More

    ಪರೀಕ್ಷೆ ರದ್ದುಗೊಳಿಸಲು ಸರ್ಕಾರಕ್ಕೆ ಆಗ್ರಹ

    ವಿಜಯಪುರ: ಯುಜಿಸಿ ನಿಯಮ ಉಲ್ಲಂಘಿಸಿ ತಿಂಗಳ ಅಂತರದಲ್ಲಿ ಎರಡು ಸೆಮಿಸ್ಟರ್‌ಗಳ ಪರೀಕ್ಷೆ ನಡೆಸಲು ಮುಂದಾಗಿರುವ ವಿಶ್ವವಿದ್ಯಾಲಯಗಳ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸೋಮವಾರ ಅಕ್ಕಮಹಾದೇವಿ ಮಹಿಳಾ ವಿವಿ ವಿದ್ಯಾರ್ಥಿನಿಯರು ಎಐಡಿಎಸ್‌ಒ ನೇತೃತ್ವ ಪ್ರತಿಭಟನೆ ನಡೆಸಿದರು.

    ನಗರ ಹೊರವಲಯದ ಜ್ಞಾನ ಶಕ್ತಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಯರು ಕೂಡಲೇ ಬೆಸ ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದುಗೊಳಿಸಿ ಅಂತಿಮ ಪರೀಕ್ಷೆಯನ್ನಾದರೂ ಅಚ್ಚುಕಟ್ಟಾಗಿ ನಿಭಾಯಿಸಲು ಒತ್ತಾಯಿಸಿದರು. ಕುಲಸಚಿವೆ ಪ್ರೊ. ಆರ್. ಸುನಂದಮ್ಮ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಸಂಘಟನೆ ರಾಜ್ಯ ಸೆಕ್ರೆಟರಿಯೆಟ್ ಸದಸ್ಯ ಅಭಯಾ ದಿವಾಕರ್ ಮಾತನಾಡಿ, ಮಹಿಳಾ ವಿಶ್ವವಿದ್ಯಾಲಯದ ವೇಳಾಪಟ್ಟಿ ಪ್ರಕಾರ ಆ. 2 ಕ್ಕೆ ಅಂತಿಮ ವರ್ಷದ ಸೆಮಿಸ್ಟರ್ ಪರೀಕ್ಷೆಗಳು ಪ್ರಾರಂಭವಾಗಿ ಸೆಪ್ಟೆಂಬರ್ ತಿಂಗಳು ಬರುವುದರೊಳಗೆ ಎರಡೂ ಸೆಮಿಸ್ಟರ್ ಪರೀಕ್ಷೆಗಳು ಮುಗಿಸಬೇಕೆಂದು ರಾಜ್ಯ ಸರ್ಕಾರದ ನಿರ್ದೇಶನ ಬಂದಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳು ಒಂದು ತಿಂಗಳ ಅಂತರದಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆಗಳು ಹೇಗೆ ಬರೆಯಲು ಸಾಧ್ಯ? ಎಂದು ಪ್ರಶ್ನಿಸಿದರು.

    ಸರ್ಕಾರದ ಈ ಅವೈಜ್ಞಾನಿಕ ನೀತಿಯಿಂದ ವಿದ್ಯಾರ್ಥಿಗಳು ತೀವ್ರ ಒತ್ತಡಕ್ಕೆ ಸಿಲುಕಿದ್ದಾರೆ. ಸರ್ಕಾರವಾಗಲಿ, ವಿಶ್ವ ವಿದ್ಯಾಲಯಗಳಾಗಲಿ ಕೇವಲ ತಮ್ಮ ಜವಾಬ್ದಾರಿ ನಿಭಾಯಿಸಲು ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿವೆ. ಯಾವುದೇ ಕಾರಣಕ್ಕೆ ಬೆಸ ಸೆಮಿಸ್ಟರ್ ಪರೀಕ್ಷೆ ನಡೆಸದೆ ಅಂತಿಮ ಪರೀಕ್ಷೆಗಳನ್ನಷ್ಟೆ ನಡೆಸಲು ಯುಜಿಸಿ ಮಾರ್ಗಸೂಚಿ ಹೊರಡಿಸಿದರೂ ಅದನ್ನು ಉಲ್ಲಂಘಿಸಿ ಪರೀಕ್ಷೆ ನಡೆಸಲಾಗುತ್ತಿದೆ ಎಂದರು.

    ಮನವಿ ಸ್ವೀಕರಿಸಿದ ಕುಲಸಚಿವೆ ಪ್ರೊ.ಆರ್. ಸುನಂದಮ್ಮ ಮಾತನಾಡಿ, ಪದವಿಯ 2 ಮತ್ತು 4ನೇ ಸೆಮಿಸ್ಟರ್, ಸ್ನಾತಕೋತ್ತರ ಪದವಿಯ 2ನೇ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸದೆ ಮುಂಬಡ್ತಿ ನೀಡಲಾಗುವುದು. ಸ್ನಾತಕೋತ್ತರ ಪದವಿಯ 4ನೇ ಸೆಮಿಸ್ಟರ್‌ನ ‘ಪ್ರೊಜೆಕ್ಟರ್ ವರ್ಕ್’ ಆದಷ್ಟು ಸುಲಭಗೊಳಿಸುವುದಾಗಿ ಭರವಸೆ ನೀಡಿದರು.

    ಆದರೆ, ಹೋರಾಟ ನಿರತರು ಬೆಸ ಸೆಮಿಸ್ಟರ್ ಪರೀಕ್ಷೆ ರದ್ದುಗೊಳಿಸುವಂತೆ ಪ್ರಬಲ ಒತ್ತಾಯ ಮಂಡಿಸಿದರಲ್ಲದೆ, ಅಲ್ಲಿಯವರೆಗೂ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು. ಸಂಘಟಕರಾದ ಕಾವೇರಿ ರಜಪೂತ, ಸುರೇಖಾ ಸೇರಿದಂತೆ ಹಲವು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts