More

    ವೆಂಕಟೇಶ್ವರಸ್ವಾಮಿ ದೇಗುಲ ನಿರ್ಮಾಣಕ್ಕೆ ಟಿಟಿಡಿಗೆ ಬೆಟ್ಟವೇ ಬೇಕು

    ರಾಮನಗರ: ಜಿಲ್ಲೆಯಲ್ಲಿ ವೆಂಕಟೇಶ್ವರಸ್ವಾಮಿ ದೇವಾಲಯ ನಿರ್ಮಾಣಕ್ಕೆ ಜಾಗ ಹುಡುಕಿಕೊಡಿ ಎಂದು ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ಜಿಲ್ಲಾಡಳಿತಕ್ಕೆ ಮತ್ತೊಮ್ಮೆ ಕೋರಿದೆ.

    ಮೈತ್ರಿ ಸರ್ಕಾರದ ಅವಧಿಯಲ್ಲಿ ಜಿಲ್ಲೆ ಯಲ್ಲಿ ದೇವಾಲಯದ ನಿರ‌್ಮಾಣ ಮಾಡುವ ಸಂಬಂಧ ಅಂದಿನ ಸಿಎಂ ಎಚ್.ಡಿ. ಕುಮಾರಸ್ವಾಮಿ ಜತೆ ಟಿಟಿಡಿ ಅಧಿಕಾರಿಗಳು ಮಾತ ನಾಡಿದ್ದರು. ಇದಕ್ಕೆ ಪೂರಕವಾಗಿ ಜಾಗ ಹುಡುಕುವಂತೆ ಕುಮಾರಸ್ವಾಮಿ ಸೂಚಿಸಿದ್ದರು. ಆದರೆ, ಟಿಟಿಡಿ ಬಯಸಿದಂತೆ ಜಾಗ ಲಭ್ಯವಿಲ್ಲದ ಕಾರಣ ಯೋಜನೆ ನನೆಗುದಿದೆ ಬೀಳುವ ಹಂತಕ್ಕೆ ಬಂದಿತ್ತು. ಆದರೆ, ಎರಡು ದಿನಗಳ ಹಿಂದೆ ಮತ್ತೊಮ್ಮೆ ಜಿಲ್ಲಾಡಳಿತವನ್ನು ಸಂಪರ್ಕ ಮಾಡಿರುವ ಟಿಟಿಡಿ, ರಾಮನಗರದಲ್ಲಿ ಜಾಗ ಹುಡುಕಿಕೊಡಿ ಎಂದು ಕೇಳಿದೆ.

    ಬೆಟ್ಟವೇ ಬೇಕಂತೆ: ಬೆಂಗಳೂರು-ಮೈಸೂರು ಹಾಗೂ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಒಂದು ಕಡೆ 15-25 ಎಕರೆ ಜಮೀನು ನೀಡುವಂತೆ ವರ್ಷದ ಹಿಂದೆಯೇ ಟಿಟಿಡಿ ಆಡಳಿತ ಮಂಡಳಿ ಮನವಿ ಸಲ್ಲಿಸಿತ್ತು. ಹೀಗಾಗಿ ಈ ಮೊದಲು ಕೂಟಗಲ್, ಬಿಡದಿ ಸೇರಿ ಮೂರು ಕಡೆ ಕಂದಾಯ ಇಲಾಖೆ ಟಿಟಿಡಿ ಆಡಳಿತ ಮಂಡಳಿಗೆ ಜಾಗ ತೋರಿಸಿತ್ತು. ಆದರೆ, ಹೆದ್ದಾರಿ ಪಕ್ಕದಲ್ಲಿಯೇ ಜಾಗಬೇಕು ಎನ್ನುವ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳದ ಟಿಟಿಡಿ, ಜಿಲ್ಲಾಡಳಿತ ತೋರಿಸಿದ್ದ ಜಮೀನು ನಿರಾಕರಿಸಿತ್ತು.

    ಆದರೆ, ಈಗ ಮತ್ತೊಮ್ಮೆ ಬೇಡಿಕೆ ಇಟ್ಟಿರುವ ಟಿಟಿಡಿ, ದೇವಸ್ಥಾನ ನಿರ್ಮಾಣಕ್ಕೆ ಬೆಟ್ಟವಿರುವ ಜಾಗವನ್ನು ಗುರುತಿಸಿಕೊಡಿ ಎಂದು ಕೋರಿದೆ. ದೇವಾಲಯ ನಿರ್ಮಾಣಕ್ಕೆ ಬೆಟ್ಟದ ಜಾಗವೇ ಬೇಕಿದ್ದು, ಬೆಟ್ಟದೊಂದಿಗೆ ಸುಮಾರು 10-12 ಎಕರೆ ಸಮತಟ್ಟಾದ ಜಾಗವೂ ಬೇಕು ಎನ್ನುವ ಕೋರಿಕೆ ಇಟ್ಟಿದ್ದು, ಇದೀಗ ಜಿಲ್ಲಾಡಳಿತದ ಮೇಲೆ ಹೊಸ ಹೊರೆ ಬಿದ್ದಂತಾಗಿದೆ.

    ದೇಶದ 4ನೇ ದೇವಾಲಯ: ರಾಮನಗರದಲ್ಲಿ ದೇವಾಲಯ ನಿರ್ಮಾಣಗೊಂಡರೆ, ರಾಜ್ಯದಲ್ಲಿ ಮೊದಲ ಹಾಗೂ ದೇಶದ 4ನೇ ತಿರುಪತಿ ದೇವಾಲಯ ಇದಾಗಲಿದೆ. ಪುಣೆಯಲ್ಲಿ ಈಗಾಗಲೇ ದೇವಾಲಯ ಇದೆ. ಈ ಮೊದಲು ರಾಮನಗರ ವಿಧಾನಸಭೆ ಉಪ ಚುನಾವಣೆ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭೂಮಿ ಹುಡುಕಾಟ ತೆರೆಗೆ ಸರಿದಿತ್ತು. ಮತ್ತೆ ಕೆಲ ದಿನಗಳ ಹುಡುಕಾಟ ಆರಂಭಿಸಿದ್ದ ಕಂದಾಯ ಇಲಾಖೆ, ಸಮ್ಮಿಶ್ರ ಸರ್ಕಾರದ ಪತನದ ಬಳಿಕ ಹುಡುಕಾಟಕ್ಕೆ ಮತ್ತೆ ಪೂರ್ಣ ವಿರಾಮವಿಟ್ಟಿದ್ದು, ಇದೀಗ ಕಪಾಲ ಬೆಟ್ಟದ ವಿವಾದ ಮುನ್ನೆಲೆಗೆ ಬಂದಿರುವ ಸನ್ನಿವೇಶದಲ್ಲಿ ಹೊಸ ಜವಾಬ್ದಾರಿ ಜಿಲ್ಲಾಡಳಿತದ ಮೇಲೆ ಬಿದ್ದಿದೆ.

    ಈಗ ಮತ್ತೊಮ್ಮೆ ವೆಂಕಟೇಶ್ವರ ಸ್ವಾಮಿ ದೇವಾಲಯ ನಿರ್ಮಾಣಕ್ಕೆ ಜಾಗ ಹುಡುಕಿಕೊಡುವಂತೆ ಟಿಟಿಡಿ ಕೋರಿದೆ. ಬೆಟ್ಟ ಪ್ರದೇಶವಿರುವ ಜಾಗವೇ ಬೇಕು ಎನ್ನುವ ಬೇಡಿಕೆ ಇಟ್ಟಿದ್ದು, ಈ ಸಂಬಂಧ ಕ್ರಮ ಕೈಗೊಳ್ಳ ಲಾಗುವುದು.
    ಎಂ.ಎಸ್.ಅರ್ಚನಾ, ಜಿಲ್ಲಾಧಿಕಾರಿ, ರಾಮನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts