More

    ಪ್ರಕೃತಿ ರಕ್ಷಣೆಗೆ ಯುವ ಜನತೆ ಮುಂದಾಗಲಿ

    ವಿಜಯಪುರ: ಪ್ರಕೃತಿ ಉಳಿವಿಗಾಗಿ ಶೇ.1ರಷ್ಟು ಜನ ಮಾತ್ರ ಪ್ರಯತ್ನಗಳನ್ನು ನಡೆಸಿದ್ದು, ಶೇ.99 ಜನರು ಪ್ರಕೃತಿಯ ವಿನಾಶದ ಕಾರ್ಯದಲ್ಲಿ ತೊಡಗಿದ್ದಾರೆ. ಆದ್ದರಿಂದ ಯುವ ಜನತೆ ಪ್ರಕೃತಿಯ ರಕ್ಷಣೆಗೆ ಮುಂದಾಗಬೇಕು ಎಂದು ಈಜಿಪ್ತ್‌ನ ಕೃಷಿ, ಅರಣ್ಯ ವಿಜ್ಞಾನಿ ಡಾ.ಚಂದ್ರಶೇಖರ ಬಿರಾದಾರ ಹೇಳಿದರು.

    ನಗರದ ಶಾಸಕ ಎಂ.ಬಿ.ಪಾಟೀಲ ಅವರ ನಿವಾಸಕ್ಕೆ ಭಾನುವಾರ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಪ್ರಕೃತಿ ರಕ್ಷಿಸಲು ಪ್ರಯತ್ನಿಸುತ್ತಿರುವ ಶೇ.1ರ ಸಂಖ್ಯೆಯನ್ನು ಪ್ರತಿಶತ 10ಕ್ಕೆ ಏರಿಸಿದರೆ ಜಗತ್ತಿನಲ್ಲಿ ಸಾಕಷ್ಟು ಆರೋಗ್ಯಕರ ಬದಲಾವಣೆಗಳಾಗಿ ವಿಕೋಪಗಳು ತಪ್ಪುತ್ತವೆ ಎಂದರು.

    ಪ್ರಕೃತಿ ನಾಶಮಾಡುತ್ತಿರುವುದರಿಂದ ಮಣ್ಣು, ನೀರು, ಹವಾಮಾನಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗಿ, ವಿಷಮಯ ಪರಿಸ್ಥಿತಿಯಲ್ಲಿ ಬದುಕುತ್ತಿದ್ದೇವೆ. ಮೊದಲು ನಾವು ತಿನ್ನುವ ಆಹಾರವೇ ವಿಷವಾಗಿದೆ. ಇದನ್ನು ಬದಲಾಯಿಸಬೇಕು. ಯುವಕರಿಂದ ಮಾತ್ರ ಈ ಬದಲಾವಣೆ ಸಾಧ್ಯ. ನಾನು ಜಗತ್ತಿನ 50 ರಾಷ್ಟ್ರಗಳಲ್ಲಿ ಈ ಬದಲಾವಣೆ ಪ್ರಯೋಗವನ್ನು ಮಾಡಿದ್ದೇನೆ. ಯಶಸ್ವಿಯೂ ಆಗಿದ್ದೇನೆ. ನನ್ನ ತಾಯ್ನಡಿನ ನನ್ನ ಹೆಮ್ಮೆಯ ವಿಜಯಪುರ ಜಿಲ್ಲೆಯಲ್ಲಿ ಈ ಬದಲಾವಣೆ ತರುವ ಕಾರ್ಯವನ್ನು ಎಂ.ಬಿ.ಪಾಟೀಲ ಅವರು ಕೋಟಿ ವೃಕ್ಷ ಅಭಿಯಾನದ ಮೂಲಕ ಉತ್ಸಾಹದಿಂದ ಮಾಡುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ ಮಾತನಾಡಿ, ಮುದ್ದೇಬಿಹಾಳ ತಾಲೂಕಿನ ಢವಳಗಿ ಮೂಲದ ಡಾ.ಚಂದ್ರಶೇಖರ ಬಿರಾದಾರ ಅವರು ಸದ್ಯ ಈಜಿಪ್ತ್‌ನಲ್ಲಿ ನೆಲೆಸಿದ್ದು, ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಕೃಷಿ, ಅರಣ್ಯ ಮತ್ತು ಹವಾಮಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಜಗತ್ತಿನ ಹಲವು ರಾಷ್ಟ್ರಗಳ ಪ್ರಯೋಗಕ್ಕೂ ಭಾರತಕ್ಕೂ ತೀವ್ರ ವ್ಯತ್ಯಾಸವಿದೆ. 130 ಕೋಟಿ ಜನಸಂಖ್ಯೆಯ ಇಲ್ಲಿನ ಪರಿಸ್ಥಿತಿಯಲ್ಲಿ ನಾವು ಪರಿಸರ ಅಳಿವು-ಉಳಿವು ಕುರಿತು ಮಾತನಾಡುವುದೇ ದುಸ್ತರವಾಗಿದೆ. ಕೋಟಿವೃಕ್ಷ ಅಭಿಯಾನ, ಅರಣ್ಯ ಇಲಾಖೆಯಿಂದ ಬೆಳೆಸಿದ ಸಸಿಗಳನ್ನು ತೆಗೆದುಕೊಂಡು ಹೋಗುವವರು ಇರಲಿಲ್ಲ. ಇತ್ತೀಚೆಗೆ ಸಸಿಗಳನ್ನು ಹಂಚಲು ಆರಂಭಿಸಿದ ನಂತರ ಲಕ್ಷಾಂತರ ಸಸಿಗಳನ್ನು ರೈತರು ಪಡೆದು ತಮ್ಮ ಜಮೀನಿನಲ್ಲಿ ನೆಡುತ್ತಿದ್ದಾರೆ. ಅದರಿಂದ ಜಿಲ್ಲೆಯ ಪರಿಸರದಲ್ಲಿ ಉತ್ತಮ ಬದಲಾವಣೆ ಬಂದಿದೆ ಎಂದರು.

    ಬಿಎಲ್‌ಡಿಇ ವೈದ್ಯಕೀಯ ಕಾಲೇಜು ಪ್ರಾಧ್ಯಾಪಕ ಡಾ.ಕುಶಾಲ ದಾಸ ಮಾತನಾಡಿದರು. ಅರಣ್ಯ ಇಲಾಖೆ ಅಧಿಕಾರಿಗಳಾದ ಎನ್.ಕೆ.ಬಾಗಾಯತ, ಮಹೇಶ ಪಾಟೀಲ, ಪ್ರಭುಲಿಂಗ, ಮುಖಂಡರಾದ ಎನ್.ಡಿ.ಪಾಟೀಲ ಡೋಮನಾಳ, ಶರದ ರೂಡಗಿ, ಡಾ.ಮಹಾಂತೇಶ ಬಿರಾದಾರ, ಡಾ.ಮುರುಗೇಶ ಪಟ್ಟಣಶೆಟ್ಟಿ, ಬಸವರಾಜ ಬಿರಾದಾರ, ಪರುಗೌಡ ಪಾಟೀಲ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts