More

    ವೇದ ದರ್ಶನ 97: ಸನಾತನ ದರ್ಶನಕ್ಕೆ ನಚಿಕೇತನ ವೃತ್ತಾಂತ

    ಮಠಗಳ ಕೆಲಸ ತಮ್ಮ ಸಂದೇಶವನ್ನು ಪ್ರಚುರಿಸುವುದು ಮಾತ್ರ. ನೀತಿ ನಿಯಮಗಳನ್ನು ಗೊತ್ತುಪಡಿಸುವುದಲ್ಲ. ನೀತಿ ನಿಬಂಧನೆಗಳು ದಿನಬಳಕೆಯ ಪ್ರಾಯೋಗಿಕ, ಸಾಂರ್ದಭಿಕ ನಿಯಮಾವಳಿಗಳು. ಜನರು ತಾವು ತಾವೇ ಕಾಲಕ್ಕೆ ಒಪ್ಪಿ ಜಾರಿಗೆ ತಂದವು? ಎಂದು ಒಬ್ಬ ಸುಧಾರಣಾಪ್ರಿಯ ಲೇಖಕಿ ನೆದರ್ಲೆಂಡ್ಸ್ ದೇಶದಲ್ಲಿ ಬರೆದಿದ್ದಾಳೆ. ಪ್ರಾಣಿಗಳೂ ಹೇಸಿಗೆಪಟ್ಟುಕೊಳ್ಳುವಂತಹ ಜೀವನವನ್ನು ಮಾನವನು ನಡೆಸಬಹುದೇ? ಇನ್ನೂ ಉತ್ತಮವಾಗಿ ನಡೆಯಲು ಏನು ತೊಂದರೆ ಇದೆ? ‘‘ಬುದ್ಧಿವಂತರು’’ ಯೋಚಿಸಬೇಕಾದ ವಿಷಯ. ‘‘ಗಿಡಮರಗಳಂತೆ ಮಾನವನು ಹುಟ್ಟಿ ಬೆಳೆದು ಬಿದ್ದರೆ ಏನು ಪ್ರಯೋಜನವಾಯಿತು?’’ ಎಂದು ಕೇಳುವುದಂತೂ ಈಗ ಹೋಗಲಿ; ಕೊನೆಗೆ ಗಿಡಮರಗಳಂತಾದರೂ ಪರೋಪಕಾರ ಬುದ್ಧಿಯಿಂದ ಹಣ್ಣು, ಕಾಯಿ, ನೆರಳನ್ನು ಕೊಟ್ಟು ಬದುಕುವಂತೆ, ಮಾನವನು ಬದುಕಿದರೆ ಸಾಕೆನ್ನುವ ಕಾಲ ಬರುತ್ತಿದೆ. ಮಾನವನು ಪ್ರಾಣಿಯ ಮಟ್ಟಕ್ಕೆ ಇಳಿಯುತ್ತಿದ್ದಾನೆಂದು ಹೇಳಿದರೆ ಪ್ರಾಣಿಗಳಿಗೇ ಅವಮಾನವಾಗುವ ಕಾಲ ಬರುತ್ತಿದೆ. ನಚಿಕೇತ ಹಚ್ಚಿಟ್ಟ ಜ್ಞಾನದೀವಿಗೆಯ ಬೆಳಕಿನಲ್ಲಿ ನಡೆಯುವುದೊಂದೇ ಉಳಿವಿನ ದಾರಿ.

    ದೇಹಾತೀತ ಆತ್ಮ ಇಲ್ಲವಾದರೆ, ಪುಣ್ಯ ಪಾಪ ಯಾರಿಗೆಂದು ಪ್ರಶ್ನೆ ಏಳುತ್ತದೆ. ಇವು ಸುಳ್ಳಾದರೆ ಸರಿ-ತಪ್ಪು ಇಲ್ಲವಾಗಿ ಸಾಮಾಜಿಕ ನೀತಿ, ವ್ಯವಹಾರ ಕೆಡುತ್ತವೆ. ಇಹ-ಪರಗಳು ಹೋಗುತ್ತವೆ. ದೇವರಂತೂ ದೂರವೇ. ಹೀಗೆ ಅಂಧಕಾರಮಯ ‘‘ನರಕ’’ದ ಬಾಳಿನಲ್ಲಿ ಸಿಕ್ಕ ಮಾನವನು ಸುಖವನ್ನು ದುಃಖ ಎಂದೂ, ದುಃಖವನ್ನು ಸುಖವೆಂದೂ ಬಗೆದು, ಶಾಂತಿ ಸಿಗದೆ ಹುಚ್ಚನಾಗುವುದು ಖಂಡಿತ. ಜಗತ್ತಿನಾದ್ಯಂತ ಇದು ನಡೆಯುತ್ತಿದೆ. ಸಾಮಾಜಿಕ ನೀತಿಗಳು ಶಿಥಿಲವಾದ ದೇಶಗಳಲ್ಲಿ ಹುಚ್ಚರ ಸಂಖ್ಯೆ ಹೆಚ್ಚುತ್ತಿರುವುದನ್ನು ತಜ್ಞರು ತೋರಿಸುತ್ತಾರೆ. ಆದುದರಿಂದ ಇದು ಬದುಕಿನ ದಾರಿಯಲ್ಲ. ಕಣ್ಣಿಗೆ ಕಾಣುವ ವ್ಯವಹಾರಪ್ರಪಂಚವು, ಕಣ್ಣಿಗೆ ಕಾಣದ ‘‘ಧ್ಯೇಯಲೋಕ’’ವೆಂಬ, ‘‘ಪರ’’ದಲ್ಲಿ ಬೇರನ್ನು ಬಿಟ್ಟು ಬೆಳೆಯುತ್ತಿದೆ. ‘‘ಪರ’’ವು ಇಲ್ಲವಾದರೆ ‘‘ಇಹ’’ವು ತಾನಾಗಿಯೇ ಸತ್ತುಹೋಗುತ್ತದೆ. ಈ ‘‘ಇಹಪರ’’ಗಳ ಸಂಬಂಧವನ್ನೂ, ‘‘ಇಲ್ಲಿಂದ’’ ‘‘ಅಲ್ಲಿಗೆ’’ ತಲುಪುವ ಮಾರ್ಗವನ್ನೂ ಮೃತ್ಯುಮುಖದಿಂದಲೇ ಭೇದಿಸಿ ತಿಳಿದುಕೊಂಡು, ಮರ್ತ್ಯನಾದರೂ ಅಮರನಾಗಿ ಹೋದ ತೇಜಸ್ವೀಕುಮಾರನ ಕಥೆಯೇ ನಚಿಕೇತನ ವೃತ್ತಾಂತ. ವೇದದಿಂದ ಇತಿಹಾಸ ಪುರಾಣಗಳವರೆಗೆ ವ್ಯಾಪ್ತವಾದ ಸನಾತನ ದರ್ಶನಕ್ಕೆ ಇದು ಶ್ರೇಷ್ಠ ನಿದರ್ಶನ.


    ನಾಚಿಕೇತ ವಿದ್ಯೆಯ ಪ್ರಾಚೀನತೆ: ನಚಿಕೇತನ ವೃತ್ತಾಂತದ ಪ್ರಸ್ತಾಪ ವೇದಸಾಹಿತ್ಯದಲ್ಲಿ ಅತ್ಯಂತ ಪ್ರಾಚೀನವಾದದ್ದು. ಋಕ್ಸಂಹಿತೆಯ ಹತ್ತನೆಯ ಮಂಡಲದ 135ನೆಯ ಸೂಕ್ತದಲ್ಲೇ (‘‘ಯಸ್ಮಿನ್ ವೃಕ್ಷೇ’’ ಎಂದು ಮೊದಲಾಗಿ) ಇದು ಬಂದಿರುವುದನ್ನು ಸಾಯಣಾಚಾರ್ಯರು ತೋರಿಸಿ ವ್ಯಾಖ್ಯಾನ ಮಾಡಿರುತ್ತಾರೆ. ಇದಲ್ಲದೆ ತೈತ್ತಿರೀಯ ಬ್ರಾಹ್ಮಣಕ್ಕೆ ಈಗ ಸೇರಿಕೊಂಡು ‘‘ಕಾಠಕ’’ವೆಂದು ಪ್ರಸಿದ್ಧವಾದ ಭಾಗದಲ್ಲೂ (3-2-8) ಇದರ ಪ್ರಸ್ತಾಪವಿದೆ. ಪ್ರಸಿದ್ಧವಾದ ಕಠೋಪನಿಷತ್ತಿನಲ್ಲಿಯಂತೂ ಇದರ ಸಂಪೂರ್ಣ ಚರಿತ್ರೆಯೇ ಆಧ್ಯಾತ್ಮಿಕ ಮಹತ್ತ್ವಪೂರ್ಣವಾಗಿ ಬಂದಿದೆ. ಆದುದರಿಂದ ಈ ಉಪನಿಷತ್ತಿನಲ್ಲಿ ಪ್ರತಿಪಾದಿತವಾದ ವಿಷಯಗಳನ್ನು ತೀರ ಇತ್ತೀಚಿನವೆಂದೂ ‘‘ಪ್ರಾಚೀನ ಉಪನಿಷತ್ತು’’ಗಳ ವಿಚಾರಧಾರೆಗೆ ಸೇರಿಲ್ಲವೆಂದೂ ಕೆಲವು ಪಾಶ್ಚಾತ್ಯ-ಪೌರಸ್ತ್ಯ ‘‘ವಿಮರ್ಶಕರು’’ ಅಲ್ಲಗಳೆಯಲು ಪ್ರಯತ್ನಿಸಿರುವುದು ಶೋಚನೀಯ!

    ಉಪನಿಷತ್ತಿನ ಹಿನ್ನೆಲೆ: ‘ನಚಿಕೇತ’ ಎಂಬುದು ಅಗ್ನಿದೇವನ ಅನೇಕ ನಾಮಗಳಲ್ಲೊಂದು. ಈ ಹೆಸರು ಹೊಂದಿ ಪ್ರಸಿದ್ಧನಾದ ಋಷಿಕುಮಾರನೂ ಸಾಂಕೇತಿಕವಾಗಿ ಅಗ್ನಿಯೇ. ಈ ಅಗ್ನಿ ಎಂದೆಂದೂ ನಂದದೆ ಜಾಜ್ವಲ್ಯಮಾನವಾಗಿಯೇ ಉರಿಯುತ್ತಿರುದರಿಂದ ಇವನು ‘‘ಕುಮಾರನು.’’ (ಇದೇ ಅರ್ಥದಲ್ಲೇ ಪ್ರಸಿದ್ಧರಾದ ಸನತ್ಕುಮಾರರೇ ಮೊದಲಾದ ಬ್ರಹ್ಮಮಾನಸಪುತ್ರರೂ ಸಾಂಕೇತಿಕವಾಗಿ ‘‘ಕುಮಾರರೇ’’) ಋಕ್ಸಂಹಿತೆಯಲ್ಲಂತೂ (10-135) ನಚಿಕೇತನನ್ನು ಹೆಸರಿನಿಂದ ನಿರ್ದೇಶಿಸದೆ ‘‘ಕುಮಾರ’’ ನಾಮದಿಂದಲೇ ಸೂಚಿಸಿರುವುದು ಗಮನೀಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts