More

    ಸಾವಿನ ಪ್ರಮಾಣ ತಗ್ಗಿಸಲು ವಿಶೇಷ ಗಮನ ನೀಡಿ

    ವಿಜಯಪುರ: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಾವಿನ ಪ್ರಮಾಣ ತಗ್ಗಿಸುವ ದಿಸೆಯಲ್ಲಿ ಸಂಬಂಧಪಟ್ಟ ಆಸ್ಪತ್ರೆಗಳ ವೈದ್ಯರು ವಿಶೇಷ ಗಮನ ನೀಡುವಂತೆ ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದರು.

    ಕರೊನಾ ನಿಯಂತ್ರಣ ಕುರಿತು ಬುಧವಾರ ವಿಡಿಯೋ ಸಂವಾದದ ಮೂಲಕ ಜಿಲ್ಲಾ ಜಾಗೃತ ಸಮಿತಿಯ (ಎಕ್ಸಪರ್ಟ್ ಕಮಿಟಿ) ಸಭೆ ನಡೆಸಿ ವಿವಿಧ ಆಸ್ಪತ್ರೆಗಳ ವೈದ್ಯರೊಂದಿಗೆ ಚರ್ಚಿಸಿದ ಅವರು, ಜಿಲ್ಲೆಯಲ್ಲಿ ಕರೊನಾ ಸೋಂಕಿತರಿಗೆ ಪರಿಣಾಮಕಾರಿಯಾದ ಚಿಕಿತ್ಸೆ ಒದಗಿಸಬೇಕು. ಯಾವುದೇ ಪರಿಸ್ಥಿತಿಯಲ್ಲಿ ಹೆಚ್ಚಿನ ಸಾವು ಆಗದಂತೆ ನೋಡಿಕೊಳ್ಳಲು ವಿಶೇಷ ಗಮನ ನೀಡಬೇಕೆಂದರು.

    ಜಿಲ್ಲಾ ಆಸ್ಪತ್ರೆ ಸೇರಿ ಜಿಲ್ಲಾ ಕೇಂದ್ರದಲ್ಲಿರುವ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಹಾಗೂ ರೆಮಿಡಿಸಿವರ್ ಲಸಿಕೆಯ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಇದರ ಸಮರ್ಪಕ ನಿರ್ವಹಣೆಗಾಗಿ ಡ್ರಗ್ಸ್ ಕಂಟ್ರೋಲರ್, ಡಾ. ಔದ್ರಾಮ್ ಮತ್ತು ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಅಡತಡೆಗಳನ್ನು ನಿವಾರಿಸಬೇಕು. ಈ ಕುರಿತು ನಿರಂತರ ಸಂಪರ್ಕದಲ್ಲಿರಬೇಕೆಂದರು.

    ಪ್ರಸ್ತುತ ಜಿಲ್ಲೆಯಲ್ಲಿರುವ ಪರಿಸ್ಥಿತಿ ಅರಿತು ವಾಸ್ತವಾಂಶ ಆಧಾರದ ಮೇಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ವೆಂಟಿಲೇಟರ್‌ಗಳ ಸಮರ್ಪಕ ನಿರ್ವಹಣೆ ಮಾಡಿಕೊಳ್ಳಬೇಕು. ಐಸಿಯು ನಿರ್ವಹಣಾ ತಂತ್ರಜ್ಞರನ್ನು ಜಿಲ್ಲಾ ಆಸ್ಪತ್ರೆಗೆ ಪಡೆದುಕೊಳ್ಳಬೇಕು. ಅವಶ್ಯಕ ಸಂದರ್ಭಗಳಲ್ಲಿ ಖಾಸಗಿ ಆಸ್ಪತ್ರೆಗಳ ಸಹಕಾರದ ಜತೆಗೆ ಸಮರ್ಪಕ ಸಿಬ್ಬಂದಿ ಇರುವಂತೆ ನೋಡಿಕೊಂಡು ಐಸಿಯು ಘಟಕ ನಿರ್ವಹಿಸಲು ಅವರು ಸೂಚಿಸಿದರು.

    ಸರ್ಕಾರದ ನಿರ್ದೇಶನದಂತೆ ಗುತ್ತಿಗೆ ಆಧಾರದ ಮೇಲೆ ನರ್ಸ್, ಲ್ಯಾಬ್ ಟೆಕ್ನಿಷಿಯನ್ ಹಾಗೂ ಅವಶ್ಯಕ ಸಿಬ್ಬಂದಿ ಪಾರದರ್ಶಕ ನೇಮಕಾತಿ ಕುರಿತು ವಿಶೇಷ ಗಮನ ನೀಡಬೇಕು. ಪ್ರತಿದಿನ ಬರುತ್ತಿರುವ ಸುತ್ತೋಲೆಗಳ ಬಗ್ಗೆ ನಿರಂತರ ಗಮನ ಹರಿಸುವ ಜತೆಗೆ ಈ ಕುರಿತು ತಕ್ಷಣ ಕ್ರಮ ಕೈಗೊಳ್ಳುವಂತೆ ಎಚ್ಚರಿಸಿದರಲ್ಲದೆ, ಕೆಳಮಟ್ಟದ ಸಿಬ್ಬಂದಿಯನ್ನು ಇನ್ನಷ್ಟು ಚುರುಕಾಗಿ ಕಾರ್ಯನಿರ್ವಹಿಸಲು ಕ್ರಮಕೈಗೊಳ್ಳುವಂತೆ ತಿಳಿಸಿದರು.

    ಜಿಪಂ ಸಿಇಒ ಗೋವಿಂದ ರೆಡ್ಡಿ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮ ಅರಿಸಿದ್ಧಿ, ಜಿಲ್ಲಾಸ್ಪತ್ರೆ ಸರ್ಜನ್ ಶರಣಪ್ಪ ಕಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಕುಮಾರ ಯರಗಲ್ಲ, ಡಾ. ಲಕ್ಕಣ್ಣನವರ, ವಿವಿಧ ಖಾಸಗಿ ಆಸ್ಪತ್ರೆಗಳ ವೈದ್ಯರು ಉಪಸ್ಥಿತರಿದ್ದರು.

    ಮಹಾಮಾರಿಗೆ ಮತ್ತೆರೆಡು ಬಲಿ
    ಜಿಲ್ಲೆಯಲ್ಲಿ ಕರೊನಾ ಅಟ್ಟಹಾಸ ದಿನೇ ದಿನೆ ಹೆಚ್ಚುತ್ತಿದ್ದು ಬುಧವಾರ ಮತ್ತಿಬ್ಬರು ಬಲಿಯಾಗಿದ್ದಾರೆ. ಕಳೆದ ಮೂರು ದಿನಗಳಿಂದ ಸೋಂಕಿತರ ಸಂಖ್ಯೆ ತ್ರಿಶತಕ ದಾಟುತ್ತಲೇ ಇದ್ದು, ಕಳೆದ 24 ಗಂಟೆಯಲ್ಲಿ 335 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕ ಸೋಂಕಿತರ ಸಂಖ್ಯೆ 17721ಕ್ಕೆ ಏರಿಕೆಯಾಗಿದೆ. ಮೃತರ ಸಂಖ್ಯೆ 218ಕ್ಕೆ ಏರಿಕೆಯಾಗಿದೆ. ಬುಧವಾರ 110 ಜನ ಗುಣಮುಖರಾಗಿದ್ದು, ಇನ್ನೂ 1940 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. 2862 ಜನರ ವರದಿ ಬಾಕಿ ಇದೆ.

    ವಿಜಯಪುರ ನಗರದಲ್ಲೇ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ವಿಜಯಪುರ ನಗರದಲ್ಲಿ-211, ವಿಜಯಪುರ ಗ್ರಾಮೀಣ-25, ಬ.ಬಾಗೇವಾಡಿ-12, ಬಬಲೇಶ್ವರ-6, ಕೊಲ್ಹಾರ-9, ನಿಡಗುಂದಿ-4, ಇಂಡಿ-16, ಮುದ್ದೇಬಿಹಾಳ-20, ತಾಳಿಕೋಟೆ-2, ಸಿಂದಗಿ-30 ಪ್ರಕರಣಗಳು ಪತ್ತೆಯಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts