More

    ಇದು ಪ್ರಜಾಪ್ರಭುತ್ವ, ಸಂವಿಧಾನ ಉಳಿಸುವ ಚುನಾವಣೆ; ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಗಡ್ಡದೇವರಮಠ ಗೆಲುವು ಖಚಿತ; ಸಚಿವ ಎಚ್.ಕೆ.ಪಾಟೀಲ

    ಹಾವೇರಿ: ಬಿಜೆಪಿಯವರು ಸಂವಿಧಾನ ಬದಲಾಯಿಸುವ ಮಾತನಾಡುತ್ತಾರೆ. ಬೆಲೆ ಏರಿಕೆಗೆ ಬಿಜೆಪಿಯೇ ಕಾರಣ. ಹಾಗಾಗಿ, ಈ ಚುನಾವಣೆ ಪ್ರಜಾಪ್ರಭುತ್ವ, ಸಂವಿಧಾನ ಉಳಿಸುವ ಚುನಾವಣೆ. ಈ ಚುನಾವಣೆ ದೇಶ ಉಳಿಸುವ ಚುನಾವಣೆಯಾಗಿದೆ ಎಂದು ಸಚಿವ, ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಎಚ್.ಕೆ.ಪಾಟೀಲ ಹೇಳಿದರು.
    ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಿಂದ ಕೇಂದ್ರಕ್ಕೆ 100 ರೂ. ತೆರಿಗೆ ಕೊಟ್ಟರೆ ವಾಪಸ್ ಕೇವಲ 13 ರೂ. ಬರುತ್ತಿದೆ. ಮಧ್ಯಪ್ರದೇಶಕ್ಕೆ 100 ರೂ.ಗೆ 279 ರೂ., ಉತ್ತರಪ್ರದೇಶಕ್ಕೆ 100 ರೂ.ಗೆ 333 ರೂ. ಹಾಗೂ ಬಿಹಾರಕ್ಕೆ 100 ರೂ.ಗೆ 922 ರೂ. ಕೊಡುತ್ತಿದ್ದಾರೆ. ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಕ್ಕೆ ಮಿತಿಯೇ ಇಲ್ಲ. ಎರಡನೇ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಕ್ಕೆ ಈ ಅನ್ಯಾಯವೇಕೆ ಎಂದು ಪ್ರಶ್ನಿಸಿದರು.
    ಗ್ಯಾರಂಟಿ ಯೋಜನೆಗಳನ್ನು ಯಾಕೆ ಟೀಕೆ ಮಾಡುತ್ತೀರಿ. ಬಡವರಿಗೆ ಲಾಭ ಆದರೆ ಯಾಕೆ ನಿಮಗೆ ಹೊಟ್ಟೆ ಉರಿ. ಅಚ್ಚೇ ದಿನ್ ಎಲ್ಲಿದೆ. 2014ರಲ್ಲಿ 314 ರೂ. ಇದ್ದ ಸಿಲಿಂಡರ್ ಈಗ 1150 ರೂ. ಆಗಿದೆ. 50 ರೂ. ಇದ್ದ ಪೆಟ್ರೋಲ್ ಬೆಲೆ 100 ರೂ. ದಾಟಿದೆ. 74 ರೂ. ಇದ್ದ ತೊಗರಿಬೇಳೆ 200 ರೂ. ಮುಟ್ಟಿದೆ ಎಂದರು.
    ನಮ್ಮ ಗ್ಯಾರಂಟಿ ಯೋಜನೆಗಳು ಶೇ.99ರಷ್ಟು ಜನರನ್ನು ತಲುಪಿವೆ. ಯಾವುದೇ ಮದ್ಯವರ್ತಿ ಇಲ್ಲದೇ ನೇರವಾಗಿ ಫಲಾನುಭವಿಗಳಿಗೆ ತಲುಪಿವೆ. ಇದು ದೇಶದ ಆಡಳಿತಾತ್ಮಕ ಇತಿಹಾಸದಲ್ಲಿ ಮಹತ್ತರವಾದ ಸಾಧನೆಯಾಗಿದೆ. ಎಲ್ಲ ಪಂಚಾಯಿತಿ, ಗ್ರಾಮ ಮಟ್ಟದಲ್ಲಿ ಪ್ರಚಾರ ಮಾಡಲಾಗಿದೆ. ಈ ಬಾರಿ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವುದು ಖಚಿತವಾಗಿದೆ. ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಮತದಾರರು ಗೆಲ್ಲಿಸಲಿದ್ದಾರೆ ಎಂದರು.
    ಮೋದಿ ಅವರ ಭಾಷೆ ಅವರ ಹುದ್ದೆಗೆ ಘನತೆ ತರುವಂಥದ್ದಲ್ಲ. ‘ಕಾಂಗ್ರೆಸ್ ಹಿಂದುಗಳ ತಾಳಿ ಕಿತ್ತು ಮುಸಲ್ಮಾನರಿಗೆ ಕೊಡುತ್ತದೆ’ ಎಂದಿದ್ದಾರೆ. ಕಾಂಗ್ರೆಸ್ 70 ವರ್ಷ ಆಳಿದೆ. ತಾಳಿ ಕೊಡುವ ಪಕ್ಷ ನಮ್ಮದು. ಮೋದಿ ಅನೇಕ ಯೋಜನೆ ಘೋಷಿಸಿ ಈಡೇರಿಸದೇ ವಚನ ಭ್ರಷ್ಟರಾದರು. 15 ಲಕ್ಷ ರೂ., 2 ಕೋಟಿ ಉದ್ಯೋಗ, ಬುಲೆಟ್ ಟ್ರೇನ್ ಎಲ್ಲಿದೆ ಎಂದು ಜರಿದರು.
    ರಾಹುಲ್ ಗಾಂಧಿ ವಿದೇಶಕ್ಕೆ ಯಾಕೆ ಹೋಗುತ್ತಾರೆ. ಕಾಂಗ್ರೆಸ್‌ನವರು ಸಾಚಾನಾ, ನೀವೇನು ಶ್ರೀರಾಮಚಂದ್ರರಾ ಎಂಬ ಪ್ರಜ್ವಲ್ ರೇವಣ್ಣ ಪರ ಬಿಜೆಪಿಗರ ಸಮರ್ಥನೆಗೆ ಎಚ್.ಕೆ.ಪಾಟೀಲ ಆಕ್ರೋಶವಾಗಿ ನುಡಿದರು. ಹಾಗಾದರೆ ದೇಶ ಬಿಟ್ಟು ಯಾಕೆ ಓಡಿ ಹೋದರು. ಎಚ್.ಡಿ.ಕೆ. ಯಾಕೆ ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದಿದ್ದಾರೆ. ನಿಮಗೆ ಹೀಗೆ ಮಾತನಾಡಲು ನಾಚಿಕೆ ಆಗುವುದಿಲ್ಲವೇ ಎಂದು ಮರು ಪ್ರಶ್ನಿಸಿದರು.
    ಗದಗಕ್ಕೆ ಪ್ರಿಯಾಂಕಾ ಗಾಂಧಿ ಮೇ 4ರಂದು
    ಮೇ 4ರಂದು ಸಂಜೆ 5 ಗಂಟೆಗೆ ಸಿಡಬ್ಲ್ಯೂಸಿ ನಾಯಕಿ ಪ್ರಿಯಾಂಕಾ ಗಾಂಧಿ ಗದಗ ನಗರಕ್ಕೆ ಬರಲಿದ್ದಾರೆ. ಗೃಹಲಕ್ಷ್ಮೀ ಕಾರ್ಯಕ್ರಮಕ್ಕೆ ಪ್ರೇರಣೆ ನೀಡಿದವರು ಅವರೇ. ಅವರಿಂದ ಭಾಷಣ ನಡೆಯಲಿದೆ ಎಂದು ಎಚ್.ಕೆ.ಪಾಟೀಲ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts