More

    ವರುಣ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ಖಚಿತ: ಸೋಮಣ್ಣ

    ಒಬ್ಬ ಮಾಜಿ ಮುಖ್ಯಮಂತ್ರಿ ಪ್ರತಿನಿಧಿಸುವ ಕ್ಷೇತ್ರ ಯಾವ ರೀತಿ ಇರಬಾರದೋ ಆ ರೀತಿ ವರುಣ ಇದೆ. ಕ್ಷೇತ್ರ ಪ್ರದಕ್ಷಿಣೆ ಹಾಕುವಾಗ ಮುಖ್ಯಮಂತ್ರಿ ಪ್ರತಿನಿಧಿಸಿದ್ದ ಕ್ಷೇತ್ರವೆಂದು ಹೇಳಲು ಸ್ವತಃ ನನಗೆ ನಾಚಿಕೆಯಾಗುತ್ತದೆ. ಆದ್ದರಿಂದ ಕ್ಷೇತ್ರದ ಸಮಗ್ರ ಅಭಿವೃದ್ಧಿ ಸಂಬಂಧ ದೂರದೃಷ್ಟಿಯ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದೇನೆ. ಮತದಾರರು ನನಗೊಂದು ಅವಕಾಶ ನೀಡಬೇಕು ಎಂದು ವರುಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಮನವಿ ಮಾಡಿದರು.

    ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದರು.

    ಸಿದ್ದರಾಮಯ್ಯ ಅಭಿವೃದ್ಧಿ ಕೆಲಸ ಮಾಡದಿದ್ದರೂ ಅದೃಷ್ಟದ ರಾಜಕಾರಣಿ. ಜನರು ಮತ್ತೆ ಮತ್ತೆ ಗೆಲ್ಲಿಸಿದ್ದರೂ ತಂದೆ-ಮಗ ಎಚ್ಚೆತ್ತುಕೊಂಡು ಸೇವೆ ಮಾಡಲಿಲ್ಲ. 15 ವರ್ಷಗಳಲ್ಲಿ ಸಿದ್ದರಾಮಯ್ಯ ಮತ್ತು ಅವರ ಮಗ ಯತೀಂದ್ರ ಕ್ಷೇತ್ರವನ್ನು ಚಿನ್ನದ ತಕ್ಕಡಿಯಲ್ಲಿ ತೂಗುವಂತೆ ಅಭಿವೃದ್ಧಿಪಡಿಸಬಹುದಿತ್ತು. ತಗಡೂರು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿ ಮಾಡಬಹುದಿತ್ತು. ಕ್ಷೇತ್ರದ 8 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲೂ ಮೂಲಸೌಕರ್ಯಗಳ ಕೊರತೆಯಿದೆ. ಕ್ಷೇತ್ರ ಮೂರು ತಾಲೂಕುಗಳಲ್ಲಿ ಹಂಚಿಹೋಗಿದೆ ಎಂದು ದೂರಿದರು.

    ವರುಣ ಜನ ಬದಲಾವಣೆ ಬಯಸಿದ್ದಾರೆ

    ವರುಣ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಅದಕ್ಕೆ ಪೂರಕವಾದ ವಾತಾವರಣ ಸೃಷ್ಟಿಯಾಗಿದ್ದು, ಈ ಬಾರಿ ಬಿಜೆಪಿಗೆ ಅತಿ ಹೆಚ್ಚು ಮತಗಳನ್ನು ನೀಡುವ ಮೂಲಕ ಆಶೀರ್ವದಿಸಬೇಕು ಎಂದು ಸೊಮಣ್ಣ ಮನವಿ ಮಾಡಿದರು.
    ಈ ಕ್ಷೇತ್ರವನ್ನು ಗಮನಿಸಿದಾಗ ಅಚ್ಚರಿಯಾಗುತ್ತದೆ. ಮೈಸೂರಿನ ಹೃದಯಭಾಗದ ಪಕ್ಕದಲ್ಲಿದ್ದರೂ ಇಷ್ಟೊಂದು ಹಿಂದುಳಿಯಲು ಹೇಗೆ ಸಾಧ್ಯ? ಇಲ್ಲಿ ಯಾವ ಸೌಕರ್ಯಗಳಿವೆ ಎನ್ನುವುದನ್ನು ಪಟ್ಟಿ ಮಾಡಲು ಸಾಧ್ಯವೇ ಇಲ್ಲ. ಸರ್ಕಾರದ ಯೋಜನೆಗಳೇ ಜನರಿಗೆ ತಲುಪುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಸಮಗ್ರ ಬದಲಾವಣೆ ಆಗಬೇಕಿದೆ, ಮಾದರಿಯಾಗಿ ಪರಿವರ್ತಿಸಬೇಕು. ಅದಕ್ಕಾಗಿ ದೂರದೃಷ್ಟಿಯ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದೇನೆ. ಮತದಾರರು ನನಗೊಂದು ಅವಕಾಶ ನೀಡುವ ನಂಬಿಕೆ ಇದೆ ಎಂದರು.

    ಗೋವಿಂದರಾಜನಗರದ ಅಭಿವೃದ್ಧಿ ನೋಡಿ

    ನಾನು ಇಲ್ಲಿಯತನಕ ಪ್ರತಿನಿಧಿಸುತ್ತಿದ್ದ ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರವನ್ನು ಪ್ರತಿಯೊಬ್ಬರೂ ನೋಡಬೇಕು. ಒಂದು ಕ್ಷೇತ್ರವನ್ನು ಶಾಸಕ ಯಾವ ರೀತಿ ಅಭಿವೃದ್ಧಿ ಮಾಡಬಹುದು ಎನ್ನುವುದಕ್ಕೆ ಸಾಕ್ಷಿಯಾಗಿದೆ. ಅಲ್ಲಿ ಯಾವುದೂ ಅಭಿವೃದ್ಧಿ ಆಗಿಲ್ಲವೆಂದು ಹೇಳುವಂತಿಲ್ಲ. ಒಂದು ಪುಟ್ಟ ಉದಾಹರಣೆ ಎಂದರೆ, ಇಡೀ ಕ್ಷೇತ್ರದಲ್ಲಿರುವ ಎಲ್‌ಇಡಿ ದೀಪಗಳಲ್ಲಿ ಒಂದು ದೀಪ ಕೆಟ್ಟರೂ ಯಾವ ಏರಿಯಾದ, ಯಾವ ಕಂಬದಲ್ಲಿ ಕೆಟ್ಟಿದೆ ಎನ್ನುವುದನ್ನು ಕುಳಿತಲ್ಲಿಯೇ ನೋಡಬಹುದು. ವಾರ್ ರೂಂ ರೀತಿಯ ಒಂದು ಪುಟ್ಟ ಕೊಠಡಿಯಲ್ಲಿ ಎಲ್ಲವೂ ತಿಳಿಯುತ್ತದೆ. ಇಂತಹ ಸಾಕಷ್ಟು ಆವಿಷ್ಕಾರಗಳು ಹಾಗೂ ಅಭಿವೃದ್ಧಿ ಕೆಲಸಗಳನ್ನು ವರಣದಲ್ಲೂ ಮಾಡಬೇಕಿದೆ ಎಂದು ಸೋಮಣ್ಣ ವಿವರಿಸಿದರು.

    ವರುಣ ಕ್ಷೇತ್ರದಲ್ಲಿ ಪಾಳೆಗಾರಿಕೆ ಮಾಡಿದ್ದಾರೆ

    ವರುಣ ಕ್ಷೇತ್ರವನ್ನು ಕಡೆಗಣಿಸಿರುವ ಸಿದ್ದರಾಮಯ್ಯ ಅವರು, ಒಂದೇ ವರ್ಗಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಪಾಳೆಗಾರಿಕೆ ಮಾಡಿದ್ದಾರೆ. ಎಂದಿಗೂ ಅವರಂತೆ ಗೌರವ ಬಿಟ್ಟು ನಾನು ಮಾತನಾಡುವುದಿಲ್ಲ. ರಾಜಕಾರಣ ಯಾರು ಬೇಕಾದರೂ ಮಾಡುತ್ತಾರೆ. ಆದರೆ ಜಾತಿ ಹೆಸರಲ್ಲಿ ರಾಜಕಾರಣ ಮಾಡಬಾರದು ಎಂದು ಸೋಮಣ್ಣ ಹೇಳಿದರು.
    ಇಷ್ಟು ವರ್ಷವಾದರೂ ಸಿದ್ದರಾಮಯ್ಯ ಕ್ಷೇತ್ರದ ಎಲ್ಲ ಕಡೆ ಹೋಗಿಲ್ಲ. ಆದರೆ ನಾನು ಕ್ಷೇತ್ರದ ಮೂಲೆ ಮೂಲೆಗೆ ಓಡಾಡಿದ್ದೇನೆ. ಕ್ಷೇತ್ರದಲ್ಲಿ ಬಡತನ ಹೆಚ್ಚಿದೆ. ಗುಂಪುಗಾರಿಕೆ ಮಾಡಿ ಪದೇ ಪದೆ ಮತ ಹಾಕಿಸಿಕೊಳ್ಳುತ್ತಿದ್ದಾರೆ. ಅಭಿವೃದ್ಧಿಯಲ್ಲಿ ಕ್ಷೇತ್ರ ಕಡೆಗಣಿಸಿದ್ದಾರೆ. ಆದರೂ ಇಷ್ಟು ವರ್ಷ ಜನ ಆಶೀರ್ವಾದ ಮಾಡಿದ್ದಾರೆ. ಈ ಬಾರಿ ಜನರಿಗೆ ಎಲ್ಲ ಗೊತ್ತಾಗಿದೆ. ಕ್ಷೇತ್ರದ ಅನೇಕ ಗ್ರಾಮಗಳಿಗೆ ಇನ್ನೂ ಬಸ್ ವ್ಯವಸ್ಥೆಯೇ ಇಲ್ಲ. ಅವರ ಕಾಲದಲ್ಲಿ ವಿಮಾನ ನಿಲ್ದಾಣ ವಿಸ್ತರಿಸಲಿಲ್ಲ. ವಿಮಾನ ನಿಲ್ದಾಣ ಸಮೀಪದ ಕೆಲ ಗ್ರಾಮಗಳಲ್ಲಿ ಸರಿಯಾದ ರಸ್ತೆ ಮಾಡಿಲ್ಲ ಎಂದು ದೂರಿದರು.

    ಭೀತಿಯ ವಾತಾವರಣ ಸೃಷ್ಟಿ

    ಸಿದ್ದರಾಮಯ್ಯ ಮತ್ತು ತಂಡ ಸೋಲುವ ಭಯದಿಂದ ಕ್ಷೇತ್ರದಲ್ಲಿ ಭೀತಿಯ ವಾತಾವರಣ ಮೂಡಿಸಿದ್ದಾರೆ. ಹಾಗಾಗಿ, ನಮ್ಮ ಕಾರ್ಯಕರ್ತರ ಮೇಲೆ ಅನೇಕ ಕಡೆ ಹಲ್ಲೆ ನಡೆದಿದೆ ಎಂದು ಸೋಮಣ್ಣ ಹರಿಹಾಯ್ದರು.
    ಸಿದ್ದರಾಮಯ್ಯ ಜನಪರವಾಗಿ ಕೆಲಸ ಮಾಡಿ ಹೆಜ್ಜೆ ಗುರುತು ಉಳಿಸಿಲ್ಲ. ಅದೃಷ್ಟವಿದೆ ಅಂತ ತಲೆಯನ್ನು ಬಂಡೆಗೆ ಹೊಡೆದುಕೊಳ್ಳುತ್ತಿದ್ದಾರೆ. ವಸತಿ ಸಚಿವ ಏನು ಮಾಡಿದ್ದಾನೆ? ಮನೆ ಕೊಟ್ಟಿಲ್ಲ, ಬುರುಡೆ ಬಿಡುತ್ತಾನೆ ಎಂದು ಹೇಳುತ್ತಿದ್ದಾರೆ. ಆದರೆ ಕಳೆದ ಮೂರು ವರ್ಷಗಳಲ್ಲಿ ವಸತಿ ಸಚಿವನಾಗಿ ವರುಣ ಕ್ಷೇತ್ರವೊಂದರಲ್ಲೇ 4,045 ಮನೆಗಳನ್ನು ಬಡವರಿಗೆ ನೀಡಿದ್ದೇನೆ ಎಂದರು.
    ಸೋಲಿನ ಹತಾಶೆಯಿಂದ ಕಾಂಗ್ರೆಸ್ ಚುನಾವಣಾ ಪ್ರಚಾರದಲ್ಲಿ ಬಸವಣ್ಣ ಅವರ ಬಾವುಟ ಹಾರಿಸುತ್ತಿದ್ದಾರೆ. ಲಿಂಗಾಯತ ಸಮುದಾಯದಲ್ಲಿ ಕ್ಷಮೆ ಕೇಳಿದ್ದಾರೆ ಎಂದು ಆರೋಪಿಸಿದರು.
    ಡಾ.ರಾಜ್ ಕುಟುಂಬದ ಬಗ್ಗೆ ಗೌರವವಿದೆ. ಕುಟುಂಬ ಸದಸ್ಯರ ಜತೆ ಅವಿನಾಭಾವ ಸಂಬಂಧ ಹೊಂದಿದ್ದೇನೆ. ಹಾಗಾಗಿ, ಕುಟುಂಬ ಸದಸ್ಯರು ಚುನಾವಣ ಪ್ರಚಾರಕ್ಕೆ ಏಕೆ ಬಂದರು ಎಂದಷ್ಟೇ ನಾನು ಕೇಳಿದ್ದೆ ಎಂದ ಅವರು, ಲೂಸ್‌ಮಾದ ಯೋಗಿ, ರಮ್ಯಾ, ದುನಿಯಾ ವಿಜಯ್ ಕರೆಸಿದ್ದಾರೆ. ಸೋಲಿನ ಭೀತಿ ಸಿದ್ದರಾಮಯ್ಯ ಅವರಿಗಿದೆ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದರು.

    ವರಿಷ್ಠರ ನಂಬಿಕೆ ಸಾಕಾರಗೊಳಿಸುವುದೇ ಗುರಿ!

    ಪಕ್ಷದ ವರಿಷ್ಠರಾದ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೇ ಮನೆಗೆ ಬಂದು ವರುಣ ಕ್ಷೇತ್ರದಲ್ಲಿ ನಿಲ್ಲುವಂತೆ ಜವಾಬ್ದಾರಿ ವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ನಿಲ್ಲುವಂತೆ ಸೂಚಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಶ್ರೀರಾಮುಲು ಕೂಡ ಮಾರ್ಗದರ್ಶನ ಮಾಡಿದ್ದಾರೆ. ಸಂಸದ ವಿ.ಶ್ರೀನಿವಾಸಪ್ರಸಾದ್ ಕೂಡ ಆಶೀರ್ವಾದ ಮಾಡಿದ್ದಾರೆ. ಎಲ್ಲರೂ ಗೋವಿಂದರಾಜನಗರ ಮಾದರಿ ವರುಣವನ್ನು ಅಭಿವೃದ್ಧಿ ಮಾಡುವಂತೆ ನನ್ನನ್ನು ಕಳಿಸಿದ್ದಾರೆ. ವರಿಷ್ಠರ ನಂಬಿಕೆ ಸಾಕಾರಗೊಳಿಸುವುದೇ ಗುರಿಯಾಗಿದೆ. ನಾನು ಹೇಡಿಯಲ್ಲ, ಸವಾಲು ಸ್ವೀಕರಿಸಿ ಗೆಲ್ಲುವ ಕಿಲಾಡಿ. ವರುಣ ಕ್ಷೇತ್ರದಲ್ಲಿ ಗೆಲುವು ಖಚಿತ ಎಂದರು.

    ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ, ಉಪಾಧ್ಯಕ್ಷ ಎಂ.ಬಸವಣ್ಣ, ಕಾರ್ಯದರ್ಶಿ ಪಿ.ರಂಗಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts