More

    ವಿಜಯನಗರ (ಹೊಸಪೇಟೆ) ಜಿಲ್ಲಾ ಕ್ರೀಡಾಂಗಣ ಅಧ್ವಾನ

    ವೀರೇಂದ್ರ ನಾಗಲದಿನ್ನಿ ಹೊಸಪೇಟೆ
    ನೂತನ ವಿಜಯನಗರ ಜಿಲ್ಲಾ ಕ್ರೀಡಾಂಗಣ ಕ್ರೀಡಾಪಟುಗಳ ಆಟೋಟ ಚಟುವಟಿಕೆಗಿಂತ ಇತರ ಕಾರ್ಯಕ್ರಮಗಳಿಗೆ ವೇದಿಕೆಯಾಗುತ್ತಿದೆ. ಕ್ರೀಡಾಂಗಣ ಅಭಿವೃದ್ಧಿ ನೆಪದಲ್ಲಿ ತಿಂಗಳ ಹಿಂದೆಯೇ ಭೂಮಿ ಪೂಜೆ ಮಾಡಿ, ಮರಳು, ಜಲ್ಲಿಕಲ್ಲುಗಳನ್ನು ತಂದು ಹಾಕಿದ್ದರೂ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಇದರಿಂದ ಕ್ರೀಡಾಪಟುಗಳ ಅಭ್ಯಾಸಕ್ಕೆ ತೊಂದರೆ ಆಗುತ್ತಿದೆ.

    ದಶಕಗಳ ಹಿಂದೆ ಡಾ.ಮೊದಲಿಯಾರ್ ಎಂಬುವರು ಇಲ್ಲಿನ ಮುನ್ಸಿಪಲ್ ಹೈಸ್ಕೂಲ್ ಮೈದಾನಕ್ಕಾಗಿ ಭೂ ದಾನ ಮಾಡಿದ್ದರು. ಆನಂತರ ಬಳ್ಳಾರಿ ಜಿಲ್ಲಾ ಕ್ರೀಡಾ ಮತ್ತು ಯುವ ಜನ ಸೇವಾ ಇಲಾಖೆಗೆ ಒಳಪಟ್ಟು, ತಾಲೂಕು ಕ್ರೀಡಾಂಗಣವಾಗಿತ್ತು. ಕ್ರೀಡಾಂಗಣದಲ್ಲಿ ಮಣ್ಣಿನಿಂದ ಕೂಡಿರುವ 400 ಮೀಟರ್ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ವಾಲಿಬಾರ್, ಬಾಸ್ಕೆಟ್ ಬಾಲ್ ಕೋರ್ಟ್ ಸೇರಿ ಮತ್ತಿತರ ಆಟೋಟಗಳಿಗೆ ಅನುಕೂಲಕರವಾಗಿತ್ತು. ಇದೇ ಕ್ರೀಡಾಂಗಣದಲ್ಲಿ ಕ್ರೀಡಾಭ್ಯಾಸ ಮಾಡಿದ್ದ ಹಲವರು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಿಂಚಿದ್ದಾರೆ. ಆದರೆ, ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷೃದಿಂದ ಸುಸಜ್ಜಿತ ಕ್ರೀಡಾಂಗಣ ಇಲ್ಲದೆ ಯುವ ಕ್ರೀಡಾಪಟುಗಳು ತೊಂದರೆ ಅನುಭವಿಸುವಂತಾಗಿದೆ.

    ವಿಜಯನಗರ (ಹೊಸಪೇಟೆ) ಜಿಲ್ಲಾ ಕ್ರೀಡಾಂಗಣ ಅಧ್ವಾನ
    ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಂಚಿಕಲ್ಲುಗಳ ಮಧ್ಯೆ ಓಡುತ್ತಿರುವ ಕ್ರೀಡಾಪಟುಗಳು.

    ಮೈದಾನದಲ್ಲಿ ಕಲ್ಲು-ಮಣ್ಣಿನ ರಾಶಿ
    ಕಳೆದ ಆಗಸ್ಟ್‌ನಲ್ಲಿ ಕ್ರೀಡಾಂಗಣದಲ್ಲಿ 405 ಅಡಿ ಎತ್ತರದ ರಾಷ್ಟ್ರ ಧ್ವಜ ಸ್ತಂಭ ಸ್ಥಾಪನೆ ಕಾಮಗಾರಿ ಬಳಿಕ ಕ್ರೀಡಾಂಗಣ ಎಂಬುದು ಅದ್ವಾನವಾಗಿದೆ. ಕಾಮಗಾರಿಗೆ ಬೇಕಾಬಿಟ್ಟಿಯಾಗಿ ನೆಲ ಅಗೆಯಲಾಗಿತ್ತು. ಆನಂತರ ಕ್ರೀಡಾಂಗಣವನ್ನು ಎತ್ತರಿಸಲು ಗರ್ಸು ಮಣ್ಣು ಹಾಕಿದ್ದರಿಂದ ಕ್ರೀಡಾ ಚಟುವಟಿಕೆಗಳಿಗೆ ತೊಡಕಾಗಿದೆ. ಮೈದಾನ ಅಥ್ಲೆಟಿಕ್ಸ್‌ಗೆ ಪೂರಕವಾಗಿರದೇ ಕ್ರೀಡಾಪಟುಗಳು ಪರದಾಡುವಂತಾಗಿದೆ. ಓಟಗಾರರು ಬಳ್ಳಾರಿ- ಹುಬ್ಬಳ್ಳಿ ಹೈವೇ, ಸಾಯಿಬಾಬಾ ಸರ್ಕಲ್‌ನಿಂದ ಸಿದ್ಧಿಪ್ರಿಯಾ ಕಲ್ಯಾಣ ಮಂಟಪ ಮಾರ್ಗವಾಗಿ ಜಿಲ್ಲಾ ಒಳ ಕ್ರೀಡಾಂಗಣ ಮಾರ್ಗದಲ್ಲಿ ಅಭ್ಯಸಿಸುತ್ತಿದ್ದಾರೆ. ಬೆಳಗಿನಜಾವ ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ? ಎಂಬುದು ಕ್ರೀಡಾಪಟುಗಳ ಪ್ರಶ್ನೆ.

    ಮಳೆಗಾಲದಲ್ಲಿ ಕೆಸರು ಗದ್ದೆಯಾಗುವ ಗ್ರೌಂಡ್
    ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯದೇ, ಕೆಸರು ಗದ್ದೆಯಂತಾಗುತ್ತದೆ. ಅನೇಕರು ಜಾರಿ ಬಿದ್ದ ಉದಾಹರಣೆಗಳಿವೆ. ಹೀಗಾಗಿ ಮಳೆಗಾಲದಲ್ಲಿ ಅನೇಕರು ಮೈದಾನದತ್ತ ಸುಳಿಯುವುದಿಲ್ಲ. ಮೈದಾನದ ಹಂಚಿನಲ್ಲಿ ಬಹುತೇಕ ಸೈಜುಗಲ್ಲುಗಳು, ಬಿಂಚಿಕಲ್ಲುಗಳಿಂದ ತುಂಬಿದೆ. ಗ್ರಾವೆಲ್‌ನಲ್ಲಿ ವಾಕಿಂಗ್, ರನ್ನಿಂಗ್ ಮಾಡುವುದರಿಂದ ಮೊಣಕಾಲು ನೋವು ಬರುತ್ತವೆ. ಕಲ್ಲುಗಳಿಂದ ಮುಗ್ಗರಿಸಿ ಬೀಳುವ ಸಾಧ್ಯತೆಗಳು ಹೆಚ್ಚು. ಇದೇ ಕಾರಣಕ್ಕೆ ಕ್ರೀಡಾಪಟುಗಳು ಸೇರಿ ಬಹುತೇಕರು ಕ್ರೀಡಾಂಗಣದ ಬದಲಾಗಿ ಸುತ್ತಲಿನ ರಸ್ತೆಗಳಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.

    ವಿಜಯನಗರ (ಹೊಸಪೇಟೆ) ಜಿಲ್ಲಾ ಕ್ರೀಡಾಂಗಣ ಅಧ್ವಾನ
    ಹೊಸಪೇಟೆಯ ಒಳಾಂಗಣದಲ್ಲಿರುವ ಸುಸಜ್ಜಿತ ಈಜು ಕೊಳ.

    ಕ್ರಿಕೆಟ್ ಪಟುಗಳಿಗೆ ಶಾಮಿಯಾನ ಅಡ್ಡಿ
    ಅವ್ಯವಸ್ಥೆಯ ಮಧ್ಯೆಯೂ ಕೆಲ ಯುವಕರು ತಮ್ಮ ಅನುಕೂಲಕ್ಕೆ ತಕ್ಕಷ್ಟು ಮೈದಾನವನ್ನು ಸ್ವಚ್ಛಗಳಿಸಿಕೊಂಡು ಕ್ರಿಕೆಟ್ ಆಡುತ್ತಾರೆ. ಆದರೆ, ಇತ್ತೀಚೆಗೆ ಜಿಲ್ಲಾ ಕ್ರೀಡಾಂಗಣ ಆಟೋಟಕ್ಕಿಂತ ಸರ್ಕಾರ ಮತ್ತು ಖಾಸಗಿ ಸಭೆ, ಸಮಾರಂಭ, ಸಮಾವೇಶಗಳಿಗೆ ವೇದಿಕೆಯಾಗಿದ್ದೇ ಹೆಚ್ಚು. ಅದರಲ್ಲೂ ಸಿನಿಮಾ ಟೀಸರ್, ಆಡಿಯೋ ಲಾಂಚ್ ಕಾರ್ಯಕ್ರಮಗಳಿಗೂ ಮುನ್ಸಿಪಲ್ ಗ್ರೌಂಡ್ ನೀಡಲಾಗುತ್ತಿದೆ. ಆಯಾ ಕಾರ್ಯಕ್ರಮಕ್ಕೆ ತಕಷ್ಟು ಬೃಹತ್ ವೇದಿಕೆ, ಶಾಮಿಯಾನ ಹಾಕುವುದರಿಂದ ಕ್ರಿಕೆಟ್, ಫುಟ್‌ಬಾಲ್ ಪಟುಗಳಿಗೆ ತೊಂದರೆಯಾಗುತ್ತಿದೆ. ಕ್ರೀಡಾ ಚಟುವಟಿಕೆಗಳನ್ನು ಹೊರತುಪಡಿಸಿ ಇತರ ಸಭೆ, ಸಮಾರಂಭಗಳಿಗೆ ವೇದಿಕೆ ಕಲ್ಪಿಸಬಾರದೆಂಬುದು ಕ್ರೀಡಾಪಟುಗಳ ಒತ್ತಾಯ.

    ಕ್ರೀಡಾ ಚಟುವಟಿಕೆಗೆ ಶಾಲೆಗಳೇ ದಿಕ್ಕು
    ಜಿಲ್ಲಾ ಕ್ರೀಡಾಂಗಣದಲ್ಲಿ 405 ಅಡಿ ಎತ್ತರದ ಧ್ವಜ ಸ್ತಂಭ ಸ್ಥಾಪನೆ ಬಳಿಕ ಜಿಲ್ಲಾ ಪೊಲೀಸ್ ಕ್ರೀಡಾಕೂಟ ಹೊರತಾಗಿ ಕ್ರೀಡಾ ಇಲಾಖೆ, ಶಾಲಾ- ಕಾಲೇಜು ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ವಿವಿಧ ಕ್ರೀಡಾಕೂಟಗಳಿಗೆ ಇಲ್ಲಿನ ಪ್ರೌಢದೇವರಾಯ ಇಂಜಿನಿಯರಿಂಗ್ ಕಾಲೇಜು, ನ್ಯಾಷನಲ್ ಕಾಲೇಜು ಹಾಗೂ ತುಂಗಭದ್ರ ಡ್ಯಾಂನಲ್ಲಿರುವ ಕೇಂದ್ರ ವಿದ್ಯಾಲಯಗಳನ್ನು ಆಶ್ರಯಿಸುವಂತಾಗಿದೆ. ಈ ಹಿಂದೆಯೂ ಇಲ್ಲ ನಡೆಯುವ ಕ್ರೀಡಾಕೂಟದಲ್ಲಿ ಪಾಲ್ಗೊಲ್ಳುವ ಕ್ರೀಡಾ ಪಟುಗಳಿಗೆ ನೈಸರ್ಗಿಕ ಕರೆ ಬಂದರೆ ಒಳಾಂಗಣ ಕ್ರೀಡಾಂಗಣಕ್ಕೆ ಓಡಬೇಕು. ಇಲ್ಲವೇ ವಿಎನ್‌ಸಿ ಕಾಲೇಜಿಗೆ ತೆರಳುವುದು ಅನಿವಾರ್ಯ. ಪರ ಊರಿಂದ ಆಗಮಿಸುವ ಪೈಕಿ ಹೆಣ್ಣು ಮಕ್ಕಳ ಸ್ಥಿತಿ ಹೇಳತೀರದು. ಮುಖ್ಯವಾಗಿ ಶೌಚಗೃಹ ನಿರ್ಮಿಸಬೇಕೆನ್ನುತ್ತಾರೆ ವಿವಿಧ ಕಾಲೇಜಿನ ಕ್ರೀಡಾ ನಿರ್ದೇಶಕರು.

    ವಿಜಯನಗರ (ಹೊಸಪೇಟೆ) ಜಿಲ್ಲಾ ಕ್ರೀಡಾಂಗಣ ಅಧ್ವಾನ
    ಹೊಸಪೇಟೆಯ ಒಳಾಂಗಣದಲ್ಲಿರುವ ಸುಸಜ್ಜಿತ ಜಿಮ್.

    ಆದಾಯ ತರುವ ಒಳಾಂಗಣ
    ಒಳಾಂಗಣ ಕ್ರೀಡಾಂಗಣ ಇಲಾಖೆಯ ಪಾಲಿಗೆ ಪ್ರಮುಖ ಆದಾಯದ ಮೂಲ. ಒಳಾಂಗಣ ಸಂಕೀರ್ಣದಲ್ಲಿ ಜಿಮ್ 500 ರೂ., ಸ್ವಿಮ್ಮಿಂಗ್ ಫೂಲ್ ಹಿರಿಯರಿಗೆ 1 ಸಾವಿರ ರೂ., ವಿದ್ಯಾರ್ಥಿಗಳಿಗೆ 700 ರೂ., ಶಟಲ್ ಬ್ಯಾಡ್ಮಿಂಟನ್ ವಯಸ್ಕರರಿಗೆ 800 ರೂ., ವಿದ್ಯಾರ್ಥಿಗಳಿಗೆ 500 ರೂ. ಮಾಸಿಕ ಶುಲ್ಕ ನಿಗದಿ ಪಡಿಸಿಸಲಾಗಿದೆ. ಈ ಪೈಕಿ ಬೇಸಿಗೆಯಲ್ಲಿ ಪ್ರತಿ ನಿತ್ಯ 100- 150 ಜನರು ಸ್ವಿಮ್ಮಿಂಗ್ ಫೂಲ್ ಬಳಕೆ ಮಾಡುತ್ತಾರೆ. ಇನ್ನುಳಿದ ಕ್ರೀಡೆಗಳಲ್ಲಿ 20-30 ಜನರು ದಾಖಲಿಸಿಕೊಂಡಿದ್ದಾರೆ. ಬಿಲಿಯರ್ಡ್ಸ್(ಸ್ನೂಕರ್), ಟೇಬಲ ಟೆನ್ನಿಸ್, ಸ್ಕೇಟಿಂಗ್ ವ್ಯವಸ್ಥೆಯಿದ್ದರೂ ಬಳಕೆದಾರರೇ ಇಲ್ಲ.

    ಶುರುವಾಗದ ಕಾಮಗಾರಿ
    ಡಾ. ಪುನೀತ್ ರಾಜ್‌ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ 400 ಮೀಟರ್ ಸಿಂಥೆಟಿಕ್ ಟ್ರಾೃಕ್ ನಿರ್ಮಾಣ, ಉದ್ದ ಮತ್ತು ಎತ್ತರ ಜಿಗಿತದ ವ್ಯವಸ್ಥೆ ಮಾಡುವ ಜತೆಗೆ ವಾಲಿಬಾಲ್, ಫುಟ್‌ಬಾಲ್, ಬಾಸ್ಕೆಟ್ ಬಾಲ್ ಕೋರ್ಟ್ ಮತ್ತು ಕಾಂಪೌಂಡ್ ಗೋಡೆ ನಿರ್ಮಾಣಕ್ಕೆ ಕೆಕೆಆರ್‌ಡಿಬಿಯಿಂದ ಸುಮಾರು 5.50 ಕೋಟಿ ರೂ. ಮೊತ್ತದ ಕಾಮಗಾರಿಗೆ ಈಗಾಗಲೇ ಭೂಮಿ ಪೂಜೆ ನೆರವೇರಿಸಿ, ತಿಂಗಳು ಕಳೆದರೂ ಕೆಲಸ ಆರಂಭಗೊಂಡಿಲ್ಲ. ಅಲ್ಲದೇ, ನೂತನ ವಿಜಯನಗರ ಜಿಲ್ಲೆಗೆ ಹೊಸದಾಗಿ ಕ್ರೀಡಾ ವಸತಿ ನಿಲಯ ಮಂಜೂರಾತಿಗೆ ಸರ್ಕಾರ ಹಸಿರು ನಿಶಾನೆ ತೋರಿದೆ ಎನ್ನಲಾಗುತ್ತಿದ್ದು, ಆಶಾದಾಯಕವಾಗಿದೆ.

    ಒಳಾಂಗಣ ಸಭಾಂಗಣದ, ವಿವಿಧ ಕೋರ್ಟ್‌ಗಳ ನೋಂದಾಯಿತ ಸದಸ್ಯತ್ವ ಶುಲ್ಕದಿಂದ ಮಾಸಿಕ 1 ಲಕ್ಷ ರೂ. ಸಂಗ್ರಹವಾಗುತ್ತದೆ. ಅದರಲ್ಲೇ ತಾತ್ಕಾಲಿಕ ಸಿಬ್ಬಂದಿ, ಕಾವಲುಗಾರರಿಗೆ ಸಂಬಳ ಮತ್ತು ಒಳಾಂಗಣ ಕ್ರೀಡಾಂಗಣ ನಿರ್ವಹಣೆ ಮಾಡಲಾಗುತ್ತದೆ. ಸರ್ಕಾರದಿಂದ ಅನುದಾನ ಮತ್ತು ಸಿಬ್ಬಂದಿಯನ್ನೂ ಮಂಜೂರು ಮಾಡಿಲ್ಲ. ಇಲ್ಲಿದ್ದ ಒಬ್ಬರು ತರಬೇತುದಾರರನ್ನು ಬಳ್ಳಾರಿಗೆ ವರ್ಗಾಹಿಸಲಾಗಿದೆ. ಜಿಲ್ಲಾ ಕ್ರೀಡಾಂಗಣದ ಕಾಮಗಾರಿ ಶೀಘ್ರವೇ ಆರಂಭಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗುವುದು.
    ಹರಿಸಿಂಗ್ ರಾಥೋಡ್, ಯುವಜನ ಸೇವಾ ಕ್ರೀಡಾಧಿಕಾರಿ

    ಮೈದಾನ ಇತ್ತೀಚೆಗೆ ಸಂಪೂರ್ಣ ಹದಗೆಟ್ಟಿದೆ. ವಿವಿಧ ಡ್ರೈವಿಂಗ್ ಸ್ಕೂಲ್‌ನವರು ವಾಹನ ಚಾಲನಾ ತರಬೇತಿಗೂ ಕ್ರೀಡಾಂಗಣ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕ್ರೀಡಾ ಚಟುವಟಿಕೆ, ತರಬೇತಿಗಳಿಗಿಂತ ಹೆಚ್ಚಾಗಿ ಸಭೆ, ಸಮಾರಂಭ ಮತ್ತು ಫಿಲ್ಮ್ ಟೀಸರ್‌ಗಳ ಬಿಡುಗಡೆ ಸಮಾರಂಭಕ್ಕೆ ಅವಕಾಶ ನೀಡಲಾಗುತ್ತದೆ. ಆಯೋಜಕರು ವೇದಿಕೆ ನಿರ್ಮಾಣ ಮತ್ತು ತೆರವಿಗೆ ವಾರಗಟ್ಟಲೆ ಸಮಯ ತೆಗೆದುಕೊಳ್ಳುತ್ತಾರೆ. ಇದರಿಂದ ಕ್ರಿಡಾಪಟುಗಳಿಗೆ ಸಮಸ್ಯೆಯಾಗುತ್ತದೆ. ಅದರೊಂದಿಗೆ ಕ್ರೀಡಾಂಗಣವನ್ನು ವೈಜ್ಞಾನಿಕವಾಗಿ ನಿರ್ಮಿಸಬೇಕು.
    ಮಂಜುನಾಥ ನಿಶಾನಿ, ಕ್ರೀಡಾಪಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts