More

    ಸಿಐ ಕಚೇರಿಗೆ ವರ್ಲಿ ಮೆರುಗು

    ಗಂಗಾಧರ ಕಲ್ಲಪಳ್ಳಿ ಸುಳ್ಯ
    ಕಚೇರಿ ಸುತ್ತಲೂ ಹಸಿರು ಹೊದಿಕೆ, ಅಲ್ಲಲ್ಲಿ ನೆರಳು ಸೂಸುವ ಮರ ಗಿಡಗಳು, ಮರದಲ್ಲಿ ಹಕ್ಕಿಗಳ ಚಿಲಿಪಿಲಿ ನಾದ, ಸುವಾಸನೆ ಬೀರುವ ಔಷಧೀಯ ಗಿಡಗಳು, ಕಚೇರಿ ವರಾಂಡಕ್ಕೆ ಬಂದರೆ ಮನ ಸೆಳೆಯುವ ವರ್ಲಿ ವರ್ಣ ವೈಭವ. ಇದು ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಯ ಹೊಸ ಲುಕ್.

    ಸುಂದರವಾಗಿ ಅಲಂಕರಿಸಿದ ಆರ್ಟ್ ಗ್ಯಾಲರಿಯಂತೆ ಭಾಸವಾಗುವ ವೃತ್ತ ನಿರೀಕ್ಷಕರ ಕಚೇರಿ ನವೀಕರಣಗೊಂಡು ನಳನಳಿಸುತ್ತಿದೆ. ಸುಳ್ಯ ವಿವೇಕಾನಂದ ವೃತ್ತದ ಬಳಿಯ ವೃತ್ತ ನಿರೀಕ್ಷಕರ ಕಚೇರಿ 2003ರಲ್ಲಿ ನಿರ್ಮಾಣಗೊಂಡಿತ್ತು. ಈಗ ನವೀಕರಣಗೊಂಡು ಮನ ಸೆಳೆಯುತ್ತಿದೆ.
    ಕಚೇರಿ ಕಟ್ಟಡಕ್ಕೆ ಬಣ್ಣ ಬಳಿದು ಸುಂದರಗೊಳಿಸಲಾಗಿದೆ. ಗೋಡೆ ಮತ್ತು ಕಂಬಗಳಲ್ಲಿ ಅಲ್ಲಲ್ಲಿ ಆಕರ್ಷಕ ವರ್ಲಿ ಚಿತ್ರಗಳನ್ನು ಬಿಡಿಸಲಾಗಿದೆ. ಕಚೇರಿಯ ಆವರಣ ಗೋಡೆಗೆ ಕೆಂಪು ಬಣ್ಣ ಬಳಿಯಲಾಗಿದ್ದು ಅದರ ಮೇಲೆ ಬಿಳಿ ಬಣ್ಣದ ವರ್ಲಿ ಚಿತ್ರಗಳು ಅರಳಿ ನಿಂತಿದೆ. ವರ್ಲಿ ಚಿತ್ರದ ಮಧ್ಯೆ ‘ಕಾನೂನನ್ನು ಗೌರವಿಸೋಣ’, ‘ಕರೊನಾ ಭಯ ಬೇಡ ಎಚ್ಚರವಿರಲಿ’ ಇತ್ಯಾದಿ ಸಂದೇಶಗಳನ್ನೂ ಬರೆಯಲಾಗಿದೆ. ಕಚೇರಿ ಹಿಂಭಾಗದಲ್ಲಿ ಆವರಣ ಗೋಡೆ ನಿರ್ಮಾಣ, ಶೀಟ್ ಅಳವಡಿಕೆ ಕಾಮಗಾರಿ ನಡೆಸಲಾಗಿದೆ. ಎಲ್ಲೆಡೆ ಬಣ್ಣ ಬಳಿದು ಕಚೇರಿ ವರ್ಣಮಯವಾಗಿದೆ.

    ಕಚೇರಿ ಮುಂಭಾಗ ಇಂಟರ್‌ಲಾಕ್ ಅಳವಡಿಸಿ ಇಕ್ಕೆಲಗಳಲ್ಲಿ ಉದ್ಯಾನ ನಿರ್ಮಿಸಲಾಗಿದೆ. ಹಸಿರು ಹುಲ್ಲು ಹಾಸಲಾಗಿದೆ. ಅಲ್ಲಲ್ಲಿ ಮರಗಳಿಗೆ ಸುತ್ತಲೂ ಕಟ್ಟೆ ನಿರ್ಮಿಸಿ ಬಣ್ಣ ಬಳಿಯಲಾಗಿದೆ. ಮಾವು, ಹಲಸು, ಸೇರಿದಂತೆ ಹಲವು ಹಣ್ಣಿನ ಮರಗಳನ್ನು ಬೆಳೆಸಲಾಗಿದೆ. ಈ ಮರಗಳಲ್ಲಿ ಹಲವು ಪಕ್ಷಿಗಳು ಮನೆ ಮಾಡಿದ್ದು ಚಿಲಿಪಿಲಿಗುಟ್ಟುತ್ತಿವೆ. ಅಲ್ಲದೆ ಹಲವು ವಿಧದ ಔಷಧ ಗಿಡಗಳನ್ನೂ ಇಲ್ಲಿ ಬೆಳೆಸಲಾಗಿದೆ. ಅಂಗಳದಲ್ಲಿ ಬ್ಯಾಡ್ಮಿಂಟನ್ ಕೋರ್ಟ್ ಹಾಕಲಾಗಿದೆ. ಕಚೇರಿ ಒಳಭಾಗವನ್ನೂ ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ. ಕಚೇರಿ ಕಡತಗಳನ್ನು ಜೋಡಿಸಲು ಗೋಡೆಯಲ್ಲಿ ಮರದ ಕಪಾಟುಗಳನ್ನು ಅಳವಡಿಸಲಾಗಿದೆ.

    ನೆಲಕ್ಕೆ ಟೈಲ್ಸ್ ಅಳವಡಿಸಿ ಹೊಸ ಪೀಠೋಪಕರಣಗಳನ್ನು ಜೋಡಿಸಲಾಗಿದೆ. ಒಟ್ಟಿನಲ್ಲಿ ಕಚೇರಿಯ ಒಳಭಾಗ ಮತ್ತು ಹೊರ ಭಾಗವನ್ನು ಅಚ್ಚುಕಟ್ಟಾಗಿ ನವೀಕರಿಸಿ ಕಲಾತ್ಮಕ ಸ್ಪರ್ಶ ನೀಡಲಾಗಿದೆ. ಕಚೇರಿಯನ್ನು ಸುಂದರಗೊಳಿಸಿ ಉತ್ತಮ ವಾತಾವರಣ ರೂಪಿಸುವುದರ ಜತೆಗೆ ಪೊಲೀಸ್ ಇಲಾಖಾ ಕಚೇರಿಯನ್ನು ಜನಸ್ನೇಹಿಯಾಗಿ ರೂಪಿಸುವುದು ಉದ್ದೇಶ.

    ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಯು ಜನಸ್ನೇಹಿ ಆಗಿರಬೇಕು ಮತ್ತು ಇಲ್ಲಿ ಉತ್ತಮ ವಾತಾವರಣ ಸೃಷ್ಟಿಸಬೇಕು ಎಂಬ ಕಲ್ಪನೆಯಲ್ಲಿ ಕಚೇರಿಯನ್ನು ನವೀಕರಣ ಮಾಡಿ ವರ್ಲಿ ಚಿತ್ರದ ಮೂಲಕ ಕಲಾತ್ಮಕ ಸ್ಪರ್ಶ ನೀಡಲಾಗಿದೆ. ಜತೆಗೆ ಕಚೇರಿ ಮತ್ತು ಪರಿಸರವನ್ನು ಸುಂದರಗೊಳಿಸಲಾಗಿದೆ. ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಪೊಲೀಸ್ ಇಲಾಖೆ ಸದಾ ಸಿದ್ಧವಾಗಿದೆ.
    -ನವೀನ್‌ಚಂದ್ರ ಜೋಗಿ, ವೃತ್ತ ನಿರೀಕ್ಷಕರು, ಸುಳ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts