More

    ಸಶಕ್ತಿಕರಣ ಕಾರ್ಯಕ್ರಮಕ್ಕೆ ಮಾಜಿ ಸಿ.ಎಂ. ವೀರಪ್ಪ ಮೋಯ್ಲಿ ಚಾಲನೆ

    ಗದಗ: ಜಗತ್ತಿನಲ್ಲಿಯೇ ಶ್ರೇಷ್ಠ ಸಂವಿಧಾನ ಭಾರತದ ಸಂವಿಧಾನ, ಸಂವಿಧಾನವೇ ನಿಜವಾದ ಶಕ್ತಿಯಾಗಿದೆ. ಅದನ್ನು ಸಮರ್ಥವಾಗಿ ಅರಿತು ಬಳಸುವ ವ್ಯಕ್ತಿಗಳು ನಿವಾಗಬೇಕೆಂದು ಮಾಜಿ ಮುಖ್ಯ ಮಂತ್ರಿ ವೀರಪ್ಪ ಮೋಯ್ಲಿ ಅವರು ಕರೇ ನೀಡಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ ಮತ್ತು ಕೆ.ಎಚ್.ಪಾಟೀಲ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ನಗರದ ಎ.ಪಿ.ಎಂ.ಸಿ. ಪ್ರಾಂಗಣದ ವಿವೇಕಾನಂದ ಸಭಾ ಭವನದಲ್ಲಿ ರವಿವಾರ ಏರ್ಪಡಿಸಿದ ಸಶಕ್ತಿಕರಣ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

    ಶ್ರೇಷ್ಠ ಸಂವಿಧಾನದ ಪೀಠಿಕೆಯನ್ನು  ಸತತವಾಗಿ ಅರಿತು ಮನನ ಮಾಡಿಕೊಂಡು ಭಾರತದ ಪ್ರಜೆಗಳಾದ ನಾವೆಲ್ಲರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಸಂವಿಧಾನ ಓದುವ ಸಶಕ್ತಿಕರಣ ಕಾರ್ಯಕ್ರಮಕ್ಕೆ ಆಗಮಿಸಿ ಉದ್ಘಾಟನೆ ನೆರವೇರಿಸಿರುವದು ನನ್ನಲ್ಲಿ ಧನ್ಯತಾ ಭಾವ ಮೂಡಿದೆ. ಸಂವಿಧಾನ ಪೀಠಿಕೆ ಓದು ದೇಶದ ಪ್ರತಿ ಗ್ರಾಮ ಹಾಗೂ ಸಮುದಾಯಕ್ಕೆ ತಲುಪಬೇಕು ಎಂದರು.

    ಸಂವಿಧಾನ ರಾಷ್ಟ್ರದಲ್ಲಿ ಎಲ್ಲಿಯವರೆಗೆ ಇರುತ್ತದೆಯೋ, ಅಲ್ಲಿಯವರೆಗೆ ಡಾ.ಬಿ.ಆರ್.ಅಂಬೇಡ್ಕರ ಅವರು ಮತ್ತೆ ಮತ್ತೆ ಹುಟ್ಟಿ ಬರುತ್ತಲೇ ಇರುತ್ತಾರೆ. ಅಂಬೇಡ್ಕರ ಅವರು ಹೇಳಿದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗಾಗಿ ನಾನು ನನ್ನ ಜೀವನವನ್ನು ಸವಿಸಿದ್ದೇನೆ. ಅನುಮಾನವಿದ್ದಲ್ಲಿ ಸಂವಿಧಾನವನ್ನು ಓದಿಕೊಳ್ಳಿ ಎಂದು ಹೇಳಿದ್ದಾರೆ. ಸಮಾನತೆ, ಶೋಷಣೆ ವಿರುದ್ಧ ಹಕ್ಕು ಸೇರಿದಂತೆ ಸಂವಿಧಾನದಲ್ಲಿ ಮೂಲಭೂತ ಹಕ್ಕು ಹಾಗೂ ಕರ್ತವ್ಯಗಳನ್ನು ಸರ್ವ ಜನಾಂಗಗಳಿಗೂ ಸಮಾನವಾಗಿ ನೀಡಿದ್ದಾರೆ. ಶೋಷಣೆ ಮುಕ್ತ ಸಮಾಜದ ಕನಸು ಕಂಡವರು ಡಾ.ಬಿ.ಆರ್.ಅಂಬೇಡ್ಕರ ಎಂದರು.

    ಮೂಲಭೂತ ಹಕ್ಕು ಹಾಗೂ ಕರ್ತವ್ಯಗಳನ್ನು ಪಾಲಿಸುವುದಿಲ್ಲವೋ ಅಲ್ಲಿಯವರೆಗೆ ನಾವು ರಾಷ್ಟ್ರದ ಸರಿಯಾದ ಪ್ರಜೆಗಳಲ್ಲ. ಸಂವಿಧಾನ ಕೇವಲ ನ್ಯಾಯವಾದಿಗಳ ಕೈಯಲ್ಲಿಲ್ಲ. ಕಕ್ಷಿದಾರನ ಕೈಯಲ್ಲಿಯೂ ಇದೇ ಎಂಬುದನ್ನು ಸಂದರ್ಭಕ್ಕನುಸಾರ ಸಾಬೀತು ಪಡಿಸುತ್ತಲೇ ಇರಬೇಕು. ಅದುವೆ ನಮ್ಮ ಸಂವಿಧಾನ, ನಮ್ಮ ಹೆಮ್ಮೆ ಎಂದು ತಿಳಿಸಿದರು.

    ಮಹಾತ್ಮಾ ಗಾಂಧೀಜಿಯವರು ಉನ್ನತ ವ್ಯಾಸಂಗ ಮುಗಿಸಿ ಆಫ್ರಿಕಾದಿಂದ ಭಾರತಕ್ಕೆ ಬಂದಾಗ ಶೇ. 2 ರಷ್ಟು ಮಾತ್ರ ಅಕ್ಷರಸ್ಥರಿದ್ದರು. ಅದೇ ಸ್ವಾತಂತ್ರ್ಯ ಸಿಕ್ಕಾಗ ದೇಶದಲ್ಲಿ ಸಾಕ್ಷರತೆಯ ಪ್ರಮಾಣ ಕೇವಲ 14 ಪ್ರತಿಶತರಷ್ಟಿತ್ತು. ಇದಕ್ಕೆಲ್ಲ ಅರಿವಿನ ಕೊರತೆ ಕಾರಣವಾಗಿತ್ತು. ಸಧ್ಯ ರಾಷ್ಟ್ರದಲ್ಲೆ ಶೇ. 80 ಕ್ಕೂ ಅಧಿಕಾರ ಸಾಕ್ಷರತೆಯ ಪ್ರಮಾಣ ಇದೇ. ಸಾಕ್ಷರರಾದ ನಾವೆಲ್ಲರೂ ಸಂವಿಧಾನವನ್ನು ಓದಿ, ಅರಿತು ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದು ಹೇಳಿದರು.

    ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರು ನೆರೆದ ಸಾರ್ವಜನಿಕರೆಲ್ಲರಿಗೂ ಸಂವಿಧಾನ ಪೀಠಿಕೆಯನ್ನು ಭೋಧಿಸಿ ಮಾತನಾಡಿದರು. ದೇಶದಲ್ಲಿ ಸಂವಿಧಾನದ ಓದು ನಮ್ಮಲ್ಲಿನ ಕರ್ತವ್ಯಗಳನ್ನು ಬಡಿದೆಬ್ಬಿಸಬೇಕು. ದೇಶದಲ್ಲಿನ ಸಂಪತ್ತಿನ ಹೆಚ್ಚು ಪಾಲು ಶೇ. 1 ರಷ್ಟು ಜನರಲ್ಲಿ ಕ್ರೋಡಿಕರಣಗೊಂಡಿದೆ. ದೇಶದ ಸಂಪತ್ತು ಒಂದು ವ್ಯಕ್ತಿ ಸಮುದಾಯಕ್ಕೆ ಸೀಮಿತವಾಗದೇ ಸರ್ವರಿಗೂ ಸಲ್ಲಬೇಕು ಎಂದರು.

    ಸಂವಿಧಾನವನ್ನು ಅರ್ಥೈಸಿಕೊಂಡು ಸಂವಿಧಾನದಲ್ಲಿನ ಅಂಶಗಳನ್ನು ಸರಿಯಾದ ನಿಟ್ಟಿನಲ್ಲಿ ಬಳಸುವ ಕ್ರಮ ಆಗಬೇಕು. ವೈಚಾರಿಕ ಕ್ರಾಂತಿ, ಸಮಾನತೆ, ಶಾಂತಿಗಾಗಿ ಸಂವಿಧಾನದ ಓದು ಮಹತ್ವದ ಪಾತ್ರ ವಹಿಸಲಿದೆ. ಸಂವಿಧಾನದ ಓದು ಎಂಬ ಪರಿಷ್ಕøತ ಆವೃತ್ತಿಯನ್ನು ಕರ್ನಾಟಕ ಉಚ್ಛ ನ್ಯಾಯಾಲಯ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳವಾಗಿ ಪುಸ್ತಕದ ರೂಪದಲ್ಲಿ ನಮ್ಮೆಲ್ಲರಿಗೂ ತಲುಪಸಿದ್ದಾರೆ. ಗದಗ ಜಿಲ್ಲೆಯ ಹತ್ತು ಲಕ್ಷ ಜನರಿಗೂ ಸಂವಿಧಾನದ ಅರಿವು ಮೂಡಿಸಬೇಕು. ಅದು ಇಂದಿನಿಂದ ವರ್ಷವೀಡಿ ನಡೆಯಲಿದೆ ಎಂದರು.

    ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ ಸಂವಿಧಾನ ಪೀಠಿಕೆಯ ಪ್ರತಿಯನ್ನು ರಾಜ್ಯದ 73 ಸಾವಿರ ಶಾಲೆಗಳಲ್ಲಿ ಅಳವಡಿಸಲು ಹಾಗೂ ಸಂವಿಧಾನ ಪೀಠಿಕೆಯನ್ನು ಪ್ರತಿ ವಿಧ್ಯಾರ್ಥಿಗಳಿಗೂ ಅರ್ಥೈಸುವ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ವಿಧ್ಯಾರ್ಥಿ ದೆಸೆಯಿಂದಲೇ ಮಕ್ಕಳಲ್ಲಿ ಸಂವಿಧಾನದ ಅರಿವು ಮೂಡಿಸಲು ಸರ್ಕಾರ ಮುಂದಾಗಿದೆ. ಸಂವಿಧಾನ ತತ್ವದಡಿ ನಾವು ಬದುಕು ಸಾಗಿಸಬೇಕು. ಮುಖ್ಯ ಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಶಿಕ್ಷಣ ಇಲಾಖೆಯಲ್ಲಿ ಬದಲಾವಣೆ ತರುವ ಮೂಲಕ ಎಲ್ಲರೂ ಸರ್ಕಾರಿ ಶಾಲೆಯೆಡೆಗೆ ಮರಳುವಂತೆ ಮಾಡಲಾಗುವದು. ಸಂವಿಧಾನ ಪೀಠಿಕೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ನಾವೆಲ್ಲರೂ ಭಾರತಾಂಬೆಯ ಮಕ್ಕಳು ಎಂಬ ಭಾತೃತ್ವ ಭಾವನೆ ಇಮ್ಮಡಿಗೊಳ್ಳುತ್ತದೆ ಎಂದು ಅಭಿಪ್ರಾಯ ಪಟ್ಟರು.

    ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ ಮಾತನಾಡಿ 2018 ರಲ್ಲಿ ಸಂವಿಧಾನದ ಓದು ಪುಸ್ತಕವನ್ನು ಬರೆದು ಸಂವಿಧಾನ ಓದಿಸುವ ಅಭಿಯಾನ ನಡೆಸಿದೇನು. ಆಗ ನನಗನ್ನಿಸಿದ್ದು ಜನರಿಗೆ ಸಂವಿಧಾನದ ಹಸಿವಿದೆ. ಅದನ್ನು ನಾವು ಅಕ್ಷರ ರೂಪದಲ್ಲಿ ಹೊರತಂದು ಉಣಬಡಿಸಬೇಕೆಂದು ಪ್ರಯತ್ನ ಪಟ್ಟೆವು. ಆ ಅಭಿಯಾನಕ್ಕೆ ಉತ್ತಮ ಜನಸ್ಪಂಧನೆ ದೊರೆಯಿತು ಎಂದರು. ಸಂವಿಧಾನವು 1949 ನವೆಂಬರ 26 ರಂದು ಜಾರಿಯಾದ ನಂತರ ದೇಶದಲ್ಲಿ ಗಡಿ ರೇಖೆ ಗುರುತಿಸಿಕೊಂಡೆವು. ದೇಶಕ್ಕೆ ರಾಷ್ಟ್ರ ಲಾಂಛನ, ರಾಷ್ಟ್ರ ಗೀತೆ, ರಾಷ್ಟ್ರ ಚಿಹ್ನೆ ಹಾಗೇ ರಾಷ್ಟ್ರ ಬಾವುಟವನ್ನು ಹೊಂದಿದೆವು. ಆಹಾರ ಉತ್ಪಾದನಾ ಪ್ರಮಾಣ 50 ಮಿಲಿಯನ್ ಟನ್ ಇದ್ದದ್ದು ಇಂದು 310 ಮಿಲಿಯನ್ ಟನ್ ಆಹಾರ ಉತ್ಪಾದನೆ ಮಾಡುತ್ತಿದೆ. ವಿಶ್ವದ ಇತರ ದೇಶಗಳಿಗೂ ಆಹಾರ ಉತ್ಪಾದಿಸಿ ರಪ್ತು ಮಾಡುವಷ್ಟರ ಮಟ್ಟಿಗೆ ದೇಶ ಅಭಿವೃದ್ಧಿಯತ್ತ ಸಾಗಿದೆ ಎಂದರು.

    ಸಂವಿಧಾನ ಓದು ಪುಸ್ತಕವನ್ನು 5ನೇ ಹಣಕಾಸು ಯೋಜನೆ ಅಧ್ಯಕ್ಷರಾದ ಸಿ.ನಾರಾಯಣಸ್ವಾಮಿ ಅವರು ಬಿಡುಗಡೆಗೊಳಿಸಿದರು. ವಿಧಾನ ಪರಿಷತ ಸಭಾಧ್ಯಕ್ಷ ಬಸವರಾಜ ಹೊರಟ್ಟಿ, ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗ್ಡೆ, ಕೆ.ಎಚ್.ಪಾಟೀಲ ಪ್ರತಿಷ್ಠಾನದ ಅಧ್ಯಕ್ಷ ಡಿ.ಆರ್.ಪಾಟೀಲ, ಮಾಜಿ ಸಂಸದ ಆಯ್.ಜಿ.ಸನದಿ, ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷರಾದ ವಾಸಣ್ಣ ಕುರಡಗಿ, ಸಿದ್ಧು ಪಾಟೀಲ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅತಿಥಿಗಳನ್ನು ಸ್ವಾಗತಿಸಿದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ ವಂದಿಸಿದರು. ಜೆ.ಕೆ.ಜಮಾದಾರ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts