More

    ನಮಸ್ತೆ ಟ್ರಂಪ್​ ಕಾರ್ಯಕ್ರಮ: ಬೃಹತ್​ ಗೋಡೆ ಬೆನ್ನಲ್ಲೇ ಸ್ಲಮ್ ನಿವಾಸಿಗಳ​ ಸ್ಥಳಾಂತರಕ್ಕೆ ನೋಟಿಸ್​

    ಅಹಮದಾಬಾದ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅಹಮದಾಬಾದ್​ ಭೇಟಿ ಹಿನ್ನೆಲೆಯಲ್ಲಿ ಕೊಳೆಗೇರಿಗಳು ಕಾಣಿಸದಂತೆ ಬೃಹತ್​ ಗೋಡೆಯನ್ನು ನಿರ್ಮಿಸಿರುವ ಗುಜರಾತ್​ ಸರ್ಕಾರದ ಕ್ರಮ ಚರ್ಚೆಗೆ ಗುರಿಯಾಗಿತ್ತು. ಇದೀಗ ಸುಮಾರು 45 ಕೊಳೆಗೇರಿ ನಿವಾಸಿಗಳಿಗೆ ಸ್ಥಳಾಂತರ ಮಾಡುವಂತೆ ನೋಟಿಸ್​ ನೀಡಿರುವುದು ಭಾರಿ ಟೀಕೆಗೆ ಗುರಿಯಾಗಿದೆ.

    ಗುಜರಾತಿನ ಅಹಮದಾಬಾದ್​ನ ಮೊಟೇರಾದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ವಿಶ್ವದ ಬಹುದೊಡ್ಡ ಕ್ರಿಕೆಟ್​ ಕ್ರೀಡಾಂಗಣವನ್ನು ಫೆ.24ರಂದು ಟ್ರಂಪ್​ ಉದ್ಘಾಟನೆ ಮಾಡಲಿದ್ದಾರೆ. ಟ್ರಂಪ್​ ಜತೆ ಪತ್ನಿ ಮೆಲಾನಿಯಾ ಟ್ರಂಪ್​ ಕೂಡ ಆಗಮಿಸಲಿದ್ದು, ಸ್ಮರಣೀಯ ಸ್ವಾಗತ ಕೋರಲು ಕೇಂದ್ರ ಸರ್ಕಾರದ ಭಾರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅಂದು ನಡೆಯುವ ಕಾರ್ಯಕ್ರಮಕ್ಕೆ “ಹೌಡಿ ಮೋದಿ” ರೀತಿಯಲ್ಲಿ “ನಮಸ್ತೆ ಟ್ರಂಪ್”​ ಎಂದೂ ಹೆಸರಿಡಲಾಗಿದೆ.

    ಫೆ. 24ರಂದು ಸರ್ದಾರ್​ ವಲ್ಲಭಾಯ್​ ಪಟೇಲ್​ ವಿಮಾನ ನಿಲ್ದಾಣದಿಂದ ಕ್ರಿಕೆಟ್​ ಕ್ರೀಡಾಂಗಣಕ್ಕೆ ಸಾಗುವ ಮಾರ್ಗದುದ್ದಕ್ಕೂ ಮೆರವಣಿಗೆ ಮೂಲಕ ಟ್ರಂಪ್​ ದಂಪತಿಗೆ ಅದ್ಧೂರಿ ಸ್ವಾಗತ ಮಾಡಲಾಗುತ್ತದೆ. ಇದೇ ಮಾರ್ಗದ ಮಧ್ಯೆ ದೇವ್​ ಸರಣ್​ ಹೆಸರಿನ ಕೊಳಗೇರಿ ಪ್ರದೇಶವಿದ್ದು, ಅದು ಕಾಣದಂತೆ ಈಗಾಗಲೇ ಗುಜರಾತ್​ ಸರ್ಕಾರ ತಡೆಗೋಡೆಯನ್ನು ನಿರ್ಮಿಸಿರುವುದು ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಇದರ ಬೆನ್ನಲ್ಲೇ ಇದೀಗ ಅಲ್ಲಿನ ನಿವಾಸಿಗಳಿಗೆ ಸ್ಥಳಾಂತರ ಮಾಡುವಂತೆ ನೋಟಿ ಸ್​ ನೀಡಿರುವುದು ಮತ್ತೊಂದು ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.

    ಸುಮಾರು 2 ದಶಕಗಳಿಂದ ವಾಸಿಸುತ್ತಿರುವ ಕೊಳಗೇರಿಯನ್ನು ಟ್ರಂಪ್​ ಕಾರ್ಯಕ್ರಮಕ್ಕಾಗಿ 7 ದಿನದೊಳಗೆ ತ್ಯಜಿಸುವಂತೆ ಸರ್ಕಾರ ಹೇಳಿರುವುದಾಗಿ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಸ್ಥಳಾಂತರಕ್ಕೂ ಮುಂದಿನ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅಹಮದಾಬಾದ್​ ಮುನ್ಸಿಪಲ್ ಕಾರ್ಪೊರೇಷನ್(ಎಎಂಸಿ)​ ಅಧಿಕಾರಿಗಳು ತಿಳಿಸಿದ್ದಾರೆ.​

    ಮಾಧ್ಯಮದವರೊಂದಿಗೆ ಮಾತನಾಡಿರುವ ಕೊಳಗೇರಿ ನಿವಾಸಿಯೊಬ್ಬರು, ಎಎಂಸಿ ಅಧಿಕಾರಿಗಳು ನಮ್ಮ ಬಳಿ ಬಂದು ಆದಷ್ಟು ಬೇಗ ಸ್ಥಳಾಂತರ ಮಾಡುವಂತೆ ನೋಟಿಸ್​ ನೀಡಿದರು. ಮೊಟೇರಾ ಕ್ರೀಡಾಂಗಣದ ಉದ್ಘಾಟನೆಗೆ ಟ್ರಂಪ್​ ಬರುತ್ತಿರುವ ಹಿನ್ನೆಲೆಯಲ್ಲಿ ಸ್ಥಳವನ್ನು ಖಾಲಿ ಮಾಡುವಂತೆ ಸೂಚಿಸಿದರು ಎಂದು ಆರೋಪಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts