More

    ಶಾಲೆಗೆ ಬಾರದ ಅರ್ಧಕ್ಕರ್ಧ ಮಕ್ಕಳು

    ಹೀರಾನಾಯ್ಕ ಟಿ.
    ವಿಜಯಪುರ: ಕರೊನಾ ಮಹಾಮಾರಿಯಿಂದಾಗಿ ಪ್ರಸಕ್ತ ಶೈಕ್ಷಣಿಕ ವರ್ಷ ತಡವಾಗಿ ಆರಂಭಗೊಂಡಿದೆ. ಈಗಾಗಲೇ ಭೌತಿಕ ತರಗತಿಗಳು ಆರಂಭಗೊಂಡು 15 ದಿನಗಳು ಕಳೆಯುತ್ತ ಬಂದರೂ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಮಾತ್ರ ಅರ್ಧಕ್ಕರ್ಧ.ಆಗಸ್ಟ್ 23ರಿಂದ 9ನೇ,10ನೇ ತರಗತಿ ಆರಂಭಗೊಂಡಿವೆ. ಅದರಂತೆ ಸೆ.6ರಿಂದ 6ರಿಂದ 8ನೇ ತರಗತಿ ಭೌತಿಕ ತರಗತಿಗಳು ನಡೆಯುತ್ತಿವೆ. ಆದರೆ ಮಕ್ಕಳು ಬರುವುದಕ್ಕೆ ಇನ್ನಷ್ಟು ದಿನ ಕಾಯುವಂತಾಗಿದೆ.

    ಕಳೆದ ವರ್ಷವೂ ಕೋವಿಡ್‌ನಿಂದಾಗಿ ಶಾಲೆಗಳು ಆರಂಭಗೊಳ್ಳದೆ ಮನೆಯಲ್ಲಿಯೇ ಕಾಲ ಕಳೆದ ಮಕ್ಕಳು ಈ ಬಾರಿ ಶಾಲೆ ಆರಂಭ ಯಾವಾಗ ಆಗುತ್ತದೆ ಎಂದು ಕಾತುರದಿಂದ ಕಾಯುತ್ತಿದ್ದರು. ಇದೀಗ ಶಾಲೆಗಳು ಆರಂಭಗೊಂಡಿವೆ. ಆದರೆ ತರಗತಿಗೆ ಪಾಠ ಕೇಳಲು ಬರುವ ಮಕ್ಕಳ ಸಂಖ್ಯೆ ಶೇ.50 ರಷ್ಟು ಮಾತ್ರ ಇದೆ.ಶಾಲೆಗೆ ಬರಲು ವಿದ್ಯಾರ್ಥಿಗಳ ಹಿಂದೇಟು
    ಜಿಲ್ಲೆಯಲ್ಲಿ ಈಗಾಗಲೇ 6ನೇ ತರಗತಿಯಿಂದ ಪಿಯುಸಿವರೆಗೆ ತರಗತಿಗಳು ನಡೆಯುತ್ತಿವೆ.

    ಕರೊನಾ ಮೂರನೇ ಅಲೆ ಭೀತಿಯಿಂದಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ನಿರುತ್ಸಾಹ ತೋರುತ್ತಿದ್ದಾರೆ. 6ನೇ ತರಗತಿಗೆ 53,192 ಮಕ್ಕಳು ಪ್ರವೇಶಾತಿ ಪಡೆದಿದ್ದಾರೆ. ಅದರಲ್ಲಿ 26,499 ಮಕ್ಕಳು ಶಾಲೆಗೆ ಹಾಜರಾಗುತ್ತಿದ್ದಾರೆ. 7ನೇ ತರಗತಿಗೆ 52,611 ಮಕ್ಕಳು ನೋಂದಣಿ ಮಾಡಿಕೊಂಡಿದ್ದು, 27,058 ಮಕ್ಕಳು ಹಾಜರಾಗಿದ್ದಾರೆ. 8ನೇ ತರಗತಿಗೆ 48,549 ಮಕ್ಕಳ ಪೈಕಿ 13,228 ಹಾಗೂ 9ನೇ ತರಗತಿಗೆ 45,729 ಮಕ್ಕಳ ಪೈಕಿ 31,459, ಎಸ್ಸೆಸ್ಸೆಲ್ಸಿಯಲ್ಲಿ 44,099 ಮಕ್ಕಳ ಪೈಕಿ 31,903 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಒಟ್ಟು 6ರಿಂದ 8ನೇ ತರಗತಿವರೆಗೆ ಶೇ.50.34 ಹಾಗೂ 9ರಿಂದ 10 ನೇ ತರಗತಿವರೆಗೆ ಶೇ.70.54 ರಷ್ಟು ಮಕ್ಕಳು ಶಾಲೆಗೆ ಬರುತ್ತಿದ್ದಾರೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

    ತಪ್ಪದ ಆನ್‌ಲೈನ್ ಕ್ಲಾಸ್
    ಭೌತಿಕ ತರಗತಿಗಳು ಆರಂಭಗೊಂಡಿದ್ದರೂ ವಿದ್ಯಾರ್ಥಿಗಳು ಆನ್‌ಲೈನ್ ಕ್ಲಾಸ್ ಮೊರೆ ಹೋಗಿದ್ದಾರೆ. 6ನೇ ತರಗತಿಯಲ್ಲಿ 3853 ವಿದ್ಯಾರ್ಥಿಗಳು, 7ನೇ ತರಗತಿಯಲ್ಲಿ 3606 ಹಾಗೂ 8ನೇ ತರಗತಿಗೆ 3,222 ಮತ್ತು 9ನೇ ತರಗತಿಗೆ 3406, ಎಸ್ಸೆಸ್ಸೆಲ್ಸಿಯಲ್ಲಿ 3174 ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಪಾಠ ಪ್ರವಚನಗಳನ್ನು ಕೇಳುತ್ತಿದ್ದಾರೆ. ಖಾಸಗಿ ಶಾಲೆಗಳಲ್ಲಿಯೇ ಹೆಚ್ಚಾಗಿ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ನೀಡಲಾಗುತ್ತಿದ್ದು, ಸರ್ಕಾರಿ ಶಾಲೆ ಮಕ್ಕಳು ತರಗತಿಗೆ ಹಾಜರಾಗುತ್ತಿದ್ದಾರೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ.

    ಜಿಲ್ಲೆಯಲ್ಲಿ 6ರಿಂದ 10 ನೇ ತರಗತಿವರೆಗೆ ಭೌತಿಕ ತರಗತಿಗಳು ಆರಂಭಗೊಂಡಿದ್ದು, ಮಕ್ಕಳಿಗೆ ಶಾಲೆಗೆ ಬರುವಂತೆ ಶಿಕ್ಷಕರು ಮನವೊಲಿಸುವಂತೆ ಈಗಾಗಲೇ ಶಾಲೆ ಮುಖ್ಯಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, ಶಾಲೆಗಳಲ್ಲಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಸುರಕ್ಷಿತ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ.
    ಎನ್.ವಿ.ಹೊಸೂರ, ಡಿಡಿಪಿಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts