More

    ಯುಗಾದಿ ಮೇಲೆ ಕರೊನಾ ಕರಿನೆರಳು

    ವಿಜಯಪುರ: ಬೇವು ಬೆಲ್ಲ ಹಂಚಿ ಹೊಸ ಸಂವತ್ಸರ ಬರಮಾಡಿಕೊಳ್ಳುವ ಭಾರತೀಯರ ಭವ್ಯ ಪರಂಪರೆ ಯುಗಾದಿ ಹಬ್ಬಕ್ಕೆ ಈ ವರ್ಷ ಕರೊನಾ ಕರಿನೆರಳು ಆವರಿಸಿದೆ !
    ಅಮಾವಾಸ್ಯೆಯಂದು ಹೋಳಿಗೆ ಮತ್ತಿತರ ಮೃಷ್ಟಾನ್ನ ಭೋಜನ ತಯಾರಿಸಿ ದೇವರಿಗೆ ನೈವೇದ್ಯ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸುತ್ತಿದ್ದ ಜನ ಈ ಬಾರಿ ಸನಾತನ ಸಂಪ್ರದಾಯಕ್ಕೆ ಗುಡ್‌ಬೈ ಹೇಳಿದ್ದಾರೆ. ಕರೊನಾಗೆ ಹೆದರಿ ಕರ್ನಾಟಕವೇ ಲಾಕ್‌ಡೌನ್ ಆದ ಹಿನ್ನೆಲೆ ಮಂಗಳವಾರ ಕೂಡ ಸ್ತಬ್ಧವಾಗಿತ್ತು. ಹೀಗಾಗಿ ಜನ ಈ ಬಾರಿ ಮನೆಯಲ್ಲಿಯೇ ಸಾಂಕೇತಿಕ ಪೂಜೆಯೊಂದಿಗೆ ಯುಗಾದಿ ಅಮಾವಾಸ್ಯೆ ಅರ್ಥಪೂರ್ಣಗೊಳಿಸಿದರು.

    ಕದ್ದು ಮುಚ್ಚಿ ಪೂಜೆ

    ಕರೊನಾ ಹಿನ್ನೆಲೆ ದೇವಸ್ಥಾನ, ಮಸೀದಿ ಹಾಗೂ ಚರ್ಚ್‌ಗಳಲ್ಲಿ ಪ್ರಾರ್ಥನೆ ನಿಷೇಧಿಸಿ ಜಿಲ್ಲಾಡಳಿತ ಆದೇಶಿಸಿದೆ. ಜಿಲ್ಲೆಯಲ್ಲೀಗ ಗಂಟೆ ಸದ್ದಾಗಲಿ, ಮಸೀದಿಯಿಂದ ಆಜಾನ್ ಆಗಲಿ, ಚರ್ಚ್‌ನಿಂದ ಪ್ರಾರ್ಥನೆ ಸದ್ದು ಕೇಳುತ್ತಿಲ್ಲ. ಅದಾಗ್ಯೂ ಬಡಾವಣೆಯ ಸಣ್ಣ ಗುಡಿಗಳಲ್ಲಿ ಜನ ಕದ್ದು ಮುಚ್ಚಿ ನೈವೇದ್ಯ ಅರ್ಪಿಸಿದ್ದು ಕಂಡು ಬಂತು. ಜಿಲ್ಲಾಡಳಿತ ಸಾಕಷ್ಟು ಜಾಗೃತಿ ಮೂಡಿಸಿದರೂ ಕೆಲವರು ಅಲ್ಲಲ್ಲಿ ಪೂಜೆ ಸಲ್ಲಿಸಿ ಮನೆಯತ್ತ ಬಿರುಸಿನ ಹೆಜ್ಜೆ ಹಾಕುತ್ತಿರುವುದು ಕಂಡು ಬಂತು.

    ಹೂ-ಹಣ್ಣು ಮಾರಾಟವಿಲ್ಲ

    ಬೆಳಗ್ಗೆ ಕೆಲ ಕಾಲ ಆರಂಭಗೊಂಡಿದ್ದ ತರಕಾರಿ ಮಾರುಕಟ್ಟೆಯಲ್ಲಿ ಹೂ ಹಣ್ಣು ಕೊಳ್ಳಲು ಜನ ಮುಗಿಬಿದ್ದರು. ಪೂಜೆಗೆ ಬೇಕಾದ ವಿಶೇಷ ಸಾಮಗ್ರಿ ಕೊಳ್ಳಲು ಮುಂದಾದಾಗ ಪೊಲೀಸ್ ಸಿಬ್ಬಂದಿ ಕರೊನಾ ಮುಂಜಾಗ್ರತೆ ಬಗ್ಗೆ ಮನವರಿಕೆ ಮಾಡಿ ಮನೆಯತ್ತ ತೆರಳಲು ತಿಳಿಸಿದರು. ಅಲ್ಲದೆ, ತರಕಾರಿ ಮಾರಾಟಗಾರರನ್ನು ಬಿಡಿಬಿಡಿಯಾಗಿ ಕೂರಿಸುವ ಪ್ರಯತ್ನ ಮಾಡಿದರು. ಆದರೆ, ಏಕಾಏಕಿ ನೂಕು ನುಗ್ಗಲು ಹೆಚ್ಚುತ್ತಿದ್ದಂತೆ ಲಾಠಿ ರುಚಿ ತೋರಿಸಿ ಮಾರುಕಟ್ಟೆ ಬಂದ್ ಮಾಡಿಸಿದರು.
    ಮಧ್ಯಾಹ್ನ ಬಾರಾಕಮಾನ್ ಪಕ್ಕದ ಜಾಗದಲ್ಲಿ ಕಾಯಿಪಲ್ಲೆ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತಾದರೂ ಜನರಿಲ್ಲದೆ ವ್ಯಾಪಾರಸ್ಥರು ತಲೆ ಮೇಲೆ ಕೈ ಹೊತ್ತು ಕೂತಿದ್ದರು. ಬಿರು ಬಿಸಿಲು ಲೆಕ್ಕಿಸದೆ ಕಾಯಿಪಲ್ಲೆ ಮಾರಾಟಗಾರರು ರಸ್ತೆ ಪಕ್ಕದಲ್ಲಿ ಕುಳಿತಿದ್ದರು. ಇನ್ನುಳಿದಂತೆ ಕಿರಾಣಿ ಮಾರುಕಟ್ಟೆ, ಅಂಗಡಿಗಳು, ಹಾಲಿನ ಮಳಿಗೆ ಎಲ್ಲವೂ ಬಂದ್ ಆಗಿದ್ದು ಜಿಲ್ಲೆಯಲ್ಲಿ ಗ್ರಹಣ ಆವರಿಸಿದಂತಿತ್ತು.

    ಯುಗಾದಿ ಮೇಲೆ ಕರೊನಾ ಕರಿನೆರಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts