More

    ಪೂರ್ಣ ಮರೆಯಾಗುವತ್ತ ವಿಜಯ ಬ್ಯಾಂಕ್

    ಭರತ್ ಶೆಟ್ಟಿಗಾರ್ ಮಂಗಳೂರು

    ಹೆಚ್ಚುಕಡಿಮೆ ಒಂದೂವರೆ ವರ್ಷದ ಹಿಂದೆ ಬ್ಯಾಂಕ್ ಆಫ್ ಬರೋಡದೊಂದಿಗೆ ವಿಲೀನಗೊಂಡಿದ್ದ ಕರಾವಳಿಯ ವಿಜಯ ಬ್ಯಾಂಕ್ ಅಸ್ತಿತ್ವ ಇನ್ನು ಕೆಲವೇ ಸಮಯದಲ್ಲಿ ಸಂಪೂರ್ಣವಾಗಿ ಮರೆಯಾಗಲಿದೆ.
    1931ರ ಅ.23ರಂದು ಮಂಗಳೂರಿನಲ್ಲಿ ಸ್ಥಾಪನೆಗೊಂಡು, ದೇಶಾದ್ಯಂತ ಶಾಖೆಗಳನ್ನು ಹೊಂದಿ ಅಗ್ರಗಣ್ಯ ಬ್ಯಾಂಕ್‌ಗಳಲ್ಲಿ ಒಂದಾಗಿದ್ದ ವಿಜಯ ಬ್ಯಾಂಕ್ ಏ.1, 2019ರಂದು ಬ್ಯಾಂಕ್ ಆಫ್ ಬರೋಡದೊಂದಿಗೆ ವಿಲೀನಗೊಂಡಿತ್ತು. ಆರಂಭದಲ್ಲಿ ಶಾಖೆಗಳಲ್ಲಿ ವಿಜಯ ಬ್ಯಾಂಕ್ ನಾಮಫಲಕದೊಂದಿಗೆ ಚಿಕ್ಕದಾಗಿ ಬಿಒಬಿ ಹೆಸರಿತ್ತು. ಪ್ರಸ್ತುತ ಬಿಒಬಿ ಎಂದು ದೊಡ್ಡದಾಗಿ ಬರೆಯಾಗಿದ್ದು, ವಿಜಯ ಬ್ಯಾಂಕ್ ಹೆಸರು ಸಣ್ಣದಾಗಿ ಕಾಣಿಸುತ್ತಿದೆ. ಮುಂದಿನ ಭಾಗವಾಗಿ ಐಟಿ ಮೈಗ್ರೇಶನ್ ನಡೆಯುತ್ತಿದ್ದು, ಗ್ರಾಹಕರ ಪಾಸ್‌ಬುಕ್, ಚೆಕ್‌ಬುಕ್, ಡೆಬಿಟ್ ಕಾರ್ಡ್ ಎಲ್ಲವೂ ಬದಲಾಗಲಿದೆ. ಇದರೊಂದಿಗೆ ವಿಜಯ ಬ್ಯಾಂಕ್‌ನ ಗುರುತು ಪೂರ್ತಿ ಕಣ್ಮರೆಯಾಗಲಿದೆ.

    ಬಿಒಬಿ ಅಸ್ತಿತ್ವ ಗಟ್ಟಿ: ವಿಜಯ ಬ್ಯಾಂಕ್, ದೇನಾ ಬ್ಯಾಂಕ್‌ಗಳನ್ನು ತನ್ನೊಡನೆ ಸೇರಿಸಿಕೊಂಡು ದೇಶದ ಸಾರ್ವಜನಿಕ ರಂಗದ ಎರಡನೇ ಅತೀ ದೊಡ್ಡ ಬ್ಯಾಂಕ್ ಎನಿಸಿರುವ ಬ್ಯಾಂಕ್ ಆಫ್ ಬರೋಡ ಅಸ್ತಿತ್ವ ಗಟ್ಟಿಯಾಗಲಿದೆ.
    ದೇಶದ ಎಲ್ಲೆಡೆ ನಡೆಯುತ್ತಿರುವಂತೆ ಮಂಗಳೂರು ವಲಯ(ಉಡುಪಿ ಸಹಿತ)ದ ಎಲ್ಲ ವಿಜಯ ಬ್ಯಾಂಕ್-ದೇನಾ ಬ್ಯಾಂಕ್ ಬಿಒಬಿಯ ತಂತ್ರಾಂಶ ‘ಪಿನಾಕಲ್ ವರ್ಶನ್ 10’ಗೆ ಬದಲಾಗುತ್ತಿದೆ. ಇದರಿಂದ ಗ್ರಾಹಕ ಸಂಖ್ಯೆ, ಖಾತೆ ಸಂಖ್ಯೆ, ಶಾಖೆಯ ಐಎಫ್‌ಎಸ್‌ಸಿ ಕೋಡ್ ಎಲ್ಲವೂ ಬದಲಾಗಲಿದೆ. ಗ್ರಾಹಕರಿಗೆ ಬ್ಯಾಂಕ್ ಆಫ್ ಬರೋಡದಲ್ಲಿರುವ ಎಲ್ಲ ಸೌಲಭ್ಯಗಳೂ ದೊರೆಯಲಿವೆ.

    ದೇಶದಲ್ಲಿ ಈಗಾಗಲೇ ಸಾವಿರಕ್ಕೂ ಅಧಿಕ ಶಾಖೆಗಳು ಹೊಸ ತಂತ್ರಾಶಕ್ಕೆ ಬದಲಾಗಿ ಕಾರ್ಯನಿರ್ವಹಿಸುತ್ತಿವೆ. ಸೆ.12ರಂದು ಉಳಿದ ಎಲ್ಲ ಶಾಖೆಗಳಲ್ಲೂ ಈ ಪ್ರಕ್ರಿಯೆ ನಡೆಯಲಿದೆ. ಮಂಗಳೂರು ವಲಯದಲ್ಲಿ 147 ಶಾಖೆಗಳಲ್ಲಿ ಈ ಬದಲಾವಣೆ ನಡೆದಿದ್ದು, ಉಳಿದ ಎಲ್ಲ 211 ಶಾಖೆಗಳಲ್ಲೂ ಮೈಗ್ರೇಶನ್ ನಡೆಯಲಿದೆ. ಇದೊಂದು ದೊಡ್ಡ ಮಟ್ಟದ ಪ್ರಕ್ರಿಯೆ ಆಗಿರುವುದರಿಂದ, ಬ್ಯಾಂಕ್ ವ್ಯವಹಾರದ ನಡುವೆ ಇದನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ರಜಾದಿನ ನೋಡಿ ನಡೆಸಲಾಗುತ್ತದೆ. ಸೆ.12 ಎರಡನೇ ಶನಿವಾರ ಆಗಿರುವುದರಿಂದ ಹಾಗೂ ಭಾನುವಾರವೂ ರಜೆ ಇರುವುದರಿಂದ ಅದೇ ದಿನವನ್ನು ಆಯ್ಕೆ ಮಾಡಲಾಗಿದೆ. ಸೋಮವಾರ ಗ್ರಾಹಕರು ಬ್ಯಾಂಕ್‌ಗೆ ಬರುವಾಗ ಎಲ್ಲವೂ ಬದಲಾಗಿರುತ್ತದೆ ಎನ್ನುತ್ತಾರೆ ಬಿಒಬಿ ಮಂಗಳೂರು ವಲಯದ ಮಹಾಪ್ರಬಂಧಕಿ ಸುಜಯಾ ಶೆಟ್ಟಿ.

    ಏನಿದು ಐಟಿ ಮೈಗ್ರೇಶನ್?
    ಬ್ಯಾಂಕ್‌ಗಳು ತಮ್ಮದೇ ಆದ ತಂತ್ರಾಂಶದ ಮೂಲದ ಕೋರ್ ಬ್ಯಾಕಿಂಗ್ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತವೆ. ವಿಜಯ ಬ್ಯಾಂಕ್ ಈವರೆಗೆ ಪಿನಾಕಲ್ ವರ್ಶನ್ 7 ತಂತ್ರಾಂಶದಡಿ ಕಾರ್ಯನಿರ್ವಹಿಸುತ್ತಿತ್ತು. ಬ್ಯಾಂಕ್ ಆಫ್ ಬರೋಡ ಪಿನಾಕಲ್ 10ನ್ನು ಹೊಂದಿದೆ. ಬ್ಯಾಂಕ್‌ಗಳ ವಿಲೀನ ಬಳಿಕ ಒಂದಾಗಿ ಕಾರ್ಯನಿರ್ವಹಿಸಲು ಕೆಲವು ತಾಂತ್ರಿಕ ಅಡಚಣೆಗಳಿದ್ದವು. ಪ್ರಸ್ತುತ ವಿಜಯ ಬ್ಯಾಂಕ್ ತಂತ್ರಾಂಶವನ್ನು ಪಿನಾಕಲ್ 10ಕ್ಕೆ ಬದಲಾಯಿಸುವುದನ್ನು ಐಟಿ ಮೈಗ್ರೇಶನ್ ಎನ್ನುತ್ತಾರೆ.

    ಮಂಗಳೂರು ವಲಯದಲ್ಲಿ ಬರುವ ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ ಶಾಖೆಗಳ ಐಟಿ ಮೈಗ್ರೇಶನ್ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಸೆ.12ರಂದು ಬಾಕಿ ಉಳಿದಿರುವ ಶಾಖೆಗಳ ಮೈಗ್ರೇಶನ್ ನಡೆಯಲಿದ್ದು, ಇದರಿಂದ ಶೇ.100ರಷ್ಟು ಶಾಖೆಗಳು ಬಿಒಬಿಯ ಪಿನಾಕಲ್ ವರ್ಶನ್ 10ಕ್ಕೆ ಬದಲಾದಂತಾಗುತ್ತದೆ. ಈ ಕುರಿತು ಎಲ್ಲ ಗ್ರಾಹಕರಿಗೆ ಈಗಾಗಲೇ ಮಾಹಿತಿ ನೀಡಲಾಗಿದ್ದು, ಯಾರಿಗೂ ಯಾವುದೇ ಸಮಸ್ಯೆಯಾಗದು.
    – ಸುಜಯಾ ಯು.ಶೆಟ್ಟಿ, ಮಹಾ ಪ್ರಬಂಧಕಿ, ಬಿಒಬಿ ಮಂಗಳೂರು ವಲಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts