More

    ಜಿಲ್ಲೆಯಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ

    ವಿಜಯಪುರ: ಎಪಿಎಂಸಿ ಕಾಯ್ದೆ ಹಾಗೂ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ವಿವಿಧ ರೈತಪರ ಸಂಘಟನೆಗಳು ಕರೆ ನೀಡಿದ್ದ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
    ವಿಜಯಪುರ ನಗರ ಸೇರಿ ಜಿಲ್ಲೆಯ ತಾಲೂಕು ಮಟ್ಟದಲ್ಲಿಯೂ ಎಂದಿನಂತೆ ಜನಜೀವನ ಯಥಾಸ್ಥಿತಿಯಲ್ಲಿ ಮುಂದುವರಿದಿತ್ತು. ಸಾರಿಗೆ ಬಸ್ ಸೇವೆ ಆಟೋ, ವಾಹನ ಸಂಚಾರಕ್ಕೆ ಯಾವುದೇ ಅಡೆತಡೆ ಇರಲಿಲ್ಲ. ಸರ್ಕಾರಿ ಕಚೇರಿಗಳನ್ನು ಎಂದಿನಂತೆ ತೆರೆಯಲಾಗಿತ್ತು. ಅಧಿಕಾರಿಗಳು, ತಹಸೀಲ್ದಾರರು ಕೇಂದ್ರಸ್ಥಾನದಲ್ಲಿದ್ದು, ರೈತರ ಮನವಿಯಲ್ಲಿ ಸ್ವೀಕರಿಸಿದರು. ಎಲ್ಲ ಅಂಗಡಿ ಮುಂಗಟ್ಟುಗಳನ್ನು ತೆರೆಯಲಾಗಿತ್ತು.

    ವಿವಿಧ ಸಂಘಟನೆಗಳಿಂದ ಪ್ರತಿಭಟನೆ

    ವಿಜಯಪುರ ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಬೆಳಗ್ಗೆ 11 ಗಂಟೆಗೆ ಆರಂಭಗೊಂಡ ರೈತರ ಪ್ರತಿಭಟನೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮನವಿ ಸಲ್ಲಿಸಿತು. ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್‌ಎಸ್‌ಸಿ), ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ), ಮರ್ಚಂಟ್ಸ್ ಅಸೋಸಿಯೇಷನ್, ಅಖಂಡ ಕರ್ನಾಟಕ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ, ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಸೇರಿ ಅನೇಕ ಸಂಘಟನೆಗಳು ಗಾಂಧಿಚೌಕ್ ಮಾರ್ಗವಾಗಿ, ಅಂಬೇಡ್ಕರ್ ವೃತ್ತಕ್ಕೆ ತಲುಪಿ, ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್ ಅವರಿಗೆ ಮನವಿ ಸಲ್ಲಿಸಿದವು. ಪ್ರತಿಭಟನೆಯಲ್ಲಿ ನೂರಾರು ರೈತರು, ಸಂಘಟಕರು ಪಾಲ್ಗೊಂಡಿದ್ದರು.

    ಎಪಿಎಂಸಿ ಮಾತ್ರ ಬಂದ್ಎ

    ಪಿಎಂಸಿ ವರ್ತಕರ ಸಂಘ ಕೂಡ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದ ಹಿನ್ನೆಲೆ ವಿಜಯಪುರ ಎಪಿಎಂಸಿ ಸೋಮವಾರ ಸಂಪೂರ್ಣ ಬಂದ್ ಮಾಡಲಾಗಿತ್ತು. ವ್ಯಾಪಾರ-ವಹಿವಾಟು ಸ್ತಬ್ಧಗೊಂಡಿತ್ತು. ಎಪಿಎಂಸಿ ಮಾರುಕಟ್ಟೆ ಪ್ರಾಂಗಣ ಬಂದ್ ಹಿನ್ನೆಲೆ ಬಿಕೋ ಎನ್ನುತ್ತಿತ್ತು. ತರಕಾರಿ ಮಾರಾಟಗಾರರು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದರು. ಅಲ್ಲಲ್ಲಿ ಕೆಲವು ಅಂಗಡಿಕಾರರು ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಬಂದ್ ಮಾಡಿದ್ದರು. ಇನ್ನುಳಿದಂತೆ ಆಟೋ ಸಂಚಾರ, ಬಸ್ ಸಂಚಾರ ಎಂದಿನಂತಿತ್ತು.

    ಪೊಲೀಸ್ ಬಂದೋಬಸ್ತ್

    ಬಂದ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಬಂದೋಬಸ್ತ್ ಕೈಗೊಂಡಿತ್ತು. ವಿಜಯಪುರ ನಗರದ ಗಾಂಧಿಚೌಕ್, ಬಸವೇಶ್ವರ ವೃತ್ತ, ಕೇಂದ್ರ ಸಾರಿಗೆ ನಿಲ್ದಾಣ, ಅಂಬೇಡ್ಕರ್ ವೃತ್ತ, ಜಿಲ್ಲಾಧಿಕಾರಿ ಕಚೇರಿ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. 65 ಪೊಲೀಸ್ ಅಧಿಕಾರಿಗಳು, 1100 ಸಿಬ್ಬಂದಿ ಹಾಗೂ 6 ಡಿಎಆರ್ ತುಕಡಿ ಮತ್ತು ಒಂದು ಐಆರ್‌ಬಿ ತುಕಡಿಯನ್ನು ನಿಯೋಜಿಸಲಾಗಿತ್ತು.


    ಜಿಲ್ಲೆಯಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts