More

    ವಿಷ್ಣುವರ್ಧನ್ ಬಗ್ಗೆ ಅವಹೇಳನಕಾರಿ ಹೇಳಿಕೆ; ಕೊನೆಗೂ ತಪ್ಪಾಯ್ತೆಂದು ಮಂಡಿಯೂರಿದ ವಿಜಯ್ ರಂಗರಾಜು

    ಬೆಂಗಳೂರು: ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಬಗ್ಗೆ ಸಂದರ್ಶನವೊಂದರಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ ತೆಲುಗು ನಟನ ವಿರುದ್ಧ ಇಡೀ ಸ್ಯಾಂಡಲ್‌ವುಡ್ ತಿರುಗಿ ಬಿದ್ದಿತ್ತು. ಶುಕ್ರವಾರವಷ್ಟೇ ನಟ ಹಾಗೂ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಜತ್ಕರ್, ವಿಜಯ್ ರಂಗರಾಜು ಹೇಳಿಕೆ ಹಿಂಪಡೆಯುವಂತೆ ಎಚ್ಚರಿಕೆ ನೀಡಿದ್ದರು. ಕನ್ನಡದ ಸ್ಟಾರ್ ನಟರು, ಆ ನಟನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಮರ ಸಾರಿದ್ದರು. ಇದೀಗ ಕೊನೆಗೂ ರಂಗರಾಜು ಕರ್ನಾಟಕದ ಜನತೆ ಬಳಿ ಕ್ಷಮೆ ಕೋರಿ ಮಂಡಿಯೂರಿದ್ದಾನೆ.

    ವಿಡಿಯೋ ಮೂಲಕ ಮಾತನಾಡಿರುವ ರಂಗರಾಜು. ಕರ್ನಾಟಕದರಿಗೆ ಮತ್ತು ವಿಷ್ಣು ಅಭಿಮಾನಿಗಳಿಗೆ ನಮಸ್ಕಾರ. ನಾನು ವಿಜಯ್ ರಂಗರಾಜು. ನಾನು ತುಂಬ ದೊಡ್ಡ ತಪ್ಪು ಮಾಡಿದ್ದೇನೆ. ಅದಕ್ಕೆ ಪ್ರಾಯಶ್ಚಿತವನ್ನೂ ಅನುಭವಿಸುತ್ತಿದ್ದೇನೆ. ನನ್ನ ಮುಖವನ್ನೂ ತೋರಿಸಬಾರದೆಂಬ ಕಾರಣಕ್ಕೆ ಮಾಸ್ಕ್​ ಧರಿಸಿದ್ದೇನೆ. ನಾನು ದೊಡ್ಡ ಕಲಾವಿದನೇನಲ್ಲ. ಫೈಟರ್ ಆಗಿ ಸಿನಿಮಾಕ್ಕೆ ಬಂದಿದ್ದೇನೆ. ಆವತ್ತು ನಡೆದ ಘಟನೆ ಬಗ್ಗೆ ಏನೋ ಒಂದು ಫ್ಲೋದಲ್ಲಿ ಹೇಳಿದೆ. ದಯಮಾಡಿ ನನ್ನನ್ನು ಇಡೀ ಕರ್ನಾಟಕದ ಜನತೆ ಕ್ಷಮಿಸಿ. ಭಾರತಿ ಅಮ್ಮನವರಿಗೂ ನನ್ನಿಂದ ತಪ್ಪಾಗಿದೆ ಎಂದು ಹೇಳುತ್ತೇನೆ. ಸುದೀಪ್ ಅವರೇ, ಪುನೀತ್ ಅವರೇ ನನ್ನನ್ನು ಕ್ಷಮಿಸಿ’ ಎಂದು ಅಂಗಲಾಚಿದ್ದಾರೆ.


    ಜಗ್ಗೇಶ್, ಕಿಚ್ಚ ಸುದೀಪ್, ಪುನೀತ್ ರಾಜಕುಮಾರ್, ಗಣೇಶ್, ಯಶ್, ಧನಂಜಯ್, ಸುಮಲತಾ ಹೀಗೆ ಬಹುತೇಕ ಸ್ಯಾಂಡಲ್​ವುಡ್​ನ ಎಲ್ಲ ಕಲಾವಿದರೂ ತೆಲುಗು ನಟನಿಗೆ ಖಡಕ್ ಸಂದೇಶ ರವಾನಿಸಿದ್ದರು. ತಪ್ಪಾಯ್ತು ಎಂದು ಕೇಳುವಂತೆ ವಾರ್ನಿಂಗ್ ನೀಡಿದ್ದರು. ‘ವಿಷ್ಣು ಅವರು ಇಲ್ಲ ಎಂದ ಮಾತ್ರಕ್ಕೆ ಹೀಗೆಲ್ಲ ಮಾತನಾಡುವುದು ಸರಿಯಲ್ಲ. ಆ ವ್ಯಕ್ತಿ ಬದುಕಿದ್ದಾಗ ಮಾತನಾಡಿದ್ದರೆ ಗಂಡಸ್ತನ ಇರುತ್ತಿತ್ತು. ಸಿನಿಮಾ ಕ್ಷೇತ್ರ ಅಂದರೆ ಒಂದು ಕುಟುಂಬದ ರೀತಿ. ನಿಮ್ಮ ಈ ಮಾತನ್ನು ನಿಮ್ಮ ಚಿತ್ರರಂಗದಲ್ಲೇ ಯಾರೂ ಒಪ್ಪುವುದಿಲ್ಲ. ನಾಡಿನ ಜನರ ಆರಾಧ್ಯ ದೈವವಾಗಿರುವ ವಿಷ್ಣುವರ್ಧನ್ ನಮ್ಮ ನಡುವೆ ಇಲ್ಲದೆ ಇರಬಹುದು. ಕೋಟಿ ಕೋಟಿ ಮಕ್ಕಳನ್ನು ಬಿಟ್ಟು ಹೋಗಿದ್ದಾರೆ. ಇಲ್ಲಿ ಯಾರೂ ಸುಮ್ಮನೆ ಕುಳಿತಿಲ್ಲ’ ಎಂದು ಸುದೀಪ್​ ಎಚ್ಚರಿಸಿದ್ದರು.


    ಅದೇ ರೀತಿ ಪುನೀತ್ ರಾಜಕುಮಾರ್ ಸಹ ಪ್ರತಿಕ್ರಿಯಿಸಿ, ‘ನಮ್ಮ ನಾಡಿನ ಮೇರು ನಟರಲ್ಲಿ ಒಬ್ಬರಾದ ವಿಷ್ಣು ಸರ್ ಬಗ್ಗೆ ಅವಹೇಳನವಾಗಿ ಮಾತನಾಡಿರುವ ಆ ಕಲಾವಿದ ಕ್ಷಮೆ ಕೇಳಿ ತನ್ನ ಮಾತುಗಳನ್ನ ಹಿಂಪಡೆಯಬೇಕು. ಭಾರತೀಯ ಚಿತ್ರರಂಗ ನಮ್ಮ ಮನೆ. ಎಲ್ಲ ಕಲಾವಿದರು ಒಂದು ಕುಟುಂಬ. ಕಲೆಗೆ, ಕಲಾವಿದರಿಗೆ ಗೌರವಿಸೋದು ನಮ್ಮ ಕರ್ತವ್ಯ. ಒಬ್ಬ ಕಲಾವಿದನಾಗಬೇಕಾದರೆ ಅವನಿಗಿರಬೇಕಾದ ಮೊದಲ ಅರ್ಹತೆ ತನ್ನ ಸಹದ್ಯೋಗಿ ಕಲಾವಿದರ ಬಗ್ಗೆ ಗೌರವ ಹಾಗೂ ಪ್ರೀತಿಯನ್ನು ತೋರುವುದು. ಯಾವುದೇ ಭಾಷೆಯ ನಟರಾದರು ಮೊದಲು ಗೌರವ ನೀಡಬೇಕು’ ಎಂದಿದ್ದರು.


    ವಿಜಯ್ ರಂಗರಾಜು, ಈತ ಕಾಲವಾದ ಸಾಧಕರ ಬಗ್ಗೆ ಕುಚೇಷ್ಟೆ ಮಾತಾಡುವ ಗುಣದವ. ನತದೃಷ್ಟ ಶಿಕಾಮಣಿ. ಎಲ್ಲಿಯೂ ಸಲ್ಲದವ. ಅದರಲ್ಲೂ ಈತ ಕಲಾವಿದನಂತೆ. ಈ ದರಿದ್ರ ಮುಖ ಯಾವ ಚಿತ್ರದಲ್ಲೂ ನೋಡಿದ ನೆನಪ್ಲಿ! ಕನ್ನಡದ ಹೃದಯಗಳೇ ಇವನ ಅನಿಷ್ಟ ಸೊಲ್ಲು ಅಡುಗುವಂತೆ, ಕನ್ನಡಿಗರ ದೂಷಣೆಗೆ ಹಿಂಜರಿಯುವಂತೆ ಉತ್ತರಿಸಿ. ಇವನ ಉದ್ದಟತನದ ಮಾತಿಗೆ ಕ್ಷಮೆಯಿಲ್ಲ. ಸತ್ತವರು ದೇವರಸಮ. ದುಃಖವಾಯಿತು’ ಎಂದು ಜಗ್ಗೇಶ್ ತರಾಟೆ ತೆಗೆದುಕೊಂಡರೆ, ‘ಗೋಲ್ಡನ್ ಸ್ಟಾರ್’ ಗಣೇಶ್ ಸಹ ಮಾತನಾಡಿದ್ದರು.

    ‘ಕನ್ನಡದ ಮೇರು ನಟರಾದ ನಮ್ಮ ವಿಷ್ಣು ದಾದಾ ಬಗ್ಗೆ ಈ ರೀತಿ ಮಾತನಾಡುವುದು ಅತ್ಯಂತ ಅಕ್ಷಮ್ಯ ಹಾಗೂ ನಾನಿದನ್ನು ಖಂಡಿಸುತ್ತೇನೆ. ಕಲೆ ಮತ್ತು ಕಲಾವಿದನಿಗೆ ಗಡಿ ರೇಖೆಗಳಿಲ್ಲ. ಯಾವುದೇ ಸಿನಿಮಾರಂಗಕ್ಕೆ ಸಂಬಂಧಿಸಿದ ಕಲಾವಿದನಾದರೂ, ಮತ್ತೊಂದು ಸಿನಿಮಾರಂಗದ ಕಲಾವಿದರೊಡನೆ ಪರಸ್ಪರ ಅಭಿಮಾನ, ಗೌರವ ವಿನಿಮಯ ಮಾಡಿಕೊಳ್ಳುವ ಮೂಲಕ ಸೌಹಾರ್ದತೆ ಕಾಪಾಡಬೇಕು. ಅದನ್ನು ವಿಷ್ಣುದಾದಾ ಹಿಂದಿನಿಂದ ಪಾಲಿಸುತ್ತ ಬಂದಿದ್ದಾರೆ. ಈ ನಿಮ್ಮ ಕೀಳು ಹೇಳಿಕೆ ಅವರನ್ನು ಪೂಜಿಸುವ ಅಭಿಮಾನಿ ಮನಸ್ಸುಗಳಿಗೆ ನೋವಾಗಿದೆ. ಕೂಡಲೇ ಕ್ಷಮೆಯಾಚಿಸಿ’ ಎಂದು ಸುದೀರ್ಘವಾಗಿ ಬರೆದುಕೊಂಡಿದ್ದರು ಗಣೇಶ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts