More

    ವಿಧಾನ ಪರಿಷತ್ ಚುನಾವಣೆ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಹೆಬ್ರಿಬೀಡು ನರೇಶ್ಚಂದ್ ಹೆಗ್ಡೆ ಸ್ಪರ್ಧೆ

    ಮಂಗಳೂರು: ವಿಧಾನ ಪರಿಷತ್ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಜೂ.3ರಂದು ನಡೆಯಲಿದ್ದು ಓರ್ವ ಹೃದ್ರೋಗ ತಜ್ಞನಾಗಿ ಮತ್ತು ಮೆಡಿಕಲ್ ಕಾಲೇಜ್ ಶಿಕ್ಷಕನಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಹೊಂದಿದ್ದೇನೆ ಎಂದು ಹೇಬ್ರಿಬೀಡು ಡಾ. ನರೇಶ್ಚಂದ್ ಹೆಗ್ಡೆ ಹೇಳಿದರು.


    ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಕರ ಜೊತೆಗೆ ಈಗಾಗಲೇ ಚರ್ಚೆ ಮಾಡಿದ್ದು ಅವರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಹುಡುಕಲು ಮುಂದಾಗಿದ್ದೇನೆ. ಮೇ 16ರಂದು ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದೇನೆ. ಸುಶಿಕ್ಷಿತ ಮತದಾರರು ಇರುವ ಕಾರಣ ಎಲ್ಲರ ವಿಶ್ವಾಸ ಗಳಿಸಿಕೊಂಡು ಸೇವೆ ಸಲ್ಲಿಸಲು ಆಸಕ್ತಿ ಹೊಂದಿದ್ದೇನೆ ಎಂದರು.


    ನೈರುತ್ಯ ಶಿಕ್ಷಕರ ಕ್ಷೇತ್ರ ರಚನೆಯಾದ ಬಳಿಕ ಎಲ್ಲೋ ಒಂದೆರಡು ಸಂದರ್ಭ ಹೊರತುಪಡಿಸಿ ರಾಜಕಾರಣಿಗಳು, ಶಿಕ್ಷಕರೇ ಅಲ್ಲದವರು ಚುನಾಯಿತರಾಗಿರುವುದು ವಿಪರ್ಯಾಸವಾಗಿದೆ. ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಸುಮಾರು 22 ಸಾವಿರಕ್ಕೂ ಅಧಿಕ ಮಂದಿ ಶಿಕ್ಷಕರು ಮತದಾರರಾಗಿ ನೋಂದಾಯಿಸಿಕೊಂಡಿದ್ದಾರೆ. ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ ಜಿಲ್ಲೆಯ ನ್ಯಾಮತಿ, ಹೊನ್ನಾಳಿ, ಚನ್ನಗಿರಿ ತಾಲೂಕುಗಳು ವ್ಯಾಪ್ತಿಗೆ ಒಳಪಟ್ಟಿದ್ದು ಶಿಕ್ಷಕರ ಹಿತದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಅವರು ಹೇಳಿದರು.


    ಕರಾವಳಿ ಮತ್ತು ಮಲೆನಾಡಿನ ಸಂಗಮ ಸ್ಥಾನವಾದ ನಿಸರ್ಗ ರಮಣೀಯ ಹೆಬ್ರಿಯ ಪ್ರತಿಷ್ಠಿತ ಹೆಬ್ರಿಬೀಡು ಮನೆತನದಲ್ಲಿ ಜನಿಸಿರುವುದು ನನ್ನ ಸೌಭಾಗ್ಯ. ಉಡುಪಿ, ಮಣಿಪಾಲ ಮತ್ತು ಮಂಗಳೂರಿನಲ್ಲಿ ವಿದ್ಯಾಭ್ಯಾಸ ಪಡೆದು ಎಂ.ಬಿ.ಬಿ.ಎಸ್, ಎಂ.ಎಸ್ (ಸರ್ಜರಿ) ಮತ್ತು ಎಂ.ಸಿ.ಎಚ್ (ಸಿ.ಟಿ. ವಿ.ಎಸ್ ) ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದಿರುವ ನಾನು ಈ ವರೆಗೆ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮಣಿಪಾಲ, ಮೆಲಕಾ-ಮಣಿಪಾಲ ಮೆಡಿಕಲ್ ಕಾಲೇಜು ಮಲೇಷ್ಯಾ, ಶ್ರೀ ಸತ್ಯಸಾಯಿ ಉನ್ನತ ವೈದ್ಯಕೀಯ ಸಂಸ್ಥೆ, ಬೆಂಗಳೂರು, ಶ್ರೀ ಗೋಕುಲಂ ಸ್ಪೆಷಾಲಿಟಿ ಆಸ್ಪತ್ರೆ ಸೇಲಂ _ತಮಿಳ್ನಾಡು, ಶ್ರೀ ರಾಜರಾಜೇಶ್ವರಿ ವೈದ್ಯಕೀಯ ಶಿಕ್ಷಣ ಸಂಸ್ಥೆ ಬೆಂಗಳೂರು ಮೊದಲಾದ ಪ್ರತಿಷ್ಠಿತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಸಹಾಯಕ ಪ್ರಾದ್ಯಾಪಕ ,ಪ್ರಾದ್ಯಾಪಕ, ಸಮಾಲೋಚಕ ಮತ್ತು ಹಿರಿಯ ಕುಲಸಚಿವ ಮೊದಲಾದ ಶೈಕ್ಷಣಿಕ ಹುದ್ದೆಗಳನ್ನು ನಿಭಾಯಿಸಿದ್ದೇನೆ.


    ನನ್ನ ತಂದೆ ಡಾ.ಮನೋರಂಜನ್ ದಾಸ್ ಹೆಗ್ಡೆಯವರು ಸರಕಾರಿ ವೈದ್ಯಾಧಿಕಾರಿಗಳಾಗಿ ತನ್ನ ಮಾನವೀಯ ಸೇವೆಯಿಂದ ಉಡುಪಿ ಜಿಲ್ಲೆಯಾದ್ಯಂತ ಚಿರಪರಿಚಿತರು. ನನ್ನ ತಾಯಿ ಸರೋಜಾ.ಎಂ ಹೆಗ್ಡೆಯವರು ಪದವೀಧರೆಯಾಗಿದ್ದು, ಆದರ್ಶ ಗ್ರಹಿಣಿಯಾಗಿ ಮಹಿಳಾಪರ ಸಂಘಟನೆಗಳಲ್ಲಿ ತನ್ನನ್ನು ತೊಡಗಿಸಿಕೊಂಡವರು. ನನ್ನ ಧರ್ಮಪತ್ನಿ ಡಾ. ಜ್ಯೋತಿರಾವ್ ಕೂಡಾ ವೃತ್ತಿಯಿಂದ ವೈದ್ಯೆಯಾಗಿದ್ದು ಫಾರ್ಮಕಾಲಜಿ ವಿಭಾಗದಲ್ಲಿ ವೈದ್ಯ ವಿದ್ಯಾರ್ಥಿಗಳಿಗೆ ಶಿಕ್ಷಣ,ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು.


    ಓರ್ವ ಹ್ರದ್ರೋಗ ಶಸ್ತ್ರಚಿಕಿತ್ಸಾ ತಜ್ಞನಾಗಿ ಹ್ರದ್ರೋಗ ಮತ್ತು ತತ್ಸಂಬಂಧೀ ವಿಷಯಗಳ ಒಟ್ಟು ಇಪ್ಪತ್ತು ವಿಧದ ಬಹು ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ಸಾವಿರಾರು ಸಂಖ್ಯೆಯಲ್ಲಿ ಕೈಗೊಂಡು ,ಬಹು ದೊಡ್ಡ ಸಂಖ್ಯೆಯ ರೋಗಿಗಳಿಗೆ ಜೀವದಾನ ಮಾಡಿರುವ ವಿನೀತ ಮತ್ತು ವಿನಮ್ರ ಭಾವ ನನಗಿದೆ .ಅನೇಕ ಸಂಶೋಧನಾತ್ಮಕ ಹೃದ್ರೋಗ ಸಂಬಂಧೀ ಪ್ರಬಂಧಗಳನ್ನು ರಾಷ್ಟೀಯ -ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮಂಡಿಸಿರುತ್ತೇನೆ .ಐವತ್ತಕ್ಕೂ ಹೆಚ್ಚಿನ ವೈದ್ಯಕೀಯ ಸಮ್ಮೇಳನಗಳು ಮತ್ತು ಕಾರ್ಯಾಗಾರಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುತ್ತೇನೆ.ನಾನು ಸಿದ್ಧಪಡಿಸಿದ ಹೃದ್ರೋಗಕ್ಕೆ ಸಂಬಂಧಿಸಿದ ವಿಶೇಷ ಸಂಶೋಧನಾ ವರದಿ ದೇಶದ ಪ್ರಮುಖ ವೈದ್ಯಕೀಯ ಜರ್ನಲ್ ಗಳಲ್ಲಿ ಪ್ರಕಟವಾಗಿದೆ.


    ಬಹುಬೇಡಿಕೆಯ ಬಿ.ಎಸ್ಸಿ ಮತ್ತು ಎಂ.ಎಸ್ಸಿ (ಪರ್ಪ್ಯೂಷನ್ ಟೆಕ್ನಾಲಜಿ )ಕೋರ್ಸ್ ಗಳಿಗೆ ಸಂಪೂರ್ಣ ಪಠ್ಯಕ್ರಮ ಮತ್ತು ಶಿಷ್ಟಾಚಾರ ನಿಯಮಗಳನ್ನು ರಚಿಸುವ ಮೂಲಕ ಉನ್ನತ ಶಿಕ್ಷಣದ ಪಠ್ಯ ರಚನಾ ಕ್ಷೇತ್ರದಲ್ಲೂ ಕೈಯಾಡಿಸಿದ್ದೇನೆ.
    ನಾನು ವೈದ್ಯಕೀಯ ವಿದ್ಯಾರ್ಥಿಯಾಗಿರುವಾಗಲೇ ಪ್ರತಿಷ್ಠಿತ ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಗೆ ವಿದ್ಯಾರ್ಥಿ ಪ್ರತಿನಿಧಿಯಾಗಿ ಅವಿರೋಧವಾಗಿ ಆಯ್ಕೆಯಾಗುವ ಸದಾವಕಾಶ ನನಗೆ ಲಭಿಸಿತ್ತು. ಮಣಿಪಾಲ ಕೆ.ಎಂ .ಸಿ ಯ ಇಂಟರ್ನ್ ಡಾಕ್ಟರ್ಸ್ ಆಸೋಸಿಯೇಷನ್ನ ಅಧ್ಯಕ್ಷನಾಗಿಯೂ ಸೇವೆ ಸಲ್ಲಿಸಿದ್ದೇನೆ . ಗಣನೀಯ ಸಂಖ್ಯೆಯ ಶ್ರೀ ಸಾಮಾನ್ಯರಿಗೆ ಉಚಿತ ಹೃದ್ರೋಗ ಪರೀಕ್ಷೆ ಮಾಡಿ ಸೂಕ್ತ ಚಿಕಿತ್ಸೆಗೆ ಮಾರ್ಗದರ್ಶನ ನೀಡಿರುತ್ತೇನೆ .
    ಇಂತಹ ವೈದ್ಯಕೀಯ ಮತ್ತು ಶೈಕ್ಷಣಿಕ ಹಿನ್ನೆಲೆ ಹೊಂದಿರುವ ನಾನು ಇದೀಗ ಶಿಕ್ಷಣ ರಂಗದ ಸೇವಾಕಾಂಕ್ಷಿಯಾಗಿ ಈ ಬಾರಿಯ ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ.


    ಪ್ರಾಥಮಿಕ ಶಾಲಾ ಹಂತದಿಂದ ವೃತ್ತಿ ಶಿಕ್ಷಣ ಕಾಲೇಜುಗಳವರೆಗಿನ ವಿವಿಧ ಹಂತಗಳ ಶೈಕ್ಷಣಿಕ ಸಂಸ್ಥೆಗಳ , ಭಾಷಾ ಮಾಧ್ಯಮದ, ಬೋಧಕ ವೃಂದದ,ಬೋಧಕೇತರರ,ಸರಕಾರಿ,ಅನುದಾನಿತ ಮತ್ತು ಅನುದಾನರಹಿತ ವಿದ್ಯಾಸಂಸ್ಥೆಗಳವರ ,ಆಡಳಿತ ಮಂಡಳಿಗಳವರ ಬಹುಮುಖಿ ಸಮಸ್ಯೆಗಳನ್ನು ಆಯಾ ವರ್ಗದಲ್ಲಿ ತಜ್ಞರೆನಿಸಿದವರಿಂದ ಸಲಹೆ ,ಮಾರ್ಗದರ್ಶನ ಪಡೆದು ಶಾಶ್ವತ ಪರಿಹಾರ ಕ್ರಮಗಳನ್ನು ರೂಪಿಸಲು ಕಾರ್ಯೋನ್ಮುಖವಾಗುವ ಬದ್ಧತೆ ಖಂಡಿತವಾಗಿಯೂ ನನಗಿದೆ ಎಂದವರು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts