More

    ‘ಸ್ಕೀಮ್ ವರ್ಕರ್ಸ್‌’ ಸಮಸ್ಯೆಗಳ ಪರಿಹಾರಕ್ಕೆ ಅಗ್ರಹ

    ವಿಜಯಪುರ: ದೇಶದ ಸ್ಕೀಮ್ ವರ್ಕರ್ಸ್‌ಗಳ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಎಐಯುಟಿಯುಸಿ ಪದಾಧಿಕಾರಿಗಳು ಶನಿವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
    ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಚ್.ಟಿ. ಮಾತನಾಡಿ, ಇಂದು ದೇಶಾದ್ಯಂತ ಒಂದು ಕೋಟಿ ನೌಕರರು ಅದರಲ್ಲೂ ಬಹುತೇಕವಾಗಿ ಮಹಿಳೆಯರು, ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರು, ಆಶಾ ಕಾರ್ಯಕರ್ತೆಯರು, ಬಿಸಿಯೂಟ ನೌಕರರು, ಸರ್ವಶಿಕ್ಷಣ ಅಭಿಯಾನ ನೌಕರರು ಇತ್ಯಾದಿ ಕೆಲಸಗಳಲ್ಲಿ ದುಡಿಯುತ್ತಿದ್ದಾರೆ. ಇವರೆಲ್ಲರೂ ಪ್ರಧಾನವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹಗಲಿರುಳೆನ್ನದೆ ಸಮಾಜದ ಅತ್ಯಂತ ತಳಮಟ್ಟದ ಮತ್ತು ನಿರ್ಗತಿಕ ಸಮುದಾಯಗಳ ಸಾಮಾಜಿಕ ಅವಶ್ಯಕತೆಗಳನ್ನು ಪೂರೈಸಲು ಕೆಲಸ ಮಾಡುತ್ತಿದ್ದಾರೆ. ಈ ನೌಕರರು ಅತ್ಯಂತ ಬಡವರು ಮತ್ತು ಸಮಾಜದ ಅತ್ಯಂತ ತಳಮಟ್ಟದ ಜನರಾಗಿದ್ದಾರೆ. ಅವರಲ್ಲಿ ಹಲವಾರು ಮಂದಿ ಸೂರು ಅಥವಾ ಬೆಂಬಲ ಇಲ್ಲದ ವಿಧವೆಯರು ಹಾಗೂ ಕುಟುಂಬದಿಂದ ದೂರ ತಳ್ಳಲ್ಪಟ್ಟ ಒಂಟಿ ಮಹಿಳೆಯರಾಗಿದ್ದಾರೆ. ತಿಂಗಳ ವೇತನ 1,100 ರಿಂದ 10,000 ರೂ. ಮಾತ್ರ. ಹೀಗಾಗಿ ಅವರಿಗೆ ಅಂತಾರಾಷ್ಟ್ರೀಯ ಕಾರ್ಮಿಕ ನ್ಯಾಯಾಲಯ ನಿಗದಿಪಡಿಸಿರುವ 21,000 ರೂ. ವೇತನ ನೀಡಬೇಕೆಂದರು.
    ಜಿಲ್ಲಾ ಕಾರ್ಯದರ್ಶಿ ಸುನೀಲ ಸಿದ್ರಾಮಶೆಟ್ಟಿ ಮಾತನಾಡಿ, ಲಾಕ್‌ಡೌನ್ ಸಂದರ್ಭ ಸರ್ಕಾರಿ ಮತ್ತು ಖಾಸಗಿ ವಲಯದ ನೌಕರರಿಗೆ ಯಾವುದೇ ವೇತನ ಕಡಿತ ಮಾಡುವುದಿಲ್ಲ ಎಂದು ಪದೇ ಪದೆ ಆಶ್ವಾಸನೆ ಕೊಟ್ಟರೂ ನಮ್ಮಲ್ಲಿ ಬಹುತೇಕ ಜನ ವೇತನದಿಂದ ವಂಚಿತರಾಗಿದ್ದೇವೆ. ಎಲ್ಲ ಸ್ಕೀಮ್‌ಗಳಿಗೆ ಸರ್ಕಾರವೇ ಮಾಲೀಕ. ಆದರೂ, ಸರ್ಕಾರ ಒಬ್ಬ ಮಾದರಿ ಮಾಲೀಕನಂತೆ ವರ್ತಿಸಲಿಲ್ಲ ಎಂದರು.
    ಸರ್ಕಾರ ಕೂಡಲೇ ಸ್ಕೀಮ್ ನೌಕರರನ್ನು ಕಾಯಂ ನೌಕರರೆಂದು ಪರಿಗಣಿಸಬೇಕು. ಅವರಿಗೆ ವೇತನ, ರಜೆಗಳು, ಆರೋಗ್ಯ ಪರಿಹಾರ (ಸ್ವಂತಕ್ಕೆ ಹಾಗೂ ಕುಟುಂಬದವರಿಗೆ), ಮುಂಬಡ್ತಿ ಸೌಲಭ್ಯ ಸೇರಿದಂತೆ ಎಲ್ಲ ಶಾಸನಬದ್ಧ ಸೌಲಭ್ಯಗಳನ್ನು ಒದಗಿಸಬೇಕು. ಕನಿಷ್ಠ ವೇತನ 21,000 ರೂ. ನಿಗದಿಪಡಿಸಬೇಕು. ನಿವೃತ್ತ ನೌಕರರಿಗೆ 5 ಲಕ್ಷ ರೂ. ಇಡಿಗಂಟು ನೀಡಬೇಕು. ಕೆಲಸ ಮಾಡುವ ಸ್ಥಳದಲ್ಲಿ ವಿರಾಮ ಗೃಹ, ಶೌಚಗೃಹ, ಶುದ್ಧಕುಡಿಯುವ ನೀರು, ಸಮರ್ಪಕ ಸುರಕ್ಷತೆ ಮತ್ತು ಭದ್ರತೆಯನ್ನು ಕಡ್ಡಾಯವಾಗಿ ಒದಗಿಸಬೇಕು. ಬಿಸಿಯೂಟ ನೌಕರರಿಗೆ ವರ್ಷದ 12 ತಿಂಗಳೂ ಗೌರವಧನ ನೀಡಬೇಕು. 50 ಲಕ್ಷ ರೂ. ಆರೋಗ್ಯ ವಿಮೆ ಖಾತ್ರಿಪಡಿಸಬೇಕು ಎಂದು ಒತ್ತಾಯಿಸಿದರು. ಭಾರತಿ ದೇವಕತೆ, ಲಕ್ಷ್ಮಿ ಲಕಶೆಟ್ಟಿ, ಲಿಂಗಮ್ಮ ಮಠ, ಸಾವಿತ್ರಿ ನಾಗರಟ್ಟಿ, ಶಶಿಕಲಾ ಮ್ಯಾಗೇರಿ, ಗಿರಿಜಾ ಮಠಪತಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts