More

    ವೀರಾಪುರ ರಸ್ತೆ ಅತಿಕ್ರಮಣ ತೆರವು

    ಹಾನಗಲ್ಲ: ತಾಲೂಕಿನ ಬಾಳಂಬೀಡ ಗ್ರಾಮದ ರಿ.ಸ.ನಂ. 96 ಮತ್ತು ಶಿರಸಿ-ಮೊಣಕಾಲ್ಮೂರು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿದ್ದ ವೀರಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅತಿಕ್ರಮಣವನ್ನು ತಹಸೀಲ್ದಾರ್ ರವಿ ಕೊರವರ ನೇತೃತ್ವದಲ್ಲಿ ಮಂಗಳವಾರ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಯಿತು.

    ಬಾಳಂಬೀಡ ಗ್ರಾಮದಿಂದ ವೀರಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅತಿಕ್ರಮಿಸಿಕೊಂಡು ರಸ್ತೆ ಸಂಪರ್ಕ ಬಂದ್ ಮಾಡಲಾಗಿತ್ತು. ಇದರಿಂದ ರೈತರು ಚಕ್ಕಡಿ, ಟ್ರ್ಯಾಕ್ಟರ್ ತೆಗೆದುಕೊಂಡು ಹೊಲ-ಗದ್ದೆಗಳಿಗೆ ಹೋಗಲು ಮತ್ತು ಗ್ರಾಮಸ್ಥರು ವೀರಾಪುರ ಗ್ರಾಮಕ್ಕೆ ತೆರಳಲು ತೊಂದರೆ ಅನುಭವಿಸುವಂತಾಗಿತ್ತು.

    ಇತ್ತೀಚಿಗೆ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಮಾನೆ, ಗ್ರಾಮಸ್ಥರ ಸಮಸ್ಯೆ ಆಲಿಸಿ, ಶೀಘ್ರ ಸರ್ವೆ ಕೈಗೊಂಡು ರಸ್ತೆ ಅತಿಕ್ರಮಣವಾಗಿದ್ದರೆ ತೆರವುಗೊಳಿಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದರು. ಶಾಸಕ ಶ್ರೀನಿವಾಸ ಮಾನೆ ಅಗತ್ಯ ಕ್ರಮಕ್ಕೆ ತಹಸೀಲ್ದಾರ್ ಅವರಿಗೆ ಸೂಚನೆ ನೀಡಿದ್ದರು.

    ಒತ್ತುವರಿಯಾಗಿದ್ದ 4 ಗುಂಟೆಯಷ್ಟು ರಸ್ತೆಯನ್ನು ಜೆಸಿಬಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಯಿತು. ಇದರಿಂದ ಇದೀಗ ಬಾಳಂಬೀಡ ಮತ್ತು ವೀರಾಪುರ ನಡುವಿನ ರಸ್ತೆ ಸಂಪರ್ಕ ಸುಗಮವಾದಂತಾಗಿದ್ದು, ಗ್ರಾಮಸ್ಥರಲ್ಲಿ ಹರ್ಷ ತರಿಸಿದೆ.

    ಹಾನಗಲ್ಲ ಸಿಪಿಐ ಎಸ್.ಆರ್.ಶ್ರೀಧರ, ಶಿಗ್ಗಾಂವಿ ಸಿಪಿಐ ಸತ್ಯಪ್ಪ ಮಾಳಗೊಂಡರ, ಆಡೂರು ಪಿಎಸ್‌ಐ ಸಂಪತ್ ಆನಿಕಿವಿ, ಉಪ ತಹಸೀಲ್ದಾರ್ ನಾಯ್ಕರ್, ಕಂದಾಯ ನಿರೀಕ್ಷಕ ನಟರಾಜ ನಂದಿಹಳ್ಳಿ, ಗ್ರಾಪಂ ಆಡಳಿತ ಅಧಿಕಾರಿ ಮುಸ್ತಾಕ್, ಭೂಮಾಪನ ಇಲಾಖೆಯ ಅಧಿಕಾರಿಗಳು, ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts