More

    ಸೋರಿಕೆ ತಡೆದು ದರ ಹೆಚ್ಚಳ ಕೈಬಿಡಿ

    ಕಲಬುರಗಿ: ಸರ್ಕಾರಿ ಇಲಾಖೆಗಳಲ್ಲಿ ಕೋಟ್ಯಂತರ ರೂ. ವಿದ್ಯುತ್ ಬಿಲ್ ಬಾಕಿ ಜತೆಗೆ ಸೋರಿಕೆಯಾಗುತ್ತಿದೆ. ಮೊದಲು ಅದನ್ನು ಬಾಕಿ ವಸೂಲಿ ಮಾಡಿ ಸೋರಿಕೆಗೆ ಬ್ರೇಕ್ ಹಾಕಿದರೆ ದರ ಹೆಚ್ಚಳದ ಅಗತ್ಯವೇ ಬರಲ್ಲ. ಪ್ರಸ್ತುತ ಬರ ಇದ್ದುದರಿಂದ ವಿದ್ಯುತ್ ದರ ಹೆಚ್ಚಿಸಬಾರದು ಎಂಬ ಒಕ್ಕೊರಲ ಒತ್ತಾಯ ಗ್ರಾಹಕರು, ಕೈಗಾರಿಕೋದ್ಯಮಿಗಳು, ರೈತರಿಂದ ಕೇಳಿಬಂದಿತು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಮಂಗಳವಾರ ಕರೆದಿದ್ದ ವಿದ್ಯುತ್ ದರಪಟ್ಟಿ ಪರಿಷ್ಕರಣೆ ಪ್ರಸ್ತಾವನೆ ಹಾಗೂ ವಾರ್ಷಿಕ ಕಂದಾಯ ಅಗತ್ಯತೆ ಕುರಿತ ಸಾರ್ವಜನಿಕರ ವಿಚಾರಣೆ ಸಭೆಯಲ್ಲಿ ಯೂನಿಟ್‌ಗೆ ೧.೬೩ ರೂ. ದರ ಹೆಚ್ಚಿಸುವ ಜೆಸ್ಕಾಂ ನಿರ್ಧಾರಕ್ಕೆ, ಪ್ರಬಲ ಆಕ್ಷೇಪ ವ್ಯಕ್ತವಾಗಿದ್ದಲ್ಲದೆ ಜೆಸ್ಕಾಂನ ಲೋಪದೋಷಗಳು ಪ್ರತಿಧ್ವನಿಸಿದವು.

    ಆಯೋಗದ ಅಧ್ಯಕ್ಷ ಪಿ.ರವಿಕುಮಾರ, ಸದಸ್ಯ ಎಂ.ಡಿ. ರವಿ ಎಲ್ಲರ ಅಭಿಪ್ರಾಯ ಆಲಿಸಿ ಸೂಕ್ತ ವರದಿ ಸಿದ್ಧಪಡಿಸಿದ ಬಳಿಕ ಸರ್ಕಾರಕ್ಕೆ ಸಲ್ಲಿಸಿ ದರ ಪರಿಷ್ಕರಣೆ ವಿಷಯ ತಿಳಿಸುವುದಾಗಿ ಹೇಳಿದರು.

    ಕಲ್ಯಾಣ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಕೆಸಿಸಿಐ) ಅಧ್ಯಕ್ಷ ಶಶಿಕಾಂತ ಪಾಟೀಲ್ ಮಾತನಾಡಿ, ಕೈಗಾರಿಕೆಗಳಿಗೆ ನಿರಂತರ ಗುಣಮಟ್ಟದ ವಿದ್ಯುತ್ ಪೂರೈಸಿ ಎಂದು ಮನವಿ ಮಾಡಿದರು.

    ರೈತ ಸಂಗಪ್ಪ ಕೋಟಿ ಮಾತನಾಡಿ, ದಿನದಲ್ಲಿ ಏಳು ಗಂಟೆ ವಿದ್ಯುತ್ ಕೊಡ್ತೇವೆ ಅಂತ ಪದೇಪದೆ ಎಲ್‌ಸಿ ತಗೋತ್ತಿರುವುದರಿಂದ ರೈತರು ಪರದಾಡುವಂತಾಗಿದೆ. ಆರ್‌ಆರ್ ನಂಬರ್ ಇಲ್ಲದ್ದಕ್ಕೆ ೧೦ ಸಾವಿರ ರೂ. ದಂಡ ಹಾಕಿದ್ದಾರೆ. ಆದರೆ ಹಣ ನೀಡಿದರೂ ಆರ್‌ಆರ್ ನಂಬರ್ ನೀಡ್ತಿಲ್ಲ. ೧೦ ವಿದ್ಯುತ್ ಕಂಬದ ಕ್ರಿಯಾಯೋಜನೆ ಮಾಡಿ ಐದು ಕಂಬ ಕೂಡಿಸ್ತಾರೆ. ಹೀಗಾದ್ರೆ ಜೆಸ್ಕಾಂ ಉಳಿಯುತ್ತಾ ಎಂದು ಪ್ರಶ್ನಿಸಿದರು. ಆಯೋಗದ ಅಧ್ಯಕ್ಷ ರವಿಕುಮಾರ ತನಿಖೆ ನಡೆಸಿ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

    ನಗರ ಸೇರಿ ಗ್ರಾಮೀಣ ಪ್ರದೇಶದಲ್ಲಿ ಬೀದಿ ದೀಪಗಳು ನಿರಂತರ ಉರಿಯುತ್ತವೆ. ಬಂದ್ ಮಾಡೋರೆ ಇಲ್ಲ. ಗಾಳಿಯಷ್ಟೇ ವಿದ್ಯುತ್ ಮುಖ್ಯ. ಸೋರಿಕೆ ತಡೆಗೆ ಆದ್ಯತೆ ನೀಡಿ ದರ ಹೆಚ್ಚಳ ಬಗ್ಗೆ ಯೋಚಿಸಿ ಎಂದು ವಿದ್ಯುತ್ ಬಳಕೆದಾರರ ಸಂಘದ ಲಲಿತಾರಡ್ಡಿ ಸಲಹೆ ನೀಡಿದರು.

    ಆಳಂದ, ಚಿತ್ತಾಪುರ, ಅಫಜಲಪುರಗಳಲ್ಲಿ ಏಳು ತಾಸು ವಿದ್ಯುತ್ ಸರಿಯಾಗಿ ನೀಡುತ್ತಿಲ್ಲ ಎಂದು ಗ್ರಾಹಕ ಚನ್ನಬಸಯ್ಯ ಆಯೋಗದ ಗಮನಕ್ಕೆ ತಂದರು. ನನ್ನ ಜಮೀನಿನಲ್ಲಿ ಗಂಗಾಕಲ್ಯಾಣ ಕೊಳವೆ ಬಾವಿಗೆ ಕನೆಕ್ಷನ್ ಕೊಡಲು ಕಂಬ, ವೈರ್ ಹಾಕಿದ್ದರೂ ಸಂಪರ್ಕ ಕೊಡಲಿಲ್ಲ. ವೈರ್ ಕಳವಾಯ್ತು. ಠಾಣೆಗೆ ಹೋದ್ರೆ ಜೆಸ್ಕಾಂನವರಿಗೆ ಕಳುಹಿಸಿ ಅಂತಾರೆ. ಯಾರು ಕೇಳೋರು? ಆರೇಳು ವರ್ಷದಿಂದ ಮನವಿ ಮಾಡಿದ್ರೂ ಸ್ಪಂದಿಸುತ್ತಿಲ್ಲ. ಹೀಗೆ ಜೆಸ್ಕಾಂ ನಷ್ಟ ಮಾಡ್ಕೊಂಡು ದರ ಹೆಚ್ಚಳ ಅಂದ್ರೆ ಹೇಗೆ ಎಂದು ಭೀಮಳ್ಳಿ ಗ್ರಾಮದ ರೈತ ಸುಭಾಷ ಜಮಾದಾರ ಪ್ರಶ್ನಿಸಿದರು.

    ಆಯೋಗದ ಕಾರ್ಯದರ್ಶಿ ಬಿ.ಎನ್. ವರಪ್ರಸಾದರಡ್ಡಿ, ಉಪನಿರ್ದೇಶಕ ಶಂಕರ ಸುಂದರ, ಮುಸಾಮ್ಮಿಲ್ ಖಾನ್, ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಕರಿಲಿಂಗಣ್ಣನವರ ಇತರರಿದ್ದರು.

    ನಾನ್ ಟೆಕ್ನಿಕಲ್ ಇಂಜಿನಿಯರ್ ಅಂಗವಿಕಲ, ಕುಡುಕ ಲೈನ್‌ಮನ್: ನಂದೂರ ಕೈಗಾರಿಕಾ ಪ್ರದೇಶದಲ್ಲಿ ಒಬ್ಬ ಅಂಗವಿಕಲ, ಇನ್ನೊಬ್ಬ ಕುಡುಕ ಲೈನ್‌ಮನ್. ಶಿಕ್ಷಣದ ಕೊರತೆ ಇದೆ. ಅಲ್ಲದೆ ನಾನ್ ಟೆಕ್ನಿಕಲ್ ಇಂಜಿನಿಯರ್‌ನಿಂದ ಹೇಗೆ ಉತ್ತಮ ಸೇವೆ ಪಡೆಯಬಹುದು. ಕೆಲಸ ಮಾಡುವವರನ್ನು ಕೊಡಿ ಎಂದು ಗ್ರಾಹಕರು ಹಕ್ಕೊತ್ತಾಯ ಮಂಡಿಸಿದರು. ಜೆಸ್ಕಾಂ ವಿಭಾಗದಲ್ಲಿ ಮಾತ್ರ ನಾನ್ ಟೆಕ್ನಿಕಲ್ ಇಂಜಿನಿಯರ್ ಇರುವುದು ಹೇಗೆ ಎಂದು ಆಯೋಗದ ಅಧ್ಯಕ್ಷ ಪಿ.ರವಿಕುಮಾರ ಕೇಳಿದರು. ಎಸ್ಸೆಸ್ಸೆಲ್ಸಿ ಕಲಿತವರು ಸೆಕ್ಷನ್ ಆಫೀಸರ್ ಆಗೋದು ಬೇಡ ಎಂದು ಸಲಹೆ ನೀಡಿದರು.

    ಹೊಸ ಕನೆಕ್ಷನ್‌ಗೆ ಲಂಚ ತಗೋತಾರೆ?: ಕಲಬುರಗಿ ನಗರದಲ್ಲಿರುವ ಅನಧಿಕೃತ ಆರ್‌ಒ ಪ್ಲಾಂಟ್‌ಗಳಿಗೆ ಅದ್ಹೇಗೆ ವಿದ್ಯುತ್ ಸಂಪರ್ಕ ಕೊಡಲಾಗಿದೆ ಎಂದು ವಿದ್ಯುತ್ ಬಳಕೆದಾರರ ಸಂಘದ ಕಾರ್ಯದರ್ಶಿ ಅಬ್ದುಲ್ ಖಾದೀರ್ ಪ್ರಶ್ನಿಸಿದರು. ನಗರದಲ್ಲಿ ನೂರಾರು ಕೊಳವೆ ಬಾವಿಗಳಿದ್ದರೂ ಮೀಟರ್‌ಗಳಿಲ್ಲ. ಸಿಕ್ಕಾಪಟ್ಟೆ ವಿದ್ಯುತ್ ಸೋರಿಕೆ ಆಗ್ತಿದೆ. ಹೊಸ ಸಂಪರ್ಕ ಕೊಡಲು ಲಂಚ ತಗೋತಾರೆ ಎಂದು ಆರೋಪಿಸಿದರು.

    ಎಂಎಸ್‌ಎಂಇಗೆ ರಿಯಾಯಿತಿ ನೀಡಿ: ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ವಿದ್ಯುತ್ ದರದಲ್ಲಿ ರಿಯಾಯಿತಿ ನೀಡಬೇಕು. ಬಿಲ್ ಕಟ್ಟಲು ಎರಡು ದಿನ ಲೇಟ್ ಆದ್ರೆ ಸಂಪರ್ಕ ಕಟ್ ಮಾಡ್ತಾರೆ. ಬಿಲ್ ಕಟ್ಟಿದ್ಮೇಲೆ ಕನೆಕ್ಷನ್ ಕೊಡಲು ಬರಲ್ಲ ಎಂದು ಸಂಘದ ಅಧ್ಯಕ್ಷ ಭೀಮಾಶಂಕರ ಪಾಟೀಲ್ ಆರೋಪಿಸಿದರು. ಸೇಡಂನ ಮುದ್ರಣ ಉದ್ಯಮಿ ಉಮಾಪತಿ ಮಾತಾಡಿ, ಸೇಡಂ ವಿಭಾಗ ಕಚೇರಿಯಲ್ಲಿ ಹೇಳುವವರು, ಕೇಳುವವರಿಲ್ಲ ಎಂದು ದೂರಿದರು. ಮೋದಿ ೨೯ ರೂ. ಕೆಜಿ ಅಕ್ಕಿ ಕೊಡ್ತೀನಿ ಅಂತಿದ್ದಾರೆ. ನೀವು ವಿದ್ಯುತ್ ದರ ಹೆಚ್ಚಿಸಿದರೆ ಅಕ್ಕಿ ಮಿಲ್‌ಗಳು ಬಂದ್ ಬೀಳ್ತವೆ. ವ್ಯಾಟ್ ಪ್ರಕಾರ ಕಡಿಮೆ ಮಾಡಿ ಎಂದು ರಾಯಚೂರಿನ ಜಂಬಣ್ಣ ಕೋರಿದರು.

    ಪ್ರತಿ ಬಾರಿ ದರ ಪರಿಷ್ಕರಣೆ ಎಂದರೆ ಹೆಚ್ಚಳವೇ ಆಗುತ್ತದೆ. ಒಮ್ಮೆಯಾದರೂ ಮಾನವೀಯ ದೃಷ್ಟಿಯಿಂದ ಕಮ್ಮಿ ಮಾಡಿ ನೋಡಿ. ಎಲ್ಲ ಗ್ರಾಹಕರು ತಾನಾಗಿಯೇ ಬಂದು ಬಿಲ್ ಕಟ್ತಾರೆ. ಹೆಚ್ಚಳ ಬೇಡ, ಯಥಾಸ್ಥಿತಿ ಮುಂದುವರಿಸಿ. ಕಲ್ಯಾಣ ಕರ್ನಾಟಕ ಶಾಲೆಗಳ ಮೇಲೆ ವಿದ್ಯುತ್ ತಂತಿ ಹಾದು ಹೋಗಿದ್ದರಿಂದ ಪ್ರಸಕ್ತ ವರ್ಷ ಇಬ್ಬರು ಮಕ್ಕಳು ಅಸುನೀಗಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ. ಅನಧಿಕೃತ ಮೀಟರ್‌ಗೆ ಕಡಿವಾಣ ಹಾಕಿ, ಜೆಸ್ಕಾಂ ಜಾಗೃತ ದಳ ಕುಂಭಕರ್ಣ ನಿದ್ರೆಯಲ್ಲಿದೆ.
    | ಬಿ.ಎಂ.ರಾವೂರ ವಿದ್ಯುತ್ ಬಳಕೆದಾರರ ಸಂಘ

    ೧೦ ನಿಮಿಷಕ್ಕೊಮ್ಮೆ ಕರೆಂಟ್ ಕಟ್: ವಿಜಯನಗರ ಜಿಲ್ಲೆ ಹೊಸಪೇಟೆಯ ಟ್ಯಾಮ್ ರಸ್ತೆ ಕೈಗಾರಿಕಾ ಪ್ರದೇಶದಲ್ಲಿ ೧೦ ನಿಮಿಷಕ್ಕೊಮ್ಮೆ ವಿದ್ಯುತ್ ತೆಗೆಯುವುದರಿಂದ ಭಾರಿ ತೊಂದರೆ ಆಗುತ್ತಿದೆ. ಜೆಸ್ಕಾಂ ಎಂಡಿ ಕಲಬುರಗಿಗೆ ಸೀಮಿತ ಆಗೋದು ಬಿಟ್ಟು ವ್ಯಾಪ್ತಿಯ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಗ್ರಾಹಕರ ಸಭೆ ನಡೆಸಿ ದೂರು-ದುಮ್ಮಾನ ಆಲಿಸಿ ಬಗೆಹರಿಸಬೇಕು ಎಂದು ವಿಜಯನಗರ ಜಿಲ್ಲೆ ವಾಣಿಜ್ಯೋದ್ಯಮ ಸಂಸ್ಥೆಯ ಅಶ್ವಿನ್ ಕೊತಂಬರ್ ಮನವಿ ಮಾಡಿದರು.

    ಕನಿಷ್ಠ ಮಾಹಿತಿ ಇಲ್ಲದ ಅಧಿಕಾರಿಗಳು: ವಿದ್ಯುತ್ ದರ ಪರಿಷ್ಕರಣೆ ಅಭಿಪ್ರಾಯ ಸಭೆಗೆ ಆಗಮಿಸಿದ ಜೆಸ್ಕಾಂ ಅಧಿಕಾರಿಗಳು ಗ್ರಾಹಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ತಡವರಿಸಿದರು. ಒಂದೇ ಒಂದು ಕನಿಷ್ಠ ಮಾಹಿತಿ ಇಲ್ಲದೆ ಬಂದ ಅಧಿಕಾರಿಗಳು ಏನೇ ಪ್ರಶ್ನಿಸಿದರೂ ಮಾಹಿತಿ ತರ್ತೇವೆ, ತಿಳಿಸುತ್ತೇವೆ ಎಂದೇ ಹೇಳಿದರು. ಜೆಸ್ಕಾಂ ಎಂಡಿ, ಸುಪರಿಂಟೆಂಡ್ ಇಂಜಿನಿಯರ್ ಸೇರಿ ಹಿರಿಯ ಅಧಿಕಾರಿಗಳಿದ್ದರೂ ಸಭೆ ಮುಗಿಯುವವರೆಗೆ ಮಾಹಿತಿ ಕೊಡದಿರುವುದು ವಿಚಿತ್ರ.

    ಸಬ್ಸಿಡಿ ಬಾಕಿ ರು.೩,೨೨೨ ಕೋಟಿ: ವಿದ್ಯುತ್ ಅವಘಡಗಳಲ್ಲಿ ಜೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಲ್ಲಿ ೧೦ ವರ್ಷದಲ್ಲಿ ೯೬೬ ಜನ, ೨,೧೬೫ ಜಾನುವಾರು ಮೃತಪಟ್ಟಿವೆ. ಆದರೆ ಅವಘಡ ತಡೆಗೆ ೧೮೧.೨೬ ಕೋಟಿ ಖರ್ಚು ಮಾಡಿದ್ದರೂ ನಿಂತಿಲ್ಲ ಎಂದು ಹೈದರಾಬಾದ್ ಕರ್ನಾಟಕ ಪರಿಸರ ಪ್ರಜ್ಞೆ ಮತ್ತು ಸಂರಕ್ಷಣೆ ಸಂಘದ ದೀಪಕ್ ಗಾಲಾ ಹೇಳಿದರು. ಅಧಿಕಾರಿಗಳು ಸಬ್ಸಿಡಿ ಬಾಕಿ, ಬಡ್ಡಿ ಸಂಗ್ರಹಿಸುತ್ತಿಲ್ಲ. ವಿವಿಧ ನಿಗಮಗಳಿಂದ ಇಂಧನ ಸಬ್ಸಿಡಿ ಮತ್ತು ಗಂಗಾಕಲ್ಯಾಣ ಬಾಕಿ ಸಂಗ್ರಹಿಸುವ ಬದಲು ವಿದ್ಯುತ್ ಬಿಲ್‌ಗಳನ್ನು ಪ್ರಾಮಾಣಿಕವಾಗಿ ಪಾವತಿಸುವ ಗ್ರಾಹಕರ ಮೇಲೆ ಹೊರಿಸಲಾಗುತ್ತಿದೆ. ೨೦೦೭ರಿಂದ ೨೦೨೩ರ ಅಂತ್ಯಕ್ಕೆ ಸರ್ಕಾರದ ೩,೨೨೨ ಕೋಟಿ ರೂ. ಸಬ್ಸಿಡಿ ಬಾಕಿ ಇದೆ. ಇದರಲ್ಲಿ ೧,೮೨೧ ಕೋಟಿ ರೂ. ಸಬ್ಸಿಡಿ ಬಡ್ಡಿ ಎಂದು ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಪಿ.ರವಿಕುಮಾರ, ಸರ್ಕಾರದ ಬಾಕಿ ಮೊತ್ತ ನಿಯಮಿತ ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts