More

    ಮಾಹಿತಿ ಬಚ್ಚಿಟ್ಟರೆ ಕಠಿಣ ಕ್ರಮ

    ವಿಜಯಪುರ: ಕರೊನಾ ಸೋಂಕಿತರ ಕುಟುಂಬಸ್ಥರು ಅಧಿಕಾರಿಗಳೊಂದಿಗೆ ಸಹಕರಿಸಬೇಕು. ವ್ಯಕ್ತಿಯ ಸಂಪರ್ಕದಲ್ಲಿರುವವರ ಮಾಹಿತಿ ನೀಡಬೇಕು. ಹಾಗೊಂದು ವೇಳೆ ಮಾಹಿತಿ ಬಚ್ಚಿಡುವ ಪ್ರಯತ್ನ ಮಾಡಿದರೆ ಕಠಿಣ ಕ್ರಮ ಅನಿವಾರ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಎಚ್ಚರಿಸಿದ್ದಾರೆ.

    ಜಿಲ್ಲೆಯಲ್ಲಿ 6 ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಆತಂಕಕ್ಕೆಡೆ ಮಾಡಿದೆ. ನಿಯಂತ್ರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಸೋಂಕಿತರ ಕುಟುಂಬಸ್ಥರು ಕೆಲವು ಮಾಹಿತಿ ಗೌಪ್ಯವಾಗಿಡುತ್ತಿರುವುದು ಬೆಳಕಿಗೆ ಬಂದಿದೆ. ಹಾಗೆ ಮಾಡಿದಲ್ಲಿ ಕಠಿಣ ಕ್ರಮ ಅನಿವಾರ್ಯವಾಗಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
    ಸೋಂಕಿತರ ಕುಟುಂಬಸ್ಥರು ಮೊಬೈಲ್‌ನಲ್ಲಿರುವ ಕಾಲ್ ಡಿಟೇಲ್ಸ್‌ಗಳನ್ನು ಅಳಿಸಿಹಾಕಿರುವ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಾಗೆ ಮಾಡಿದರೆ ಸೋಂಕಿತರ ಪ್ರವಾಸ ಹಿನ್ನೆಲೆ ತಿಳಿಯುವುದು ಕಷ್ಟ. ಈಗಾಗಲೇ ಸೋಂಕಿತರ ಸಂಪರ್ಕದಲ್ಲಿರುವವರ ಮಾಹಿತಿ ಪಡೆಯಲಾಗಿದೆ. ಅವರೆಲ್ಲರ ಗಂಟಲ ದ್ರವ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. ಇನ್ನೂ ಎಷ್ಟು ಜನರ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಕಲೆ ಹಾಕುತ್ತಿರುವುದಾಗಿ ಪ್ರತಿಕ್ರಿಯಿಸಿದರು.

    ಟೆಸ್ಟಿಂಗ್ ಲ್ಯಾಬ್‌ಗೆ ಮನವಿ

    ಜಿಲ್ಲೆಗೊಂದು ಟೆಸ್ಟಿಂಗ್ ಲ್ಯಾಬ್ ಅವಶ್ಯಕತೆಯಿದ್ದು, ಆ ಬಗ್ಗೆ ಈಗಾಗಲೇ ಚರ್ಚಿಸಲಾಗಿದೆ. ಶೀಘ್ರದಲ್ಲೇ ಜಿಲ್ಲೆಗೊಂದು ಲ್ಯಾಬ್ ಕೊಡಿಸುವ ವ್ಯವಸ್ಥೆ ಮಾಡಲಾಗುವುದು. ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳು ತೆರೆಯುತ್ತಿಲ್ಲ. ಇದರಿಂದ ತುರ್ತು ಸಂದರ್ಭ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವೆ ಜೊಲ್ಲೆ, ಮಾನವೀಯ ನೆಲೆಗಟ್ಟಿನ ಮೇಲೆ ಕೆಲಸ ಮಾಡಬೇಕು. ಈ ಬಗ್ಗೆ ವೈದ್ಯರ ಅಸೋಸಿಯೇಷನ್ ಜತೆಗೆ ಸಂಪರ್ಕಿಸುವುದಾಗಿ ತಿಳಿಸಿದರು.

    ಪಡಿತರ ಸಮಸ್ಯೆ

    ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಈಗಾಗಲೇ ಪ್ರತಿ ಪಡಿತರದಾರರಿಗೆ 10 ಕೆಜಿ ಅಕ್ಕಿ ಹಾಗೂ 2 ಕೆಜಿ ಗೋಧಿ ನೀಡಲಾಗುತ್ತಿದೆ. ಅದಾಗ್ಯೂ ಕೆಲವೆಡೆ 1 ಕೆಜಿ ಕಡಿತ ಮಾಡುತ್ತಿರುವ ಆಪಾದನೆ ಕೇಳಿ ಬಂದಿದೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಮಾನವೀಯ ನೆಲೆಗಟ್ಟಿನ ಮೇಲೆ ಎಲ್ಲರೂ ಕಾರ್ಯ ನಿರ್ವಹಿಸಬೇಕು. ಯಾವುದೇ ಪಡಿತರದಾರರ ಮೇಲೆ ಆರೋಪ ಕೇಳಿ ಬಂದರೆ ಅವರ ಪರವಾನಗಿ ರದ್ದು ಮಾಡಲು ಸಿಎಂ ಸೂಚಿಸಿದ್ದಾರೆ. ಹೀಗಾಗಿ ಬಡವರಿಗೆ ಪಡಿತರ ಸಮರ್ಪಕವಾಗಿ ಸಿಗಬೇಕೆಂದು ಜೊಲ್ಲೆ ತಿಳಿಸಿದರು.
    ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ಈಗಾಗಲೇ ವಿಮೆ ಘೋಷಣೆ ಮಾಡಿದೆ. ಅದೇ ರೀತಿ ಆಶಾ ಕಾರ್ಯಕರ್ತೆಯರು ಸಹ ಜವಾಬ್ದಾರಿಯುತ ಕಾರ್ಯ ನಿರ್ವಹಿಸುತ್ತಿದ್ದು, ಅವರಿಗೂ ಆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕ್ರಮ ಜರುಗಿಸಲಾಗುವುದು. ಗರ್ಭೀಣಿಯರಿಗೆ ಅಂಗನವಾಡಿ ಕಾರ್ಯಕರ್ತರು ಪೌಷ್ಠಿಕ ಆಹಾರ ನೀಡಲು ತಿಳಿಸಲಾಗಿದೆ. ಅವರ ಮನೆಗೆ ಪಡಿತರ ನೀಡಲು ಸೂಚಿಸಲಾಗಿದೆ ಎಂದರು.
    ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ವಿಪ ಸದಸ್ಯ ಅರುಣ ಶಹಾಪುರ, ಶಾಸಕ ಸೋಮನಗೌಡ ಪಾಟೀಲ ಸಾಸನೂರ ಮತ್ತಿತರರಿದ್ದರು.

    ಪ್ರಕರಣಗಳ ವಿವರ

    ಯಾವುದೇ ಪಾಸಿಟಿವ್ ಪ್ರಕರಣ ಇಲ್ಲದ ಜಿಲ್ಲೆಯಲ್ಲಿ ಈಗ ಆರು ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿವೆ. ಇದೊಂದು ಆತಂಕದ ವಿಷಯ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
    ಜಿಲ್ಲೆಗೆ ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ 519 ಜನ ಆಗಮಿಸಿದ್ದಾರೆ. ಅದರಲ್ಲಿ 162 ಜನರ ಗಂಟಲು ದ್ರವ ಮಾದರಿ ತಪಾಸಣೆಗೆ ಕಳಹಿಸಲಾಗಿದೆ. 81 ಪ್ರಕರಣಗಳು ನೆಗೆಟಿವ್ ಬಂದಿವೆ. 75 ಪ್ರಕರಣಗಳ ನಿರೀಕ್ಷೆಯಲ್ಲಿದ್ದೇವೆ, 6 ಪಾಸಿಟಿವ್ ಪ್ರಕರಣ ಬಂದಿದ್ದು, ಓರ್ವ ಶಂಕಿತ ಸಾವನ್ನಪ್ಪಿದ್ದಾನೆ. ನಿಯಮಾವಳಿ ಪ್ರಕಾರ ಆತನ ಅಂತ್ಯಸಂಸ್ಕಾರ ನೆರವೇರಿಸಲಾಗುವುದು. 1 ರಿಂದ 14 ದಿವಸದ ಒಳಗಿನ ಶಂಕಿತ ಪ್ರಕರಣಗಳ ಸಂಖ್ಯೆ 123 ಇದ್ದು, 15 ರಿಂದ 28 ದಿವಸದ ಒಳಗಿನ ಶಂಕಿತ ಪ್ರಕರಣಗಳ ಸಂಖ್ಯೆ 138 ಹಾಗೂ 28 ದಿನ ಪೂರ್ಣಗೊಳಿಸಿ ಗೃಹಬಂಧನದಿಂದ ಮುಕ್ತರಾದವರ ಸಂಖ್ಯೆ 258 ಇರುವುದಾಗಿ ತಿಳಿಸಿದರು.

    ಮಾಹಿತಿ ಕಲೆ

    ಜಿಲ್ಲೆಯ ಎರಡು ಕುಟುಂಬಗಳ 6 ಜನರಿಗೆ ಸೋಂಕು ದೃಢಪಟ್ಟಿದ್ದು, ಆ ಎರಡು ಕುಟುಂಬಗಳ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಸಚಿವೆ ಜೊಲ್ಲೆ ತಿಳಿಸಿದರು. ಪೊಲೀಸ್ ಹಾಗೂ ಆರೋಗ್ಯ ಇಲಾಖೆಯಿಂದ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಗಳ ಪತ್ತೆ ಹಚ್ಚುವಿಕೆ ಕಾರ್ಯ ಕೈಗೊಳ್ಳಲಾಗಿದೆ. ಪಾಸಿಟಿವ್ ಪ್ರಕರಣ ಕಂಡು ಬಂದ ಪ್ರದೇಶವನ್ನು ಕಂಟೋನ್ಮೆಂಟ್ ರೆನ್ ಹಾಗೂ ಬಫರ್ ರೆನ್ ಎಂದು ಘೋಷಿಸಲಾಗಿದೆ. ಇಲ್ಲಿನ ನಿವಾಸಿಗಳಿಗೆ ಅಗತ್ಯ ಸಾಮಗ್ರಿ ಪೂರೈಸಲು ಮಹಾನಗರ ಪಾಲಿಕೆ ಆಯುಕ್ತರ ನೇತೃತ್ವ ಸಹಾಯವಾಣಿ ಪ್ರಾರಂಭಿಸಲಾಗಿದೆ. ಆ ಪ್ರದೇಶವನ್ನು ಸ್ವಚ್ಛಗೊಳಿಸಿ ಎಲ್ಲ ಜನರ ಆರೋಗ್ಯ ತಪಾಸಣೆ ಕೈಗೊಳ್ಳಲಾಗುತ್ತಿದೆ. ಸುಮಾರು 2000 ಮನೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಲಾಗುತ್ತಿದೆ. 200 ಬೆಡ್ ಹೊಂದಿರುವ ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆ ಎಂದು ಬದಲಾವಣೆಗೊಳಿಸಲಾಗಿದೆ ಎಂದರು.

    ಪಾಸಿಟಿವ್ ಪ್ರಕರಣಗಳಿಗೆ ಈಗಾಗಲೇ ಉತ್ತಮ ವೈದ್ಯಕೀಯ ಚಿಕಿತ್ಸೆ ಕೊಡಿಸಲಾಗುತ್ತಿದೆ. ರಾಜ್ಯದ ನುರಿತ ತಜ್ಞರ ನೇರ ಸಂಪರ್ಕದಲ್ಲಿದ್ದು ಜಿಲ್ಲೆಯಲ್ಲಿಯೂ ಖಾಸಗಿ ತಜ್ಞ ವೈದ್ಯರ ತಂಡ ರಚಿಸಲಾಗಿದೆ. ವಾರಕ್ಕೊಮ್ಮೆ ಜಿಲ್ಲೆ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಕರೊನಾ ಬಗ್ಗೆ ಪರಿಶೀಲನೆ ನಡೆಸಲಾಗುವುದು.
    ಶಶಿಕಲಾ ಜೊಲ್ಲೆ, ಜಿಲ್ಲಾ ಉಸ್ತುವಾರಿ ಸಚಿವೆ

    ಮಾಹಿತಿ ಬಚ್ಚಿಟ್ಟರೆ ಕಠಿಣ ಕ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts