾರಂಭಗೊಂಡ ಮತ್ಸೃಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಜಿಲ್ಲೆಯಲ್ಲಿ ಆಲಮಟ್ಟಿ ಮೊದಲಾದ ಜಲಮೂಲಗಳಿಂದ ಒಟ್ಟು 6 ಸಾವಿರರಿಂದ 8 ಸಾವಿರ ಹೆಕ್ಟೇರ್ ಮೆಟ್ರಿಕ್ ಟನ್ ಮೀನು ಉತ್ಪಾದನೆ ಅಂದಾಜಿಸಲಾಗಿದ್ದು, ಈ ಉತ್ಪಾದನೆಯನ್ನು ಇನ್ನೂ ಹತ್ತುಪಟ್ಟು ಹೆಚ್ಚಿಸಬಹುದಾದ ಎಲ್ಲ ಅವಕಾಶಗಳು ಇವೆ. ಜಿಲ್ಲೆಯಲ್ಲಿ ಮೀನುಗಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಲವಾರು ಕಾರ್ಯಚಟುವಟಿಕೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

    ನೀಲಿಕ್ರಾಂತಿ ಯೋಜನೆಯಡಿಯಲ್ಲಿ ಸ್ವಂತ ನಿವೇಶನ ಹೊಂದಿರುವ ಮೀನುಗಾರರಿಗೆ ವಸತಿ ಸೌಕರ್ಯ ಕಲ್ಪಿಸಿಕೊಳ್ಳಲು ಪರಿಶಿಷ್ಟ ಪಂಗಡಗಳ ಲಾನುಭವಿಗಳಿಗೆ 1.50 ಲಕ್ಷ ರೂ. ಹಾಗೂ ಸಾಮಾನ್ಯ ಲಾನುಭವಿಗಳಿಗೆ 1.20 ಲಕ್ಷ ರೂ. ಸಹಾಯಧನ ನೀಡಲಾಗುತ್ತಿದೆ. ಮೀನುಗಾರಿಕೆಗೆ ಸಂಬಂಧಿಸಿದ ಅತ್ಯಾಧುನಿಕ ಪರಿಕರಗಳನ್ನು ನೀಡುವ ಯೋಜನೆ ಜಾರಿಯಲ್ಲಿದೆ ಎಂದರು.

    ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮಾತನಾಡಿ, ಕೇವಲ ಕೃಷಿಯ ಮೇಲೆ ಅವಲಂಬಿತವಾದರೆ ಆರ್ಥಿಕ ಸ್ಥಿರತೆ ಸಾಧ್ಯವಾಗುವುದಿಲ್ಲ, ಕೃಷಿ ಹೊಂಡವನ್ನು ಬೆಳೆಗಳಿಗೆ ಮಾತ್ರ ಬಳಕೆ ಮಾಡಿಕೊಳ್ಳದೇ ಮೀನುಗಾರಿಕೆಗೂ ಬಳಕೆ ಮಾಡಿದರೆ ಆದಾಯ ತನ್ನಿಂದ ತಾನೇ ವೃದ್ಧಿಯಾಗುತ್ತದೆ. ರೈತನ ಬಾಳು ಬಂಗಾರವಾಗುತ್ತದೆ ಎಂದರು.

    ಮಂಗಳೂರು, ಉಡುಪಿ ಮೊದಲಾದ ಕಡೆಗಳಲ್ಲಿ ಕೃಷಿ ಜತೆಗೆ ಮೀನುಗಾರಿಕೆ ಕೈಗೊಳ್ಳುತ್ತಿರುವುದರಿಂದ ಆ ಭಾಗದ ರೈತರು ಆರ್ಥಿಕವಾಗಿ ಸಬಲರಾಗುತ್ತಾರೆ. ಆದ್ದರಿಂದ ಜಿಲ್ಲೆಯಲ್ಲಿಯೂ ಕೃಷಿ ಜತೆಗೆ ಮೀನು ಸಾಕಣೆ ಮಾಡುವಂತೆ ರೈತರಿಗೆ ಸಲಹೆ ನೀಡಿದರು.

    ಜಿಪಂ ಕೃಷಿ ಹಾಗೂ ಕೈಗಾರಿಕಾ ಸಮಿತಿ ಅಧ್ಯಕ್ಷೆ ಕವಿತಾ ರಾಠೋಡ, ಎಪಿಎಂಸಿ ಅಧಿಕಾರಿ ಎಂ.ಡಿ. ಚಬನೂರ, ಮೀನುಗಾರಿಕೆ ಇಲಾಖೆ ಹಿರಿಯ ನಿರ್ದೇಶಕ ಶ್ರೀಶೈಲ ಗಂಗನಳ್ಳಿ, ಮೀನುಗಾರಿಕಾ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ವಿಜಯಕುಮಾರ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts