More

    42,685 ಆಶಾಗಳಿಗೆ ತಲಾ 3000 ರೂ.

    ವಿಜಯಪುರ: ರಾಜ್ಯಾದ್ಯಂತ 42,685 ಆಶಾ ಕಾರ್ಯಕರ್ತೆಯರಿದ್ದು, ಪ್ರತಿಯೊಬ್ಬರಿಗೂ 3000 ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ ಹೇಳಿದರು.
    ಇಲ್ಲಿನ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ವಿತರಣೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
    ಕರೊನಾ ನಿರ್ವಹಣೆಯಲ್ಲಿ ಆಶಾ ಕಾರ್ಯಕತೆರ್ಯರ ಪಾತ್ರ ಅನನ್ಯ. ಅವರಿಗೆ ಸರ್ಕಾರದಿಂದ ಸಮರ್ಪಕ ಸೌಲಭ್ಯ ಇಲ್ಲದ ಕಾರಣ ಸಿಎಂ ಯಡಿಯೂರಪ್ಪ ಅವರು ಸಹಕಾರಿ ರಂಗದಿಂದ ಏನಾದರೂ ಮಾಡಬೇಕೆಂಬ ಕಳಕಳಿ ವ್ಯಕ್ತಪಡಿಸಿದ ಹಿನ್ನೆಲೆ ಪ್ರೋತ್ಸಾಹ ಧನ ವಿತರಿಸುವ ಕಾರ್ಯ ಕೈಗೊಳ್ಳಲಾಗಿದೆ. ರಾಜ್ಯದ 19 ಜಿಲ್ಲೆಗಳಲ್ಲಿ ಈಗಾಗಲೇ ಪ್ರೋತ್ಸಾಹ ಧನ ವಿತರಿಸಲಾಗಿದೆ ಎಂದು ತಿಳಿಸಿದರು.
    ಸಹಕಾರ ಇಲಾಖೆಯಿಂದ ಆಶಾಗಳಿಗೆ 53 ಕೋಟಿ ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಸಿಎಂ ಪರಿಹಾರ ನಿಧಿಗೆ ಸಹ ಸಹಕಾರಿ ಇಲಾಖೆಯಿಂದ ಅಪಾರ ಸಹಾಯಧನ ನೀಡಲಾಗಿದೆ. ಸರ್ಕಾರದ ಆದೇಶ ಆದ ಮೇಲೆ ಎಲ್ಲ ಜಿಲ್ಲೆಗಳ ಸಹಕಾರಿ ಇಲಾಖೆ ಅವರು ಪ್ರೋತ್ಸಾಹ ಧನ ನೀಡಲು ಹಿಂದೇಟು ಹಾಕಲಿಲ್ಲ. ಸಿಎಂ ಪರಿಹಾರ ನಿಧಿಗೆ ಹಣ ನೀಡಿದರೂ ಆಶಾಗಳಿಗೂ ಪ್ರೋತ್ಸಾಹ ಧನ ನೀಡಲು ಒಮ್ಮತದಿಂದ ಒಪ್ಪಿರುವುದು ಶ್ಲಾಘನೀಯ ಎಂದರು.

    ಮತ್ತೆ ಲಾಕ್‌ಡೌನ್ ಬೇಡ

    ಕರೊನಾ ನಿರ್ವಹಣೆಯಲ್ಲಿ ವ್ಯಾಪಕವಾಗಿ ತೊಡಗಿಸಿಕೊಂಡಿರುವ ಆಶಾಗಳು ಹಾಗೂ ಪೊಲೀಸ್ ಸಿಬ್ಬಂದಿಗೂ ಸೋಂಕು ಹರಡುತ್ತಿದೆ. ನೆರೆ ರಾಜ್ಯಗಳಿಂದ ಬಂದವರಲ್ಲಿಯೇ ಸೋಂಕು ಹೆಚ್ಚಿದೆ. ಹೀಗಾಗಿ ಕರೊನಾ ಸೇನಾನಿಗಳು ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ಕರೊನಾ ನಿಯಂತ್ರಣಕ್ಕೆ ಮುಂದಾಗಬೇಕು. ಈಗಾಗಲೇ ಲಾಕ್‌ಡೌನ್ ಅನುಭವ ಉಂಡಿದ್ದೇವೆ. ಮತ್ತೆ ಲಾಕ್‌ಡೌನ್ ಮಾಡದೇ ಕರೊನಾ ನಿಯಂತ್ರಣಕ್ಕೆ ಶ್ರಮಿಸಬೇಕೆಂದು ಆಶಾಗಳಿಗೆ ತಿಳಿಸಿದರು.

    ರೈತರ ಸಾಲ ಸಮಸ್ಯೆ

    ರೈತರಿಗೆ ಸಾಲ ಸೌಲಭ್ಯ ನೀಡುವಲ್ಲಿ ಸಾಕಷ್ಟು ಸಮಸ್ಯೆಗಳಾಗುತ್ತಿವೆ ಎಂಬ ಮಾತು ಕೇಳಿ ಬಂದಿದೆ. ಈ ನಿಟ್ಟಿನಲ್ಲಿ ಜು. 8 ಅಥವಾ 9ರಂದು ಎಲ್ಲ ಸಹಕಾರಿ ಬ್ಯಾಂಕ್‌ಗಳ ಸಭೆ ನಡೆಸಿ ರೈತರಿಗೆ ಸಾಲ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸೋಮಶೇಖರ ತಿಳಿಸಿದರು.

    ಡಿಸಿಸಿ ಬ್ಯಾಂಕ್ ನೆರವು

    ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಶಾಸಕ ಶಾಸಕ ಶಿವಾನಂದ ಪಾಟೀಲ ಮಾತನಾಡಿ, ಕರೊನಾ ಸೇನಾನಿಗಳಿಗಾಗಿ ಒಳ್ಳೆಯ ಕೆಲಸ ಮಾಡಿದ ಇಲಾಖೆ ಎಂದರೆ ಸಹಕಾರಿ ಇಲಾಖೆ. ಸಂದಿಗ್ಧ ಪರಿಸ್ಥಿತಿಯಲ್ಲೂ ಕರೊನಾ ಸೇನಾನಿಗಳಿಗಾಗಿ 52 ಕೋಟಿ ರೂ. ಪ್ರೋತ್ಸಾಹ ಧನ ನೀಡಿದೆ. ಈಗಾಗಲೇ 12 ಕೋಟಿ ರೂ. ಪ್ರೋತ್ಸಾಹ ಧನ ಕೊಡಿಸಿರುವ ಸಚಿವ ಸೋಮಶೇಖರ ಅವರ ಕಾರ್ಯ ಶ್ಲಾಘನೀಯ. ರಾಜ್ಯದ 30 ಜಿಲ್ಲೆ ಪೈಕಿ 19 ಜಿಲ್ಲೆಯಲ್ಲಿ ಅವರೇ ಖುದ್ದಾಗಿ ನಿಂತು ಪ್ರೋತ್ಸಾಹ ಧನ ಕೊಡಿಸಿದ ಶ್ರೇಯಸ್ಸು ಸೋಮಶೇಖರ ಅವರಿಗೆ ಸಲ್ಲಬೇಕೆಂದರು.
    ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಈಗಾಗಲೇ ಕರೊನಾ ನಿರ್ವಹಣೆ ನಿಧಿಗೆ ಕೋಟಿ ರೂ. ನೀಡಿದ್ದು ಇದೀಗ ಮತ್ತೆ ಹದಿನೈದು ಲಕ್ಷ ರೂ.ನೀಡುತ್ತಿದ್ದು ಸಚಿವರು ಬಯಸಿದರೆ ಇನ್ನೂ ಹೆಚ್ಚಿನ ಹಣ ನೀಡಲು ಬ್ಯಾಂಕ್ ಸಿದ್ದ ಎಂದು ಶಾಸಕ ಶಿವಾನಂದ ಪಾಟೀಲ ತಿಳಿಸಿದರು.
    ವಿಪ ಸದಸ್ಯ ಅರುಣ ಶಹಾಪುರ ಮಾತನಾಡಿ, ಕರೊನಾ ನಿಯಂತ್ರಣದಲ್ಲಿ ಆಶಾಗಳ ಸೇವೆ ಗುರುತಿಸಿ ಪ್ರೋತ್ಸಾಹ ಧನ ನೀಡುತ್ತಿರುವ ಡಿಸಿಸಿ ಬ್ಯಾಂಕ್ ಕಾರ್ಯ ಶ್ಲಾಘನೀಯ ಎಂದರು. ಸುಮಾರು 15 ಲಕ್ಷ ರೂ. ನೆರವು ನೀಡಿದ್ದು ಇಲ್ಲಿ ಹಣ ಮುಖ್ಯವಲ್ಲ ಕೊಡುವ ಕಾರ್ಯ ಮತ್ತು ಕಾಳಜಿ ಮುಖ್ಯ. ನಿಜಕ್ಕೂ ಆಶಾಗಳನ್ನು ಸಮಾಜ ದೇವರ ರೂಪದಲ್ಲಿ ಕಾಣುತ್ತಿದೆ. ಇಂಥ ಆಶಾಗಳ ಕಾರ್ಯ ಗುರುತಿಸಿದ ಡಿಸಿಸಿ ಬ್ಯಾಂಕ್ ಕಾರ್ಯ ಪ್ರಶಂಸಾರ್ಹ ಎಂದರು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಆರ್.ಬಿ. ಗುಡದಿನ್ನಿ, ಬೆಳಗಾವಿ ವಿಭಾಗದ ಜಂಟಿ ಉಪ ನಿಬಂಧಕ ಜಿ.ಎಂ.ಪಾಟೀಲ ಹಾಗೂ ಡಿಸಿಸಿ ಬ್ಯಾಂಕ್‌ನ ಎಲ್ಲ ನಿರ್ದೇಶಕರು ಇದ್ದರು.

    ಶಿವಾನಂದ ಪಾಟೀಲ ನನ್ನ ರಾಜಕೀಯ ಗುರು

    ಶಾಸಕ ಶಿವಾನಂದ ಪಾಟೀಲ ನನ್ನ ರಾಜಕೀಯ ಗುರು ಹಾಗೂ ಸ್ನೇಹಿತ ಎಂದು ಸಚಿವ ಎಸ್.ಟಿ. ಸೋಮಶೇಖರ ಬಣ್ಣಿಸಿದರು.
    ಶಿವಾನಂದ ಪಾಟೀಲರ ಮಾರ್ಗದರ್ಶನದಿಂದಲೇ ನಾನು ಸಹಕಾರಿ ಕ್ಷೇತ್ರದಲ್ಲಿ ಯಶ ಸಾಧಿಸಲು ಸಹಾಯವಾಗಿದೆ. ಅದರಂತೆ ಈ ಹಿಂದೆ ಅವರು ಸಚಿವರಾಗಲು ಸಹ ನನ್ನ ಅಳಿಲು ಸೇವೆ ಇದೆ ಎಂದು ಸ್ಮರಿಸಿದರು.

    42,685 ಆಶಾಗಳಿಗೆ ತಲಾ 3000 ರೂ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts