More

    ಸೆಕೆಯ ತಾಪದೊಂದಿಗೆ ಕೈಸುಡುತ್ತಿದೆ ತರಕಾರಿ ಬೆಲೆ

    ಬೀನ್ಸ್​ ಕೆಜಿಗೆ 200 ರೂಪಾಯಿಗೆ ಏರಿಕೆ — ಶತಕ ದಾಟಿದ ಅಲಸಂದೆ-ಮಟ್ಟುಗುಳ್ಳ

    ಪ್ರಶಾಂತ ಭಾಗ್ವತ, ಉಡುಪಿ
    ವಿಪರೀತ ಸೆಕೆಯಿಂದ ಬಳಲಿ ಬೆಂಡಾಗುತ್ತಿರುವ ಜನರಿಗೀಗ ಪ್ರಮುಖ ತರಕಾರಿಗಳ ಬೆಲೆ ಏರಿಕೆಯ ಬಿಸಿಯೂ ತಟ್ಟತೊಡಗಿದೆ. ಈಗಾಗಲೇ ಅಗತ್ಯ ವಸ್ತುಗಳ ದರವೂ ಗಗನಕ್ಕೇರಿದ್ದು, ಮಾರುಕಟ್ಟೆಯಲ್ಲಿ ತರಕಾರಿ ದರವೂ ಬರೆ ಎಳೆದಿದೆ.

    ಈ ಮೊದಲೇ ಹೆಚ್ಚಿನ ದರವಿದ್ದ ಬೀನ್ಸ್​ ಇದೀಗ ಕೆಜಿಗೆ 180ರಿಂದ 200ರೂ.ಗೆ ಏರಿದ್ದು, ಅಲಸಂದೆ ತಾನೇನೂ ಕಡಿಮೆ ಇಲ್ಲ ಎಂದು ಈಗಾಗಲೇ ಶತಕ ಬಾರಿಸಿದೆ. ಮಾರುಕಟ್ಟೆಗೆ ತೆರಳಿದ ಗ್ರಾಹಕರಿಗೀಗ ತರಕಾರಿಗಳ ಬೆಲೆ ಕೇಳಲೂ ಆತಂಕಗೊಳ್ಳುವಂತಾಗಿದೆ.

    ಬೀನ್ಸ್​ಗೆ ಬಲು ಬೇಡಿಕೆ

    ಇದೀಗ ಮದುವೆ ಇನ್ನಿತರ ಶುಭ ಕಾರ್ಯಗಳ ಸೀಸನ್​ ಇದ್ದು, ಅಡುಗೆಯ ಪ್ರಮುಖ ತರಕಾರಿಯಾದ ಬೀನ್ಸ್​ನ ದರ ಏರಿಕೆ ಕಂಡಿದೆ. ಕಳೆದವಾರ ಕೆಜಿಗೆ 80 ರೂ. ಇದ್ದ ಬೀನ್ಸ್​ನ ದರ ದ್ವಿಗುಣಗೊಂಡಿದ್ದು, ಗ್ರಾಹಕ ಕೈ ಸುಟ್ಟುಕೊಳ್ಳುವಂತಾಗಿದೆ. ಅಲಸಂದೆಗೂ ಸಹ ಬಹು ಬೇಡಿಕೆ ಇದ್ದು, ಅಗತ್ಯಕ್ಕೆ ತಕ್ಕಷ್ಟು ಪೂರೈಕೆ ಆಗುತ್ತಿಲ್ಲ. ಹೀಗಾಗಿ ಇದರ ದರವೂ ಸಹ ಡಬಲ್​ ಆಗಿದೆ.

    ಹುಬ್ಬೇರಿಸಿದ ಮಟ್ಟುಗುಳ್ಳ

    ದಕ ಹಾಗೂ ಉಡುಪಿ ಭಾಗದಲ್ಲಿ ಜನಪ್ರಿಯ ತರಕಾರಿಯಾದ ಉಡುಪಿ ಗುಳ್ಳ ಹಾಗೂ ಮಟ್ಟುಗುಳ್ಳ ಹೆಸರಿನ ಬದನೆಕಾಯಿಯ ದರವೂ ಶತಕ ಸಿಡಿಸಿದೆ. ಉಡುಪಿ ಗುಳ್ಳ ಲೋಕಲ್​ ಕೆಜಿಗೆ 70ರಿಂದ 80 ರೂ. ದರವಿದ್ದರೆ, ಮಟ್ಟುಗುಳ್ಳ 100ರಿಂದ 120ರೂ. ವರೆಗೂ ದರವಿದೆ. ತೊಂಡೆಕಾಯಿ ಹಾಗೂ ಕ್ಯಾರೆಟ್​ ಸಹ 60ರಿಂದ 80ರೂ. ನಿಗದಿ ಮಾಡಿಕೊಂಡಿದೆ. ಮದುವೆ-ಉಪನಯ ಇನ್ನಿತರ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಇವುಗಳ ದರವೂ ಏರಿಕೆ ಕಂಡಿದ್ದು, ಆರ್ಥಿಕ ಹೊರೆಯಿಂದ ಗ್ರಾಹಕ ಹುಬ್ಬೇರಿಸುವಂತಾಗಿದೆ.

    ಬಸಲೆಗೆ ಕೀಟಬಾಧೆ

    ಉಡುಪಿಯಲ್ಲಿ ಬಸಲೆಯನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ಈ ಬಾರಿ ಕೀಟಬಾಧೆಯಿಂದ ಸಲು ಪ್ರಮಾಣ ಕುಗ್ಗಿದೆ. ಎಲೆಗಳನ್ನು ಕೀಟಗಳು ರಂಧ್ರ ಮಾಡುತ್ತಿರುವುದರಿಂದ ಅವು ಹಳದಿ ಬಣ್ಣಕ್ಕೆ ತಿರುಗಿ, ಒಣಗತೊಡಗಿವೆ. ಹಿರಿಯಡ್ಕ ಭಾಗದಿಂದ ಉಡುಪಿ ಮಾರುಕಟ್ಟೆಗೆ ಬಸಲೆ ಪೂರೈಕೆಯಾಗುತ್ತಿದ್ದು, ತರಕಾರಿ ಅಂಗಡಿಗಳಲ್ಲಿ 4 ಕೋಡಿಗೆ 50 ರೂ. ಹಾಗೂ ಸಂತೆಗಳಲ್ಲಿ 100 ರೂ. ದರವಿದೆ.

    ಆಸರೆಯಾದ ಟೊಮ್ಯಾಟೋ, ಈರುಳ್ಳಿ

    ತರಕಾರಿಗಳ ದರ ಏರಿಕೆ ನಡುವೆಯೇ ಸದ್ಯಕ್ಕೆ ಟೊಮ್ಯಾಟೋ, ಈರುಳ್ಳಿ, ಬಟಾಟೆ ದರ ಯಥಾಸ್ಥಿತಿಯಲ್ಲಿದ್ದು, ಕೆಜಿಗೆ 30ರಿಂದ 40 ರೂ. ಇದೆ. ನಿತ್ಯದ ಅಡುಗೆಗೆ ಸದ್ಯ ಈ ತ್ರಿಮೂರ್ತಿಗಳೇ ಆಧಾರ ಆಗಿದ್ದಾರೆ. ವಿಪರೀತ ಬಿಸಿಲು ಇರುವ ಹಿನ್ನೆಲೆಯಲ್ಲಿ ಬೆಳೆ ಪ್ರಮಾಣ ಕುಸಿದಿದ್ದು, ಇವುಗಳ ಬೆಲೆ ಏರಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸಪ್ಪುಗಳ ದರದಲ್ಲೂ ತುಸು ಏರಿಕೆಯಾಗುತ್ತಿದ್ದು, ಬಿಸಿಸಿಲಿನಿಂದಾಗಿ ಇನ್ನಷ್ಟು ದರ ಏರಲಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಿಗಳು.

    • ಪರ ಜಿಲ್ಲೆಯ ಅವಲಂಬನೆ:
      ಉಡುಪಿಗೆ ಬರುತ್ತಿರುವ ಶೇ. 80 ಪ್ರಮಾಣದಷ್ಟು ತರಕಾರಿಗಳು ಹೊರಜಿಲ್ಲೆಯದ್ದೇ ಆಗಿದೆ. ಬೆಳಗಾವಿಯಿಂದ ರಿಂಗ್​ ಬೀನ್ಸ್​, ಕ್ಯಾರೆಟ್​. ಹೂಕೋಸು, ಗೆಣಸು, ಬೀಟ್ರೂಟ್​ ಬರುತ್ತಿದೆ. ಚಿಕ್ಕಮಗಳೂರಿನಿಂದ ರಿಂಗ್​ ಬೀನ್ಸ್​, ವೈಟ್​ ಬೀನ್ಸ್​, ಕ್ಯಾಪ್ಸಿಕಂ, ಹೀರೇಕಾಯಿ, ಕೊತ್ತಂಬರಿ ಬರುತ್ತಿದೆ. ಮೈಸೂರು ಹಾಗೂ ಬೆಂಗಳೂರಿನಿಂದ ಅಲಸಂದೆ, ಸವತೆಕಾಯಿ, ಸಾಂಬಾರ್​ ಸವತೆಕಾಯಿ ಬರುತ್ತಿದೆ. ಬೇಸಿಗೆ ಆಗಿದ್ದರಿಂದ ತರಕಾರಿ ಬೆಳೆಯೂ ಕಡಿಮೆಯಾಗಿದ್ದು, ಬೇಡಿಕೆಗೆ ತಕ್ಕಷ್ಟು ಲಭಿಸುತ್ತಿಲ್ಲ. ದರ ಹೆಚ್ಚು ಇರುವುದರಿಂದ ಲಾಭವೂ ಕಡಿಮೆ ಸಿಗುತ್ತಿದೆ. ಬಿಸಿಲಿನಿಂದ ತರಕಾರಿ ಹಾಳಾಗುತ್ತಿದ್ದು ನಷ್ಟವೂ ಆಗುತ್ತಿದೆ ಎನ್ನುತ್ತಾರೆ ಉಡುಪಿಯ ಹೋಲ್​ಸೇಲ್​ ವ್ಯಾಪಾರಿ ಶರಣು ಸಿ.ಎಚ್​.

    ತರಕಾರಿಹೋಲ್​ಸೇಲ್​ (ಕೆಜಿ ರೂ.)ಅಂಗಡಿಗಳಲ್ಲಿ (ಕೆಜಿ ರೂ.)
    ರಿಂಗ್​ ಬೀನ್ಸ್​ 170 — 200
    ವೈಟ್​ ಬೀನ್ಸ್​ 140 — 170
    ಅಲಸಂದೆ 100 — 130-140
    ಕ್ಯಾಪ್ಸಿಕಂ 55 — 80
    ಹೀರೆಕಾಯಿ 55 — 80
    ಕೊತ್ತಂಬರಿ 50 — 80
    ಕ್ಯಾರೆಟ್​ 50 — 80-90
    ಗೆಣಸು 45 — 75-80
    ಬೀಟ್ರೂಟ್​ 35 — 50-60
    ಸವತೆಕಾಯಿ 50 — 70-80
    ಸಾಂಬಾರ್​ ಸವತೆ 25 — 50-60
    ಉಡುಪಿ ಗುಳ್ಳ 60 — 80-90
    ಮಟ್ಟುಗುಳ್ಳ 80 — 100-120
    ಹೂಕೋಸ್​ 40 — 60

    ಬೀನ್ಸ್​ ಹಾಗೂ ಅಲಸಂದೆ ದರ ಭಾರೀ ಏರಿಕೆ ಕಂಡಿದೆ. ಅಗತ್ಯತೆ ಇರುವವರು ಮಾತ್ರ ಖರೀದಿಸುತ್ತಿದ್ದಾರೆ. ವಿಪರೀತ ಸೆಕೆ ಇರುವುದರಿಂದ ಒಂದೇ ದಿನಕ್ಕೆ ತರಕಾರಿ ಬಾಡಿ, ಒಣಗುತ್ತಿವೆ. ಇದರಿಂದ ತರಕಾರಿಯ ತೂಕವೂ ಇಳಿದು ನಮಗೆ ಭಾರಿ ನಷ್ಟ ಆಗುತ್ತಲಿದೆ. ತೊಡಗಿಸಿದ ಹಣವೂ ಕೈ ಸೇರದ ಸ್ಥಿತಿ ಸದ್ಯಕ್ಕಿದೆ.

    ರಮೇಶ್​ ಪೂಜಾರಿ.
    ತರಕಾರಿ ವ್ಯಾಪಾರಿ, ಇಂದ್ರಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts