More

    ತರಕಾರಿ ಬಲು ದುಬಾರಿ…!

    ರಾಣೆಬೆನ್ನೂರ: ಕರೊನಾ ಲಾಕ್​ಡೌನ್​ನಿಂದ ಜನತೆ ದುಡಿಮೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಇಂಥ ಸಮಯದಲ್ಲಿ ತರಕಾರಿ ಬೆಲೆ ಸಹ ಏರಿಕೆಯಾಗಿದ್ದು, ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ.

    ಕರೊನಾ ಎರಡನೇ ಅಲೆಗೂ ಮುನ್ನ ಮಾರುಕಟ್ಟೆಯಲ್ಲಿದ್ದ ತರಕಾರಿ ಬೆಲೆ ಲಾಕ್​ಡೌನ್ ಘೊಷಣೆಯಾದ ಬಳಿಕ ಎರಡು ಪಟ್ಟು ಹೆಚ್ಚಳವಾಗಿದೆ. ಪ್ರತಿಯೊಂದು ತರಕಾರಿ ಬೆಲೆಯೂ ಕೆ.ಜಿ.ಗೆ 50 ರೂಪಾಯಿ ದರವಿದೆ. ಇದರಿಂದ ಬಡಜನತೆ ತರಕಾರಿ ಖರೀದಿಸಲು ಯೋಚಿಸುವ ಪರಿಸ್ಥಿತಿ ಎದುರಾಗಿದೆ.

    ನಗರದ ಮೇಡ್ಲೇರಿ ರಸ್ತೆ, ವಿನಾಯಕ ನಗರ, ಹಲಗೇರಿ ರಸ್ತೆ, ಹಳೇ ಪಿ.ಬಿ. ರಸ್ತೆ, ಕುರುಬಗೇರಿ ಕ್ರಾಸ್, ಗುತ್ತಲ ರಸ್ತೆ ಸೇರಿ ವಿವಿಧೆಡೆ ನಗರಸಭೆ ವತಿಯಿಂದ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.

    ಅರ್ಧದಷ್ಟು ಹೆಚ್ಚಳವಾದ ಬೆಲೆ: ಬೀನ್ಸ್ 120 ರೂಪಾಯಿಗೆ 1 ಕೆ.ಜಿ., ಟೊಮ್ಯಾಟೊ 40 ರೂಪಾಯಿ, ಬದನೆಕಾಯಿ 60 ರೂಪಾಯಿ, ಹಸಿಮೆಣಸಿನಕಾಯಿ 60 ರೂಪಾಯಿ, ಉಳ್ಳಾಗಡ್ಡಿ 50 ರೂಪಾಯಿ, ಆಲೂಗಡ್ಡಿ 50 ರೂಪಾಯಿ, ಹಿರೇಕಾಯಿ 70 ರೂಪಾಯಿ, ಬೀಟರೂಟ್ 60 ರೂಪಾಯಿ, ಚೌಳೆಕಾಯಿ 50 ರೂಪಾಯಿಗೆ ಕೆ.ಜಿ.ಯಂತೆ ಮಾರಾಟ ಮಾಡಲಾಗುತ್ತಿದೆ. ಆದರೆ, ಲಾಕ್​ಡೌನ್​ಗೂ ಮುಂಚೆ ಇದೇ ತರಕಾರಿ ಬೆಲೆ ಅರ್ಧದಷ್ಟು ಕಡಿಮೆಯಾಗಿತ್ತು.

    ರೈತರಿಗಿಲ್ಲ ಲಾಭ: ರೈತರು ಹಗಲು, ರಾತ್ರಿ ಎನ್ನದೆ ಮೂರ್ನಾಲ್ಕು ತಿಂಗಳ ಕಾಲ ತರಕಾರಿ ಬೆಳೆದು ರಕ್ಷಿಸಿಕೊಂಡಿದ್ದಾರೆ. ದುಬಾರಿ ಬೆಲೆಯ ರಾಸಾಯನಿಕ, ಔಷಧ ಸಿಂಪಡಿಸಿ, ಕಾರ್ವಿುಕರಿಗೆ ಸಾವಿರಾರು ರೂಪಾಯಿ ಕೂಲಿ ಕೊಟ್ಟು ಬೆಳೆ ಕಾಪಾಡಿದ್ದಾರೆ. ಇಷ್ಟೆಲ್ಲ ಖರ್ಚು ಮಾಡಿ ತರಕಾರಿ ಎಪಿಎಂಸಿ ಮಾರುಕಟ್ಟೆಗೆ ತಂದರೆ ಖರೀದಿದಾರರು ಬಾಯಿಗೆ ಬಂದ ದರಕ್ಕೆ ಕೇಳುತ್ತಿದ್ದಾರೆ.

    ಸೋಮವಾರ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ 1 ಕೆ.ಜಿ. ಹಿರೇಕಾಯಿ ಹಾಗೂ ಚೌಳೆಕಾಯಿ 25ರಿಂದ 30 ರೂಪಾಯಿ, 14 ಕೆ.ಜಿ.ಯ ಒಂದು ಬಾಕ್ಸ್ ಬದನೆಕಾಯಿಗೆ 150 ರೂಪಾಯಿಂದ 200 ರೂಪಾಯಿ, ಟೊಮ್ಯಾಟೊ 200 ರೂಪಾಯಿಂದ 250 ರೂಪಾಯಿ., ಮೆಣಸಿನಕಾಯಿ 18ರಿಂದ 20 ರೂಪಾಯಿ, ಉಳ್ಳಾಗಡ್ಡಿ 20ರಿಂದ 25 ರೂಪಾಯಿ, ಆಲೂಗಡ್ಡೆ 15ರಿಂದ 18 ರೂಪಾಯಿಗೆ ಕೆ.ಜಿ.ಯಂತೆ ರೈತರಿಂದ ಖರೀದಿ ಮಾಡಲಾಗಿದೆ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಈ ತರಕಾರಿಗಳ ಬೆಲೆ ಡಬಲ್ ಆಗಿ ಮಾರಾಟ ಮಾಡಲಾಗುತ್ತಿದ್ದು, ಇದರ ಲಾಭ ಕೇವಲ ದಲ್ಲಾಳಿಗಳಿಗೆ ಮಾತ್ರ ಎನ್ನುವ ಸ್ಥಿತಿ ನಿರ್ವಣವಾಗಿದೆ.

    ಆದರೆ, ಎಪಿಎಂಸಿಯಲ್ಲಿನ ದರದಿಂದ ರೈತರಿಗೆ ಕೂಲಿ ವೆಚ್ಚವೂ ಬಾರದಂತಹ ಪರಿಸ್ಥಿತಿ ನಿರ್ವಣವಾಗಿದ್ದು, ಅನ್ನದಾತರು ಹೆಚ್ಚಿನ ನಷ್ಟ ಅನುಭವಿಸುತ್ತಿದ್ದಾರೆ. ರೈತರಿಗೆ ನಸುಕಿನಲ್ಲಿ ಮಾರುಕಟ್ಟೆಗೆ ತಂದು ಮಾರಾಟ ಮಾಡುವುದು ಮಾತ್ರ ಗೊತ್ತು. ಆದರೆ, ಅವರೇ ಮಾರುಕಟ್ಟೆಯಲ್ಲಿ ಬಂಡಿಯನ್ನಿಟ್ಟು ದಿನಪೂರ್ತಿ ನಿಂತು ಮಾರಾಟ ಮಾಡುವುದು ಕಷ್ಟದ ಕೆಲಸ. ಇದೊಂದನ್ನೇ ಅವಲಂಬಿಸಿದರೆ ಉಳಿದೆಲ್ಲ ಕೃಷಿ ಕೆಲಸಕ್ಕೂ ತೊಂದರೆಯಾಗಲಿದೆ ಎಂದು ಅನ್ನದಾತ ಅಳಲು ತೋಡಿಕೊಳ್ಳುತ್ತಾರೆ.

    ನಾವು ಎರಡು ಎಕರೆ ಹೊಲದಲ್ಲಿ ಟೊಮ್ಯಾಟೊ, ಬದನೆಕಾಯಿ ಬೆಳೆದಿದ್ದೇವು. ಬೆಲೆ ಸಿಗದ ಕಾರಣ ನಾಶಪಡಿಸಿದ್ದೇವೆ. ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಮನಬಂದ ದರಕ್ಕೆ ನಮ್ಮ ತರಕಾರಿ ಕೇಳುತ್ತಿದ್ದಾರೆ. ಇದರಿಂದ ನಮಗೆ ಕೂಲಿ ವೆಚ್ಚ ಸಹ ಭರಿಸಲಾಗುತ್ತಿಲ್ಲ. ಈ ಬಗ್ಗೆ ಎಪಿಎಂಸಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.

    | ಸಿದ್ದೇಶ ಡೊಳ್ಳಿನ, ತರಕಾರಿ ಬೆಳೆದ ರೈತ

    ಎಪಿಎಂಸಿಯಲ್ಲಿ ರೈತರಿಂದ ಖರೀದಿಸುತ್ತಿರುವ ತರಕಾರಿ ಬೆಲೆ ಹಾಗೂ ಚಿಲ್ಲರೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವ ಬೆಲೆ ಕುರಿತು ಪರಿಶೀಲಿಸಲಾಗುವುದು. ಈ ಬಗ್ಗೆ ಎಪಿಎಂಸಿ ಅಧಿಕಾರಿಗಳೊಂದಿಗೆ ರ್ಚಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.

    | ಶಂಕರ ಜಿ.ಎಸ್., ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts