More

    ಮಕ್ಕಳ ಆರೋಗ್ಯ ರಕ್ಷಣೆಗೆ ‘ವಾತ್ಸಲ್ಯ’: ಕಾರ್ಕಳ ಶಾಸಕ ಸುನೀಲ್ ನೇತೃತ್ವದಲ್ಲಿ ಹೊಸ ಯೋಜನೆ

    ಕಾರ್ಕಳ: 15 ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆ ನಡೆಸುವ ಮೂಲಕ ಮುಂಜಾಗ್ರತೆ ವಹಿಸಲು ವಾತ್ಸಲ್ಯ ಎಂಬ ಹೆಸರಿನಡಿಯಲ್ಲಿ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ವಿ. ಸುನೀಲ್ ಕುಮಾರ್ ತಿಳಿಸಿದರು.

    ಕರೊನಾ 2ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ವೈದ್ಯಕೀಯ ವ್ಯವಸ್ಥೆ ಹಾಗೂ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಜತೆಗೆ ಹೆಬ್ರಿ ಮತ್ತು ಕಾರ್ಕಳ ಆಸ್ಪತ್ರೆಯಲ್ಲಿ ಆಕ್ಸಿಜನ್ ಘಟಕಗಳು ನಿರ್ಮಾಣ ಹಂತದಲ್ಲಿದ್ದು, ಜುಲೈ ತಿಂಗಳಲ್ಲಿ ಕಾರ್ಯಾರಂಭಗೊಳ್ಳಲಿವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ಕೋವಿಡ್ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮಕಾರಿಯಾಗಲಿದೆ ಎಂಬ ತಜ್ಞರ ಅಭಿಪ್ರಾಯದ ಹಿನ್ನೆಲೆಯಲ್ಲಿ ವಾತ್ಸಲ್ಯ ಕಾರ್ಯಕ್ರಮದಡಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಒಟ್ಟು 230 ಅಂಗನವಾಡಿ ಹಾಗೂ 220 ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಾಲಾ ಮಕ್ಕಳನ್ನು ಸೇರಿಸಿಕೊಂಡು ಈ ಶಿಬಿರ ಏರ್ಪಡಿಸಲಿದ್ದೇವೆ. ಜೂ.28ರಂದು ಶಿಬಿರಕ್ಕೆ ಚಾಲನೆ ದೊರೆಯಲಿದ್ದು, ಪ್ರತಿದಿನ 10 ಕಡೆಗಳಲ್ಲಿ ಶಿಬಿರ ಆಯೋಜನೆಗೊಳ್ಳಲಿದ್ದು, 100ರಿಂದ 150 ಮಕ್ಕಳಿಗೆ ತಪಾಸಣೆ ನಡೆಯಲಿದೆ.

    ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ 40 ಸಾವಿರಕ್ಕೂ ಅಧಿಕ ಮಕ್ಕಳು ಶಿಬಿರದಲ್ಲಿ ಭಾಗವಹಿಸಲಿದ್ದು, ಪ್ರತಿ ಶಿಬಿರದಲ್ಲಿ ಮಕ್ಕಳ ಪೌಷ್ಟಿಕತೆ ಮತ್ತು ಇಮ್ಯುನಿಟಿ ಪವರ್ ಹೆಚ್ಚಿಸುವ ಔಷಧವನ್ನು ಉಚಿತವಾಗಿ ಪೂರೈಸಲಾಗುವುದು. ಅಗತ್ಯವಿದ್ದರೆ ಹೆಚ್ಚಿನ ಚಿಕಿತ್ಸೆಗೂ ನೆರವಾಗುವ ಯೋಜನೆ ಹಾಕಿಕೊಳ್ಳಲಾಗಿದೆ. ತಾಲೂಕಿನ ಆರೋಗ್ಯ ಇಲಾಖೆಯಡಿ ಈಗಾಗಲೇ ಅಪೌಷ್ಟಿಕತೆಯಿಂದ ಬಳಲುವ 241 ಮಕ್ಕಳು ಮತ್ತು ವಿವಿಧ ರೋಗಗಳಿಂದ ಬಳಲುವ 430 ಮಕ್ಕಳ ಸಹಿತ ಒಟ್ಟು 675 ಮಕ್ಕಳನ್ನು ಈಗಾಗಲೇ ಗುರುತಿಸಲಾಗಿದೆ. ಮೂರನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಪೂರ್ವ ತಯಾರಿ ನಡೆಸಲಾಗಿದೆ. ಪಾಲಕರು ತಮ್ಮ ಮಕ್ಕಳ ಮೇಲೆ ವಿಶೇಷ ಕಾಳಜಿ ವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಶಾಸಕರು ವಿನಂತಿಸಿದರು.
    ಜಿಲ್ಲಾ ಪಂಚಾಯಿತಿ ನಿಕಟಪೂರ್ವ ಮಾಜಿ ಸದಸ್ಯರಾದ ಉದಯ ಎಸ್.ಕೋಟ್ಯಾನ್, ಸುಮಿತ್ ಶೆಟ್ಟಿ, ತಾಲೂಕು ಆರೋಗ್ಯಾಧಿಕಾರಿ ಕೃಷ್ಣಾನಂದ ಶೆಟ್ಟಿ ಉಪಸ್ಥಿತರಿದ್ದರು.

    ಸಚಿವ ಬೊಮ್ಮಾಯಿ ಉದ್ಘಾಟನೆ
    ಪೆರ್ವಾಜೆ ಶಾಲೆಯಲ್ಲಿ ಜೂನ್ 28ರಂದು ಬೆಳಗ್ಗೆ 10.30ಕ್ಕೆ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಉಭಯ ತಾಲೂಕಿನಲ್ಲಿ ಒಟ್ಟು 400 ಶಿಬಿರಗಳು ಮುಂದಿನ 2 ತಿಂಗಳಲ್ಲಿ ನಡೆಯಲಿದ್ದು, 40 ಮಂದಿ ತಜ್ಞ ವೈದ್ಯರ ತಂಡ ಕಾರ್ಯನಿರ್ವಹಿಸಲಿದೆ ಎಂದು ಸುನೀಲ್ ಕುಮಾರ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts