More

    ಬಸವ ತತ್ವ ಉಪದೇಶ ಬಿಡಿ ಆಚರಣೆಗೆ ತನ್ನಿ

    ವಿಜಯಪುರ: ಮಹಾತ್ಮ ಬಸವೇಶ್ವರ ಅವರ ತತ್ವಾದರ್ಶಗಳ ಉಪದೇಶ ಬಿಟ್ಟು ಅವುಗಳನ್ನು ಆಚರಣೆಗೆ ತರಬೇಕೆಂದು ಸಹಕಾರಿ ಇಲಾಖೆ ನಿವೃತ್ತ ಉಪ ನಿರ್ದೇಶಕ ಬಿ.ಆರ್. ಬನಸೋಡೆ ಹೇಳಿದರು.

    ನಗರದ ಬಂಜಾರಾ ಕ್ರಾಸ್ ಬಳಿಯ ಲಿಂಗಾಯತ ಸಭಾಭವನದಲ್ಲಿ ಭಾನುವಾರ ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿದ್ದ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ‘ಬಸವಣ್ಣ ಹಾಗೂ ಶರಣರ ವಿಚಾರಗಳೇಕೆ ಇಂದಿಗೂ ಪ್ರಸ್ತುತ?’ ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.

    ಬಸವಣ್ಣ ಸಹ ನಮ್ಮಂತೆ ಸಾಮಾನ್ಯ ಮನುಷ್ಯ. ಆತ ಪೌರಾಣಿಕ ವ್ಯಕ್ತಿಯಲ್ಲ. ದೇವರೂ ಅಲ್ಲ. ಅಸಾಮಾನ್ಯ ವಿಚಾರಗಳಿಂದ ಮಹಾತ್ಮನಾದ. ಬುದ್ಧನ ಪ್ರಭಾವ ಬಸವಣ್ಣನ ವಚನಗಳಲ್ಲಿ ಎದ್ದು ಕಾಣುತ್ತದೆ. ಅಂಥ ಮಹಾತ್ಮರ ವಿಚಾರಗಳನ್ನು ಕೇವಲ ಹೇಳಿಕೊಳ್ಳುವುದರಲ್ಲಿ ಅರ್ಥವಿಲ್ಲ. ಅವರ ವಿಚಾರಗಳು, ತತ್ವಗಳು ಆಚರಣೆಗೆ ಬರಬೇಕೆಂದರು.

    ಶಸಾಪ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ ಮಾತನಾಡಿ, ವೀರಶೈವ ಮಹಾಸಭಾ ಹಾಗೂ ಶಸಾಪ ಒಂದೇ ಧ್ಯೇಯೋದ್ದೇಶಗಳನ್ನು ಹೊಂದಿರುವ ಸಂಸ್ಥೆಗಳಾಗಿವೆ. ಜಂಟಿಯಾಗಿ ಈ ಮಾಸಿಕ ಚಿಂತನ ಗೋಷ್ಠಿ ಹಮ್ಮಿಕೊಳ್ಳುವ ಉದ್ದೇಶದ ಹಿಂದೆ ಶರಣರ ಸಂದೇಶಗಳನ್ನು ಹಾಗೂ ವೈಚಾರಿಕ, ವೈಜ್ಞಾನಿಕ ವಿಚಾರಗಳನ್ನು ಇಂದಿನ ಹಾಗೂ ಮುಂದಿನ ಪೀಳಿಗೆಗೆ ತಲುಪಿಸುವುದೇ ಆಗಿದೆ ಎಂದರು.

    ಶಿವಬಸವ ಯೋಗಾಶ್ರಮದ ಶಂಭುಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ಅಧ್ಯಕ್ಷತೆ ವಹಿಸಿದ್ದರು. ರಾಜೇಂದ್ರಕುಮಾರ ಬಿ. ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಬನೂದೇವಿ ಸಂಕಣ್ಣವರ, ಡಾ. ಉಷಾದೇವಿ ಹಿರೇಮಠ, ಡಾ. ಸೋಮಶೇಖರ ವಾಲಿ, ವಿ.ಡಿ. ಐಹೊಳ್ಳಿ, ಜಿ.ಎನ್. ತೆಗ್ಗೆಳ್ಳಿ, ಭಾರತಿ ಭುಯ್ಯರ, ಕಮಲಾಕ್ಷಿ ಗೆಜ್ಜಿ, ಉದಯ ಹಿರೇಮಠ, ವಿದ್ಯಾವತಿ ಅಂಕಲಗಿ, ಕೆ.ಎಫ್. ಅಂಕಲಗಿ, ಸಂಗಮೇಶ ಬದಾಮಿ, ಸುಭಾಸ ಯಾದವಾಡ, ರವೀಂದ್ರ ಮೇಡೇಗಾರ, ಎಂ.ಎಂ. ಅವರಾದಿ, ಸುವರ್ಣ ಕುರ್ಲೆ, ಶರಣಗೌಡ ಪಾಟೀಲ ಮತ್ತಿತರರಿದ್ದರು.

    ಎ.ಎಸ್. ಕೋರಿ ಪ್ರಾರ್ಥಿಸಿದರು. ಎಂ.ಜಿ. ಯಾದವಾಡ ಸ್ವಾಗತಿಸಿದರು. ರಾಜೇಂದ್ರ ಬಿರಾದಾರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts