More

    ಪಾರಂಪರಿಕ ಕೇಂದ್ರವಾಗಲಿದೆ ವೀರಾಪುರ: ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಹುಟ್ಟಿದ ಮನೆ ಜೀರ್ಣೋದ್ಧಾರ ಕಾಮಗಾರಿಗೆ ಸಚಿವ ಲಿಂಬಾವಳಿ ಚಾಲನೆ

    ಮಾಗಡಿ : ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರ ಜನ್ಮಸ್ಥಳ ವೀರಾಪುರವನ್ನು ವಿಶ್ವಮಟ್ಟದಲ್ಲಿ ಸಾಂಸ್ಕೃತಿಕ, ಪಾರಂಪರಿಕ ಕೇಂದ್ರವನ್ನಾಗಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

    ವೀರಾಪುರದಲ್ಲಿ ನಿರ್ಮಾಣವಾಗುತ್ತಿರುವ ಶ್ರೀಗಳ 111 ಅಡಿ ಪ್ರತಿಮೆ ಸ್ಥಳ ವೀಕ್ಷಿಸಿ, ಶ್ರೀಗಳು ಹುಟ್ಟಿದ ಮನೆಯ ಜೀರ್ಣೋದ್ಧಾರ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
    ಶ್ರೀಗಳ 111 ಅಡಿ ಪುತ್ಥಳಿ ಶಿವಗಂಗೆಗೆ ಮುಖವಾಗಿ, ಸಿದ್ಧಗಂಗೆ ನೋಡುವಂತೆ ನಿರ್ಮಿಸಲಾಗುತ್ತಿದೆ, ಪ್ರತಿಮೆ ಬಳಿ ಮ್ಯೂಜಿಯಂ, ನಂದಿ ವಿಗ್ರಹ, ಆಡಿಟೋರಿಯಂ ಇರಲಿದೆ. ಗ್ರಾಮದಿಂದ ಸಿದ್ಧಗಂಗೆ ಮಠಕ್ಕೆ 23 ಕಿಲೋಮೀಟರ್ ಇದ್ದು ಈ ರಸ್ತೆ ಅಭಿವೃದ್ಧಿಪಡಿಸಲು ಲೋಕೋಪಯೋಗಿ ಇಲಾಖೆ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದರು.

    ಶ್ರೀಗಳು ವಾಸವಿದ್ದ ಮನೆಯನ್ನು ಮರು ನಿರ್ಮಿಸಲಾಗುವುದು. ಶ್ರೀಗಳು ಯಾವ ವಸ್ತುಗಳನ್ನು ಉಪಯೋಗಿಸುತ್ತಿದ್ದರೊ ಅವುಗಳನ್ನು ಉಳಿಸಿ ಕಳೆದು ಹೋಗಿರುವುದನ್ನು ಅದೇ ರೀತಿ ತಯಾರಿಸಿ ಮನೆಯಲ್ಲಿ ಅಳವಡಿಸಲಾಗುವುದು ಎಂದರು.
    ಕೆಆರ್‌ಐಡಿಎಲ್ ನಿಗಮ ಅಧ್ಯಕ್ಷ ಎಂ.ರುದ್ರೇಶ್ ಮಾತನಾಡಿ, ಶ್ರೀಗಳ ಜನ್ಮಸ್ಥಳದ ಸಮಗ್ರ ಅಭಿವೃದ್ಧಿ ಯೋಜನೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕನಸಿನ ಯೋಜನೆಯಾಗಿದೆ.

    ಶ್ರೀಗಳ ಪುತ್ಥಳಿಗೆ 25 ಕೋಟಿ ಹೊರತುಪಡಿಸಿ ಗ್ರಾಮದ ಸರ್ವತೋಮುಖ ಅಭಿವೃದ್ಧಿ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 90 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲಿದ್ದಾರೆ. ಗ್ರಾಮದ ಕೆರೆ ಅಭಿವೃದ್ಧಿಗೆ 1 ಕೋಟಿ ರೂ. ಅನುದಾನ ಘೋಷಣೆ ಮಾಡಿ 50 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಕೆಆರ್‌ಐಡಿಎ ನಿಗಮ ಸಂಸ್ಥೆ ಯಾವುದೇ ಸರ್ವೀಸ್ ಚಾರ್ಜ್ ಪಡೆಯುತ್ತಿಲ್ಲ, ಇದರಿಂದ 3.50 ಕೋಟಿ ರೂ. ಹಣ ಉಳಿತಾಯವಾಗಲಿದ್ದು ಈ ಹಣವನ್ನು ಈ ಕಾಮಗಾರಿಗಳಿಗೆ ವಿನಿಯೋಗಿಸಲು ತೀರ್ಮಾನಿಸಿ ಉಚಿತವಾಗಿ ಕಾರ್ಯನಿರ್ವಹಿಸಲಾಗುವುದು ಎಂದರು.

    ಗದ್ದುಗೆ ಮಠಾಧ್ಯಕ್ಷ ಮಹಂತ ಸ್ವಾಮೀಜಿ, ಬಿಎಂಟಿಸಿ ನಿರ್ದೇಶಕ ಬೃಂಗೇಶ್, ಕನ್ನಡ ಮತ್ತು ಸಂಸೃತಿ ಇಲಾಖೆ ನಿರ್ದೇಶಕ ರಂಗಪ್ಪ, ಎಸಿ ಮಂಜುನಾಥ್, ಡಿಎಫ್‌ಒ ಆಂಥೊಣಿ, ಮಾಗಡಿ ಬಿಎಂಆರ್‌ಡಿಎ ಅಧ್ಯಕ್ಷ ಡಾ.ಎಂ.ಜಿ. ರಂಗಧಾಮಯ್ಯ, ಕನಕಪುರ ಪ್ರಾಧಿಕಾರದ ಅಧ್ಯಕ್ಷ ಜಗನ್‌ನಾಥ್, ರಾಮನಗರ ಪ್ರಾಧಿಕಾರ ಅಧ್ಯಕ್ಷ ಮುರುಳಿ, ಉದ್ಯಮಿ ಓಂಕಾರಮೂರ್ತಿ, ತಹಸೀಲ್ದಾರ್ ಬಿ.ಜಿ.ಶ್ರೀನಿವಾಸ್ ಪ್ರಸಾದ್‌ಎಸ್‌ಸಿಬಿಎಸ್. ಮಂಜುನಾಥ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts