More

    ಹಾವೇರಿ ಜಿಲ್ಲೆಯ ವಿವಿಧೆಡೆ ಮುಂದುವರಿದ ವರುಣನಬ್ಬರ, ಗುತ್ತಲದಲ್ಲಿ ಮನೆಗಳಿಗೆ ನುಗ್ಗಿದ ನೀರು

    ಹಾವೇರಿ: ಜಿಲ್ಲೆಯಲ್ಲಿ ಮಂಗಳವಾರ ರಾತ್ರಿಯೂ ಭರ್ಜರಿ ಮಳೆಯಾಗಿದ್ದು, ಕೆರೆಕಟ್ಟೆಗಳು ತುಂಬಿ ಹರಿದು ಹೊಲಗದ್ದೆಗಳು ಜಲಾವೃತಗೊಂಡಿವೆ.

    ತಾಲೂಕಿನ ಗುತ್ತಲದಲ್ಲಿ ಜಿಲ್ಲೆಯಲ್ಲಿಯೇ ಅತಿಹೆಚ್ಚಿನ ಪ್ರಮಾಣದ ಮಳೆಯಾಗಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಮನೆಗಳು ಕುಸಿದಿವೆ. ಕೋಳಿ ಫಾಮರ್್​ಗೆ ನೀರು ನುಗ್ಗಿ ಸಾವಿರಾರು ಕೋಳಿಗಳು ಮೃತಪಟ್ಟಿವೆ. ಕಳೆದ ಕೆಲವು ದಿನಗಳಿಂದ ರಾತ್ರಿ ಮಳೆ ಅಬ್ಬರಿಸುತ್ತಿದ್ದು, ಹಗಲಿನ ವೇಳೆ ಬಿಸಿಲು ಮೂಡುತ್ತಿದೆ.

    ತಾಲೂಕಿನ ಕೆರೆಕೊಪ್ಪ ಗ್ರಾಮದ ಕೆರೆ ತುಂಬಿ ನೂರಾರು ಎಕರೆ ಪ್ರದೇಶದ ಹೊಲಗದ್ದೆಗಳಿಗೆ ನೀರು ನುಗ್ಗಿದೆ. ಸವಣೂರ ತಾಲೂಕಿನ ಅಲ್ಲಿಪುರ, ಹತ್ತಿಮತ್ತೂರು ಮುಂತಾದ ಗ್ರಾಮಗಳಲ್ಲೂ ರಾತ್ರಿಯಿಡಿ ರಸ್ತೆ ಮೇಲೆಯೇ ನೀರು ಹರಿದಿದೆ. ಗುತ್ತಲದ ಮಹಮ್ಮದ್ ರಫೀಕ್ ಬಾಲೆಬಾಯಿ ಎಂಬವರಿಗೆ ಸೇರಿದ ಕೋಳಿ ಫಾಮರ್್​ಗೆ ನೀರು ನುಗ್ಗಿ ಸಾವಿರಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

    ಮಂಗಳವಾರ ರಾತ್ರಿ ಗಂಟೆಗೂ ಅಧಿಕ ಕಾಲ ಜಿಲ್ಲಾದ್ಯಂತ ಜೋರಾದ ಮಳೆ ಸುರಿದಿದೆ. ಬುಧವಾರ ಸಂಜೆ ಗುತ್ತಲ ಸೇರಿ ಕೆಲವು ಕಡೆಗಳಲ್ಲಿ ಒಂದೆರಡು ಸಲ ಸಾಧಾರಣ ಮಳೆಯಾಗಿದೆ. ನಿರಂತರ ಮಳೆಯಿಂದ ಕೆರೆಗಳು ಕೋಡಿ ಬಿದ್ದು ತಗ್ಗುಪ್ರದೇಶಗಳಿಗೆ ನೀರು ನುಗ್ಗುತ್ತಿವೆ. ಅಪಾರ ಪ್ರಮಾಣದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆ ಕೊಳೆತು ಹಾಳಾಗುತ್ತಿದೆ. ಶೇಂಗಾ, ಹೆಸರು, ಹತ್ತಿ, ಮೆಕ್ಕೆಜೋಳ, ಸೋಯಾಬೀನ್ ಮುಂತಾದ ಬೆಳೆ ಕೊಳೆಯುತ್ತಿದೆ. ಇನ್ನೂ ಕೆಲವು ದಿನ ಮಳೆಯಾಗುವ ಸಾಧ್ಯತೆಯಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಬೆಳ್ಳುಳ್ಳಿ ಕಟಾವು ಹಂತದಲ್ಲಿದ್ದು, ಬೆಳೆ ಸಂಪೂರ್ಣ ಕೊಳೆತು ಹೋಗಿದೆ.

    ಗುತ್ತಲದಲ್ಲಿ ಅತಿಹೆಚ್ಚು ಮಳೆ…

    ಮಂಗಳವಾರ ಬೆಳಗ್ಗೆಯಿಂದ ಬುಧವಾರ ಬೆಳಗ್ಗೆಯ 24 ತಾಸಿನ ಅವಧಿಯಲ್ಲಿ ಜಿಲ್ಲೆಯ ಗುತ್ತಲ ಪಟ್ಟಣದಲ್ಲಿ ಅತಿಹೆಚ್ಚು 150.4 ಮಿಮೀ ಮಳೆಯಾಗಿದೆ. ಹಾವೇರಿ 31.2, ರಾಣೆಬೆನ್ನೂರ 22.2, ಬ್ಯಾಡಗಿ 16.4, ಹಿರೇಕೆರೂರ 8.8, ರಟ್ಟಿಹಳ್ಳಿ 18.4, ಸವಣೂರ 9.0, ಶಿಗ್ಗಾಂವಿ 8.6, ಹಾನಗಲ್ಲ 17.3 ಮಿಮೀ ಮಳೆಯಾದ ವರದಿಯಾಗಿದೆ.

    ಮನೆ ನಿರ್ಮಾಣದಲ್ಲಿ ತೊಡಗಿದ್ದ ಯುವಕ ಸಾವು

    ಮನೆ ನಿರ್ಮಾಣ ಕೆಲಸದಲ್ಲಿ ತೊಡಗಿದ್ದ ಯುವಕನೋರ್ವ ವಿದ್ಯುತ್ ತಗುಲಿ ಮೃತಪಟ್ಟಿರುವ ಘಟನೆ ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.

    ಕನವಳ್ಳಿ ಗ್ರಾಮದ ಗೌಸಮೋದಿನ ಅಬ್ದುಲ್​ಖಾದರ ಬೇವಿನಮರದ (20) ಮೃತ ಯುವಕ. ಕಟ್ಟಡದ ಮೇಲೆ ನಿಂತು ಕೆಲಸ ಮಾಡುತ್ತಿದ್ದ ಸಮಯದಲ್ಲಿ ವಿದ್ಯುತ್ ಸ್ಪರ್ಶಗೊಂಡು ಮೃತಪಟ್ಟಿದ್ದಾನೆ. ಗ್ರಾಮದ ಗದಿಗೆಪ್ಪ ಇಟಗಿ ಎಂಬುವವರ ಮನೆ ನಿರ್ಮಾಣ ಕಾಮಗಾರಿಯಯಲ್ಲಿ ಯುವಕ ತೊಡಗಿಕೊಂಡಿದ್ದ. ಕೂಡಲೇ ಜಿಲ್ಲಾಸ್ಪತ್ರೆಗೆ ಕರೆತರಲು ವ್ಯವಸ್ಥೆ ಮಾಡಲಾಗಿತ್ತಾದರೂ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts