More

    ಅಭಿವೃದ್ಧಿಯಿಂದ ನಕ್ಸಲ್ ಚಟುವಟಿಕೆ ದೂರ: ಶಾಸಕ ವಿ.ಸುನೀಲ್ ಕುಮಾರ್

    ಕಾರ್ಕಳ: ಪಶ್ಚಿಮಘಟ್ಟ ತಪ್ಪಲು ಪ್ರದೇಶದಲ್ಲಿ ಬೀಡುಬಿಟ್ಟಿದ್ದ ನಕ್ಸಲ್ ಹೋರಾಟವು ಕ್ಷೀಣಿಸಲು ಆ ಪ್ರದೇಶಗಳಲ್ಲಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಯೇ ಕಾರಣ. ಬುಡಕಟ್ಟು ಸಮುದಾಯದ ಹಿತಕಾಯಲು ಸರ್ಕಾರ ಬದ್ಧವಿದೆ. ಕೇವಲ ಕಾನೂನು ನೆಪ ಎದುರಿಗಿಟ್ಟರೆ ಅಭಿವೃದ್ಧಿಗೆ ಮಾರಕವಾಗುತ್ತದೆ ಎಂದು ಶಾಸಕ ವಿ.ಸುನೀಲ್ ಕುಮಾರ್ ಹೇಳಿದರು.

    ನಗರದ ಮಂಜುನಾಥ ಪೈ ಸಭಾಂಗಣದಲ್ಲಿ ರಾಜ್ಯ ಮಲೆಕುಡಿಯ ಸಂಘ ವತಿಯಿಂದ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ತಳ ಸಮುದಾಯಗಳ ಅಧ್ಯಯನ ಕೇಂದ್ರ, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಆಶ್ರಯದಲ್ಲಿ ಆಯೋಜಿಸಿದ ಅರಣ್ಯ ಹಕ್ಕು ಕಾಯ್ದೆ-2006 ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಮಾತನಾಡಿ, ರಾಜ್ಯವ್ಯಾಪಿ ಪ್ರವಾಸ ನಡೆಸಿ ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಿ ಬುಡಕಟ್ಟು ಜನಾಂಗಗಳ ಬಗ್ಗೆ ಮಾಹಿತಿ ಕಲೆ ಹಾಕಿ ಸರ್ಕಾರಕ್ಕೆ ವರದಿ ನೀಡುವುದಾಗಿ ತಿಳಿಸಿದರು.
    ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿದರು. ರಾಜ್ಯ ಮಲೆಕುಡಿಯ ಸಂಘದ ಅಧ್ಯಕ್ಷ ಅಣ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶೆ ಕಾವೇರಿ ಅರಣ್ಯ ಹಕ್ಕು ಕಾಯ್ದೆ ಕುರಿತು ಮಾಹಿತಿ ನೀಡಿದರು. ಕುದುರೆಮುಖ ವನ್ಯಜೀವಿ ವಿಭಾಗದ ಡಿಎಫ್‌ಒ ರುದ್ರನ್, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ಲಲಿತಾ ಬಾಯಿ, ಸಮಗ್ರ ಗ್ರಾಮೀಣ ಆಶ್ರಮದ ಅಶೋಕ್‌ಕುಮಾರ್ ಶೆಟ್ಟಿ, ವನಧನ ವಿಕಾಸ ಯೋಜನೆ ಟ್ರೈಪೈಡ್‌ನ ಜಿ.ಎಂ. ಗಗನ್‌ಪ್ರಕಾಶ್, ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಶೈಲೆಂದ್ರ ಕುಮಾರ್, ತಹಸೀಲ್ದಾರ್ ಪುರಂದರ ಹೆಗ್ಡೆ ಉಪಸ್ಥಿತರಿದ್ದರು.
    ದ.ಕ, ಉಡುಪಿ ಚಿಕ್ಕಮಗಳೂರು, ಕೊಡಗು ಮಲೆಕುಡಿಯ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.
    ಶ್ರೀಧರ ಗೌಡ ಈದು ಸ್ವಾಗತಿಸಿ ಪ್ರಸ್ತಾವಿಸಿದರು. ಪ್ರಶಾಂತ ಹೆರ್ಮುಂಡೆ ವಂದಿಸಿದರು. ಗಂಗಾಧರ ಕಾರ್ಯಕ್ರಮ ನಿರೂಪಿಸಿದರು.

    ಸಮುದಾಯದ ಹಕ್ಕುಗಳ ಬಗ್ಗೆ ಇಲಾಖೆಯಲ್ಲಿ ತದ್ವಿರುದ್ಧ ನಿಲುವಿನಿಂದ ಗೊಂದಲವಿದೆ. ಸರ್ಕಾರ ಮಟ್ಟದಲ್ಲಿ ಕಾನೂನಿನ ತೊಡಕಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಅಲ್ಲಿವರೆಗೆ ಈಗಿನ ಕಾಯ್ದೆ ಪ್ರಕಾರ ನಡೆದುಕೊಳ್ಳಬೇಕಿದೆ. ಹಕ್ಕು ಪತ್ರ ವಿತರಣೆ ಸಂಬಂಧ ಶೀಘ್ರ ಜಿಲ್ಲಾಮಟ್ಟದ ಸಭೆ ಕರೆಯಲಾಗುವುದು.
    ಜಿ.ಜಗದೀಶ್, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts