More

    ಔರಾದ್ಕರ್ ವರದಿ ಯಥಾವತ್ತಾಗಿ ಜಾರಿಗೆ ಆಗ್ರಹ

    ವಿಜಯಪುರ: ಔರಾದ್ಕರ್ ವರದಿ ಯಥಾವತ್ತಾಗಿ ಜಾರಿಗೊಳಿಸುವಂತೆ ಅಖಿಲ ಕರ್ನಾಟಕ ಪೊಲೀಸ್ ಮಹಾ ಸಂಘದ ಅಧ್ಯಕ್ಷ ವಿ. ಶಶಿಧರ್ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

    ಪೊಲೀಸರ ಕ್ಷೇಮಾಭಿವೃದ್ಧಿಗಾಗಿ ಅನೇಕ ಆಯೋಗಗಳನ್ನು ರಚನೆ ಮಾಡಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. 2016ರಲ್ಲಿ ಪೊಲೀಸ್ ಇಲಾಖೆ ಸುಧಾರಣೆಗೆ ಹೋರಾಟ ನಡೆದ ನಂತರ ಔರಾದ್ಕರ್ ಅವರ ನೇತೃತ್ವದಲ್ಲಿ ವರದಿ ನೀಡಲು ಸರ್ಕಾರ ಸಮಿತಿ ರಚಿಸಲಾಗಿತ್ತು. ಅದರಂತೆ ಆಗಿನ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಆದರೆ ಈವರೆಗೆ ಜಾರಿಯಾಗಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಪೊಲೀಸರಿಗೆ ಸಂವಿಧಾನಬದ್ಧ ಹಕ್ಕು ನೀಡಬೇಕು. ಅವರ ಸಮಸ್ಯೆಗಳನ್ನು ಎಲ್ಲಿಯೂ ಹೇಳಿಕೊಳ್ಳುವಂತಿಲ್ಲ. ಅವರಿಗೆ ವಾರದ ರಜೆ, ಇನ್ನಿತರ ರಜೆ ಸೌಲಭ್ಯಗಳನ್ನು ನೀಡಬೇಕು. ವೇತನ ತಾರತಮ್ಯ ನಿವಾರಿಸಬೇಕು. ಪೊಲೀಸ್ ವರ್ಗಾವಣೆಯಲ್ಲಿ ಪಾರಾದರ್ಶಕತೆ ಕಾಪಾಡಬೇಕು ಎಂದು ಒತ್ತಾಯಿಸಿದರು.

    ಪೊಲೀಸ್ ಇಲಾಖೆಯಲ್ಲಿ ಸೇವಾ ಹಿರಿತನಕ್ಕೆ ಗೌರವ ಇಲ್ಲದಂತಾಗಿದೆ. ಅದರಿಂದಾಗಿ ಇಲಾಖೆಯಲ್ಲಿ ಅಶಾಂತಿ ಬುಗಿಲೆದ್ದಿದ್ದು, ಔರಾದ್ಕರ್ ವರದಿ ಜಾರಿಗೆ ಸರ್ಕಾರಗಳು ಚಾಪೆ ಕೆಳಗೆ ನುಣುಚಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿವೆ. ಔರಾದ್ಕರ್ ವರದಿ ಯಥಾವತ್ತಾಗಿ ಜಾರಿಯಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಸಿದರು.

    ಪೊಲೀಸರು ಲಂಚಕೋರರು ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. ಸಮಾಜ ಮತ್ತು ಪೊಲೀಸ್ ಇಲಾಖೆ ನಡುವೆ ಸಮನ್ವಯತೆ ಸಾಧಿಸಬೇಕಾದರೆ ಪೊಲೀಸರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುವ ಅಗತ್ಯವಿದೆ. ಇಂದಿನ ದಿನಗಳಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಅದಕ್ಕಾಗಿ ಪೊಲೀಸ್ ಇಲಾಖೆಯನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕಿದೆ. ಪೊಲೀಸ್ ಇಲಾಖೆ ಹದಗೆಡಲು ಅನೇಕ ಕಾರಣಗಳಿವೆ. ಅದಕ್ಕೆ ಮೂಲ ಕಾರಣ ರಾಜಕಾರಣಿಗಳು. ಪೊಲೀಸ್ ಆಡಳಿತ ವ್ಯವಸ್ಥೆ ಕುಸಿಯಲು ಕಾರಣವಾಗಿದೆ. ಇಲಾಖೆಯಲ್ಲಿ ರಾಜಕಾರಣಿಗಳ ಉಪಟಳ ಹೆಚ್ಚಾಗುತ್ತಿದೆ. ಪ್ರಭಾವಿಗಳ ಅಣತಿ ಮೇರೆಗೆ ಪೊಲೀಸ್ ಅಧಿಕಾರಿಗಳು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಇಂದಿನ ದಿನಗಳಲ್ಲಿ ಅಪರಾಧ ಕೆಲಸದಲ್ಲಿ ತೊಡಗಿರುವ ಆರೋಪಿಗಳು ರಾಜಾರೋಷವಾಗಿ ಓಡಾಡುತ್ತಿದ್ದಾರೆ. ರಾಜಕಾರಣಿಗಳು, ಕಾಣದ ಕೈಗಳ ಕೈವಾಡದಿಂದಾಗಿ ಆರೋಪಿಗಳು ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಿ ಮೆರೆಯುತ್ತಿದ್ದಾರೆ. ಅದನ್ನು ಮಟ್ಟಹಾಕಲು ಪೊಲೀಸ್ ಇಲಾಖೆಗೆ ಇನ್ನಷ್ಟು ಬಲ ತುಂಬುವ ಕೆಲಸ ಆಗಬೇಕಿದೆ ಎಂದರು.

    ರಾಜ್ಯ ಛಲವಾದಿ ಹಾಗೂ ಮಾದಿಗ ಸಮನ್ವಯ ಸಮಿತಿ ಒಕ್ಕೂಟದ ಸಂಸ್ಥಾಪಕ ಆನಂದ ಔದಿ, ರಾಜ್ಯ ಉಪಾಧ್ಯಕ್ಷ ರಮೇಶ ಛಲವಾದಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ವಾಲಿಕಾರ, ಮುಖಂಡ ಶಿವಕುಮಾರ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts