More

    ಕೆಪಿಟಿ ಬಳಿ ನಿರ್ಮಾಣಗೊಳ್ಳಲಿದೆ 40 ಕೋಟಿ ರೂ. ವೆಚ್ಚದ ವೆಹಿಕ್ಯುಲರ್ ಓವರ್‌ಪಾಸ್!

    ಮಂಗಳೂರು: ರಾಷ್ಟ್ರೀಯ ಹೆದ್ದಾರಿಯ ಪ್ರಮುಖ ಸ್ಥಳಗಳಲ್ಲಿ ಟ್ರಾಫಿಕ್ ಸಮಸ್ಯೆ ಹೋಗಲಾಡಿಸಲು ಫ್ಲೈಓವರ್, ಅಂಡರ್‌ಪಾಸ್/ಓವರ್‌ಪಾಸ್ ನಿರ್ಮಾಣಕ್ಕೆ ಎನ್‌ಎಚ್‌ಎಐ ಸಮಗ್ರ ಯೋಜನೆ ರೂಪಿಸಿದ್ದು, ಮೊದಲ ಹಂತವಾಗಿ ಕೆಪಿಟಿ ಜಂಕ್ಷನ್ ಬಳಿ ವೆಹಿಕ್ಯುಲರ್ ಓವರ್‌ಪಾಸ್ ಯೋಜನೆಗೆ ಸಿದ್ಧತೆ ನಡೆದಿದೆ.

    40 ಕೋಟಿ ರೂ. ವೆಚ್ಚದ ಕೆಪಿಟಿ ಓವರ್‌ಪಾಸ್ ಕಾಮಗಾರಿ ನಡೆಯಲಿದ್ದು, ಹುಬ್ಬಳ್ಳಿಯ ಟ್ರಿನಿಟಿ ಗ್ರೂಪ್ ಸಂಸ್ಥೆ ನಿರ್ಮಾಣ ಗುತ್ತಿಗೆ ಪಡೆದಿದೆ. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯ 3 ಫ್ಲೈಓವರ್‌ಗಳು ಅವೈಜ್ಞಾನಿಕವಾಗಿದ್ದು, ಈ ಬಗ್ಗೆ ಸಂಸದರ ಮೂಲಕ ಕೇಂದ್ರ ಹೆದ್ದಾರಿ ಸಚಿವರಿಗೆ ಮಾಹಿತಿ ನೀಡಿ ಹೆದ್ದಾರಿ ಸಂಚಾರ ಸಮರ್ಪಕಗೊಳಿಸುವಂತೆ ಮನವಿ ಮಾಡಲಾತ್ತು. ರಾಷ್ಟ್ರೀಯ ಹೆದ್ದಾರಿಯ ಪ್ರಮುಖ ಸ್ಥಳಗಳಲ್ಲಿ ಟ್ರಾಫಿಕ್ ಸಮಸ್ಯೆ ಹೋಗಲಾಡಿಸಲು ಫ್ಲೈಓವರ್, ಅಂಡರ್‌ಪಾಸ್ ನಿರ್ಮಾಣಕ್ಕೆ ಮನವಿ ಮಾಡಿದ್ದರಿಂದ ಕೆಪಿಟಿ ಬಳಿ ಅಂಡರ್‌ಪಾಸ್ ಯೋಜನೆಗೆ ಅನುಮೋದನೆ ದೊರಕಿದ್ದು, ಕೆಪಿಟಿ ಜಂಕ್ಷನ್‌ನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಗಲಿದೆ.

    ವೆಹಿಕ್ಯುಲರ್ ಓವರ್‌ಪಾಸ್:
    ರಾಷ್ಟ್ರೀಯ ಹೆದ್ದಾರಿ-66ರಲ್ಲಿ ನಂತೂರು ಜಂಕ್ಷನ್‌ನಿಂದ ಕೆಪಿಟಿ ಜಂಕ್ಷನ್‌ವೆರೆಗೆ 1.6 ಕಿ.ಮೀ. ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ವಾಹನಗಳು, ಮಂಗಳೂರು ನಗರ ಪ್ರದೇಶಕ್ಕೆ ಬರುವ ವಾಹನಗಳು ಮತ್ತು ಮಂಗಳೂರು ನಗರದಿಂದ ವಿಮಾನ ನಿಲ್ದಾಣ ಮತ್ತು ಇತರೆ ಜಿಲ್ಲಾ ಕೇಂದ್ರಗಳಿಗೆ ಹೋಗುವ ವಾಹನಗಳಿಗೆ ಟ್ರಾಫಿಕ್ ಸಮಸ್ಯೆ ನಿತ್ಯದ ಗೋಳು. ಈ ಭಾಗದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ವೆಹಿಕ್ಯುಲರ್ ಓವರ್‌ಪಾಸ್ ಜತೆಗೆ ರಸ್ತೆಯ ಎರಡೂ ಬದಿಗಳಲ್ಲಿ ಸರ್ವೀಸ್ ರಸ್ತೆಯನ್ನು (ಪಾದಚಾರಿ ರಸ್ತೆ) ಮಾಡಲು ಯೋಜನೆ ರೂಪಿಸಲಾಗಿದೆ.

    602 ಮರ ತೆರವು, 370 ಸ್ಥಳಾಂತರ

    ಉದ್ದೇಶಿತ ವೆಹಿಕ್ಯುಲರ್ ಓವರ್‌ಪಾಸ್ ಯೋಜನೆ ಕಾರ್ಯಗತಗೊಳ್ಳಲು ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲದಲ್ಲಿ ಮರ ತೆರವುಗೊಳಿಸಬೇಕಾದ 602 ಮರಗಳನ್ನು ನ್ಯೂಮಂಗಳೂರು ಪೋರ್ಟ್ ರೋಡ್ ಕಂಪನಿ ಲಿಮಿಟೆಡ್ ಗುರುತಿಸಿದೆ. ಈ 602 ಮರಗಳ ಪೈಕಿ ಸ್ಥಳಾಂತರಿಸಲು ಯೋಗ್ಯವಾದ ಸುಮಾರು 370 ಮರಗಳನ್ನು ಸ್ಥಳಾಂತರಿಸಬಹುದಾಗಿದ್ದು, 232 ಮರ ಕಡಿಯಲೇಬೇಕಾದ ಅನಿವಾರ್ಯತೆ ಇದೆ. ಈ ಬಗ್ಗೆ ಜುಲೈ 10ರ ಸಂಜೆ 4ಕ್ಕೆ ಮಂಗಳೂರು ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕ ಆಕ್ಷೇಪಣೆ ಅಹವಾಲು ಸಲ್ಲಿಸಲು ಅವಕಾಶ ನೀಡಲಾಗಿದೆ.


    ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಪಿಟಿ ಜಂಕ್ಷನ್ ಪ್ರತಿದಿನ ಟ್ರಾಫಿಕ್‌ನಿಂದ ಕೂಡಿದ್ದು, ಇದನ್ನು ನಿವಾರಿಸುವ ಉದ್ದೇಶದಿಂದ ಓವರ್‌ಪಾಸ್‌ಗೆ ಸಮಗ್ರ ಯೋಜನೆ ರೂಪಿಸುವಂತೆ ಎನ್‌ಎಚ್‌ಎಐಗೆ ಸೂಚಿಸಿದ್ದೆ. ಈ ಹಿನ್ನೆಲೆಯಲ್ಲಿ ಸುಮಾರು 40 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಶೈಲಿಯ ಸುಂದರ ಓವರ್‌ಪಾಸ್ ಯೋಜನೆ ಕಾರ್ಯಗತಗೊಳ್ಳಲಿದೆ.
    -ಡಾ.ಭರತ್ ವೈ ಶೆಟ್ಟಿ, ಶಾಸಕ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ


    ಸುಮಾರು 40 ಕೋಟಿ ರೂ. ವೆಚ್ಚದಲ್ಲಿ ಕೆಪಿಟಿ ಬಳಿ ವೆಹಿಕ್ಯುಲರ್ ಓವರ್‌ಪಾಸ್ ನಿರ್ಮಾಣಕ್ಕೆ ಇಲಾಖೆಯಿಂದ ಅನುಮೋದನೆ ದೊರಕಿದೆ. ಪ್ರಸ್ತುತ ಹುಬ್ಬಳ್ಳಿಯ ಟ್ರಿನಿಟಿ ಗ್ರೂಪ್ ಕಾಮಗಾರಿ ಗುತ್ತಿಗೆ ಪಡೆದಿದ್ದು, ಸ್ಥಳಿಯಾಡಳಿತದಿಂದ ತಾಂತ್ರಿಕ ಸಮಸ್ಯೆ ನಿವಾರಣೆಯಾದ ಕೂಡಲೇ ಕಾಮಗಾರಿ ಆರಂಭಗೊಳ್ಳಲಿದೆ.
    -ಅನಿರುದ್ಧ್, ಯೋಜನಾ ನಿರ್ದೇಶಕ, ಎನ್‌ಎಚ್‌ಎಐ ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts